Monday, April 8, 2013

ಕೋರವಂಗಲ ಕುಟುಂಬದ ಒಂದೇ ಕಡೆಯಲ್ಲಿ ಎಲ್ಲರೂ - One Get-together!

ಯಥಾ ಪ್ರಕಾರ ದಿನಕರ ತನ್ನ ಮನೆಯಲ್ಲಿದ್ದ ದಿನಸೂಚಿಯ ಇನ್ನೊಂದು ಚೀಟಿಯನ್ನು ತಿರುವಿ ಹಾಕಿದ. ಅರೆ ಅರೆ ಎನುತ್ತಾ ನೋಡಿದಾಗ ಅವನ ದಿನವೇ ಮೂಡಿ ಬಂದಿತ್ತು ಬಂದಿತ್ತು.

ಕೈಲಾಸದಲ್ಲಿ ಗಣಪನಿಗೆ ಎಲ್ಲರೂ ಹುಡುಕಾಡುತ್ತಿದ್ದರು. ಗಣಪನು ಇರಲಿಲ್ಲ ಅವನ ವಾಹನವೂ ಕಾಣುತ್ತಿರಲಿಲ್ಲ. ಪಾರ್ವತಿ ಓಡುತ್ತಾ ಬಂದಾಗ ಶಿವ ತಡೆದು .. ಶಿವ ಹಸನ್ಮುಖನಾಗಿ, 


ತಡಿ ಪಾರ್ವತಿ..ಅಲ್ಲಿ ನೋಡು
"ತಡಿ ಪಾರ್ವತಿ..ಅಲ್ಲಿ ನೋಡು . ನಮ್ಮ ರಂಗಸ್ವಾಮಿಯವರ ವಂಶದ ಕುಡಿಗಳು ಒಂದೇ ಸೂರಿನಡಿ ಸಂಧಿಸುತ್ತಿವೆ. ಅದಕ್ಕಾಗಿ ಅವರಿಗೆ ಸ್ವಾಗತ ನೀಡಲು ಗಣಪ ಹಲಗೆಯ ಹಾಳೆಯ ಮೇಲೆ ತನ್ನ ಮೂಷಿಕವಾಹನವನ್ನು ಕೂರಿಸಿಕೊಂಡು ಮೂಡುತ್ತಿದ್ದಾನೆ"
ಗಣಪನನ್ನು ಮೂಡಿಸಿದ ವಿಷ್ಣು!

ಕೋರವಂಗಲದ ಕುಟುಂಬಕ್ಕೆ ಸ್ವಾಗತ!
---------------------------------------------------------------------------------
ನಿನ್ನೆ ಏಪ್ರಿಲ್ ೭ ೨೦೧೩ , ಹೊಸ ಸಂವತ್ಸರಕ್ಕೆ ಇನ್ನು ಕೇವಲ ನಾಲ್ಕೇ ದಿನಗಳು ಇದ್ದವು. ಆದರೆ ಕೋರವಂಗಲದ ಕುಟುಂಬದಲ್ಲಿ ಒಂದು ಹೊಸ ಸಂವತ್ಸರಕ್ಕೆ  ನಾಂದಿ ಹಾಡಲು ದೊಡ್ಡಪ್ಪ, ಚಿಕ್ಕಪನವರ ಕುಟುಂಬಗಳು ಸಜ್ಜಾಗಿದ್ದವು. 


ಕೋರವಂಗಲದ ಕುಡಿಗಳು ಸರಿ ಸುಮಾರು ೧೨  ಘಂಟೆಯ ಹೊತ್ತಿಗೆ ಒಂದೊಂದೇ ಕುಟುಂಬ ಸಾಗರದ ಅಲೆಗಳಂತೆ ಬಂದು ವಿಜಯನ ಮನೆಯಲ್ಲಿ ಸೇರುತ್ತಿದ್ದರು. ಅವನ ಲ್ಯಾಪ್-ಟಾಪ್ ನಲ್ಲಿ ಬೆರೆತ ಜೀವ ಚಿತ್ರದ ಹಾಡು ಮೆಲುದನಿಯಲ್ಲಿ ಕೇಳುತಿತ್ತು.

"ಒಂದಾಗಿ ಬಾಳುವ
ಒಲವಿಂದ ಆಳುವ
ಸಹ ಜೀವನ ಸವಿ ಜೇನಿನ ಸದನ
ಒಂದಾಗಿ ಬಾಳುವ"

ಎಲ್ಲರೂ ಒಂದು.... ಎಲ್ಲರಲ್ಲೂ ಒಂದು ಎಂಬ ಭಾವವನ್ನು ಭಿತ್ತಿ ಬೆಳೆಸಿದ್ದ ರಂಗಸ್ವಾಮಿ ದಂಪತಿಗಳ ವಂಶದಲ್ಲಿ ಒಬ್ಬರನ್ನು ಒಬ್ಬರು ಭೇಟಿ ಮಾಡುವುದು, ಹರಟೆ ಹೊಡೆಯುವುದು ಮಾಮೂಲಿಯಾಗಿತ್ತು. ಆದರೆ ಎಲ್ಲರನ್ನೂ ಒಂದೇ ಛಾವಣಿಯ ಅಡಿಯಲ್ಲಿ ಸೇರಿಸಿ.. ಈ ಸುಸಂಧಿಯನ್ನು ನಿರಂತರ ಕಾರ್ಯಕ್ರಮವನ್ನಾಗಿ ಮಾಡಬೇಕೆನ್ನುವ ನಮ್ಮೆಲ್ಲರ ಹಂಬಲವನ್ನು ಕಾರ್ಯಕ್ಕೆ ಇಳಿಸಿದ ಕೀರ್ತಿ ವಿಜಯನಿಗೆ ಸೇರುತ್ತದೆ. 

ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಹಿರಿಯರ ಆಶೀರ್ವಾದ ಮುಖ್ಯ... ಇದು ಎಲ್ಲರಿಗೂ ತಿಳಿದ ವಿಷಯ. ಆದರೆ ಆ ಕಾರ್ಯಕ್ರಮದ ಯಶಸ್ಸು ಮುಂದಿನ ತಲೆಮಾರಿಗೂ ಹರಿಯಬೇಕು ಎನ್ನುವುದಾದರೆ ಮುಂದಿನ ಪೀಳಿಗೆಯ ಹರಿಕಾರರಾದ ಪುಟಾಣಿಗಳು ನಲಿಯಬೇಕು. ಆ ಸಂತಸ ಹೊಳೆಯಲ್ಲಿ ಮಿಂದೆದ್ದ ಪುಟಾಣಿಗಳು ನಿಜಕ್ಕೂ ಈ ಶ್ರಮಕ್ಕೆ ಅದ್ಭುತ ಚಾಲನೆ ನೀಡಿದರು ಎಂದರೆ ತಪ್ಪಾಗದು. 

ಕೆಲವೊಂದು ಸುಂದರ ಕ್ಷಣಗಳು ನಿಮಗಾಗಿ!
ನಮ್ಮನ್ನೆಲ್ಲ ಒಂದೇ ಕಡೆ ಸೇರಿಸಿಬಿಟ್ಟಿದ್ದಾರೆ ಹೆಂಗೋ ಗೊತ್ತಿಲ್ಲಪ್ಪಾ!

ನಾವೆಲ್ಲರೂ ಒಂದು!

ಚುನಾವಣೆಯಲ್ಲಿ ನಮ್ಮದೇ ಮತ ಇಲ್ಲವೇ ಮಠ! 

ನಾವೆಲ್ಲರೂ ನಮ್ಮೊಳಗೆಲ್ಲರು! 

ಹಲ್ಲು ಬಿಡೋದೇ ನಮ್ಮ ಕಾಯಕ!

ಸರಸ್ವತಿ ನಗರದಲ್ಲಿ ರಂಗನಾಥ! 
ಒಟ್ಟಾಗಿ ಕೂತು ಊಟ, ಹರಟೆ, ಕಷ್ಟ ಸುಖ ವಿಚಾರ ವಿನಿಮಯಗಳು, ಮುಂದಿನ ದಾರಿಯ ಬಗ್ಗೆ ಸೂಕ್ತ ಆಲೋಚನೆ ಹೀಗೆ ನಾನಾ ದಿಕ್ಕುಗಳಲ್ಲಿ ಯೋಚನಾ ಲಹರಿ ಸಾಗಿತ್ತು. 

ಅಜ್ಜ ಅಜ್ಜಿ ಬೀಜ ಬಿತ್ತಿ,  ನೀರು ಉಣಿಸಿ,  ಆರೈಕೆ ಮಾಡಿ ಬೆಳೆಸಿದ ಈ ಕೋರವಂಗಲದ ವೃಕ್ಷದಲ್ಲಿ ಸದಾ ಹಸಿರು, ಉಸಿರಿನ ಹೂವು ಹಣ್ಣುಗಳು ಸದಾ ಚಿಗುರೊಡೆಯುತ್ತಾ ಇರಲಿ ಎನ್ನುವ ಆಶಯದೊಂದಿಗೆ ಇಂದಿನ ಒಂದೇ ಕಡೆಯಲ್ಲಿ ಎಲ್ಲರೂ ಎನ್ನುವ ಕಾರ್ಯಕ್ರಮ ಸುಸೂತ್ರವಾಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತ ಹೊರಟಿತು!!!
---------------------------------------------------------------------------------
ಆರಾಮಾಗಿ ಸೀಟಿ ಹೊಡೆಯುತ್ತಾ ಇಲಿಯ ಮೇಲೆ ಕೈಲಾಸಕ್ಕೆ ಬಂದ ಗಣಪನನ್ನು ಕಂಡ ಮಾತೆ ಪಾರ್ವತಿ.. 

"ಮಗು ಹೇಗಿತ್ತಪ್ಪ ನಿನ್ನ ಭೂಲೋಕದ ಪಯಣ?"

"ಅಮ್ಮಾ ಏನು ಹೇಳಲಿ.. ಪ್ರತಿ ಬಾರಿ ಭಾದ್ರಪದ ಶುಕ್ಲದ ಚೌತಿಯಂದು ಮಾಡುವ ಭೂಲೋಕ ಪಯಣಕ್ಕಿಂತ.. ಈ ಪಯಣ ಖುಷಿಕೊಟ್ಟಿತು. ಇದೆ ರೀತಿಯ ಕಾರ್ಯಕ್ರಮ ಕೋರವಂಗಲದ ಈ ತುಂಬು ಕುಟುಂಬದಲ್ಲಿ ಸದಾ ನಡೆಯುತ್ತಿರಲಿ ಎನ್ನುವ ಆಶೀರ್ವಾದ ಮಾಡಿ ಬಂದಿದ್ದೇನೆ... ತುಂಬಾ ಖುಷಿಯಾಗುತ್ತಿದೆ ಅಮ್ಮಾ"

"ಮಗು ಮುಂದಿನ ಬಾರಿ ನಮ್ಮನ್ನು ಕರೆದುಕೊಂಡು ಹೋಗು.. ನಾವು ಬರುತ್ತೇವೆ"

"ಖಂಡಿತ ಅಮ್ಮಾ.. ಅಪ್ಪ ನಾನು ನೀನು ಸುಬ್ರಮಣ್ಯ ಎಲ್ಲರೂ ಕೂಡಿಯೇ ಹೋಗೋಣ... ಅರೆ ಅರೆ ನನ್ನ ಲ್ಯಾಪ್-ಟಾಪ್ ನಲ್ಲಿ ಆಗಲೇ ಒಂದು ಸಂದೇಶ ಬಂದಿದೆ... ಇರು ನೋಡ್ತೀನಿ"

------------------------------------
From: Koravangala@affection.com
To : Koravangala@onebigtree.com
Bcc: ganesh@kailaasa.com


ಆತ್ಮೀಯ ಸಹೋದರರಿಗೆ ಹಾಗೂ ಎಲ್ಲಾ ಕುಟುಂಬ ಸದಸ್ಯರಿಗೆ 

ನಿಮ್ಮ ಅಮೂಲ್ಯವಾದ  ಸಮಯವನ್ನು ನಮ್ಮೊಂದಿಗೆ ಕಳೆದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು 

Thanks & Regards

ವಿಜಯವಾಣಿ 
Vijayanagar,
Bangalore - 560 040
-----------------------------------------

"ಓಹ್ ಇದು ವಿಜಯನ ಸಂದೇಶ.. ನನಗೂ ಕಳಿಸಿದ್ದಾನೆ... ಮಗು ಶುಭವಾಗಲಿ.. ನಿನ್ನ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗಲಿ.. ನಿಮ್ಮೆಲ್ಲರ ಕುಟುಂಬದ  ಸಾಗರದಲ್ಲಿ ಸುಖ ಶಾಂತಿ ನೆಮ್ಮದಿಯ ಅಲೆಗಳು ಸದಾ ಬರುತ್ತಲೇ ಇರಲಿ!!!"

Monday, April 1, 2013

ನಸೀಮ ಮತ್ತು ಅವಳಿ ಮಕ್ಕಳು - ಒಂದು ಸುಂದರ ಸಮಾರಂಭ!!!

ಮಹಾಭಾರತ ಯುದ್ಧವನ್ನು ಸಂಜಯನ ಕಣ್ಣಲ್ಲಿ ನೋಡಿ ಬಳಲಿದ್ದ ಧೃತರಾಷ್ಟ್ರ...ಬೆಂಗಳೂರಿನ ಲಾಲ್ ಬಾಗ್ ಉದ್ಯಾನವನದಲ್ಲಿ ಕುಳಿತು ಶ್ರೀ ವೇದವ್ಯಾಸರನ್ನು ಪ್ರಾರ್ಥಿಸಿ  "ನನಗೆ ಯುದ್ಧವನ್ನು ನೋಡಿ ಸಾಕಾಗಿದೆ, ದಯಮಾಡಿ ಒಂದು ಒಳ್ಳೆಯ ಸಂಧರ್ಭವನ್ನು ನೋಡಿ, ಕೇಳಿ  ಅನುಭವಿಸುವ ಸುಯೋಗವನ್ನು ಕರುಣಿಸಿ ಗುರುದೇವ" ಎಂದು ಕೇಳುತ್ತಾನೆ

ಆಗ ವೇದವ್ಯಾಸರು ಪ್ರತ್ಯಕ್ಷರಾಗಿ "ಮಗು ಧೃತರಾಷ್ಟ್ರ, ನಾನು ನಿನಗೆ ಮತ್ತೆ ದಿವ್ಯದೃಷ್ಟಿಯನ್ನು ಕರುಣಿಸಲಾರೆ ಅಥವಾ ಸಂಜಯನನ್ನು ಕಳಿಸಲಾರೆ, ಆದರೆ ನಾಲ್ಕು ಕಣ್ಣುಗಳು ನಿನಗೆ ಒಂದು ಸುಂದರ ಸಮಾರಂಭದ ವಿವರಣೆಯನ್ನು ಕೊಡುವಂತೆ ಮಾಡಬಲ್ಲೆ"

"ಆಗಲಿ ಗುರುದೇವ  ಹೇಗೆ ಸರಿ ಅನ್ನಿಸುತ್ತೋ ಹಾಗೆ ಆಶೀರ್ವಾದ ಮಾಡಿ"

ವೇದವ್ಯಾಸರು ಅದೃಶ್ಯರಾಗಿ ಅವರ ಜಾಗದಲ್ಲಿ ಎರಡು ಜೊತೆ ಸುಂದರ ಕಣ್ಣುಗಳು ಮೂಡಿಬರುತ್ತವೆ.

"ಮಹಾರಾಜ.. ಇಂದು ನಿಮ್ಮನ್ನು ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ಕರ್ನಾಟಕ ಕ್ಷೇತ್ರೇ, ಬೆಂಗಳೂರು ನಗರೇ, ಸುಚಿತ್ರ ಫಿಲಂ ಸೊಸೈಟಿ ಸಭಾಂಗಣೇ... ಶ್ರೀ ನಟರಾಜು ಸೀಗೆಕೋಟೆ ಮರಿಯಪ್ಪ ಅವರ ಅವಳಿ ಮಕ್ಕಳ ತೊಟ್ಟಿಲು ಶಾಸ್ತ್ರ ಅಂದರೆ ನಾಮಕರಣಕ್ಕೆ ಕರೆದೊಯ್ಯುತಿದ್ದೇವೆ"

"ಪುಟಾಣಿಗಳೇ ಸ್ವಲ್ಪ ವಿವರಿಸಿ"

"ಮಹಾರಾಜ, ಬ್ಲಾಗ್ ಲೋಕದಲ್ಲಿ ಎಲೆ ಮರೆಯಲ್ಲಿ ಹಣ್ಣಾಗುತ್ತಿರುವ ಎಷ್ಟೋ ಸುಂದರ ಕಾಯಿಗಳನ್ನು ಲೋಕಕ್ಕೆ ಪರಿಚಯಿಸುತ್ತಿರುವ ಶ್ರೀ ನಟರಾಜು ಅವರು ಬರೆದ ಎರಡು ಪುಸ್ತಕಗಳು ಇಂದು ಲೋಕಾರ್ಪಣಗೊಳ್ಳುತ್ತಿದೆ. ದೂರದೂರಿನಿಂದ ಬಂದ ಸುಂದರಾಂಗ ಜಾಣ ಎನ್ನುವಂತೆ, ದೂರದ ರಾಜ್ಯದಲ್ಲಿದ್ದರೂ ಕರುನಾಡಿಗೆ, ಕರುನಾಡಿನ ಸ್ನೇಹಿತರಿಗೆ ಮಿಡಿಯುವ ಅವರ ಮನಸ್ಸು ಹೂವಿನಷ್ಟೇ ಮಧುರ"
ಚಿತ್ರಕೃಪೆ - ಪ್ರವರ ಕೊಟ್ಟೂರು 

"ಓಹ್ ಚೆನ್ನಾಗಿದೆ ವಿ"ವರ್ಣನೆ"ಮುಂದುವರೆಯಲಿ"

"ದೊರೆ.... ಭಾನುವಾರವಾದ್ದರಿಂದ ಸಮಾರಂಭ ಸ್ವಲ್ಪ ನಿಧಾನವಾಗಿ ಶುರುವಾಗಿದೆ.. ಹೊರಗೆ ತಮ್ಮ ಸ್ನೇಹಿತರನ್ನು ಭೇಟಿ ಮಾಡಿ, ಉಭಯ ಕುಶಲ ಮಾತಾಡಿಸಿ, ಫೋಟೋ ತೆಗಿಸಿಕೊಂಡು ನಲಿಯುತ್ತಿದ್ದ ಸ್ನೇಹಿತ ಸ್ನೇಹಿತೆಯರನ್ನು ನಟರಾಜು ಅವರು ನಿಧಾನವಾದ ಸ್ವರದಲ್ಲಿ ಎಲ್ಲರನ್ನು ಸಭಾಂಗಣಕ್ಕೆ ಕರೆಯುತಿದ್ದಾರೆ".

"ಅರಸರೆ ಈಗೋ ನೋಡಿ ಒಂದು ಸುಂದರ ಜಾನಪದ ಗೀತೆಯಿಂದ ಕಾರ್ಯಕ್ರಮ ಶುರುವಾಯಿತು... ನಿರೂಪಕರಿಂದ ಕಾರ್ಯಕ್ರಮದ ಕಿರು ಪರಿಚಯ, ಸ್ವಾಗತ ಮಾತುಗಳು ನಡೆಯುತ್ತಿದೆ."

ಇಂದಿನ ಕಾರ್ಯಕ್ರಮದ ಒಂದು ಪಕ್ಷಿ ನೋಟ ನಿಮಗೆ ನೀಡುತ್ತಿದ್ದೇವೆ... ಮಹನೀಯರ ಹೆಸರು ಮತ್ತು ಅವರ ಕಿರುಪರಿಚಯ ಈ ಕೆಳಗಿನಂತಿದೆ ಮತ್ತು ನಂತರದ ವಿವರಣೆಯನ್ನು ಫೇಸ್ ಬುಕ್ನಲ್ಲಿ ಚಿತ್ರಗಳು ಹಾಕಿರುತ್ತಾರೆ.. ಅದನ್ನ ನೋಡಲು ನಿಮಗೆ ನಾವು ಕಣ್ಣಾಗುತ್ತೇವೆ"
    ಚಿತ್ರಕೃಪೆ - ನಸೀಮ - ಕಾರ್ಯಕ್ರಮದ ಪಕ್ಷಿನೋಟ 
ಮೊದಲಿಗೆ ನಿರೂಪಕ ವಿನಯ್ ಅವರು ಅಬ್ದುಲ್ ಸತ್ತಾರ್ ಅವರನ್ನು ವೇದಿಕೆಗೆ ಕರೆದು ರವಿ ಮೂರ್ನಾಡ್ ಅವರ ಬಗ್ಗೆ ಮಾತಾಡೋಕೆ ಹೇಳಿದ್ರು. ಅವರು ಮಾತಾಡ್ತಾ ರವಿಯವರು ಎಲೆ ಮರೆ ಕಾಯಿಗಳಿಗೆ ಕೊಡ್ತಾ ಇದ್ದ ಪ್ರೋತ್ಸಾಹ, ಅವರ ಬ್ಲಾಗ್, ಕನ್ನಡ ಪ್ರೀತಿ, ಕನ್ನಡ ಬ್ಲಾಗ್ ಗ್ರೂಪ್ ಲಿ ಅವರ ಸಾಧನೆ ಬಗ್ಗೆ ಮಾತಾಡಿ ಒಂದು ನಿಮಿಷದ ಮೌನಾಚರಣೆ ಗೆ ಕರೆ ಕೊಟ್ಟರು.

ಇವಾಗ  ಗಣ್ಯರನ್ನು ವೇದಿಕೆಗೆ ಕರೆಸಲಾಗುತ್ತಿದ್ದೆ  ಮತ್ತು ಡಾ. ಎಸ್.ಎಂ.ನಟರಾಜು ಅವರ 'ವಂಡರ್ ಲ್ಯಾಂಡಿನ ಪುಟ್ಟ ರಾಜಕುಮಾರನೂ... ಮತ್ತು ಖುಷಿನಗರಿಯ ಆತನ ನಲ್ಮೆಯ ಗೆಳತಿಯೂ...' ಹಾಗೂ 'ಎಲೆಮರೆಕಾಯಿ' ಕೃತಿಗಳು   ಗೋಪಾಲ ವಾಜಪೇಯಿ ಅವರಿಂದ ಬಿಡುಗಡೆಯಾಗುತ್ತಿದೆ.

ಚೇತನಾ ತೀರ್ಥಹಳ್ಳಿಯವರು ಎರಡು ಕೃತಿಯ ಬಗ್ಗೆ ಮಾತಾಡುತ್ತಾ . "ವಂಡರ್ ಲ್ಯಾಂಡಿನ... " ಈ ಪುಸ್ತಕ ಪತ್ರ ಕಾದಂಬರಿಯ ರೂಪದಲ್ಲಿದೆ ಅಂತ ಹೇಳುತ್ತಾ ಇದ್ದಾರೆ, ಜೊತೆಗೆ ಹೇಗೆ ಮತ್ತು ಯಾಕೆ ಆಪ್ತವಾಗುತ್ತದೆ ಎಂದು ತಿಳಿಸುತ್ತಿದ್ದಾರೆ . ಎಲೆ ಮರೆ ಕಾಯಿಯನ್ನು ಅವರು ಕಾರಣಾಂತರಗಳಿಂದ ಓದಲಾಗಲಿಲ್ಲವಂತೆ ಹಾಗಾಗಿ ಬ್ಲಾಗ್ ಬಗ್ಗೆ ಮಾತಾಡುತ್ತಾ ಇದ್ದಾರೆ.
    ಆಮೇಲೆ ಡಾ. ಬಾನಂದೂರು ಕೆಂಪಯ್ಯ ಅವರಿಂದ ಒಂದು ಹಾಡು ಸುಶ್ರಾವ್ಯವಾಗಿ ಹಾಡುತ್ತಿದ್ದಾರೆ ,  ಮನು ಬಳಿಗಾರ್ &
    ಗೋಪಾಲ ವಾಜಪೇಯಿ ಅವರಿಂದ ಶುಭ ನುಡಿಗಳು ಕೇಳಿಬರುತ್ತಿದೆ
      ಡಾ. ಬಾನಂದೂರು ಕೆಂಪಯ್ಯ ಅವರಿಂದ "ಪಂಜು" ವೆಬ್ ಸೈಟ್ ನ ಬಿಡುಗಡೆಯಾಗುತ್ತಿದೆ.
        "ಜರಗನಹಳ್ಳಿ ಶಿವಶಂಕರ್ ಅವರಿಂದ ಭಾಷಣ ನಡೆಯಬೇಕು ಮತ್ತು ಚುಟುಕು ಸ್ಪರ್ಧೆಯ ಬಹುಮಾನ ವಿತರಣೆ... ವಿಜೇತರಿಗೆ ಅಭಿನಂದನೆ ಸಲ್ಲಿಸುತ್ತಾ ಬಹುಮಾನ ವಿತರಿಸಲು ಸಜ್ಜಾಗುತ್ತಿದೆ ವೇದಿಕೆ"

        "ಮಹಾರಾಜ ನಿಮಗೆ ವೀಕ್ಷಕ ವಿವರಣೆ ಹೇಳುತ್ತಲೇ ನಮಗೆ ಅಲ್ಲಿ ಹೋಗಲು ಮನಸಾಗುತ್ತಿದೆ... ಅದೂ  ಅಲ್ಲದೆ ಒಂದು ಜೊತೆಯ ಕಣ್ಣುಗಳು ಬರೆದ ಚುಟುಕಗಳಿಗೆ ಮೊದಲನೇ ಬಹುಮಾನ ಕೂಡ ಬಂದಿದೆ.. ಅದನ್ನು ಸ್ವೀಕರಿಸಲು ಅಲ್ಲಿಗೆ ಹೋಗಲೇ ಬೇಕು.. ನಿಮ್ಮ ಅಪ್ಪಣೆ ಇದ್ದರೆ ನಾವಿಬ್ಬರು ಅಲ್ಲಿಗೆ ಹೋಗಿಬಂದು ಮತ್ತೆ ಸುದೀರ್ಘ ವಿವರಣೆ ಕೊಡುತ್ತವೆ ಆಗಬಹುದೇ ಮಹಾರಾಜ?"

        "ಓಹ್ ಹೌದೆ ಮಗು.. ಅಭಿನಂದನೆಗಳು ಹೋಗಿಬನ್ನಿ... ಅಲ್ಲಿಯವರೆಗೆ ನಾನು ಇಲ್ಲೇ ಓಡಾಡಿಕೊಂಡು ಇರ್ತೇನೆ.. ಬರುವಾಗ ಆ ಎರಡು ಪುಸ್ತಕಗಳನ್ನು ತನ್ನಿರಿ"

        "ಹಾಗೆ ಆಗಲಿ ಮಹಾರಾಜ.. ಬೇಗ ಬಂದು ಬಿಡುತ್ತೇವೆ.. ಬಂದು ಮುಂದಿನ ಕಾರ್ಯಕ್ರಮದ ವಿವರಣೆಯನ್ನು ನೀಡುತ್ತೇವೆ ... ನಮಸ್ಕಾರ ಮಹಾರಾಜ"

        ನಾಲ್ಕು ಜೊತೆ ಕಣ್ಣುಗಳು ಸೀದಾ ಸಭಾಂಗಣಕ್ಕೆ ಬಂದರು,ಅಷ್ಟರಲ್ಲಿ ವೇದಿಕೆ ಬಹುಮಾನವನ್ನು ವಿತರಿಸಲು ವೇದಿಕೆ ಸಿದ್ಧವಾಗಿತ್ತು.  ವಿಜೇತರ ಹೆಸರುಗಳನ್ನೂ, ಅವರ ಕಿರುಪರಿಚಯ ಮಾಡಿಸುವ ಮಾತುಗಳನ್ನು ಭಿತ್ತರಗೊಳಿಸುತಿತ್ತು ಒಂದು ಸುಂದರವಾಣಿ! 

        ಚಿತ್ರ ಕೃಪೆ - ಪಂಜು ಅಂತರ್ಜಾಲ 

        ಚಿತ್ರ ಕೃಪೆ - ಪಂಜು 
        ಬಹುಮಾನ ಸ್ವೀಕರಿಸಿದ ನಂತರ, ಮತ್ತೆ ಕಾರ್ಯಕ್ರಮದ ವೀಕ್ಷಕ ವಿವರಣೆ ಮುಂದುವರೆಯಿತು.. 

        "ಮಹಾರಾಜ..ನಾವು ಬಂದೆವು... ಮತ್ತೆ ಮುಂದುವರೆಸುತ್ತಿದ್ದೇವೆ...  ಡಾ. ಬಾನಂದೂರು ಕೆಂಪಯ್ಯ ಅವರಿಂದ ಮತ್ತೆ ನಾಲ್ಕು ಮಾತುಗಳು ಜೊತೆಗೆ ಹಾಡುಗಳನ್ನೂ ಹಾಡಿದರು, ಲೇಖಕ ನಟರಾಜು ಅವರು ಒಂದು ಕಿರು ಮಾತಗಳನ್ನು ಉಲಿದರು  ಮತ್ತು ಪ್ರಕಾಶಕರಿಂದ ಕಿರು ಭಾಷಣ ನಡೆಯಿತು . ನಂತರ ಎನ್ ಸಿ ಮಹೇಶ ಅವರಿಂದ ಮಾತುಗಳು, ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಅರ್ಪಣೆಯ ಸಮಯದಲ್ಲಿ  ಉಷಾ ಕಟ್ಟೆಮನೆಯವರು ಬಂದಿದ್ದನ್ನ ಗಮನಿಸಿ ಅವರನ್ನು ವೇದಿಕೆಗೆ ಕರೆದು ಗೌರವಾರ್ಪಣೆ ಮಾಡಲಾಯಿತು" 
          "ಇದಾದ ಮೇಲೆ ಈಶಾನ್ಯ ಭಾರತೀಯ ನೃತ್ಯಗಳ ಕಿರುಚಿತ್ರ ಪ್ರದರ್ಶನದ ಮೂಲಕ ಕಾರ್ಯಕ್ರಮದ ಮುಕ್ತಾಯವಾಯಿತು"

          "ಮಹಾರಾಜ ಇದು ಇಂದಿನ ಕಾರ್ಯಕ್ರಮ ಒಂದು ವಿವರಣೆ. ನಿಮಗೆ ಇಷ್ಟವಾಯಿತೆ?"

          "ಪುಟಾಣಿಗಳೇ ನಿಮ್ಮ ಮಧುರವಾಣಿಯಲ್ಲಿ ಅರಳಿದ ಕಾರ್ಯಕ್ರಮದ ವಿವರಣೆ ಕುರುಕ್ಷೇತ್ರದ ವಿವರಣೆಗಿಂತ ಒಂದು ಕೈ ಮೇಲು ಎನ್ನಬಹುದು.. ಶ್ರೀ ಕೃಷ್ಣನ ಆಶೀರ್ವಾದ ಬ್ಲಾಗ್ ಲೋಕದ ಎಲ್ಲ ತಾರೆಗಳ ಮೇಲೂಇರಲಿ ... ಹಾಗು ಇಂದಿನ ಲೇಖಕ ಮೃದು ಮನಸಿನ ನಟರಾಜು ಅವರಿಗೆ ಯಶಸ್ಸು ಸದಾ ನೆರಳಿನಂತೆ ಇರಲಿ ಎಂದು ಆಶೀರ್ವಾದ ಕಳಿಸುತ್ತಿದ್ದೇನೆ. ಶುಭವಾಗಲಿ ಪುಟಾಣಿಗಳೇ!!!"

          "ಧನ್ಯವಾದಗಳು ಮಹಾರಾಜ.. !"

          (ಅಣ್ಣಯ್ಯ.. ಕಾರ್ಯಕ್ರಮ ತುಂಬಾ ಸುಂದರವಾಗಿತ್ತು, ನಿಮಗಾಗಿ ಎರಡು ಪುಸ್ತಕಗಳನ್ನು ಸುಲತ ತೆಗೆದುಕೊಂಡಿದ್ದಾರೆ..ಹಾಗು ಶ್ರೀಕಾಂತಣ್ಣ ಕಾರ್ಯಕ್ರಮ ಸುಂದರವಾಗಿತ್ತು... ಎಲ್ಲರ ಮಾತುಗಳು ತುಂಬಾ ಖುಷಿ ಕೊಟ್ಟಿತು. ಅದರಲ್ಲೂ ಹೆಣ್ಣನ್ನು ಅಳಿಸಬೇಡಿ.. ಅವರ ಕಣ್ಣೀರನ್ನು ದೇವರು ಅಳೀತಾನೆ  ಎನ್ನುವ ಮಾತು ಬಹಳ ಇಷ್ಟವಾಯಿತು.. ಚುಟುಕಗಳು ತುಂಬಾ ಇಷ್ಟವಾದವು " ಈ ಸಂದೇಶಗಳು  ಮೊಬೈಲ್ ನಲ್ಲಿ ರಿಂಗಣಿಸಿದಾಗ ಮನಸ್ಸಿಗೆ ಬಂದ ಮಾತುಗಳು ಹಾಗೂ ಅವರ ಕೆಲ ಮಾತುಗಳು, ನನ್ನ ವಿಚಿತ್ರ ಕಲ್ಪನೆ ಇವೆಲ್ಲ ಸೇರಿ ಲೇಖನವಾಗಿ ಹರಡಿಕೊಂಡಿದೆ.. ಈ ಲೇಖನದಲ್ಲಿ ಮೂಡಿಬರುವ ಜೋಡಿ ಕಣ್ಣುಗಳ ಒಡತಿಯರು ಪುಟ್ಟಿ ಸುಷ್ಮಾ ಮತ್ತು ಸುಲತ ಸಿಸ್ಟರ್!)

          Thursday, March 21, 2013

          ಕಗ್ಗ ರಸಧಾರೆಯಲ್ಲಿ ರವಿ ತಿರುಮಲೈ ಮತ್ತು ಅಜ್ಜ!!!

          "ಅಜ್ಜ ಅಜ್ಜ" 

          ಗಂಧರ್ವ ಕಿನ್ನರರು ದೇವಪುರುಷರು ಕೂಗುತ್ತ ಓಡಿಬರುತ್ತಿದ್ದರು

          "ಯಾರಪ್ಪ...ಯಾಕಪ್ಪ... ಏನಾಯ್ತು?

          "ಅಜ್ಜ ಹೊರಟಾಗ ಎಲ್ಲಿಗೆ ಅಂತ ಕೇಳಬಾರದು ನಿಮ್ಮ ಹಿಂದೆಯೇ ಬರುತ್ತೇವೆ.. "

          "ಅಲ್ಲಪ್ಪಾ ನಿಮ್ಮ ಜೊತೆಯಲ್ಲಿ ಕಳೆದ ೩೮ ವಸಂತಗಳಿಂದ ನಿಮ್ಮ ಜೊತೆಯಲ್ಲೇ ಇದ್ದೀನಿ.. ಹೀಗೆ ಸುಮ್ಮನೆ ಒಂದು ಸಣ್ಣ ವಾಕಿಂಗ್ ಮಾಡಿ ಬರುತ್ತೇನೆ"

          "ಸರಿ ಅಜ್ಜ..ಹೋಗಿ ಬನ್ನಿ ನಾವು ಇಲ್ಲೇ ನಿಮಗಾಗಿ ಕಾಯುತ್ತಿರುತ್ತೇವೆ"

          ಹೋಗಿ ಸುಮಾರು ಘಂಟೆಗಳಾದರೂ ಅಜ್ಜ ಬರಲಿಲ್ಲ... ಸ್ವರ್ಗದಲ್ಲಿ ಗಾಬರಿ ಶುರುವಾಯಿತು.. ಎಲ್ಲರೂ ಚಿಂತಾಕ್ರಾಂತರಾಗಿ ಶತಪಥ ತಿರುಗುತಿದ್ದರು

          ಕಿನ್ನರ ಪುರುಷನೊಬ್ಬ ಏದುಸಿರು ಬಿಡುತ್ತ.. "ಅಜ್ಜ ಬರುತಿದ್ದಾರೆ ಅಜ್ಜ ಬರುತಿದ್ದಾರೆ" ಎಂದು ಕೂಗುತ್ತ ಒಳಗೆ ಓಡಿ ಬಂದ!

          ಎಲ್ಲರೂ ಅಜ್ಜನನ್ನು ಸುತ್ತುವರಿದು "ಅಜ್ಜ ಎಲ್ಲಿ ಹೋಗಿದ್ದಿರಿ... ನಿಮಗೆ ಈಗ ೧೨೬ ವರ್ಷ.... ನೀವು ತುಂಬಾ ದೂರ ನೆಡೆದು ಹೋಗಬೇಕೆಂದಿದ್ದರೆ ನಮ್ಮ ಪುಷ್ಪಕ ವಿಮಾನವನ್ನು ತೆಗೆದುಕೊಂಡು ಹೋಗಬಹುದಿತ್ತಲ್ಲವೇ?.. ನಮಗೆ ಗಾ.... "

          ಸುಸ್ತಾಗಿ ಕೂತು..ಕಥೆ ಹೇಳಲು ಶುರುಮಾಡಿದ ಅಜ್ಜ !
          ಅಷ್ಟರಲ್ಲಿಯೇ ಅಜ್ಜ ಅವರ ಮಾತನ್ನು ಅರ್ಧಕ್ಕೆ ನಿಲ್ಲಿಸಿ 

          "ಏನಿಲ್ಲಪ್ಪ ಹೀಗೆ ನಡೆಯುತ್ತ ಹೋಗುತಿದ್ದೆ.. ಒಂದು ಕಾಗದದ ತುಂಡಿನ ಆಹ್ವಾನ ಪತ್ರಿಕೆ ತೇಲುತ್ತ ಬಂದು ಇಲ್ಲಿ ಬಿದ್ದಿತ್ತು..
          ತೇಲುತ್ತಾ ಬಂದ ಆಹ್ವಾನ ಪತ್ರಿಕೆ!
           ನೋಡಿದೆ ಸಂತಸವಾಯಿತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಸಮಾರಂಭ ಮುಗಿದುಹೋಗಿತ್ತು. 
          ಸಮಾರಂಭದ ಒಂದು ಝಲಕ್ !

          ಸುಂದರ ಪುಸ್ತಕಗಳ ಸಂಕಲನವೇ ಅಲ್ಲಿತ್ತು. ನೋಡಿದೆ ಖುಷಿಯಾಯಿತು. ಅದನ್ನು ಓದುತ್ತ ಕುಳಿತೆ ಸಮಯ ಹೋದದ್ದು ಅರಿವಿಗೆ ಬರಲಿಲ್ಲ.  
          ಹರಿದ ರಸಧಾರೆ 
          ನಂತರ  ಆ ಸಮಾರಂಭದ ಕತೃವಿನ ಮನೆಗೆ ಹೋದರೆ ಆಶ್ಚರ್ಯ.. ಅಲ್ಲಿ ಎಲ್ಲರೂ ನನ್ನ ಬಗ್ಗೆಯೇ ಮಾತಾಡುತ್ತಿದ್ದರು. ಅವರ ಜೊತೆ ನಾನು ಸ್ವಲ್ಪ ಮಾತನಾಡುತ್ತ ಕುಳಿತೆ..  ಆ ಪುಸ್ತಕದ ಕತೃವಿಗೆ ಆಶೀರ್ವಾದ ಮಾಡೋಣ ಎಂದು ಬಳಿಗೆ ಕರೆದೆ. 
          ಆಶ್ಚರ್ಯಭರಿತ ನೋಟದಿಂದ ನನ್ನನ್ನು ಕಂಡ ರವಿ ನನ್ನ ಬಳಿಗೆ ಓಡಿ ಬಂದು.... 
          ಅರೆ ಅಜ್ಜ ಬಂದಿದ್ದಾರೆ! (ಆಶ್ಚರ್ಯ ಚಕಿತರಾದ ರವಿ ಸರ್ )
          (ಚಿತ್ರಕೃಪೆ  - ಪ್ರವರ ಕೊಟ್ಟುರ್ )
           "ಅಜ್ಜ ನಿಮ್ಮ ಪಾದಧೂಳಿಯಿಂದ ನಮ್ಮ ಜೀವನ ಪಾವನವಾಯಿತು." ಎಂದು ಕಾಲಿಗೆರಗಿದ ರವಿಯನ್ನು ಮೈತಡವಿ ಎಬ್ಬಿಸಿ "ಮಗು ರವಿ.. ಏಳಿ .. ಇಂದು ನಿಮ್ಮ ಜನುಮದಿನ ಎಂದು ನನ್ನ ಕ್ಯಾಲೆಂಡರ್ ನಲ್ಲಿ ಗುರುತು ಮಾಡಿಕೊಂಡಿದ್ದೆ.  ನಾನು ದಶಕಗಳ ಹಿಂದೆ ಬರೆದ ನಾಲ್ಕು ಸಾಲುಗಳ ಪದ ಪುಂಜಗಳಿಗೆ ಎಷ್ಟು  ಚೆನ್ನಾಗಿ ಅರ್ಥ ವಿಸ್ತಾರ ಕೊಡುತಿದ್ದೀರಾ ತುಂಬಾ ಸಂತಸವಾಗುತ್ತಿದೆ. ನನ್ನ ಕಗ್ಗಗಳನ್ನು ಅನೇಕರು ವಿಶ್ಲೇಷಣೆ ಮಾಡಿದ್ದಾರೆ. ಅನೇಕರು ಸಾಗಿದ ಹಾದಿಯಲ್ಲಿ ನೀವು ಸಾಗಿದರೂ ಅದಕ್ಕೆ ನಿಮ್ಮದೇ ಆದ ವಿಶಿಷ್ಟ ವಿಶ್ಲೇಷಣೆಯನ್ನೂ, ಅನುಭವದ ಮೂಸೆಯಲ್ಲಿ ಅರಳಿದ ಪಾಠಗಳನ್ನೂ , ಓದಿದ ವಿಷಯಗಳನ್ನೂ,  ಪ್ರತಿಯೊಂದಕ್ಕೂ ಹೊಂದಿಸಿ ಬರೆದಿರುವ ಪರಿ ಸೊಗಸಾಗಿದೆ. ಬರೆದ ಸಾಲುಗಳು ಇನ್ನಷ್ಟು ಮಂದಿಗೆ ತಲುಪುವುದರಲ್ಲಿ ಸಂದೇಹವೇ ಇಲ್ಲ. ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ... "

          "ಅಜ್ಜ ಅಜ್ಜ ನಿಮ್ಮ ಆಶೀರ್ವಾದ ನನಗೆ ಶ್ರೀರಕ್ಷೆ.    ನನ್ನ ಜನುಮದಿನಕ್ಕೆ ನೀವೇ ಬಂದಿರುವುದು ನನಗೆ ಬಹಳ ಖುಷಿಯಾಯಿತು. ನನ್ನ ಜನ್ಮ ಸಾರ್ಥಕವಾಯಿತು.. ನಿಮ್ಮ ಆಶೀರ್ವಾದದ ಬಲದಿಂದ ನಿಮ್ಮ ನೂರಾ  ಇಪ್ಪತ್ತಾರನೇ ಜನುಮದ ದಿನದಂದು "ಕಗ್ಗ ರಸಧಾರೆ ಸಂಪುಟ - ೧" ಶ್ರೀ ಮಾಸ್ಟರ್ ಹಿರಣ್ಣಯ್ಯ ಅವರ ಮಾರ್ಗದರ್ಶನದಲ್ಲಿ ಲೋಕಾರ್ಪಣಗೊಂಡಿತು" 
          ಕಗ್ಗ ರಸಧಾರೆ ಲೋಕಾರ್ಪಣಗೊಂಡ ಸಂತಸದ ಘಳಿಗೆ 
          "ಅವರ ಮಾತುಗಳಲ್ಲಿ   ನಿಮ್ಮ ಜೊತೆಯಲ್ಲಿನ ಒಡನಾಟವನ್ನು, ಮಾರ್ಗದರ್ಶಿ ಸಂದೇಶಗಳನ್ನು ತಿಳಿದುಕೊಂಡೆವು . ನಿಮ್ಮ ಕುಟುಂಬದ ಕುಡಿ ಶ್ರೀ ಚಂದ್ರಮೌಳಿ ಅವರು ನಿಮ್ಮ ಕಾಲದ ದಿನಗಳನ್ನು ನೆನೆಸಿಕೊಂಡರು. ಶ್ರೀ ರಾಜಗೋಪಾಲ್ ಅವರು ಕಗ್ಗಕ್ಕೆ ನೊಬೆಲ್ ಪ್ರಶಸ್ತಿ ಕೊಟ್ಟಿದ್ದರೇ ಆ ಪ್ರಶಸ್ತಿಗೆ ಗೌರವ ಸಿಕ್ಕುತ್ತಿತ್ತು ಎಂದರು. ಶ್ರೀ ಸುಬ್ಬುಕೃಷ್ಣ ಅವರು ಕಗ್ಗದ ಬಗ್ಗೆ ಆಡಿದ ಕಿರು ಮಾತುಗಳು ಮುದ ಕೊಟ್ಟವು. ಇನ್ನೂ ಸರಕಾರದ ಶ್ರೀ ವಿಶು ಕುಮಾರ್ ಅವರು ಎಲ್ಲರ ಸಹಕಾರ ಕೋರಿ ಈ ರೀತಿಯಲ್ಲಿ ಹಿರಿಯ ಸಾಹಿತಿಗಳನ್ನು ನೆನೆಸಿಕೊಂಡು ಅವರು ಮಾಡಿರುವ ಸೇವೆಯನ್ನು ವಿಶ್ವದ ಮೂಲೆ ಮೂಲೆಗೂ ಪಸರಿಸುವ ಪರಿಚಯಿಸುವ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಇಚ್ಚಿಸುತ್ತೇನೆ ಎಂದರು. ಕಗ್ಗದ ಭಟ್ಟರೆಂದೇ ಹೆಸರಾದ ಶ್ರೀ ಲಕ್ಷ್ಮಿನಾರಾಯಣ ಭಟ್ಟರು ಕಗ್ಗದ ಬಗ್ಗೆ ವಿವರಿಸುತ್ತ ಹೋದಂತೆ ಮೂಕ ವಿಸ್ಮಿತರಾಗಿ ಕುಳಿತಿದ್ದೆವು. ನನ್ನ ಬಂಧುಗಳು ಮಿತ್ರರು ಎಲ್ಲರೂ ಸೇರಿ ಈ ಸಮಾರಂಭವನ್ನು ವ್ಯವಸ್ಥಿತವಾಗಿ ಏರ್ಪಡಿಸಿ ಅದರ ಗೆಲುವಿಗೆ ಕಾರಣರಾದರು" 
          "ಹೌದೆ ಕಂದ. ಬಹಳ ಸಂತೋಷವಾಯಿತು.  ನಿಮ್ಮ ಕಗ್ಗ ರಸಧಾರೆ ಎರಡನೇ ಸಂಪುಟದ ಬಿಡುಗಡೆಗೆ ಸಮಯ ಮಾಡಿಕೊಂಡು ಬರುತ್ತೇನೆ. ಮಗು ರವಿ ನಿಮ್ಮ ಜನುಮದಿನಕ್ಕೆ ನನ್ನ ಆಶೀರ್ವಾದಗಳು. ಕಗ್ಗವನ್ನು ಇನ್ನಷ್ಟು ಜನರಿಗೆ ತಲುಪಿಸಲು ಮಾಡುತ್ತಿರುವ ಕೆಲಸದಲ್ಲಿ ಇನ್ನಷ್ಟು ಯಶಸ್ಸು, ಕೀರ್ತಿ ನಿಮ್ಮದಾಗಲಿ.  ಹೋಗಿ ಬರುವೆ ಮಗು. ಶುಭವಾಗಲಿ"

          "ಸರಿ ಅಜ್ಜ ನಿಮ್ಮೊಡನೆ ಇನ್ನಷ್ಟು ಮಾತಾಡುವ ಆಸೆ ಇತ್ತು... ನಿಮ್ಮ ಆಶೀರ್ವಾದ ಸದಾ ಇರಲಿ " ಎನ್ನುವಷ್ಟರಲ್ಲಿ ಅಲಾರಂ ಕಿರುಚಿಕೊಳ್ಳುತ್ತಾ ಬೆಳಗಾಯಿತು ಎಂದು ಎಚ್ಚರಿಸಿತು. ಕಣ್ಣು ಉಜ್ಜಿಕೊಂಡು "ಕರಾಗ್ರೆ ವಸತೇ ಲಕ್ಷ್ಮಿ......" ಹೇಳಿಕೊಂಡು ಪ್ರಾತಃ ಕರ್ಮಗಳನ್ನು ಮುಗಿಸಿ ನುಡಿಮುತ್ತುಗಳನ್ನು ಹಾಗೂ ಕಗ್ಗದ ರಸಧಾರೆಯ ಮುಕ್ತಕ - ೩೬೧ ಫೇಸ್ ಬುಕ್ಕಿಗೆ ಹಾಕಲು ಕಂಪ್ಯೂಟರ್ ಚಾಲನೆ ಮಾಡಿದರು. ಅಷ್ಟರಲ್ಲಿಯೇ ಹಲವಾರು ಬಂಧು ಮಿತ್ರರಿಂದ ಜನುಮದಿನಕ್ಕೆ ಶುಭಾಶಯಗಳನ್ನು ಹೊತ್ತ ಸಂದೇಶ ಕಾಯುತ್ತಿತ್ತು. ಜೊತೆಯಲ್ಲಿ ಈ ಬ್ಲಾಗ್ ಲೇಖನ ಕೂಡ.
          ಸುಂದರ ಹುಲ್ಲು ಹಾಸಿನ ಮೇಲೆ ವಿಶ್ರಮಿಸುತ್ತಿರುವ ಅಜ್ಜ!
          "ವಾಹ್ ಅಜ್ಜನೊಡನೆ ಮಾತು, ಅವರ ಆಶೀರ್ವಾದ, ಮೈತಡವಿದ ಅವರ ಸ್ಪರ್ಶ ಅನುಭವಿಸಿದ ನಾನೇ ಧನ್ಯ ಎಂದಿತು ರವಿ ಅವರ ಮನಸ್ಸು... ಶುಭಾಶಯಗಳನ್ನು ಕೋರಿದ ಎಲ್ಲಾ ಬಂಧು ಮಿತ್ರರಿಗೆ ಧನ್ಯವಾದಗಳನ್ನು ಹೇಳುತ್ತಾ ನಿತ್ಯ ದಿನಚರಿಯ ಕಡೆ ಗಮನ ಕೊಡಲು ಮಗು ರವಿ ಹೊರಟರು ನಂತರ ನಾನು ಇಲ್ಲಿಗೆ ಬಂದೆ ಹಾಗಾಗಿ ತಡವಾಯಿತು ಕಣ್ರಪ್ಪ...ನಾನು ಸ್ವಲ್ಪ ಹೊತ್ತು ಇಲ್ಲೇ ಕೂತಿದ್ದು ನಂತರ ಬರುವೆ... "


          "ಸರಿ ಅಜ್ಜ ಒಳ್ಳೆ ಕೆಲಸವನ್ನೇ ಮಾಡಿದ್ದೀರಾ. ಓಹ್ ನಮಗಾಗಿ ಕಗ್ಗ ರಸಧಾರೆ ಸಂಪುಟ - ೧ ತಂದಿದ್ದೀರ. ಓದೋಣ ಬಿಡಿ ಅಜ್ಜ. ಬನ್ನಿ ನಿಮಗಾಗಿ ಬೋಂಡ, ಆಂಬೋಡೆ, ಕಾಫಿ ಎಲ್ಲವೂ ಸಿದ್ಧವಾಗಿದೆ. ಅಲ್ಲಿಯೇ ಪೆನ್ನು ಪೇಪರ್ ಕೂಡ ಇಟ್ಟಿದ್ದೇವೆ.. ಇನ್ನಷ್ಟು ಬರೆಯಿರಿ.. ಹಸಿರ ಹಾಸಿನಮೇಲೆ ಕುಳಿತು ಕೊಂಚ ಘಳಿಗೆ ವಿಶ್ರಮಿಸಿಕೊಳ್ಳಿ" ಎಂದು ಹೇಳಿ ಎಲ್ಲಾ ಗಣದೇವತೆಗಳು "ಪುಷ್ಪ"ವೃಷ್ಟಿಮಾಡುತ್ತಾ, ಆಶೀರ್ವಾದದ "ಪ್ರಸಾದ" ನೀಡುತ್ತಾ ಮಧುರ ಮಧುರವೀ "ಮಂಜುಳಾ" ಗಾನ ಹೇಳುತ್ತಾ ರವಿಯವರಿಗೆ ಜನುಮದ ದಿನದ ಶುಭಾಶಯಗಳನ್ನು ಕೋರಿದರು!!!

          Friday, March 8, 2013

          ..........ಹಾಗೂ ಅವರ ದಿನವೂ

          ಒಂದು ದಿನ ಮಾತೆ ಸರಸ್ವತಿ ನುಡಿಸುತ್ತಿದ್ದ ವೀಣೆಯನ್ನು ಕೆಳಗಿಳಿಸಿ ಯೋಚಿಸುತ್ತ ಕುಳಿತಿದ್ದಾಗ.... ನಡೆಯುವ ಒಂದು ಸಂಭಾಷಣೆ! 


          ಯೋಚನೆ ಮಾಡುತ್ತಾ ನುಡಿಸುವುದ ಬಿಟ್ಟು ಹಾಡು ಕೇಳುತ್ತ ಕುಳಿತ ಮಾತೆ ಸರಸ್ವತಿ 
          "ದೇವಿ ಏನಾಯಿತು?" ಎಂದು ಬ್ರಹ್ಮದೇವ ಕೇಳುತ್ತಾನೆ

          ದೇವಿ ಸರಸ್ವತಿಯ ಪ್ರಶ್ನೆಗೆ ಸರಿಯಾದ ವಿಶ್ಲೇಷಣೆ ನೀಡಿದ ಭಗವಂತ 
          "ದೇವ.. ನೀನು ಸೃಷ್ಟಿಸಿದ ಲೋಕಗಳಲ್ಲಿ ನಿನಗಿಷ್ಟವಾದ ಲೋಕ ಯಾವುದು ಮತ್ತು ಏಕೆ?"

          "ನಾನು ಸೃಷ್ಟಿಸಿರುವ ಹದಿನಾಲ್ಕು ಲೋಕಗಳಲ್ಲಿ ಹದಿನೈದನೆಯ ಲೋಕ ಬಹಳ ಇಷ್ಟ"

          "ದೇವ ಇದೇನು ಭೂಲೋಕದಲ್ಲಿರುವ ಉಪೇಂದ್ರನ ತರಹ ಇದೆ ನಿಮ್ಮ ಮಾತು. ಇರುವುದು ಹದಿನಾಲ್ಕು ಅಂದ ಮೇಲೆ ಹದಿನೈದನೆ ಲೋಕ ಎಲ್ಲಿಂದ ಬಂತು?"

          "ದೇವಿ ಹೌದು! ಒಟ್ಟು ಹದಿನಾಲ್ಕು ಲೋಕಗಳಲ್ಲಿ.... ಹದಿಮೂರು ಲೋಕಗಳು ನಾನು ಸೃಷ್ಟಿಸಿದ ರೀತಿಯಲ್ಲೇ ಜೀವನ ನಡೆಸುತ್ತಾ ಇವೆ.  ಆದರೆ ಈ ಭೂಲೋಕದಲ್ಲಿ ಮಾತ್ರ ವಿಚಿತ್ರ....  ಹೆಣ್ಣು ಮಕ್ಕಳನ್ನು ನೋಡುವ ವಿಧಾನ, ಕೆಲ ಹೆಣ್ಣು ಮಕ್ಕಳು ಆಡುವ ರೀತಿ ಬೇಸರ ಹುಟ್ಟಿಸುತ್ತದೆ. ಹೆಣ್ಣು ಮಕ್ಕಳು ಸಾಧನೆಯಲ್ಲಿ ಮುಂದು ಹೋಗುತ್ತಿರುವುದು ನೋಡಿದರೆ ಸಂತಸವಾಗುತ್ತದೆ ಆದರೆ  ಅದೇ ಕ್ಷಣದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ಕೆಲವು ಕಡೆ ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ರಣಾಂಗಣವಾಗುತ್ತಿರುವ ಮನೆಗಳನ್ನು ನೋಡಿದಾಗೆಲ್ಲ ಬೇಸರವಾಗುತ್ತದೆ. ಮಾಧ್ಯಮಗಳು, ಪತ್ರಿಕೆಗಳು, ಧಾರಾವಾಹಿಗಳು ,ಜಾಹಿರಾತುಗಳು ಎಲ್ಲಾ ಕಡೆಯಲ್ಲೂ ಮಹಿಳೆಯರನ್ನು ಕ್ಷುಲ್ಲಕವಾಗಿ ತೋರಿಸುವ, ಅಥವಾ ಮಹಿಳೆಯರ ತೇಜೋವಧೆ ಮಾಡುವ ಬಗ್ಗೆ ಲೇಖನಗಳು, ವರದಿಗಳು ಜಿಗುಪ್ಸೆ ಹುಟ್ಟಿಸುತ್ತವೆ. ಆದರೆ ............"

          ಮಾತು ನಿಲ್ಲಿಸಿದ ಬ್ರಹ್ಮ ದೇವ ಕಣ್ಣಂಚಿನಲ್ಲಿ ಒಸರುತಿದ್ದ ಕಣ್ಣೀರನ್ನು ಒರೆಸಿಕೊಂಡು... ಮುಗುಳುನಗೆ ಬೀರುತ್ತಾ ಸರಸ್ವತಿಯ ಕಡೆಗೆ ತಿರುಗಿದಾಗ

          "ಯಾಕ್... ಯಾಕ್.. ಯಾಕ್ರೀ ಕಣ್ಣೀರು..... ?"

          "ಕಣ್ಣೀರಲ್ಲ ಕಣೆ ಪನ್ನೀರು ಪನ್ನೀರು...!" (ಗ್ರಾಮ ಫೋನ್ ತಟ್ಟೆಯಲ್ಲಿ ಹಾಲು ಜೇನು ಚಿತ್ರದ ಹಾಡು ಮಂದ ಸ್ಥಾಯಿಯಲ್ಲಿ ಬರುತ್ತಿರುತ್ತದೆ)

          "ಹಾ ಮುಂದುವರೆಸಿ"

          "ನಾನು ಕಟ್ಟದೆ ಹೋದರು ತಾವೇ ಕಟ್ಟಿ ಕೊಂಡ ಬ್ಲಾಗ್ ಲೋಕ ನನಗೆ ಬಹಳ ಇಷ್ಟ... ಇಲ್ಲಿ ಹೆಣ್ಣು ಮಕ್ಕಳಿಗೆ ಗೌರವ, ಪ್ರೋತ್ಸಾಹ, ಪ್ರೀತಿ ವಿಶ್ವಾಸ ತೋರುವ ಪರಿ ನೋಡಿದಾಗ ಕಣ್ಣು ತುಂಬಿ ಬರುತ್ತದೆ. ರಕ್ತ ಸಂಬಂಧ ಇಲ್ಲದೆ ಹೋದರೂ ಎಷ್ಟೋ ತಾರೆಗಳಿಗೆ  ಮಾತೃ ಸ್ವರೂಪರಾಗಿ, ಸಹೋದರಿಯರಾಗಿ, ಹಿರಿಯ ಜೀವಿಗಳಾಗಿ ಎಲ್ಲರನ್ನು ಗೌರವಿಸುವ ರೀತಿ ನೋಡಿದಾಗ ಭೂಲೋಕವೂ ಹೀಗೆ ಇದ್ದರೆ ಎಷ್ಟು ಚೆನ್ನ ಅನ್ನಿಸುತ್ತೆ!. ಒಬ್ಬರಿಗೊಬ್ಬರು ಆಸರೆಯಾಗಿ, ಒಂದೇ ಕುಟುಂಬದ ಸದಸ್ಯರಂತೆ ಬೆಳೆಯುವ, ಬೆಳೆಸುವ ಈ ಲೋಕವು ನಿಜವಾಗಿಯೂ ಸುಂದರವಾಗಿ ಅರಳುತ್ತಿದೆ. ಹೆಣ್ಣು ಮಕ್ಕಳಲ್ಲೂ ಕೂಡ ಅಣ್ಣ ಎನ್ನುವ ಕೆಲವರು, ತಮ್ಮ ಎನ್ನುವರು, ಭಯ್ಯಾ ಎಂದು ಸಂಬೋಧಿಸುವರು, ಗುರುಗಳೇ ಎನ್ನುವರು, ಪಿತೃ ಸ್ವರೂಪ ಎನ್ನುವರು ಇದ್ದಾರೆ  ಇಂತಹ ಲೋಕ ನಿಜಕ್ಕೂ ಮಹಿಳೆಯರಿಗೆ ಸುಂದರ ಪ್ರಪಂಚದ ನೋಟ ಕೊಡುವ ಲೋಕ"

          "ಇಂತಹ ಲೋಕದಲ್ಲಿರುವ ಎಲ್ಲ ಬ್ಲಾಗ್ ಲೋಕದ ತಾರೆಗಳಿಗೆ ಮಹಿಳೆಯರ ಬಗ್ಗೆ ಬರಿ ಗೌರವ ಅಷ್ಟೇ ಅಲ್ಲ, ತಾಯಿ ಪ್ರೀತಿ, ಮಮತೆ, ಮಮಕಾರ ಎಲ್ಲವು ಇವೆ. ಪ್ರತಿ ಹೆಣ್ಣು ಮಗಳನ್ನು ಸುರಕ್ಷಿತ ಕವಚಗಳಲ್ಲಿ ರಕ್ಷಿಸುವ ಇವರ ಪ್ರೀತಿಗೆ ನನ್ನದು ಒಂದು ಜೈಹೋ!!!"

          ಈ ವರ್ಣನೆಯಿಂದ ದೇವಿ ಸರಸ್ವತಿಗೆ ಬಹಳ ಸಮಾಧಾನವಾಗುತ್ತದೆ ಹಾಗು ಸಂತಸದಿಂದ ಬೀಗುತ್ತ "ನನ್ನ ಆಶೀರ್ವಾದ ಈ ಎಲ್ಲ ಬ್ಲಾಗ್ ಲೋಕದ ತಾರೆಗಳಿಗೆ ಸಮಾನವಾಗಿ ಸದಾ ಇರುತ್ತದೆ.. ಮಹಿಳೆಯರನ್ನು ದೇವಿಯ ಸ್ವರೂಪದಲ್ಲಿ ನೋಡುವ ಇವರೆಲ್ಲರಿಗೂ ಮಂಗಳವಾಗಲಿ ಮತ್ತು ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಸದಾ ಒಳಿತೇ ಆಗಲಿ"

          "ದೇವ ಇನ್ನೊಂದು ಮಾತು ಈ ಲೋಕವನ್ನು ಒಮ್ಮೆ ನೋಡಬೇಕಲ್ಲ"

          "ಅದಕ್ಕೇನು ದೇವಿ.. ನಿನ್ನ ಸ್ವರೂಪವೇ ಆದ ಪುಸ್ತಕಗಳು ಬಿಡುಗಡೆ ಆಗುತ್ತಲೇ ಇರುತ್ತವೆ ಒಮ್ಮೆ ಹೋಗಿ ಬರೋಣ"

          ಸಂತಸಗೊಂಡ ಸೃಷ್ಟಿಕರ್ತ ದಂಪತಿಗಳು ಬ್ಲಾಗ್ ಲೋಕದ ಮಹಿಳಾಮಣಿಗಳಿಗೆ ಬರಿ ಒಂದು ದಿನ ಮಾತ್ರ ಮಹಿಳಾದಿನವಲ್ಲ ಬದಲಿಗೆ ಇಂತಹ ಲೋಕದಲ್ಲಿ ಪ್ರತಿದಿನವೂ ಮಹಿಳೆಯರ ದಿನವೇ ಎಂದು ಆಶೀರ್ವದಿಸಿದರು ಎನ್ನುವಲ್ಲಿಗೆ ಈ  ಸಿರಿ ಕಾಂತನ ಹರಿಕಥೆ ಇಲ್ಲಿಗೆ ಮುಗಿಯುತ್ತದೆ!!!


          "ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ"

          Saturday, March 2, 2013

          ಎಂದರೋ ಮಹಾನುಭಾವುಲು ಅಂದರೀಕಿ ವಂದನಮು ...!

          "ಅಕ್ಕ... ಯಾಕೋ @#$# ಊಟ ಮಾಡಬೇಕು ಅನ್ನಿಸುತ್ತಿದೆ!"
          "ಯಾಕೆ ವಿಶಾಲು?.. ಸರಿ ತುಂಬಿದ ದಿನಗಳ ಬಸುರಿ ಬಯಕೆ... ಊರಿನಲ್ಲಿ ಒಂದು ಶ್ರಾದ್ಧ ಇದೆ ಇವತ್ತು ಅಲ್ಲಿಗೆ ಹೋಗೋಣ!"

          ಇದು ನಲವತ್ತು ವರ್ಷಗಳ ಹಿಂದೆ ಜನುಮ ನೀಡಿದ ಜನುಮದಾತೆ ನನ್ನ ಧರೆಗಿಳಿಸುವ ಮುನ್ನಾ ದಿನ ಇಚ್ಛೆ ಪಟ್ಟ "ಆಸೆ"
          ಕಿತ್ತಾನೆಯಲ್ಲಿನ ದೊಡ್ದಮಾವ ಅವರ ಮನೆ
          ಕಿತ್ತಾನೆಯಲ್ಲಿನ ಸಣ್ಣ ಮಾವ ಅವರ ಮನೆ!  

          ಅಕ್ಕ..ಶ್ರೀಮತಿ ಲಕ್ಷ್ಮೀದೇವಮ್ಮ ... ಅಂದ್ರೆ ನನ್ನ ಮುತ್ತಜ್ಜಿ (ಅಮ್ಮನ ಅಜ್ಜಿ).. ಕಿತ್ತಾನೆಯ ಪ್ರಮುಖರಲ್ಲಿ ಒಬ್ಬರಾದ ಶ್ರೀ ರಾಮಯ್ಯನವರ ಧರ್ಮಪತ್ನಿ. ಸುಮಾರು ೯೫ಕ್ಕೂ ಹೆಚ್ಚಿನ ವಸಂತಗಳನ್ನು ಕಂಡ ಈ ಹಿರಿಯ ಜೀವ ತಾಯಿಯ ಮಮತೆಯ ಸಿರಿ. ಕಣ್ಣು ಕಿವಿ ಚುರುಕಾಗಿತ್ತು, ಹಲ್ಲುಗಳು ಗಟ್ಟಿ ಮುಟ್ಟಾಗಿತ್ತು! ಅದು ಅವರ ಸುಂದರ ಧೀರ್ಘಾಯುಷ್ಯದ ರಹಸ್ಯ!

          ಇಂತಹ ಸುಂದರ ಮನಸ್ಸಿನ ಮುತ್ತಜ್ಜಿ, ನಮ್ಮ ತಾಯಿಯ ಮೇಲೆ ತೋರಿದ ಮಮತೆ, ಪ್ರೀತಿ, ಅಕ್ಕರೆ,  ಪ್ರಾಯಶಃ ನಮ್ಮ ತಾಯಿಯ ತಾಯಿಯು ತೋರುತ್ತಿರಲಿಲ್ಲವೇನೋ!. ನಮ್ಮ ಅಮ್ಮ ಕೇವಲ ಎರಡು ವರ್ಷದ ಕೂಸಾಗಿದ್ದಾಗ ಅಮ್ಮನ ಅಮ್ಮ ಇಹಲೋಕ ತ್ಯಜಿಸಿದ ಮೇಲೆ, ಬೆಳೆದದ್ದು ತನ್ನ ಅಜ್ಜಿಯ ಮಡಿಲಲ್ಲೇ.

          ಮುತ್ತಜ್ಜಿ ಶ್ರೀಮತಿ ಲಕ್ಷ್ಮೀದೇವಿ 
          ಅಂಥಹ ತಾಯಿಯ ಗುಣ ಹೊತ್ತ ಮುತ್ತಜ್ಜಿ, ತನ್ನ ಮೊಮ್ಮಗಳ ಬಯಕೆಯನ್ನು ಈಡೇರಿಸುವುದಕ್ಕೆ ಕಿತ್ತಾನೆಯ ನೆಂಟರ ಮನೆಯಲ್ಲಿ ನಡೆಯುತ್ತಿದ್ದ ಶ್ರಾದ್ಧದ ಊಟಕ್ಕೆ ಕರೆದೊಯ್ದರು. ಊಟ ಮಾಡಿ ಬಂದ ರಾತ್ರಿ ಅಮ್ಮನಿಗೆ ಪ್ರಸವ ಬೇನೆ ಶುರುವಾಯಿತು.

          ಅಂದಿನ ರಾತ್ರಿ ನನ್ನ ಮುತ್ತಜ್ಜಿಗೆ ಊಟವಿಲ್ಲ. ಮೊಮ್ಮಗಳ ಆರೈಕೆಯಲ್ಲಿ ರಾತ್ರಿ ಊಟ ಸೇರಲಿಲ್ಲ. ಮರುದಿನ ಸೂರ್ಯೋದಯದ ಹೊತ್ತಿಗೆ ಗಂಡು ಮಗುವಿಗೆ ಜನ್ಮ ಕೊಟ್ಟರು ನನ್ನ ತಾಯಿ! ಅಂದಿನ ದಿನ ಮತ್ತೆ ಊಟ ಮಾಡಲಾಗಲಿಲ್ಲ ನನ್ನ ಮುತ್ತಜ್ಜಿಗೆ.

          ಮಾರನೆ ದಿನ ಶಿವರಾತ್ರಿ ಮತ್ತೆ ಉಪವಾಸ ನನ್ನ ಮುತ್ತಜ್ಜಿಗೆ!. ನನ್ನ ಜನನ ಕಾಲದಲ್ಲಿ ಮೂರು ದಿನ ಆಹಾರವಿಲ್ಲದೆ  ತನ್ನ ಮೊಮ್ಮಗಳ ಆರೈಕೆ ಮಾಡಿದ ಆ ಮಹಾತಾಯಿಗೆ ಈ ಬ್ಲಾಗಿನ ಮೂಲಕ ನನ್ನ ನಮನಗಳನ್ನು ಸಲ್ಲಿಸುತ್ತಿದ್ದೇನೆ.

          ಜನನವಾದಮೇಲೆ ಆ ವಿಷಯವನ್ನು ನನ್ನ ತಾಯಿಯ ಸೋದರಮಾವನ ಮಗ "ಶಾಮಣ್ಣ"ನ ಜೊತೆ ತೋಟಕ್ಕೆ ಹೋಗಿದ್ದ ನನ್ನ ಅಣ್ಣ ವಿಜಯನಿಗೆ... ಶಾಮಣ್ಣ ಹೇಳಿದ
          "ಲೋ ವಿಜಯ ತಮ್ಮ ಹುಟ್ಟಿದ್ದಾನೆ ಕಣೋ"
          "ಯಾರಿಗೆ ತಮ್ಮನೋ..!"
          "ಲೋ ನಿನ್ನ ಅಮ್ಮನಿಗೆ ಇಂದು ಬೆಳಿಗ್ಗೆ ಹೆರಿಗೆ ಆಯಿತು.. ತಮ್ಮ ಹುಟ್ಟಿದ್ದಾನೆ ನಿನಗೆ"
          ನನ್ನ ಅಣ್ಣನಿಗೆ ಖುಷಿಯಾಯಿತು!

          ಅಕ್ಕನ ಮಗಳಾದ ನನ್ನ ಅಮ್ಮನ ಬಾಣಂತನಕ್ಕೆ, ಆರೈಕೆಗೆ ಹಾಲು ಜಾಸ್ತಿ ಬೇಕು ಅಂತ ಅನ್ನಿಸಿ ಹಸುವನ್ನೇ ತಂದ ಅಮ್ಮನ ಸೋದರಮಾವ ಶ್ರೀ ಶಂಕ್ರಣ್ಣ  ಮತ್ತು ಅವರ ಅಗ್ರಜ ಶ್ರೀ ಕೃಷ್ಣಪ್ಪ ಅವರ ಕುಟುಂಬಕ್ಕೆ ಈ ಮೂಲಕ ಕೃತಜ್ಞತೆಗಳನ್ನು  ಸಲ್ಲಿಸುತ್ತಿದ್ದೇನೆ. .

          ಅಮ್ಮನ ಹಿರಿಯ ಸೋದರ ಮಾವ ಮತ್ತು ಅತ್ತೆ (ದೊಡ್ಡ ಮಾವ ಮತ್ತು ಅತ್ತೆ)

          ಕಿರಿಯ ಸೋದರ ಮಾವ ಮತ್ತು ಅತ್ತೆ (ಸಣ್ಣ ಮಾವ ಮತ್ತು ಅತ್ತೆ)
          ಆಗ ಹುಟ್ಟಿದ ಮಗುವನ್ನು ಪ್ರಪಂಚದಲ್ಲಿ ಗುರುತಿಸಿಕೊಳ್ಳಲು "ಶ್ರೀಕಾಂತ್" ಎಂಬ ಸುಂದರ ಹೆಸರನ್ನು ಕೊಟ್ಟ ನನ್ನ ಅಜ್ಜ (ಅಪ್ಪನ ಅಪ್ಪ).. ಬಾಲ್ಯದಲ್ಲಿ ನನ್ನ ಬರವಣಿಗೆಯನ್ನು, ಊಟಮಾಡುವುದನ್ನು ಎಡಗೈಯಿಂದ ಬಲಗೈಗೆ ಬದಲಿಸಲು ಶ್ರಮಿಸಿದ ಅಜ್ಜಿಗೆ(ಅಪ್ಪನ ಅಮ್ಮ) ನನ್ನ ಕೃತಜ್ಞತೆಗಳು.
          ಅಜ್ಜ ಮತ್ತು ಅಜ್ಜಿ (ಅಪ್ಪನ ತಂದೆ ತಾಯಿ)
          ಸಾಹಸದ ಬದುಕಲ್ಲಿ ತಾಳ್ಮೆಯಿಂದ ಹೆಜ್ಜೆ ಇಟ್ಟ ಅಪ್ಪನಿಗೂ.. ಅಷ್ಟೇ ಛಲದಿಂದ ಸಂಸಾರವನ್ನು ಕಷ್ಟದ ಅಲೆಗಳಲ್ಲೂ ಕೂಡ ಧೃತಿಗೆಡದೆ ದಡಕ್ಕೆ ತಲುಪಿಸಿದ ಅಮ್ಮನಿಗೂ,ಇಷ್ಟೆಲ್ಲಾ ಬರೆಯಲು ಸ್ಪೂರ್ತಿನೀಡುವ, ನನ್ನೊಳಗೆ ಕೂತು ಬರೆಸುತ್ತಿರುವ ಮಾತಾ ಪಿತೃಗಳ ಋಣಭಾರ ತೀರಿಸಲು ಸಾಧ್ಯವೇ ಇಲ್ಲ. ಅಪ್ಪ ಅಮ್ಮ ಹೆಜ್ಜೆ  ಇಟ್ಟು ಸಾಗುತ್ತಿರುವ ಸುವರ್ಣ ಪಥದಲ್ಲಿ ಸಾಗುವ, ಮಾಗುವ ಮನಸ್ಸು ಸದಾ ನನ್ನೊಳಗೆ ಇರಲಿ ಎಂದು ಆಶಿಸುತ್ತೇನೆ. ಆ ಕಾರ್ಯದಲ್ಲಿ ಯಶಸ್ವಿಯಾದರೆ ಅದೇ ಅವರಿಗೆ ಸಲ್ಲಿಸುವ ಕೃತಜ್ಞತೆಗಳು!

          ನನ್ನ ಅಪ್ಪ ಅಮ್ಮ

          ಸದಾ ಕಾಲ ನೆರಳಾಗಿರುವ ಅಕ್ಕನಿಗೆ, ಗೆಳೆಯನಾಗಿ, ಅಕ್ಕರೆಯಿಂದ ಕಾಣುವ ಅಣ್ಣನಿಗೆ, ಸ್ನೇಹಿತನಾಗಿ ಜೊತೆಯಲ್ಲಿ ನಿಂತಿರುವ ತಮ್ಮನಿಗೆ, ಮಾತೃ ಸ್ವರೂಪ ಅತ್ತಿಗೆಯವರಿಗೆ , ಮನದನ್ನೆಗೆ , ಮುದ್ದಾದ ಮಕ್ಕಲೈಗೆ...  ಎಲ್ಲಾರಿಗೂ  ಈ ಸಮಯದಲ್ಲಿ ನನ್ನ ಕೃತಜ್ಞತೆಗಳು.

          ನನ್ನ ತುಂಬು ಕುಟುಂಬ!
          ಬಂದು ಬಳಗದ ಪ್ರತಿಯೊಬ್ಬರೂ ಈ ನಲವತ್ತು ವರ್ಷಗಳ ಜೀವನದ ಬೆಳವಣಿಗೆಗೆ ಸಹಕಾರ ನೀಡಿದ್ದಾರೆ. ಅವರಿಗೆ ನನ್ನ ನಮಸ್ಕಾರಗಳು.

          ಅನವರತ ಜೊತೆಯಾಗಿ ಸಹಕಾರ ನೀಡುತ್ತಿರುವ ಬಂಧುಗಳು 
          ಗೆಳೆತನ ಎಂಬುದು ಒಂದು ಸುವಾಸಿತ ಪರಿಮಳವುಳ್ಳ ಹೂವಿನ ಹಾಗೆ.  ಅಂಥಹ ಪರಿಮಳಕ್ಕೆ ನನ್ನನ್ನು ಸೇರಿಸಿಕೊಂಡು ಅರಳಿಸುತ್ತಿರುವ ನನ್ನ ಬಾಲ್ಯ ಸ್ನೇಹಿತರಿಗೆ, ಬ್ಲಾಗ್ ಲೋಕದ ನಕ್ಷತ್ರಗಳಿಗೆ, ಫೇಸ್ ಬುಕ್ ನ ತಾರೆಗಳಿಗೆ, ಸಹೋದ್ಯೋಗಿಗಳಿಗೆ  ತುಂಬು ಹೃದಯದ ಧನ್ಯವಾದಗಳು. ಪ್ರತಿಯೊಬ್ಬರೂ ಸಿಗುವ ಒಂದೇ ಸ್ಥಳ ಅದೇ ಗೂಗಲ್!

          ಸ್ನೇಹದ ತಾಣ ಗೂಗಲ್!
          ನಲವತ್ತು ವರ್ಷ....  ಮನುಜನ ಜೀವನದಲ್ಲಿ ಒಂದು ಮುಖ್ಯ ಘಟ್ಟ. ತಾನು ನಡೆದುಬಂದ ದಾರಿಯನ್ನು ಅವಲೋಕಿಸುತ್ತ ಮುಂದಿನ ದಾರಿಯಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಾ ಸಾಗುವ, ಮಾಗಿದ ಮನಸ್ಸಿನ ಹಾದಿಯಲ್ಲಿ ನಡೆಯಬೇಕು. ಇದು ನನ್ನ ಆಸೆ ಇದಕ್ಕೆ ನಿಮ್ಮ ಆಶೀರ್ವಾದ ನೆರಳಂತೆ ಕಾಯುತ್ತಿರಲಿ!

          ಎಂದರೋ ಮಹಾನುಭಾವುಲು ಅಂದರೀಕಿ ವಂದನಮು....!

          Sunday, February 17, 2013

          ಶ್ರೀ ಮಣಿಕಾಂತಕೋಪಾಕ್ಯಾನಾ - "ಅಪ್ಪ ಅಂದ್ರೆ ಆಕಾಶ" - ಒಂದು ಪುಸ್ತಕ ಬಿಡುಗಡೆ ಸಮಾರಂಭ

          ಬಾಲ್ಯದಿಂದಲೂ ಭಾದ್ರಪದ ಮಾಸದಲ್ಲಿ ಶುಕ್ಲ ಪಕ್ಷದ ಚಂದ್ರನನ್ನು ನೋಡಿದರೆ ಸ್ಯಮಂತಕೋಪಾಕ್ಯಾನ ಕಥೆ ಕೇಳುವುದು ರೂಡಿಯಾಗಿತ್ತು. ಪಂಚಾಗ ತೆರೆದು ನೋಡಿದಾಗ.ಗೊತ್ತಾದದ್ದು ಇಂದು ರಥ ಸಪ್ತಮಿ...ಸೂರ್ಯನ ಜನುಮದಿನವೆಂದು ಗುರುತಿಸಲಾಗುತ್ತದೆ. ಅಂಥಹ ಶುಭದಿನದಂದು ಸತ್ರಾರ್ಜಿತನಿಗೆ ಸ್ಯಮಂತಮಕ ಮಣಿ ಸಿಕ್ಕಿದ ಹಾಗೆ ಶ್ರೀ ಮಣಿಕಾಂತ್ ಸರ್ ಅವರ "ಅಪ್ಪ ಅಂದ್ರೆ ಆಕಾಶ" ಎಂಬ ಅನರ್ಘ್ಯ ಮಣಿ ಬಿಡುಗಡೆ ಸಮಾರಂಭ ಎಂದು ತಿಳಿಯಿತು.

          ಮಣಿಕಾಂತ್ ಸರ್ ಅವರ ಲೆಕ್ಕವಿಲ್ಲದಷ್ಟು ಅಭಿಮಾನಿಗಳು, ಬ್ಲಾಗ್ ಲೋಕದ ಅನೇಕ ತಾರೆಗಳು, ಇನ್ನು ಬರಿ ಫೇಸ್ ಬುಕ್, ಬ್ಲಾಗ್ ಗಳಲ್ಲಿ ಹಲ್ಲು ಗಿಂಚುತ್ತಾ ಇರುವ ಎಷ್ಟೋ ನಕ್ಷತ್ರಗಳು ಅವರ ಸ್ನೇಹದ ಅಂಬರದಲ್ಲಿ ಮಿನುಗಲು ಬರುವವರಿದ್ದರು. ಹಾಗಾಗಿ ಬೇಗ ಬೇಗ ಭಾನುವಾರದ ಕೆಲಸ! ಮುಗಿಸಿ ರವಿಂದ್ರ ಕಲಾಕ್ಷೇತ್ರದ ಕಡೆಗೆ ಹೆಜ್ಜೆ ಹಾಕಿದೆ ಕ್ಷಮಿಸಿ ಬೈಕ್ ಓಡಿಸಿದೆ..!

          ಪಂಚಾಂಗದ ಪ್ರಕಾರದಿನ ವಿಶೇಷ  : ರಥಸಪ್ತಮಿ - ರವಿಯ ಜನುಮದಿನ
          ವಾರ: ರವಿವಾರ
          ಸ್ಥಳ: ರವಿಂದ್ರ ಕಲಾಕ್ಷೇತ್ರ (ರವಿ + ಇಂದ್ರ)
          ಲೇಖಕ : ಮಣಿಕಾಂತ್ (ಸ್ಯಮಂತಕಮಣಿಕಾಂತ್)

          ನೋಡಿ ಇಂದಿನ ವಿಶೇಷ..ಎಲ್ಲದರಲ್ಲೂ ಸೂರ್ಯ ನಗುತ್ತಿದ್ದಾನೆ.. !

          ಸುಂದರ ಆಹ್ವಾನ ಪತ್ರಿಕೆ
          ಬೈಕ್ ನಿಲ್ಲಿಸಿದಾಗ ಬದರಿ ಸರ್ ಅವರ ಮುಗ್ಧ ನಗೆಯ ಆಲಿಂಗನ ಸಿಕ್ಕಿತು, ಮಾತಾಡುತ್ತಾ ನಿಂತೆವು..ಫೇಸ್ ಬುಕ್ ಗುಂಪಿನ ಪದಾರ್ಥ ಚಿಂತಾಮಣಿಯ "ಪ್ರದೀಪ್ ರಾವ್" ಸಿಕ್ಕರು, ಅಷ್ಟರಲ್ಲಿ ಬಾಲೂ ಸರ್ ಅವರಿಗೆ ಕರೆಮಾಡಿದಾಗ ಕಲಾಕ್ಷೇತ್ರದ ಒಳಗೆ ಇದ್ದೇನೆ ಎನ್ನುವ ಉತ್ತರ ಬಂತು, ಅಲ್ಲಿ ಸತೀಶ್ ನಾಯಕ್, ಸಹೋದರಿಯರಾದ  ಸುಲತ ಶೆಟ್ಟಿ (ಎಸ್ ಎಸ್),  ಸುಷ್ಮಾ ಮೂಡಬಿದರೆ (ಪಿ.ಎಸ್), ಸಂಧ್ಯಾ ಭಟ್ (ಎಸ್.ಪಿ), ರಶ್ಮಿ ತೆಂಡೂಲ್ಕರ್, ವಿನಯ್, ಶಿವೂ ಸರ್ , ಪ್ರಕಾಶಣ್ಣ, ದಿಗ್ವಾಸ್, ಉಮೇಶ್ ದೇಸಾಯಿ ಸರ್, ಸವಿತಾ, ಪುಷ್ಪರಾಜ್ ಚೌಟ, ಸುರೇಶ ಹೆಗಡೆ, ಅಶೋಕ್ ಶೆಟ್ಟಿ, ಪ್ರವೀಣ್ ಸಂಪ, ತಿರುಮಲೈ ರವಿ ಸರ್, ಗಿರೀಶ್ ಸೋಮಶೇಖರ್,  ಗೋಪಾಲ ವಾಜಪೇಯಿ ಸರ್, ಹೀಗೆ ಇನ್ನೂ ಅನೇಕರು ಭೇಟಿಯಾದರು.

          ಕಲಾಕ್ಷೇತ್ರದ ಆವರಣದ ಸುಂದರವಾದ ರಂಗ ಮಂಟಪದಲ್ಲಿ  ಶ್ರೀ ಉಪಾಸನ ಮೋಹನ್ ಅವರ ತಂಡದಿಂದ ಸೊಗಸಾದ ಹಾಡುಗಳು ತೇಲಿ ಬರುತಿದ್ದವು, ಎಲ್ಲರು ತಮಗೆ ಬೇಕಾದ ಆಸನಗಳನ್ನೂ ಹುಡುಕಿಕೊಂಡು ಕೂರಲು ಶುರುವಾದರು. ಒಂದಾದ ಮೇಲೆ ಒಂದರಂತೆ ಶ್ರೀ ಮೋಹನ ಅವರ ತಂಡ ಗಾನ ಮಾಧುರ್ಯದ ಅಲೆಗಳಲ್ಲಿ ನಮ್ಮನ್ನೆಲ್ಲ ತೇಲಿಸುತಿದ್ದರು.

          ಸಮಾರಂಭದ ಅತಿಥಿಗಳೆಲ್ಲ ಬಂದು ಆಸನ ಗ್ರಹಣ ಮಾಡಿದರು. ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ಟರು (ಕನ್ನಡ ಪ್ರಭ ಮತ್ತು ಸುವರ್ಣ ನ್ಯೂ ವಾಹಿನಿಯ ಮುಖ್ಯ ಸಂಪಾದಕರು), ಮುಖ್ಯ ಅತಿಥಿ ಪ್ರಸಿದ್ಧ ಕವಿಗಳಾದ ಶ್ರೀ ಎಚ್ ಎಸ್ ವೆಂಕಟೇಶ್ ಮೂರ್ತಿಗಳು, "ಚಂದ್ರಮುಖಿ ಪ್ರಾಣಸಖಿ" ಚಿತ್ರದ ಅಭಿನಯದಿಂದ ನನಗೆ ಬಹಳ ಇಷ್ಟವಾದ ಚಿತ್ರ ತಾರೆ ಭಾವನ, ನನಗೆ ಬಹಳ ಇಷ್ಟವಾದ ಹಾಗೂ ಐವತ್ತು ಹೆಚ್ಚು ಬಾರಿ ನೋಡಿದ "ಮಠ" ಮತ್ತು "ಎದ್ದೇಳು ಮಂಜುನಾಥ" ಚಿತ್ರದ ನಿರ್ದೇಶಕ ಶ್ರೀ ಗುರುಪ್ರಸಾದ ಇವರೆಲ್ಲ ಶ್ರೀ ಮಣಿಕಾಂತ್ ಸರ್ ಅವರ ಪುಸ್ತಕದ ಲೋಕಾರ್ಪಣೆಗೆ ಬಂದಿದ್ದರು.

          ಭಾವನ ಅವರ ಧ್ವನಿ ಒಂದು ತರಹ ಗುಂಗು ಹಿಡಿಸುತ್ತೆ..ಅವರು ಸುಲಲಿತವಾಗಿ ಪುಸ್ತಕದ ಬಗ್ಗೆ, ಪುಸ್ತಕ ಓದುವ ಹವ್ಯಾಸದ ಬಗ್ಗೆ ಚಿಕ್ಕ ಚೊಕ್ಕ ಮಾತುಗಳು ಅವರ ಮಾತನ್ನು ಇನ್ನಷ್ಟು ಕೇಳುವಾ ಅನ್ನಿಸಿತ್ತು ಅವರ ಧ್ವನಿ ಕೇಳಲೇ? ಇಲ್ಲಾ  ಅವರ ಸುಂದರ ಮುಖ ನೋಡಲೇ ಎನ್ನುವ ಗೊಂದಲದಲ್ಲಿದಾಗಲೇ ಅವರ ಮಾತುಗಳು ಮುಗಿದಿದ್ದವು.

          ನಂತರ ಪ್ರಸಿದ್ಧ ಮುಖ್ಯ ಅತಿಥಿ ಕವಿಗಳಾದ ಶ್ರೀ ಎಚ್ ಎಸ್ ವೆಂಕಟೇಶ್ ಮೂರ್ತಿಗಳು ತಮ್ಮ ಕವನಗಳ ಹಾಗೆ ಮುತ್ತು ಪೋಣಿಸಿದ ಮಾತುಗಳು ಮಣಿಕಾಂತ್ ಅವರ ಸಾಧನೆಗೆ ಮುತ್ತಿನ ಮಣಿಹಾರವನ್ನೇ ತೊಡಿಸಿದರು. ಅವರು ಹೇಳಿದಂತೆ ವಾಲ್ಮೀಕಿಯ ಮಾತುಗಳನ್ನು ಉಲ್ಲೇಖಿಸಿದ ಒಂದು ಸಾಲು ನನ್ನನ್ನು ಕೆಲ ಕಾಲ ಮೌನಿಯಾಗಿಸಿತು. ಸಾಧನೆ ಮಾಡುವಾಗ "ಕಂಬನಿಯನ್ನು ಹಿಂಬಾಲಿಸು" ಎಂಥಹ ಮಾತುಗಳು!

          ಶ್ರೀ ಗುರುಪ್ರಸಾದ್ ಅವರ ಚಿತ್ರಗಳಂತೆ ಅವರ ಮಾತುಗಳು ಬಂದೂಕಿನಿಂದ ಹೋರಟ ಗುಂಡಿನಂತೆ....ಸರಿಯಾದ ಗುರಿ ಸರಿಯಾದ ಮಾತು. ಹತ್ತು ಹದಿನೈದು ನಿಮಿಷ...ನಾನು ಹಾಗೂ ಸಮಾರಂಭಕ್ಕೆ ಬಂದಿದ್ದ ಎಲ್ಲರೂ ಮಾಡಿದ್ದು ಎರಡೇ ಕೆಲಸ..ಒಂದು ಇರುವ ಹಲ್ಲನ್ನೆಲ್ಲಾ ಬಿರಿಯುವಂತೆ ನಕ್ಕಿದ್ದು...ಎರಡು ಅಂಗೈಗಳು ನೋಯುವ ತನಕ ಚಪ್ಪಾಳೆ ಬಾರಿಸಿದ್ದು.  ಎಂಥಹ ಮಾತುಗಾರಿಕೆ..ನಗೆ ದೇವತೆ ಅವರ ಪ್ರತಿ ಪದಗಳನ್ನು ತಬ್ಬಿ ಹಿಡಿದಿದ್ದಳು. ಎದ್ದೇಳು ಮಂಜುನಾಥ ಚಿತ್ರದಲ್ಲಿ ಮಂಜುನಾಥನ ಪಾತ್ರ ಅವರ ತಾಯಿ ಕೊಟ್ಟಿದ್ದ ಐವತ್ತು ರೂಪಾಯಿ ನೋಟನ್ನು ನಾಣಿಯ ಪಾತ್ರಕ್ಕೆ ಕೊಟ್ಟು ಹೇಳುತ್ತಾರೆ " ಒಳ್ಳೆ ಕೆಲಸ ಮಾಡುವಾಗ ಈ ಹಣವನ್ನು ಉಪಯೋಗಿಸಿಕೊ ಎಂದು ನನ್ನತಾಯಿ ಕೊಟ್ಟಿದ್ದಳು..ಇವತ್ತು ನಿಮಗೆ ಕೊಡ್ತಾ ಇದ್ದೀನಿ...ನಿಮಗೆ ಒಳ್ಳೆದಾಗಲಿ" ...ಅದೇ ರೀತಿಯಲ್ಲಿ ಗುರುಪ್ರಸಾದ ಅವರ ತಂದೆ ಮಣಿಕಾಂತ್ ಸರ್ ಅವರ ಪುಸ್ತಕವನ್ನು ಕೊಂಡು ತರಲು ಆಶೀರ್ವಾದ ಮಾಡಿ ನೂರು ರೂಪಾಯಿಯನ್ನು ಕೊಟ್ಟಿದ್ದರಂತೆ. ಆ ಹಣವನ್ನು ಮಣಿಕಾಂತ್ ಸರ್ ಅವರಿಗೆ ಕೊಟ್ಟು ಈ ನೂರು ರೂಪಾಯಿ ಅಕ್ಷಯವಾಗಲಿ ಎನ್ನುವ ಮಾತನ್ನು ಹೇಳಿದರು. ಒಂದು ಸುಮಧುರ ಭಾವನೆಯನ್ನು ಹೊರಗಿಟ್ಟ ಅಪೂರ್ವ ಘಳಿಗೆ ಅದು. ಗುರುಪ್ರಸಾದ್ ಅವರ ಮಾತುಗಳು ಒಂದಕ್ಕಿಂತ ಒಂದು ಸೊಗಸಾಗಿದ್ದವು. ಅವರ ಚಿತ್ರಗಳು ಇನ್ನಷ್ಟು ಬರಲಿ ಎನ್ನುವ ಆಶಯ ನಮ್ಮೆಲರದು.

          ಅಧ್ಯಕ್ಷ ಭಾಷಣ ಮಾಡಿದ ಶ್ರೀ ವಿಶ್ವೇಶ್ವರ ಭಟ್ಟರು ತಮ್ಮ ಹಾಗು ಮಣಿಕಾಂತ್ ಅವರ ಪರಿಚಯ, ಬೆಳೆದುಬಂದ ಹಾದಿ,  ಸಾಧನೆಯ ಶಿಖರದತ್ತ ಪಯಣ ಎಲ್ಲವನ್ನು ಸೊಗಸಾಗಿ ತೆರೆದಿಟ್ಟರು. ಮಣಿಕಾಂತ್ ಒಬ್ಬ ಸುಂದರ ಮಾನವ ಜೀವಿ ಎನ್ನುವ ಅವರ ಮಾತುಗಳು ಅಕ್ಷರಶಃ ನಿಜ.

          ತೆರೆಯ ಹಿಂದೆ, ತೆರೆಯ ಮುಂದೆ ಈ ಸಮಾರಂಭವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಪ್ರತಿಯೊಬ್ಬರನ್ನು ಗೌರವಿಸಿದ್ದು ಶ್ಲಾಘನೀಯ. ಸುಂದರ ಮಾತುಗಳನ್ನು ಹೇಳಿದ ಮಣಿಕಾಂತ್ ಸರ್, ಈ ಪುಸ್ತಕವನ್ನು ಬರೆಯಲು ಅವರಿಗೆ ಹೆಗಲು ಕೊಟ್ಟು ನೆರವಾದ ತಮ್ಮ ಕುಟುಂಬದವರನ್ನು, ಸ್ನೇಹಿತರನ್ನು ನೆನೆದು ಗೌರವ ಸಲ್ಲಿಸಿದರು.

          ಇಡಿ ಕಾರ್ಯಕ್ರಮದಲ್ಲಿ ಎದ್ದು ಕಂಡಿದ್ದು ಒಂದು ಸುಂದರ ವಾತಾವರಣ..ಹಾಗು ತಮ್ಮ ಸಾಧನೆಯಾ ಬಗ್ಗೆ ಹೆಚ್ಚು ಮಾತಾಡದೆ ತೆರೆಮರೆಯಲ್ಲಿ ಶ್ಲಾಘನೀಯ ಕೆಲಸ ಮಾಡಿ ತಮ್ಮಷ್ಟಕ್ಕೆ ತಾವು ಇರುವ ಅನೇಕರಲ್ಲಿ ಕೆಲವರನ್ನು ಪರಿಚಯ ಮಾಡಿಕೊಟ್ಟು ಅವರನ್ನು ವೇದಿಕೆಗೆ ಕರೆದು ಗೌರವಿಸಿದ್ದು. ಅನೇಕ ಬ್ಲಾಗ್ ಲೋಕದ ತಾರೆಗಳ ಪುಸ್ತಕ ಬಿಡುಗಡೆಯಲ್ಲಿ ಕೂಡ ಇಂತಹ ಹೃದಯ ಸ್ಪರ್ಶಿ ಘಟನೆಗಳನ್ನು ನಾನು ಕಂಡಿದ್ದೆ.

          ರಥ ಸಪ್ತಮಿಯ ದಿನ ಸೂರ್ಯ ತನ್ನ ಸಪ್ತಾಶ್ವದ ರಥದಲ್ಲಿ ಉತ್ತರಾಯಣ ಪುಣ್ಯಕಾಲದಲ್ಲಿ  ಉತ್ತರ ದಿಕ್ಕಿನೆಡೆ  ಸಂಚರಿಸುತ್ತಾನೆ ಎನ್ನುವಂತೆ..ಕೆಲವು ಸುಂದರ ಪುಟಗಳಲ್ಲಿ ಹಲವಾರು ಹೃದಯ ಸ್ಪರ್ಶಿ ಲೇಖನಗಳ ಮೂಲಕ ನಮಗೆಲ್ಲರಿಗೂ ಪರಿಚಯಿಸುತ್ತಿರುವ ಮಣಿಕಾಂತ್ ಅವರ ನೂತನ ಕೊಡುಗೆ "ಅಪ್ಪ ಅಂದ್ರೆ ಆಕಾಶ" ಎನ್ನುವ ಹೊತ್ತಿಗೆ ಬಿಡುಗಡೆ ಸಮಾರಂಭ ಸೊಗಸಾಗಿತ್ತು
          ಸುಂದರ ಹೃದಯವಂತ ಗೆಳೆಯ - ಮಣಿಕಾಂತ್ ಸರ್ ! (ಚಿತ್ರಕೃಪೆ - ಪ್ರಕಾಶ ಹೆಗಡೆ) 


          ಅಪ್ಪನ ದುಡ್ಡು ಎಣಿಸೋಕೆ ಆಗಲ್ಲ....ಅಮ್ಮನ ಸೀರೆ ಮಡಚೋಕೆ ಆಗೋಲ್ಲ..ಇದು ಗಾದೆ..ಅಮ್ಮನ ಸೀರೆಯ ಅಂಚಲ್ಲಿ ಕಂಡ ಬರುವ ಪ್ರೀತಿಯನ್ನು "ಅಮ್ಮ ಹೇಳಿದ ಎಂಟು ಸುಳ್ಳುಗಳು" ಎಂಬ ಹೃದಯ ಸ್ಪರ್ಶಿ ಪುಸ್ತಕದಲ್ಲಿ ಎಲ್ಲರ ಬದುಕಿನ ಮನೋಜ್ಞ ಮುಖವನ್ನು ಪರಿಚಯಿಸಿದ ಮಣಿಕಾಂತ್ ಸರ್ ....ಈಗ ಅಪ್ಪನ ದುಡ್ಡನ್ನು ಎಣಿಸದೆ ಅಪ್ಪ ಎನ್ನುವ ಒಂದು ಭಾವ ಜೀವಿ ನಮಗಾಗಿ ಕಟ್ಟಿ ಕೊಡುವ ಸುಂದರವಾದ ಅಂಬರವನ್ನು ಪರಿಚಯಿಸುತ್ತಿರುವ "ಅಪ್ಪ ಎಂದರೆ ಆಕಾಶ" ಹೊತ್ತಿಗೆಯ ಬಿಡುಗಡೆಯನ್ನು ಬರಸೆಳೆದುಕೊಂಡು ಓದಿ ಬಿಡುವ ಆತುರ ಹೆಚ್ಚಾಗುತ್ತಿದೆ..ಆ ಪುಸ್ತಕದ ಸಾರವನ್ನು ಸವಿಯೋಣ ..ನಮ್ಮ ಜೀವನದಲ್ಲಿ ಆ ಲೇಖನಗಳು ಸಾರುವ ಸಂದೇಶಗಳಲ್ಲಿ ಕೆಲವನ್ನಾದರೂ ಅಳವಡಿಸಿಕೊಂಡು ಬೆಳೆಯೋಣ ಎನ್ನುವ ಆಶಯದೊಂದಿಗೆ ಮಣಿಕಾಂತ್ ಸರ್ ಅವರಿಗೆ ಶುಭವಾಗಲಿ...!

          Thursday, February 7, 2013

          ಆ ದಿನಗಳು

          ಹೊಸ ಕ್ಯಾಲೆಂಡರ್ ವರ್ಷ ಆಗತಾನೆ ಶುರುವಾಗಿತ್ತು..ಜನವರಿ ತಿಂಗಳ ಚಳಿಗೆ ರಾತ್ರಿಯ ನಿದ್ದೆ ಇನ್ನು ಕರಗಿರಲಿಲ್ಲ...

          ಹಿಂದಿನ ದಿನ ಮಾತಾಡಿದ್ದು ನೆನಪಲ್ಲಿ ಇತ್ತು...ಅಮ್ಮ "ಏಳಲ್ವೇನೋ..ಎಲ್ಲಿಗೋ ಹೋಗ್ಬೇಕು ಅಂತ ಹೇಳಿದ್ದೆ...ಎದ್ದೇಳು ಮಗು" ಎಂದು ಎಲ್ಲೋ ಯೋಜನಗಳಷ್ಟು ದೂರದಲ್ಲಿ ಹೇಳುತಿದ್ದುದು ಮಂದವಾಗಿ ಕಿವಿಗೆ ಬೀಳುತ್ತಿತ್ತು....

          ಅರೆ ಇದೇನಿದು..ಹೊತ್ತಾಗಿ ಬಿಟ್ಟಿದೆ..ಎಂದು ತನ್ನನ್ನೇ ತಾನು ಬಯ್ದುಕೊಳ್ಳುತ್ತಾ...ಅಲ್ಲೇ ಇದ್ದ ಅಮ್ಮನಿಗೆ ಇರುವ ಹಲ್ಲುಗಳನ್ನು ಬೀರಿ...ಪ್ರಾತಃ ಕರ್ಮಗಳನ್ನು ಮುಗಿಸಿ ಬಂದಾಗ ಆಗಲೇ ೯.೩೦ ಆಗಿತ್ತು. ಇದ್ದುದರಲ್ಲಿ ಚೆನ್ನಾಗಿ ಕಾಣಿಸುತ್ತೇನೆ ಎನ್ನುವ ಉಡುಗೆ ತೊಡುಗೆಗಳನ್ನು ತೊಟ್ಟು..ಅಮ್ಮ ಕೊಟ್ಟ ಬಿಸಿ ಬಿಸಿ ದೋಸೆಯನ್ನು ತಿಂದು..ಹಾರಾಡುತಿದ್ದ ಮನಸ್ಸನ್ನು ತಹಬದಿಗೆ ತಂದುಕೊಂಡು ಅಮ್ಮನಿಗೆ ಹೇಳಿ ಹೊರ ಹೊರಟಿತು!

          ಮನಸ್ಸಲ್ಲಿ ಏನೋ ಆನಂದ...ಕೆಲವೊಮ್ಮೆ ಒಂದು ನೂರು ಮೀಟರ್ ನೆಡೆಯುವುದಕ್ಕೂ ಸೋಮಾರಿಸುತಿದ್ದ ದೇಹ..ಇಂದು ಸುಮಾರು ಒಂದೆರಡು ಕಿ.ಮಿ. ಗಳನ್ನೂ ಓಡುತ್ತಲೇ ಬಂದು ಬಿಟ್ಟಿತ್ತು.

          ಕಣ್ಣುಗಳು ಸಾವಿರಾರು ಮಂದಿಗಳಲ್ಲಿ ಯಾರನ್ನೋ ಹುಡುಕುತಿತ್ತು...ಸಣ್ಣಗೆ ಕಣ್ಣಲ್ಲಿ ಮಿಂಚುಗಳು ಹೊಳೆದವು. ಸ್ವಾಮೀ ವಿವೇಕಾನಂದರ ಶೈಲಿಯಲ್ಲಿ ನಿಂತವರನ್ನು ಕಂಡಾಗ..ದಂತ ಪಂಕ್ತಿಗಳು ತಾನಾಗೆ ತೆರೆದುಕೊಂಡವು..ಆ ಕಡೆಯೂ ಅದೇ ಪುನರಾವರ್ತನೆ...!

          ನಾಲ್ಕು ಹುಬ್ಬುಗಳು ಮೇಲೆ ಏರಿದೆವು..ಕಣ್ಣುಗಳು ಸಮ್ಮತಿಸಿದವು...ಎಲ್ಲಿಗಾದರೂ ಸರಿ ಎನ್ನುವ ಮುಖಭಾವ...

          ಸುಮಾರು ನಿಮಿಷಗಳು ಮೌನ ಮಾತಾಡಿದವು..ಎಲ್ಲಿಂದ ಮಾತು ಶುರು ಮಾಡುವುದು, ಹೇಗೆ ಶುರು ಮಾಡುವುದು ಎನ್ನುವ ಗೊಂದಲ ತುಂಬಿದ ಮೌನ...ಕಡೆಗೆ ಉಭಯ ಕುಶೋಲೋಪರಿ ಸಾಂಪ್ರತವಾಯಿತು.  ಲೋಕದ ವಿಷಯಗಳೆಲ್ಲ ಮಾತಾದವು..ಬಸ್ಸಿಗೆ ಹತ್ತಿದಷ್ಟು ಇನ್ನಷ್ಟು ಜನರು ನಿಲ್ದಾಣದಲ್ಲಿ  ಇರುವಂತೆ..ವಿಷಯಗಳು, ಮಾತುಗಳು ಮುಗಿಯುತ್ತಲೇ ಸೇರುತ್ತಲೇ ಇತ್ತು.. .ತಣ್ಣಗೆ ಹೊಟ್ಟೆ ಹಸಿಯುತ್ತಿತ್ತು...ಜನವರಿಯ ಛಳಿ ಮಿಶ್ರಿತ ಬಿಸಿ ಇನ್ನಷ್ಟು ನೀರಡಿಕೆಯನ್ನು ಹೆಚ್ಚಿಸಿತ್ತು..ಆದರೆ ಮನಸ್ಸಿಗೆ ಯಾವುದೂ ಬೇಡವಾಗಿತ್ತು...ಹಕ್ಕಿಯ ಹಾಗೆ ಹಾರಾಡುತ್ತಲೇ ಇತ್ತು...

          ಗೋತ್ರ, ನಕ್ಷತ್ರ, ರಾಶಿ, ಹೆಸರು ಹೇಳಿ ಎಂದು ಅರ್ಚಕರು ಹೇಳಿದಾಗ ಪ್ರಪಂಚಕ್ಕೆ ಮತ್ತೆ ಬಂದದ್ದು...ತಡಬಡಾಯಿಸಿ ಅವರು ಕೇಳಿದಕ್ಕೆ ಉತ್ತರ ಕೊಟ್ಟ ಮೇಲೆ...ಮಂಗಳ ವಾದ್ಯ ಮೊಳಗಿತು...ತೀರ್ಥ ಪ್ರಸಾದವಾಯಿತು...ದೇವರಿಗೆ ನಮಸ್ಕರಿಸಿ..ಮತ್ತೆ ಹೊರಗಿನ ಕಟ್ಟೆಯ  ಮೇಲೆ  ಶುರುವಾಯಿತು ಮಾತುಗಳು....

          ಪ್ರಪಂಚವನ್ನೇ ಮರೆತು ಮಾತಾಡುತಿದ್ದ ಆ ಮನಸ್ಸುಗಳಿಗೆ ಈ ಜಗತ್ತನ್ನೇ ಗೆದ್ದ ಸಂತೋಷ. ಮನದ ಕಡಲಲ್ಲಿ   ಹೇಳಿಕೊಳ್ಳಲಾಗದಷ್ಟು ಅಲೆಗಳ ಆರ್ಭಟ..ಒಂದು ರೀತಿಯಲ್ಲಿ ರೆಕ್ಕೆಯಿಲ್ಲದಿದ್ದರೂ ಹಾರಬೇಕು ಎನ್ನುವ ಹಂಬಲ , ಹಾರಬಲ್ಲೆ ಎನ್ನುವ ಪ್ರಚಂಡ ವಿಶ್ವಾಸ..ಕೆಲ ಘಂಟೆಗಳು ಉರುಳಿದ್ದು ಗೊತ್ತಾಗಲೇ ಇಲ್ಲ...

          "ಕಣಿ ಹೇಳ್ತೀವಮ್ಮ ಕಣಿ...ಸುಂದರ ಜೋಡಿಗಳಿಗೆ ಹಾಲಕ್ಕಿ ನುಡಿತೈತೆ" ಅಂತ ಗೊಗ್ಗರು ಧ್ವನಿ ಬಂದಾಗ ತಾರಮಂಡಲದಲ್ಲಿದ್ದ ಪಕ್ಷಿಗಳು ನಿಧಾನವಾಗಿ ಧರೆಗಿಳಿದವು..ಬೇಡ ಬೇಡವೆಂದರೂ ಹಿಂಸೆ ಮಾಡಿ...ಇಲ್ಲದ,  ಇರದ, ಬೇಡವಾದ ಮಾತುಗಳನ್ನು ಹೇಳಿ...ದಕ್ಷಿಣೆ ತೆಗೆದುಕೊಂಡು ಜಾಗ ಖಾಲಿ ಮಾಡಿದವು ಕೊರವಂಜಿಗಳು...

          ಆ ಕ್ಷಣಕ್ಕೆ ತಾವೇ ಶ್ರೀನಿವಾಸ ಪದ್ಮಾವತಿ  ಜೋಡಿ ಎಂದು ಬೀಗಿದ ಮನಸ್ಸುಗಳು.... ಸರಿ ಹೊತ್ತಾಯಿತು ಎಂದು ಹೊಸ ವರ್ಷಕ್ಕೆ ಶುಭಾಶಯಗಳನ್ನು ಕೋರುತ್ತ...ಆ ವಾತಾವರಣದಲ್ಲೂ ಬಿಸಿಯಾದ ಮನಸ್ಸನ್ನು ತಣ್ಣಗೆ ಮಾಡಿಕೊಳ್ಳಲು ಐಸ್ ಕ್ರೀಂ ತಿಂದು...ಮತ್ತೆ ಸಿಗುವ ಭರವಸೆ ಮಾತುಕೊಡುತ್ತಾ..ತಮ್ಮ ತಮ್ಮ ಮನಗಳು ತುಂಬಿದ ಮನೆಗಳಿಗೆ ಹೊರಟವು...

          ಹೊಸ ವರ್ಷಕ್ಕೆ  ಕಾಲಿಟ್ಟ ಆ ದಿನವನ್ನು ಸಾರ್ಥಕವಾಗಿ ಕಳೆದ ನೆಮ್ಮದಿ ಸಂತಸ ಜೋಡಿಗೆ...ಬೆಟ್ಟವನ್ನೇ ಹೊತ್ತು ನಿಂತಿದ್ದ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಆಶೀರ್ವಾದದ ಹಸ್ತ ತೋರುತ್ತಾ  ಹರಸಿ ಕಳುಹಿಸಿದ...

          ಬಸ್ ನಿಲ್ದಾಣಕ್ಕೆ ಬಂದರೆ ಗುಣ ನೋಡಿ ಹೆಣ್ಣು ಕೊಡು ಚಿತ್ರದ "ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ" ಹಾಡು ಬರುತಿತ್ತು...ಸುಮ್ಮನೆ ತನ್ನನ್ನೇ ನೋಡಿಕೊಂಡ ಮನಸು ಹೇಳಿತು...ಅರೆ ಬಾಳು ಹಸಿರಾಗುತ್ತಿದೆ...ತಾನು ತೊಟ್ಟ ಬಳೆಯು ಹಸಿರು...ಹುಡುಗ ತೊಟ್ಟ ಅಂಗಿಯೂ ಹಸಿರು....

          ಹಸಿರಲ್ಲೇ ಉಸಿರು ಬೆರೆತಾಗ ಜಗವೆಲ್ಲ ಹಸಿರು ಅಲ್ಲವೇ...!

          ಅಂದು ಭೇಟಿ ಮಾಡಿದ ಆ ಹುಡುಗಿ ಇಂದು ನನ್ನ ಮನೆ ಬೆಳಗಿ ಹನ್ನೊಂದು ವಸಂತಗಳು ಆಯಿತು...ಮುದ್ದಾದ ಪ್ರೇಮದ ಕಾಣಿಕೆ ಕೊಟ್ಟ ಆ ಹುಡುಗಿ ನನ್ನ ಮನದಗುಡಿಯ ದೇವಿಯಾಗಿದ್ದಾಳೆ..ಇಂದು ಅವಳ ಜನುಮ ದಿನ...ಕಾಣಿಕೆಯಾಗಿ ಸದಾ ಮೆಲುಕು ಹಾಕುವ ಲೇಖನ ಮಾಲೆ ಅವಳ ಕೊರಳಿಗೆ ಹುಟ್ಟು ಹಬ್ಬದ ಕಾಣಿಕೆ!


          ಜನುಮ ದಿನದ ಶುಭಾಶಯಗಳು ಸವಿತಾ.....ನೀನು ಬಂದೆ...ಮಿನುಗುತಿದ್ದ ಬಾಳು ಇನ್ನಷ್ಟು ಬೆಳಗಿತು...ಹೀಗೆಯೇ ಇನ್ನಷ್ಟು ಮಿನುಗುತ್ತ...ಬೆಳಗುತ್ತಾ...ಹೊಳೆಯುತ್ತಾ ಇರಲಿ......!

          "ನೀ ಇರಲು ಜೊತೆಯಲ್ಲಿ 
          ಬಾಳೆಲ್ಲ ಹಸಿರಾದಂತೆ...
          ನಗುತ ನೀ ಕರೆದರೆ 
          ಮನದಿ ಸಂತೋಷ ಹಾಡಾದಂತೆ..!"