Sunday, February 19, 2023

ಏನ್ ಮಾಡ್ತಾ ಇದ್ದಾರೆ ಅವ್ರು... !!!!

ಏನ್ ಮಾಡ್ತಾ ಇದ್ದಾರೆ ಅವ್ರು... !!!

ರಥಸಪ್ತಮಿ ಕಳೆದಿದ್ದರೂ.. ಶಿವರಾತ್ರಿಯ ಮಗ್ಗುಲಿಗೆ ಇದ್ದರೂ. ಚಳಿ ಇನ್ನೂ ಭುವಿಯನ್ನು ಬಿಡಲು ಹಠ ಮಾಡುತ್ತಿದ್ದ ಸಮಯ.. ನಡುರಾತ್ರಿ.. ಮರದ ಮರೆಯಿಂದ ಯಾರೋ ಪಿಸು ಮಾತಾಡಿದ ಹಾಗೆ... 

ರಸ್ತೆಯಲ್ಲಿದ್ದ ಮನೆಗಳೆಲ್ಲ ದೀಪ ಆರಿಸಿ ಆಗಲೇ ಎರಡನೇ ಜಾವದ ನಿದ್ದೆಯಲ್ಲಿದ್ದರು.. ನಾ ಸುಮ್ಮನೆ ನನಗೆ ವಹಿಸಿದ್ದ ಕೆಲಸವನ್ನು ಮಾಡುತ್ತಿದ್ದೆ.. ಜೊತೆಯಲ್ಲಿ ನನ್ನ ಮನೋನಾಯಕಿ.. 

ಸದ್ದು ಗದ್ದಲಕ್ಕೆ ಹೆದರದ ಜೀವ ನನ್ನದು.. ನನ್ನ ಪಾಡಿಗೆ ನನ್ನ ಕಾಯಕದಲ್ಲಿ ತೊಡಗಿದ್ದೆ.. ಯಾಕೋ ಆ ಪಿಸುಮಾತುಗಳು ನನ್ನ ಮನಸ್ಸನ್ನು ಸೆಳೆಯಲು ಸಫಲವಾದವು.. ಅಲ್ಲಿ ಕೇಳಿಸಿದ ಸಂಭಾಷಣೆ ನಿಮಗಾಗಿ.. 

*********

ಶ್ವೇತ ವಸ್ತ್ರಧಾರಿ : ಅಲ್ಲಿ ಏನು ಮಾಡ್ತಾ ಇದ್ದಾರೆ..  

ಜಟಾಧಾರಿ: ನನಗೂ ಗೊತ್ತಿಲ್ಲ ಅವನನ್ನು ಸೃಷ್ಟಿಸಿದ ಬ್ರಹ್ಮನಿಗೆ ಅವನ ತಲೆಯಲ್ಲಿ ಬರುವ ಯೋಚನೆಗಳ ಅರಿವಿರೋದಿಲ್ಲ.. ನಾವು ಸುಮ್ಮನೆ ಆವ ಏನ್ ಮಾಡ್ತಾ ಇದ್ದಾನೆ ..ಅವನು ಏನೇನು ಸಲಕರಣೆ, ಟೇಬಲ್, ಹತ್ತಿ, ದಾರ ಯಾವುದು ಬೇಕೋ ಅದನ್ನು ಅವನ ಬಳಿ ಇರುವಂತೆ ನೋಡಿಕೊಳ್ಳುವುದಷ್ಟೇ ನಮ್ಮ ಕೆಲಸ.. ಮತ್ತೆ ದೇವರನ್ನು ನಂಬಿರುವ ಅವನಿಗೆ ತಲೆ ಕೆಡದಂತೆ ನೋಡಿಕೊಳ್ಳುವುದು ನಮ್ಮ ಕಾಯಕವಷ್ಟೇ.. 

ಶ್ವೇತ ವಸ್ತ್ರಧಾರಿ : ಸರಿ ನೀವು ಹೇಳಿದಂತೆ ಆಗಲಿ.. ಆದರೆ ಅವ ತನ್ನ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವ ತನಕ ಸಮಯ ಕಳೆಯಬೇಕು.. ಹೇಗೂ ನಾಳೆ ನಿಮ್ಮ ದಿನ ಅಲ್ಲವೇ.. ಯಾವುದಾದರೂ ಒಂದು ಪುಟ್ಟ ಕತೆ ಹೇಳಿ   ಸಮಯ ಕಳೆಯುತ್ತದೆ.. ಮತ್ತೆ ನಮ್ಮಿಂದ ಅವನಿಗೆ ಸಹಾಯ ಮಾಡೋದಕ್ಕಿಂತ ಅವನನ್ನು ಅವನ ಪಾಡಿಗೆ ಬಿಟ್ಟಂಗೂ ಆಗುತ್ತದೆ... 

ಜಟಾಧಾರಿ: ಒಂದೂರಿನಲ್ಲಿ ಒಂದು ಮಂಡಳಿ .. ಅಲ್ಲಿ ಗುರುಗಳು ಶಿಷ್ಯಕೋಟಿಗಳು.. ಸಮಾಜಸೇವೆ.. ಸಮಾಜದಿಂದ ಸೇವೆ.. ಸಮಾಜಕ್ಕೆ ಸೇವೆ ಈ ಮೂರು ಸಿದ್ಧಾಂತ ಹೊಂದಿದ್ದ ಮಂಡಳಿಯದು..  ಸೌಭಾಗ್ಯವೇ ತುಂಬಿ ತುಳುಕುತಿದ್ದ ಮಂಡಳಿಯದು.. ಸಮಾಜಕ್ಕೆ   ಸಂದೇಶ ಕೊಡುವ ಸಲುವಾಗಿ ಅನೇಕಾನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.. (ಒಂದು ದೀರ್ಘ ಉಸಿರನ್ನು ಎಳೆದುಕೊಂಡು ಬಿಟ್ಟರು... ಹಣೆಯಲ್ಲಿ, ಮೈಮೇಲೆ ಹಚ್ಚಕೊಂಡಿದ್ದ ವಿಭೂತಿಯ ಗಾಳಿಯಲ್ಲಿ ತೇಲಿಹೋಗಿ ಶ್ವೇತಾ ವಸ್ತ್ರಧಾರಿಯ ಮೇಲೆ ಆಶೀರ್ವಾದದ ಪೂರ್ವಕವಾಗಿ ಬಿದ್ದಿತು.. ಅದನ್ನು ಅವರು ಕಣ್ಣಿಗೆ ಒತ್ತಿಕೊಂಡು ಸಂತಸಪಟ್ಟರು.. )

ಮುಂದುವರೆಸುತ್ತಾ.. ಆ ಮಂಡಳಿ ಒಂದು ಕಾರ್ಯಕ್ರಮದ ರೂಪು ರೇಷೆಗಳನ್ನು ಸಿದ್ಧ ಮಾಡಿಕೊಂಡಿತು.. ಅವರ ಉದ್ದೇಶ ತಮ್ಮ ಬಳಿ ಇದ್ದ ಜ್ಞಾನವನ್ನು ಸಮಾಜಕ್ಕೆ ಹಂಚುವುದು.. ಒಬ್ಬೊಬ್ಬರಿಗೆ ಹಂಚುತ್ತಾ ಹೋಗುವ ಬದಲು.. ಒಂದು ಪುಟ್ಟ ಕಾರ್ಯಕ್ರಮ ಮಾಡಿ ತಮ್ಮ ಇರುವಿಕೆಯನ್ನು ಆ ಪ್ರದೇಶಕ್ಕೆ ತಿಳಿಸುವುದು.. ಹಾಗೆ ತಮ್ಮ ಸಂದೇಶಗಳನ್ನು ಕರಪತ್ರಗಳ ಮೂಲಕ ಹಂಚುವುದು.. ಬಂದವರಿಗೆ ತಮ್ಮ ಮಂಡಳಿಯ ಉದ್ದೇಶಿತ ಪಠ್ಯಗಳನ್ನು ಹೇಳುವುದು.. ಕಡೆಯಲ್ಲಿ ತಮ್ಮ ಮಂಡಳಿಯ ರೂಪು ರೇಷೆಗಳು.. ಉಗಮವಾದ ತಾಣ, ಬೆಳೆದ ತಾಣ ಅದಕ್ಕೆ ಕಾರೀಣೀಕರ್ತರ ಬಗ್ಗೆ ಒಂದಷ್ಟು ವಿವರ.. ಮತ್ತೆ ಪ್ರಸಾದ ವಿನಿಯೋಗ.. ತಮ್ಮ ಶಿಶ್ಯಕೋಟಿಗಳ ಉದರಕ್ಕೆ ಸ್ವಲ್ಪ ತಿಂಡಿ ತಿನಿಸು... ಇದು ಕಾರ್ಯಕ್ರಮದ ವಿವರವಾಗಿತ್ತು .. 

ಶ್ವೇತ ವಸ್ತ್ರಧಾರಿ : ಆಹಾ ಪೀಠಿಕೆಯೇ ಎಷ್ಟು ಸೊಗಸಾಗಿದೆ.. ಪೂರ್ತಿ ಕೇಳುವ ಹಂಬಲ ನನ್ನದು ಮುಂದಕ್ಕೆ ಹೇಳಿ.. 

ಜಟಾಧಾರಿ: ಅಲ್ಲಿ ನೋಡು ಅಸ್ತಿಪಂಜರದಂತೆ ತನ್ನ ತಲೆಯಲ್ಲಿರುವ ಆಲೋಚನೆಯನ್ನು ನನ್ನ ಜಟೆಯಿಂದ ಬರುವ ಗಂಗೆಯಂತೆ ಹರಿಯುತ್ತಿದೆ.. ಇರಲಿ ಅವನಿಗೆ ಶುಭಕೋರುತ್ತಾ ಮುಂದೆ ಈ ಕತೆಯ ಬಗ್ಗೆ ಹೇಳುತ್ತೇನೆ.. 

ಮಂಡಳಿಯ ಶಿಷ್ಯಕೋಟಿಗಳು ತಮ್ಮ ಪರಿಶ್ರಮ ತುಂಬಿಸಿ.. ಒಂದುವೇದಿಕೆ ಸಿದ್ಧ ಮಾಡಿತ್ತು.. ಅಲ್ಲಿ ಒಂದು ಕಡೆ ನಿರಾಕಾರ ಶಿವನನ್ನು ಅಲಂಕರಿಸಿ.. ಅದಕ್ಕೆ ಬೇಕಾದ ಟಬೇಲ್, ಹೂವು, ಅಲಂಕಾರ.. ಜೊತೆಯಲ್ಲಿ ಎರಡು ಟೇಬಲನ್ನು ಒಂದರ ಮೇಲೆ ಒಂದು ಇರಿಸಿದ್ದು ಅದರ ಮೇಲೆ ಶಿವನನ್ನು ಕೂರಿಸಿದ್ದು ಇಷ್ಟವಾಯಿತು.. 

ಶ್ವೇತ ವಸ್ತ್ರಧಾರಿ : ಇದರ ಬಗ್ಗೆ ಕೊಂಚ ಹೇಳಿ ... 

ಜಟಾಧಾರಿ: ಯಾವುದರ ಬಗ್ಗೆ?

ಶ್ವೇತ ವಸ್ತ್ರಧಾರಿ : ಆ ಟೇಬಲ್ಲಿನ ಬಗ್ಗೆ.. 

ಜಟಾಧಾರಿ: ದೇಹ, ಆತ್ಮ ಎಂಬ ಎರಡು ಮಜಲಿನ ಹಾಗೆ ಒಂದು ದೊಡ್ಡ ಟೇಬಲ್ ಅದರ ಮೇಲೆ ಚಿಕ್ಕ ಟೇಬಲ್.. ಅಂದರೆ ದೊಡ್ಡ ಟೇಬಲ್ ದೇಹವಾದರೆ.. ಚಿಕ್ಕ ಟೇಬಲ್ ಆತ್ಮ.. ಅದರ ಮೇಲೆ ಪರಮಾತ್ಮನಾದ ನಾನು ವಾಹ್ ಸೂಪರ್ ಸೂಪರ್.. ಹೀಗಿರಬೇಕು ಯೋಚನೆಗಳು.. 


ಆ ಸರಿ ಮುಂದುವರೆಯುತ್ತಾ.. ಹೂವಿನ ಅಲಂಕಾರ.. ಎಲೆಗಳನ್ನು ಕತ್ತರಿಸಿ ಚಂದವಾಗಿ ಜೋಡಿಸಿದ ವಿನ್ಯಾಸ.. ತುಂಬಾ ತುಂಬಾ ಇಷ್ಟವಾಯಿತು.. ಅಲ್ಲಿಂದ ಮುಂದೆ.. ಬಂದ ಭಕ್ತಾದಿಗಳಿಗೆ.. ಶಿವನಿಗೆ ಪುಟ್ಟ ಪೂಜೆ ಸಲ್ಲಿಸಿ.. ನನ್ನ ಪ್ರಿಯ ಭಕ್ತೆಯಿಂದ ಅಕ್ಷತೆಯನ್ನ ತೆಗೆದುಕೊಂಡು.. ಅದನ್ನು ಶಿವನ ಮೇಲೆ ಅರ್ಚಿಸಿ... ತೀರ್ಥ ತೆಗೆದುಕೊಂಡ ಮೇಲೆ.. ಜ್ಞಾನ ಗಂಗೆಯನ್ನು ತಮ್ಮ ಮನಸ್ಸಿಗೆ ತುಂಬಿಕೊಳ್ಳಲು ಸಹಾಯ ಮಾಡುತ್ತಿದ್ದವರು ಆ ಮಂಡಳಿಯ ಶಿಷ್ಯಕೋಟಿಗಳು.. 



ಪ್ರತಿಯೊಬ್ಬರಲ್ಲೂ ಉತ್ಸಾಹ.. ಇಡೀ ದಿನದ ಕಾರ್ಯಕ್ರಮ ಅವರನ್ನು ಬಳಲಿಸಿದ್ದರು.. ಉತ್ಸಾಹ ಕುಂದದೆ ಬಂದ ಪ್ರತಿ ಭಕ್ತರಿಗೂ ಸ್ವಲ್ಪವೂ ಬೇಸರವಿಲ್ಲದ,, ಹೇಳಿದ ವಿಚಾರಗಳೇ ಆಗಿದ್ದರೂ.. ಸ್ಪೂರ್ತಿಯಿಂದ ಮನಮುಟ್ಟುವ ಹಾಗೆ ವಿಚಾರಗಳನ್ನು ಪ್ರಸ್ತುತ ಪಡಿಸುತಿದ್ದರು.. 










ಊಟದ ಸಮಯವಾಗಿದ್ದರೂ.. ಅವರಿಗೆ ಹಸಿವು ಅನ್ನುವ ಮಾಯೆ  ಕಾಡುತ್ತಲೇ ಇರಲಿಲ್ಲ.. ಕಾರಣ ಮಾಯೆಯನ್ನು ದಾಟಿ ಸಾಧಿಸುವ ಛಲ ಹೊತ್ತ ಸಾಧಕರು ಇವರು.. ಹಾಗಾಗಿ ಮಾಯೆಯೇ ಕೂಡ ಹತ್ತಾರು ಬಾರಿ ಯೋಚನೆ ಮಾಡುವ ಹಾಗೆ ಮಾಡಿತ್ತು.. ಈ ಸಾಧಕರ ಪರಿಶ್ರಮ.. 

ಶ್ವೇತ ವಸ್ತ್ರಧಾರಿ : ಸುಂದರ ನಿರೂಪಣೆ.. 

ಜಟಾಧಾರಿ: ನೋಡಪ್ಪ.. ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಜ್ಞಾನದ ವಾಹಿನಿ ಸಾಗಬೇಕು.. ದಶಕಗಳಿಂದ ಸೇವೆಯೇ ನನ್ನ ಗುರಿ ಎಂದು ನಂಬಿರುವ ಈ ನನ್ನ ಪ್ರಿಯ ಶಿಷ್ಯೆ ಇಡೀ ದಿನ.. ಕೂತು ಬಂದವರಿಗೆ ನಗುಮೊಗ ತೋರಿಸುತ್ತಾ.. ಆಶೀರ್ವಚನವಾಗಿ ಅಕ್ಷತೆ ಕೊಟ್ಟು.. ಸೇವೆ ಸಲ್ಲಿದ ಈ ನನ್ನ ಪ್ರಿಯಶಿಷ್ಯೆಗೆ ನನ್ನ ಶುಭ ಹಾರೈಕೆಗಳು.. 

ಶ್ವೇತ ವಸ್ತ್ರಧಾರಿ : ಸುಂದರ ಕಥಾನಕ...

***********

ಕತ್ತಲು ಸರಿಯುತಿತ್ತು.. ದಿನಕರ ಬರಲಿ ಇನ್ನೂ ಕೆಲವು ತಾಸುಗಳಿತ್ತು.. ಮರದ ಹಿಂದೆ ಬರುತ್ತಿದ್ದ ಪಿಸು ಮಾತುಗಳು ಮೆಲ್ಲನೆ ಸದ್ದು ಕಡಿಮೆಯಾಗುತ್ತಿತ್ತು.. ಯಾಕೋ ಅರಿಯದೆ.. ಮರದ ಹಿಂದೆ ಮೆಲ್ಲನೆ ಸಾಗಿದೆ... ಅಲ್ಲೊಂದಷ್ಟು ವಿಭೂತಿಯ ರಾಶಿ ಇತ್ತು.. ಅದರ ಪಕ್ಕದಲ್ಲಿಯೇ ಬಿಳಿಯ ವಸ್ತ್ರ.. ಅದಕ್ಕೆ ಪೂರಕವಾಗಿ ಒಂದು ಬಿತ್ತಿ ಪತ್ರ ಅರ್ಥಾತ್ ಪಾಂಪ್ಲೆಟ್ ... 

ಕಣ್ಣುಜ್ಜಿಕೊಂಡೆ.. ಅರೆ ಕನಸೇ..ಗೊತ್ತಾಗುತ್ತಿಲ್ಲ .. ಸುಮ್ಮನೆ ಒಂದಷ್ಟು ಹೊತ್ತು ಲಿಂಗಾಷ್ಟಕ ಕೇಳಿದೆ.. ಅರೆ ಮಾರನೇ ದಿನ ನೆಡೆದ ಕಾರ್ಯಕ್ರಮ ನನ್ನ ಕಣ್ಣ ಮುಂದೆ ಹಾಗೆಯೇ ಬಂದುಬಿಟ್ಟಿತ್ತು.. 

ಯಾರಿಗೂ ಹೇಳಲಿಲ್ಲ.. ನನ್ನ ಕೆಲಸ ಮುಗಿಸಿ.. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು.. ಮತ್ತೆ ಆ ಮಂಡಳಿಗೆ ಬಂದಾಗ ಆಗಲೇ ಜನ ಸಾಗರ ಮೆಲ್ಲನೆ ಹರಿದು ಬರುತಿತ್ತು... 

ಹಿಂದಿನ ದಿನ ಮನಸ್ಸಿಗೆ ಅನುಭವಕ್ಕೆ ಬಂದ ಹಾಗೆ ಒಂದೊಂದೇ ಘಟನೆಗಳು ಘಟಿಸುತ್ತಾ ಹೋಯಿತು.. 

ಬಂದವರೆಲ್ಲ ಖುಷಿ ಪಟ್ಟರು.. ಪ್ರತಿಕ್ಷಣದಲ್ಲೂ ಕಣಕಣದಲ್ಲೂ ಅನುಭವಿಸಿದ ಆ ಅನುಭವಾಮೃತವನ್ನು ಸೇವಿಸಿ ಮನೆಗೆ ಹಿಂದಿರುಗಿದಾಗತಡರಾತ್ರಿಯಾಗಿತ್ತು .. ಎಲ್ಲಾ ಸಿವನ ದಯೆ ಸಿವನ ದಯೆ ಎನ್ನುತ್ತಾ ಮಲಗಿದಾಗ ಹರ ಹರ ಮಹದೇವ್ ಎನ್ನುತ್ತಾ ನಿದ್ರಾದೇವಿ ತಲೆಸವರಿದಳು ..!!!

***********

ಜಟಾಧಾರಿ: ಏನಪ್ಪಾ ಹೇಗಿತ್ತು.. ಕಥೆ.. 

ಶ್ವೇತ ವಸ್ತ್ರಧಾರಿ : ಇದು ಕತೆಯಲ್ಲ.. ಜೀವನ.. ನಾಳೆ ನೋಡಬೇಕಿದ್ದ ಘಟನೆಯನ್ನು ಟರ್ ಟರ್ ಅಂತ ಗಡಿಯಾರಕ್ಕೆ ಕೀಲಿ ಕೊಟ್ಟು ನಮಗೆ ಬೇಕಾದಂತೆ ಸಮಯವನ್ನು ಸೆಟ್ ಮಾಡುವವರಂತೆ... ಮಾರನೇ ದಿನ ನೆಡೆಯುವ ಕಾರ್ಯಕ್ರಮವನ್ನು ಒಂದು ದಿನ ಮುಂಚಿತವಾಗಿ ಅನುಭವಕ್ಕೆ ಸಿಗುವಂತೆ ಮಾಡಿದ ನಿನಗೆ ಕೋಟಿ ನಮನಗಳು... 

ಜಟಾಧಾರಿ: ಶುಭಾಶಯಗಳು.. ನಿನಗೆ ಮತ್ತೆ ನಿನ್ನ ಮಂಡಳಿಗೆ..  ಪ್ರತಿಯೊಂದು ಕ್ಷಣವೂ ಶುಭವಾಗಲಿ.. ನೋಡು ಈ ಕೆಳಗಿನ ಚಿತ್ರದಲ್ಲಿ.. ಎಷು ದೊಡ್ಡ ಸಂದೇಶವಿದೆ.. ಹೇಳುವೆಯ.. ರಿಮೋಟ್ ಬಟನ್ ಒತ್ತಿದ ಕ್ಷಣ ಪ್ರೊಜೆಕ್ಟರ್ ನಲ್ಲಿ ಚಿತ್ರ ಬದಲಾಯಿತು.. 

ಶ್ವೇತ ವಸ್ತ್ರಧಾರಿ : (ಒಂದು ಕ್ಷಣ ಯೋಗದ ಮುದ್ರೆಗೆ ಹೋಗಿ.. ದೀರ್ಘ ಉಸಿರೆಳೆದುಕೊಡು)  ಭೀಷ್ಮನ ರೂಪದಲ್ಲಿ ನಾವು ಸಾಧಿಸುವ ಗುರಿಯಿರುತ್ತದೆ.. ಶ್ರೀ ಕೃಷ್ಣನ ರೂಪದಲ್ಲಿ ನಮ್ಮ ಪರಿಶ್ರಮ, ಅಂತಃ ಶಕ್ತಿ ಇರುತ್ತದೆ.. ಅರ್ಜುನನಾಗಿ ನಾವಿರುತ್ತೇವೆ... ನಾವು ನಮ್ಮ ಗುರಿ ಮರೆತು ಮಾಯೆಯ ಮೋಹಕ್ಕೆ ಒಳಗಾದಾಗ.. ನಮ್ಮಲ್ಲಿರುವ ಪರಿಶ್ರಮ ಅಂತಃ ಶಕ್ತಿನಮ್ಮನ್ನು ಸೋಲಿಸಿ ಗುರಿಯತ್ತ ಧಾವಿಸುತ್ತದೆ.. ಪರಿಶ್ರಮ ಅಂತಃ ಶಕ್ತಿ ಯಾವಾಗಲೂ ನಮಗೆ ಪೂರಕವಾಗಿ ಸಹಾಯರೂಪವಾಗಿ ಬರಬೇಕು.. ಅದೇ ನಮ್ಮನ್ನು ಬಿಟ್ಟು ಹೊರಗೆ ಹೋಗಲು ಹೆಜ್ಜೆ ಹಾಕಿದಾಗ ನಮ್ಮ ಸೋಲು ಕಟ್ಟಿಟ್ಟ ಬುತ್ತಿ.. ಅದಕ್ಕೆ ಅದರ ಕೈ ಕಾಲು ಹಿಡಿದು ಮತ್ತೆ ನಮ್ಮೊಳಗೇ ಬರುವಂತೆ ಪ್ರಾರ್ಥಿಸಿ ಗುರಿಯತ್ತ ಶ್ರಮಿಸಬೇಕು.. 

ಅದೇ ರೀತಿ ಒಂದು ಕಾರ್ಯಕ್ರಮ ಎಂದಾಗ ಒಬ್ಬರು ಮುಂದಾಳತ್ವ ವಹಿಸಿಕೊಂಡು ನುಗ್ಗುತ್ತಾರೆ.. ಅವರಿಗೆ ನಾವು ಪೂರಕವಾಗಿ ಸಾತ್ ಕೊಟ್ಟರೆ ಆಯಿತು.. ಆಗ ನೆಡೆಯುವುದೇ ಜಾದೂ... ಒಬ್ಬರೇ ಒಂದು ಬಂಡೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ.. ಆದರೆ ಹತ್ತು ಕೈಗಳು ಸೇರಿದಾಗ.. ಬಂಡೆಯಂತಹ ಜಡ ಗುರಿಯೂ ಕೂಡ ದಾರಿ ಮಾಡಿಕೊಡುತ್ತದೆ.. 

ಜಟಾಧಾರಿ: ಆಹಾ ಎಷ್ಟು ಸುಲಭವಾಗಿ ನನ್ನ ಮನದಲ್ಲಿದ್ದ ಮಾತುಗಳನ್ನು ಹೇಳಿದೆ.. ತುಂಬಾ ತುಂಬಾ ಖುಷಿಯಾಯಿತು.. ನಿನ್ನ ಮಂಡಳಿಗೆ ಹಾಗೂ ನಿನ್ನ ಶಿಷ್ಯಕೋಟಿಗಳಿಗೆ ನನ್ನ ಶುಭಾಶೀರ್ವಾದಗಳು..

ಶ್ವೇತ ವಸ್ತ್ರಧಾರಿ : ಶಿವನೇ.. ನಿನ್ನ ಆಶೀರ್ವಾದ ನನಗೆ ಸಿಕ್ಕಿರುವಾಗ 84 ಜನ್ಮಗಳು ಕ್ಷಣಮಾತ್ರದಲ್ಲಿ ಕಳೆಯುತ್ತದೆ ಹಾಗೆ ನೀ ಕೊಟ್ಟ ನನ್ನ ಪ್ರತಿಯೊಬ್ಬ ಶಿಷ್ಯಕೋಟಿಗಳ ಜೀವನ ಡಬಲ್ ಲೈಟ್ ಆಗಿರುತ್ತದೆ.. ಹಾಏ ಪರಮಧಾಮದ ಪ್ರವೇಶಕ್ಕೆ ಸದಾ ಅರ್ಹರಾಗಿರುತ್ತಾರೆ .. .. ಶಿವನೇ ನಿನ್ನ ದಿನಕ್ಕೆ ನಿನಗೆ ಶುಭಾಶಯಗಳು..ನೀನಿಲ್ಲದೆಡೆಯೆಲ್ಲ.. ನೀನಿಲ್ಲದೆ ಏನಿಲ್ಲ.. ನಾನು ನಾನೆಂಬ ಅಜ್ಞಾನಿಗೆ ನಾನಿಲ್ಲ .. 

ಜಟಾಧಾರಿ: ಸುಂದರ ಮಾತು.. ನಿನಗೂ ಶುಭಾಶಯಗಳು.. ಮತ್ತೆ ಬರುವೆ ಮುಂದಿನ ವರ್ಷದಲ್ಲಿ.. ಸಮಸ್ತ ಜನೋ ಸುಖಿನೋಭವಂತು....!!!

2 comments:

  1. ಶ್ರೀಕಾಂತ, ಜೀವನದ ಸಂದೇಶವನ್ನು ಸುಂದರವಾಗಿ, ತಿಳಿಯಾಗಿ, ಕಥಾರೂಪದಲ್ಲಿ ಹೇಳಿದ್ದೀರಿ. ಶಿವರಾತ್ರಿಯ ಶುಭಾಶಯಗಳು. ನಿಮ್ಮ ಬದುಕು ಚೆಲುವಾಗಲಿ.

    ReplyDelete
  2. ತುಂಬಾ ಚೆನ್ನಾಗಿ ವರ್ಣಿಸಿದಿರಾ ಹೊನ್ನು...ಎಲ್ಲವನ್ನು ಭಗವತ್ ಗೀತೆಯ ಸಾರದ ಜೊತೆ ಹೋಲಿಸಿದ್ದು ತುಂಬಾನೇ ಸೊಗಸಾಗಿತ್ತು

    Seema Srikanth

    ReplyDelete