Saturday, September 11, 2021

ಸಗ್ಗದ ಗಣಪತಿಗೆ ತಿಲಕರಾಧನೆ.. !

ಶ್ರೀ ರಾಮ ಸೇತು ಕಟ್ಟುವಾಗ ಒಂದು ಪುಟ್ಟ ಅಳಿಲು  ಮೈಯನ್ನು ಒದ್ದೆ ಮಾಡಿಕೊಳ್ಳೋದು..  ಮರಳಿನ ಮೇಲೆ ಹೊರಳಾಡೋದು... ...  ಸೇತುವೆ ಮೇಲೆ ಓಡಾಡೋದು.. 

ಇದನ್ನೇ ಅಳಿಲು ಸೇವೆ ಎಂದು ಕರೆಯೋದು ಎಂದು ಶ್ರೀ ರಾಮಚಂದ್ರ ಅಳಿಲಿನ ಮೈ ಮೇಲೆ  ಬೆರಳಾಡಿಸಿ ಅದರ ಬೆನ್ನಿನ ಮೇಲೆ ಬಿಳಿಯ ಗೆರೆಗಳು ಮೂಡಿದವು ಎಂದು ಬಾಲಕನಾಗಿದ್ದಾಗ ಬೊಂಬೆಮನೆ ಪುಸ್ತಕದಲ್ಲಿ ಓದಿದ ನೆನಪು.. 

ಸ್ವಾತಂತ್ರದ ಕಿಡಿಯನ್ನು ಹೊತ್ತಿಸಿದ  ಮಂಗಲ್ ಪಾಂಡೆ, ಝಾನ್ಸಿ ರಾಣಿ, ಭಗತ್ ಸಿಂಗ್, ರಾಜಗುರು, ಸುಖದೇವ್, ಸಾವರ್ಕರ್ ಹೀಗೆ ಅನೇಕಾನೇಕ ಸ್ವಾತಂತ್ರ ಸಮರದ ಸೇನಾನಿಗಳ ಶ್ರಮವನ್ನು ಸಾರ್ಥಕತೆ ಮಾಡುವಂತೆ ಲೋಕಮಾನ್ಯರು ಬಾಲ ಗಂಗಾಧರ ತಿಲಕ್ ಜನತೆಯನ್ನು ಒಟ್ಟುಗೂಡಲು ಶುರು ಮಾಡಿದ ಗಣೇಶೋತ್ಸವ ಇಂದು ಅನೇಕಾನೇಕ ಧರ್ಮವನ್ನು ಒಟ್ಟುಗೂಡಿಸಿದ್ದೆ ಅಲ್ಲದೆ, ಎಲ್ಲರೂ ಒಂದು ಎಂಬ ಭಾವವನ್ನು ಬೆಸೆಯಲು ಸಹಾಯ ಮಾಡಿದೆ .. 

ನಾವಿರುವ ತಾಣವೇ ಸ್ವರ್ಗ ಎಂಬ ಭಾವವನ್ನು ಮೂಡಿಸಲು ಒಂದೊಂದೇ ಹೆಜ್ಜೆ ಇಡುತ್ತಿರುವ ಪಂಚಮುಖಿ ಪ್ಯಾರಡೈಸ್ ಪರಿವಾರದ  ಇನ್ನೊಂದು ಪುಟ್ಟ ಹೆಜ್ಜೆ ಗಣೇಶೋತ್ಸವ.. 

ಹೌದು...  ಕೋವಿಡ್ ಮಹಾಮಾರಿ ಆಚರಣೆಯನ್ನು ದೊಡ್ಡ ಮಟ್ಟದಲ್ಲಿ ಅಥವ ಎಲ್ಲರೂ ಸೇರುವಂತಹ ಸಮಾರಂಭ ಮಾಡಲು ಅಡ್ಡಿ ಮಾಡಿದ್ದರೂ, ನೆರೆಹೊರೆಯವರ ಉತ್ಸಾಹಕ್ಕೇನೂ ಕಮ್ಮಿ ಮಾಡಿಲ್ಲ.. ಭಯವೋ, ಎಲ್ಲರೂ ಬದುಕಬೇಕೆಂಬ ಹಂಬಲವೋ .. ಇಂತಹ ಒಂದು ಪುಟ್ಟ ಪುಟ್ಟ ಉತ್ಸಾಹದ ಚಿಲುಮೆಯನ್ನು ಚಿಮ್ಮಿಸುತ್ತಲೇ ಇರುತ್ತದೆ.. 

ಗಣೇಶ ಹಬ್ಬ ಇಂದಿಗೂ, ಎಂದಿಗೂ ನನ್ನ ಮನಸ್ಸಿಗೆ ಹತ್ತಿರವಾದ ಹಬ್ಬ.. ಮಂಟಪದ ಸಿಂಗಾರ ಮಾಡುತ್ತಾ, ಗಣಪತಿ ಮೂರ್ತಿಯ ಮುದ್ದಾದ ಪ್ರತಿರೂಪವನ್ನು ಪ್ರತಿಷ್ಠಾಪಿಸಿ ಅದನ್ನು ಪೂಜಿಸಿ, ರುಚಿ ರುಚಿಯಾದ ತಿಂಡಿ, ತಿನಿಸುಗಳನ್ನು ಮಾಡಿ.. ಗಣಪತಿಯ ಹೆಸರಲ್ಲಿ ನಾವೆಲ್ಲರೂ ಹೊಟ್ಟೆಗೆ ಸೇವಿಸುವ ಈ ಸಂಭ್ರಮ ಸದಾ ಸಂತಸ ತರುತ್ತದೆ.. 

ಅನೇಕಾನೇಕ ಕುಟುಂಬಗಳು ಕೊಟ್ಟಿದ್ದ ಆಹ್ವಾನಕ್ಕೆ ಮನ್ನಣೆ ಕೊಟ್ಟು, ಕೆಲವು ಮನೆಗಳನ್ನು, ಮನಗಳನ್ನು ಸಂದರ್ಶಿಸಿ ಬಂದಾಗ ಮನಸ್ಸಿಗೆ ಆಹ್ಲಾದಕರ ಅನುಭವ ನನಗಾಯಿತು...  

ಗಣಪತಿ ಮೆಲ್ಲಗೆ ಕಿವಿಯಲ್ಲಿ ಬಂದು.. ಶ್ರೀ ಮುಂದಿನ ವರ್ಷ ನಿನ್ನ ಮನೆಗೆ ಬರುತ್ತಿದ್ದೇನೆ.. ಆವಾಗ ನೀನು ಸಂಭ್ರಮ ಪಡುವೆಯಂತೆ.. ಈ ವರ್ಷ ನಿನ್ನ ನೆರೆ ಹೊರೆಯವರ ಸಂತಸದಲ್ಲಿ ನೀನು ಮುಳುಗೆದ್ದು ಸಂಭ್ರಮಿಸು.. ನಿನ್ನ ಮನೆಗೆ ಬಂದಾಗ ನಿನ್ನ ಸಂಭ್ರಮವನ್ನು ನಾನು ಕಣ್ಣಾರೆ ನೋಡಿ ಸ್ವರ್ಗದಲ್ಲಿರುವ ನಿನ್ನ ಅಮ್ಮ ಅಪ್ಪ, ನಿನ್ನ ತಲೆಮಾರಿನ ಹಿರಿ ಕಿರಿಯರಿಗೆ ಹೇಳುತ್ತೇನೆ..

ಗಣಪ ತುಂಬಾ ಧನ್ಯವಾದಗಳು.. ಹೌದು ನಿನ್ನ ಪೂಜೆ ಮಾಡಿಲ್ಲವಲ್ಲ ಎಂಬ ಕೊರಗು ಇತ್ತು.. ಆದರೆ ನನ್ನ ಪಂಚಮುಖಿ ಸಗ್ಗದಲ್ಲಿ ನೆಡೆದ ಪುಟ್ಟ ಉತ್ಸವ.. ನನ್ನ ಉತ್ಸಾಹವನ್ನು ಹೆಚ್ಹಿಸಿತು.... ನಿನ್ನ ಮತ್ತು ತಿಲಕರ ಸಂಭಾಷಣೆ ಕೇಳುವ ತವಕವಿದೆ.. ಹೇಳುವೆಯ.. 

ಓವರ್ ಟು ಗಣಪತಿ.. 

****
ತಿಲಕ್: ಗಣಪ.. ನಿನ್ನ ಪೂಜೆಯನ್ನು ಮಾಡುತ್ತಾ.. ನಮ್ಮ ಭಾರತೀಯರನ್ನು ಸ್ವತಂತ್ರ ಸಮರಕ್ಕೆ ಸಜ್ಜುಗೊಳಿಸಬೇಕಿದೆ.. ನನಗೆ ನಿನ್ನ ಆಶೀರ್ವಾದ ಇರಲಿ. 

ಗಣಪತಿ : ತಿಲಕ್ ನೀವೆಲ್ಲರೂ ಮಾಡುತ್ತಿರುವ ಈ ಉತ್ಸವ ದೊಡ್ಡ ಮಟ್ಟದಲ್ಲಿ ಬೆಳೆಯಲಿ. ... ಮಂದಿಯನ್ನು ಒಗ್ಗೂಡಿಸಲಿ .. .ಭರತ ದೇಶ ಬಹುಬೇಗ ಭಾರತವಾಗಲಿ.. ಸ್ವತಂತ್ರ ಭಾರತವಾಗಲಿ.. 

ತಿಲಕ್ : ನಮ್ಮ ಭರತಭೂಮಿಗೆ ಬೇಕಾಗಿರುವುದೇನು.. ?

ಗಣಪತಿ: ನಾ ಮುಂದು ತಾ ಮುಂದು ಎಂದು ಮುಂದೆ ಬರುವ ಉತ್ಸಾಹ ಮೂಡಿಸಬೇಕು.. ನಾವೆಲ್ಲರೂ ನಾವೆಲ್ಲರೂ ಎನ್ನುವ ತವಕ ಮೂಡಿಸಬೇಕು.. ನೋಡಲ್ಲಿ ಬಿಬಿಎಂಪಿ ನನ್ನನ್ನು ಮೆರವಣಿಗೆ ಮಾಡುವ ಅವಕಾಶವಿಲ್ಲ.. ಈ ಕೋವಿಡ್ ಮಹಾಮಾರಿಯ ಹಂತದಲ್ಲಿ ಈ ರೀತಿಯ ಉತ್ಸವ ಮಾಡುವ ಹಾಗಿಲ್ಲ ಅಂದಾಗ.. ಪಂಚಮುಖಿಯಲ್ಲಿ ಕೆಲ ಮಂದಿ ನನ್ನನ್ನು ಪೂಜಿಸಿ, ನನ್ನ ಮೂರ್ತಿಯನ್ನು ವಿಸರ್ಜಿಸುವ ಸಮಯದಲ್ಲಿ ಒಟ್ಟಾದ ಪರಿ ನೋಡು.. ಹಿರಿಕಿರಿಯರೆನ್ನದೆ, ಗಂಡು ಹೆಣ್ಣು ಎನ್ನದೆ ಎಲ್ಲರೂ ತಮ್ಮ ಕಟ್ಟಡವನ್ನು ಮೂರು ಬಾರಿ ಪ್ರದಕ್ಷಿಣೆ ಬಂದದ್ದು.. ಹಾಡಿಕೊಂಡು ನಲಿದಿದ್ದು..  ಇವೆಲ್ಲಾ ನೋಡೋದೇ ಸಂಭ್ರಮ.. ನಮ್ಮ ಭರತ ಭೂಮಿಗೆ ಬೇಕಾಗಿರೋದೇ ಈ ರೀತಿಯ ಸಂತಸದ ಒಗ್ಗಟ್ಟು.. ಈ ರೀತಿಯ ಒಗ್ಗಟ್ಟು .. ಪ್ರತಿ ಮನೆ ಮನೆಗೂ, ಮನ ಮನಗಳಿಗೂ ಸಂತಸದ ಒಬ್ಬಟ್ಟನ್ನೇ ಬಡಿಸುತ್ತದೆ.. 

ತಿಲಕ್: ಗಣಪತಿ ಮಹಾರಾಜ್.. ಜೈ ಜೈ.. ಅತ್ಯಂತ ಸುಂದರ ಮಾತುಗಳು.. ಹೌದು ನನಗೂ ಖುಷಿಯಾಯಿತು.. ಪ್ರತಿಯೊಬ್ಬರೂ ಈ ರೀತಿಯ ಉತ್ಸಾಹದಲ್ಲಿ ಪಾಲ್ಗೊಂಡಿದ್ದು ಈ ಕೋವಿಡ್ ಮಹಾಮಾರಿ ತೊಲಗಿದ ಮೇಲೆ ಈ ಪಂಚಮುಖಿ ಸದಸ್ಯರು ಒಟ್ಟುಗೂಡಿ ನೆಡೆಸುವ ಮಹೋತ್ಸವಗಳನ್ನು ನೋಡುವ ಆಸೆ ಹೆಚ್ಚಾಗುತ್ತಿದೆ.. 

ಗಣಪತಿ: ಖಂಡಿತ ಆಗುತ್ತದೆ.. ಹೀಗೆ ಅನೇಕಾನೇಕ ಲೇಖನಗಳಲ್ಲಿ ಬರುತ್ತಲೇ ಇರುತ್ತೇನೆ.. !

ತಿಲಕ್ : ಜೈ ಜೈ ಗಣಪತಿ.. ಗಣಪತಿ ಮಹಾರಾಜ್ ಕಿ ಜೈ.. ಗಣಪತಿ ಕಿ ಜೈ.. !

****
ನಿಜ..ಒಂದಾಗಿ ಬಾಳಿದಾಗ ನಾವಿರುವುದೇ ಸಗ್ಗದಲ್ಲಿ.. ನಾವಿರುವ ತಾಣವೇ ಸಗ್ಗವು ಎನ್ನುವ ಭಾವ ಮನೆಮಾಡುತ್ತಲೇ ಇರುತ್ತದೆ.. 

ಗಣಪತಿ ಮತ್ತೊಮ್ಮೆ.. !!!








1 comment: