Sunday, February 7, 2021

Some Stories Are Real!

ಕೆಲವು ಮಾತುಗಳು ಕೆಲವು ಪದಗಳನ್ನು ನೋಡಿದಾಗ ಕೇಳಿದಾಗ ಮನದಾಳದಲ್ಲಿ ಇಳಿಯುತ್ತದೆ.. ಅದಕ್ಕೆ ಒಂದು ಸ್ಪಷ್ಟ ರೂಪ ಕೊಟ್ಟಾಗ ಒಂಭತ್ತು ತಿಂಗಳು ಕಳೆದು ಮೇಲೆ ಮಗುವನ್ನು ಹೆತ್ತಷ್ಟೆ ಖುಷಿಯಾಗುತ್ತದೆ.. ಹೀಗೆ ಒಂದು ಕಥಾನಕ .. 

********

ಏನ್ ಸೀಮಾ ಹೇಗಿದ್ದೀಯಾ?

ಬೆಳಗಿನ ಜಾವ ಸಕ್ಕರೆ ನಿದ್ದೆಯಲ್ಲಿದ್ದ ಸೀಮಾ.. "ಶ್ರೀ ಶ್ರೀ.. ನೋಡಿ ಯಾರೋ ನನ್ನ ಕರೀತಾ ಇದ್ದಾರೆ" ಅಂದಳು..  ನನಗೆ ನಿದ್ದೆ ಬಂದರೆ ಮುಗೀತು.. ಮೈ ಮೇಲೆ ಆನೆ ಹೋದರೂ ಎಚ್ಚರವಾಗಲ್ಲ.. ಮತ್ತೆ ಮತ್ತೆ ಹೇಳಿದಾಗ.. ಎಚ್ಚರವಾಯಿತು.. ಏನ್ಲಾ ಅಂದೇ.. 

ನೋಡ್ರಿ. ಯಾರೋ ಮಾತಾಡಿಸುತ್ತಾ ಇದ್ದಾರೆ.. ಮತ್ತೆ ಹೇಳಿದಾಗ.. ನಿನ್ನ ಕರೀತಾ ಇದ್ದಾರೆ ಅಂದರೆ ನೀನೆ ಮಾತಾಡು ಅಂದೇ.. 

ಆಗ ಶುರುವಾಯಿತು ..!

                                                                               ********* 

ಇರುವುದೆಲ್ಲವ ಬಿಟ್ಟು ಉಳಿದೆಡೆ ತುಡಿವುದೇ ಜೀವನ ಅನ್ನುವ ಅಡಿಗರ ಗೀತೆಯಂತೆ..... ಜೀವನದ ಇನ್ನೊಂದು ಮಗ್ಗುಲಿಗೆ ಹೊರಟಿದ್ದ ಗಣೇಶ.. ಜನಸೇವೆಯತ್ತ ಮನಸ್ಸು ಎಳೆದಿತ್ತು..ತನು ಮನವನ್ನು ಅದರೆಡೆ ಅರ್ಪಿಸಿ.. ತನ್ನ ನೆಚ್ಚಿನ ರಾಯಲ್ ಎಂಫಿಎಲ್ಡ್ ಹತ್ತಿ ಬೆನ್ನಿಗೆ ಒಂದು ಬ್ಯಾಕ್ ಪ್ಯಾಕ್ ಹೊತ್ತು ಹೊರಟಿದ್ದ.. ಬೆನ್ನಿನ ಮೇಲೆ ಭಾರವಿತ್ತು.. ಹೃದಯ ಭಾರವಾಗಿತ್ತು.. ಹಗುರಾಗಲು ಒಂದು ಲಾಂಗ್ ಸೋಲೋ ಡ್ರೈವ್ ಹೊರಟಿದ್ದ.. ಬೆಟ್ಟ ಗುಡ್ಡ ನದಿ ತೀರ ಜಲಪಾತ ಸಮುದ್ರ ಕಾನನ ಎಲ್ಲವೂ ಅವನ ತಲೆಯೊಳಗೆ  ಇತ್ತು.. ಒಂದೊಂದೇ ತಾಣವನ್ನು ನೋಡುತ್ತಾ ಸಾಗಿದ.. 

ಒಬ್ಬನೇ ಇದ್ದದರಿಂದ ಯೋಚನೆ ಇರಲಿಲ್ಲ.. ಎಲ್ಲಿ ಬೇಕು ಅಲ್ಲಿ ಉಳಿಯುತಿದ್ದ.. ತಿನ್ನುತ್ತಿದ್ದ.. ಸ್ನಾನ ಮಾಡುತ್ತಿದ್ದ.. ಒಂದು ರೀತಿಯ ಸಂತಸ ಮೈಯಲ್ಲಿ ಹರಡುತ್ತಿತ್ತು.. ಕಿಮೀಗಳು ಹೆಚ್ಚಾಗುತ್ತಿದ್ದ ಹಾಗೆಲ್ಲ ಮೈ ಹಗುರಾಗುತ್ತಲೇ  ಇತ್ತು..

ಒಂದು ವಾರವೇ ಕಳೆದಿತ್ತು.. ಒಂದು ನದಿ ತೀರದಲ್ಲಿ ತನ್ನ ಕೊಳೆಯಾಗಿದ್ದ ಬಟ್ಟೆಗಳನ್ನು ಬ್ಯಾಗಿನಿಂದ ತೆಗೆದು ಒಗೆದು ಒಣಗಲು ಹಾಕಿದ್ದ.. ಬೈಕನ್ನು ಒಂದು ಮರದ ನೆರಳಲ್ಲಿ ನಿಲ್ಲಿಸಿ ಹಾಗೆಯೇ ಹತ್ತಿರದಲ್ಲಿದ್ದ ಒಂದು ಬಂಡೆಯ ಮೇಲೆ ಮಲಗಿದ್ದ.. ತುಸು ಚೆನ್ನಾಗಿಯೇ ನಿದ್ದೆ ಬಂದಿತ್ತು.. 

ಒಂದು ವಾರದ ಪಯಣ.. ನಿತ್ರಾಣನಾಗಿದ್ದರೂ ಮನವೂ ಹತ್ತಿಯ ಹಾಗೆ ಹಗುರಾಗಿದ್ದರಿಂದ ದಣಿವಿನ ಆಲಸ್ಯ ಹತ್ತಿರ ಬಂದಿರಲಿಲ್ಲ.. ಆದರೆ ನದಿ ತೀರದ ತಂಗಾಳಿ, ಹಕ್ಕಿಗಳ ಕಲರವ.. ಆ ಪ್ರಕೃತಿ ಸೌಂದರ್ಯ ಅವನ ಮನಸ್ಸಿಗೆ ಹಾಯ್ ಅನ್ನಿಸುವಂತೆ ಮಾಡಿತ್ತು.. !!!

"ಏನ್ರಿ ಮಿಸ್ಟರ್.. "
 
ಆ ಇಂಪಾದ ದನಿಗೆ ಕಿವಿಗಳು ತೆರೆದುಕೊಂಡಿತು.. 

ಕಣ್ಣು ಬಿಟ್ಟಾ.. ಸುಮಾರು ಐದು ಅಡಿ ಆಸುಪಾಸಿನ ಎತ್ತರ.. ತುಸು ದಪ್ಪ ಅನ್ನಬಹುದಾದ ಶರೀರ... ಹಾರಾಡುತ್ತಿದ್ದ ಕೂದಲು.. ಹಾಕಿಕೊಂಡಿದ್ದ ಹೆಲ್ಮೆಟ್ ಸಂದಿಗೊಂದಿಗಳಿಂದ ನಾ ಇದ್ದೇನೆ ಎಂದು ತೋರಿಸುತಿತ್ತು... ಕಣ್ಣಿಗೆ ಹಾಕಿಕೊಂಡಿದ್ದ ಕಪ್ಪನೆಯ ಕನ್ನಡಕದಲ್ಲಿ ಯಾರೂ ಅಂತ ಗೊತ್ತಾಗಲಿಲ್ಲ .. ಪಿಂಕ್ ಬಣ್ಣದ ಟೀ ಶರ್ಟ್.. ಕಡು ನೀಲಿ ಬಣ್ಣದ ಜೀನ್ಸ್.. ರೀಬೋಕ್ ಶೂಸ್.. ಕೈವಗಸು. .. ಕುತ್ತಿಗೆಯಲ್ಲಿ ನೇತಾಡುತಿದ್ದ ಬ್ಲೂ ಟೂತ್ ಹ್ಯಾಂಡ್ಸ್ ಫ್ರೀ .. ಎಲ್ಲವನ್ನು ನೋಡಿದಾಗ ಒಂದು ರೀತಿಯ ಆಕರ್ಷಣೆ ಇದೆ ಅನ್ನಿಸಿತು.. 

ಸುತ್ತಲೂ ನೋಡಿದ.. ಅರೆ ತನ್ನ ಬೈಕಿನ ಹತ್ತಿರವೇ ಇನ್ನೊಂದು ಅದೇ ಬಣ್ಣದ ಬೈಕ್.. ಆಕೆ ಹೆಲ್ಮೆಟ್ ತೆಗೆಯದೆ ಹಾಗೆ ಬಂದದ್ದು.. ಆಕೆಯ ಗುರುತು ಹತ್ತಲು ಕಷ್ಟವಾಗುತಿತ್ತು.. ಅದರ ಅರಿವಾಗಿ.. "ಛೆ" ಎಂದುಕೊಂಡು.. ಮೆಲ್ಲನೆ ಹೆಲ್ಮೆಟ್ ತೆಗೆದು.. ಕೂದಲನ್ನು ಸರಿಮಾಡಿಕೊಳ್ಳಲ್ಲು ತಲೆಯನ್ನು ಆ ಕಡೆ ಈ ಕಡೆ ಜೋರಾಗಿ ಆಡಿಸಿದಳು.. ಯು ಶೇಪ್ ಮಾಡಿಸಿಕೊಂಡಿದ್ದ ತುಸು ಕಪ್ಪು ತಲೆಗೂದಲು ಬೆನ್ನ ಮೇಲೆಲ್ಲಾ ನೃತ್ಯವಾಡಗಿತು.. 

ಕನ್ನಡಕ ಅರ್ಥಾತ್ ಕೂಲಿಂಗ್ ಗ್ಲಾಸ್ ತೆಗೆದಳು.. ಕಾಡಿಗೆಯನ್ನು ನಾಚಿಸುವಷ್ಟು ಕಪ್ಪಾದ ಅವಳ ಕಣ್ಣುಗಳು ಆಕರ್ಷಿತವಾಗಿತ್ತು.. ಹಾಗೆ ಒಮ್ಮೆ ಗಮನಿಸಿದೆ.. ತುಸು ನೀಳವಾದ ಮೊಂಡಾದ ಮೂಗು.. ಮೂಗುತಿ ಚುಚ್ಚಿಸಿಕೊಂಡು ಅದನ್ನು ತೆಗೆಸಿದ್ದರಿಂದ ಚುಚ್ಚಿಸಿಕೊಂಡ ಗುರುತು ಹಾಗೆ ಇತ್ತು. ..ಪುಟ್ಟ ಪುಟ್ಟ ತುಟಿಗಳು.. ಆಕೆಯ ಸುಂದರತೆಯನ್ನು ಹೆಚ್ಚಿಸಿತ್ತು.. 

ಇದೆಲ್ಲಾ ಸುಮಾರು ಒಂದು ಹದಿನೈದು ಸೆಕೆಂಡುಗಳಲ್ಲಿ ನೆಡೆದು ಹೋಯಿತು.. 

"ಯಸ್" ಅಂದ.. 

"ಮಿಸ್ಟರ್ ನಾನು ಲಾವಣ್ಯ... ಬೈಕ್ ಸವಾರಿ ನನ್ನ ನೆಚ್ಚಿನ ಹವ್ಯಾಸ.. ಇಲ್ಲೇ ಬರುತ್ತಾ ಬರುತ್ತಾ ದಾರಿ ತಪ್ಪಿದೆ ಅನ್ನಿಸುತ್ತೆ.. ಹಾಗೆ ಬರುತಿದ್ದಾಗ ಈ ನಿರ್ಜನ ಪ್ರದೇಶದಲ್ಲಿ ನಿಮ್ಮ ಬೈಕ್ ಕಾಣಿಸಿತು.. ನೀವು ಬಟ್ಟೆಗಳನ್ನು ಒಣ ಹಾಕಿದ್ದು.. ಇಲ್ಲಿ ಮಲಗಿದ್ದು ಕಂಡು.. ಓಹೋ ನೀವು ನನ್ನ ಹಾಗೆ ಅಲೆಮಾರಿ ಇರಬಹುದು ಅನಿಸಿ.. ನಾನು ಸ್ವಲ್ಪ ಹೊತ್ತು ಇಲ್ಲೇ ಇದ್ದು ನಂತರ ಹೊರಡೋಣ ಅಂತ ಕೂತೆ.. "

"ಓಹ್ ಹೌದಾ ನನ್ನ ಹೆಸರು  ಗಣೇಶ.. ಹೀಗೆ ಸುತ್ತಾಡೋಣ ಅಂತ ಒಬ್ಬನೇ ಬಂದಿದ್ದೀನಿ" ಅಂತ ತನ್ನ ಪರಿಚಯವನ್ನು ತುಸು ಪುಟ್ಟದಾಗಿ ಹೇಳಿ ಮುಗಿಸಿದ.. 

ಇಬ್ಬರಿಗೂ ಹೇಗೆ ಮಾತುಗಳನ್ನು ಮುಂದುವರೆಸಬೇಕು ಎನ್ನುವ ಗೊಂದಲ.. ಹೂ ಹಾಂ ಹೊ ಹೀಗೆ ಅವಳ ಮಾತಿಗೆ ಇವನು....ಇವನ ಮಾತಿಗೆ ಅವಳು ಉತ್ತರ ಕೊಡುತ್ತಿದ್ದಳು.. 

ಇಬ್ಬರದೂ ಸುಮಾರು ಒಂದೇ ರೀತಿಯ ಮನಸ್ಸಾಗಿತ್ತು.. ಇಬ್ಬರ ವೃತ್ತಿ ಬದುಕು ಸಾಫ್ಟ್ವೇರ್ ಉದ್ಯೋಗ ಆಗಿದ್ದರಿಂದ.. ತಲೆ ನೋವು, ಗಲಿಬಿಲಿಯಾಗಿದ್ದ ಮನಸ್ಸು, ಗೊಂದಲ.. ಕೆಲಸದ ಒತ್ತಡ ಎಲ್ಲವೂ ಒಂದೇ ತಕ್ಕಡಿಯಲ್ಲಿ ಕೂತಿತ್ತು... ಹೆಚ್ಚಿಲ್ಲ ಕಡಿಮೆಯಿಲ್ಲ.. 

ಹೀಗೆ ಸುಮಾರು ಹೊತ್ತು ಮಾತಾಡಿದ ಮೇಲೆ ಇಬ್ಬರ ಬಗ್ಗೆ ಮೂಡಿದ ವಿಷಯಗಳು ಹಲವಾರು.. ಇಬ್ಬರಿಗೂ ಬಾಲ ಸಂಗಾತಿ ಬೇಕಿತ್ತು.. ಇನ್ನೂ ಮದುವೆಯಾಗಿರಲಿಲ್ಲ.. ಸುಮಾರು ಎಪ್ಪತೆಂಟರ ಆಸು ಪಾಸಿನಲ್ಲಿದ್ದರು. .. ಮನೆಯಲ್ಲಿ ಸಮಸ್ಯೆ ಅಂದರೆ ಸಮಸ್ಯೆ ಇಲ್ಲ ಅಂದರೆ ಇಲ್ಲ ಅನ್ನುವ ಹಾಗೆ ಇತ್ತು.. ಇಬ್ಬರೂ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕಿತ್ತು.. 

ಈ ಜಂಜಾಟದಿಂದ ತಪ್ಪಿಸಿಕೊಂಡು ಒಂದಷ್ಟು ದಿನ ಗಿಜಿ ಗಿಜಿ ನಗರವಾಸನೆಯಿಂದ ದೂರ ಹೋಗಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದರು.. 

ಅದೇನೋ ದೇವರ ಆಟ . ಈ ನಿರ್ಜನ ಪ್ರದೇಶದಲ್ಲಿ ಸಿಕ್ಕಿದ್ದರು.. 

ಅಂದಿನ ದಿನ ಆಕೆಯೂ ಕೂಡ ಅಲ್ಲಿಯೇ ಉಳಿದಳು.. ಆಕೆ ತುಸು ಹೆಚ್ಚಾಗಿಯೇ ಸಿದ್ಧವಾಗಿ ಬಂದಿದ್ದಳು... ಅವಳ ಬೈಕಿನಲ್ಲಿ ಟೆಂಟ್ ಕೂಡ ಇತ್ತು.. ಸರಿ ಇಬ್ಬರೂ ಶ್ರಮ ಪಟ್ಟು ಟೆಂಟ್ ಕಟ್ಟಿದರು... ಗಣೇಶ ಅಲ್ಲಿಯೇ ಬಿದ್ದಿದ್ದ ಕಡ್ಡಿ, ಒಣಗಿದ ಎಳೆಗಳು, ಪುಟ್ಟ ಪುಟ್ಟ ಮರದ ಕೊಂಬೆಗಳನ್ನು ಮುರಿದು ಹದವಾಗಿ ಬೆಂಕಿ ಮಾಡಿದ್ದ.. 

ಅವಳ ಹತ್ತಿರ ರೆಡಿ ತು ಈಟ್ ಇತ್ತು.. ಇವನ ಬಳಿತಿನ್ನುವ ಸಾಮಗ್ರಿ ಏನೂ ಇರದ ಕಾರಣ ಅವಳ ಆಹಾರ ಸಾಮಗ್ರಿಯ ಮೇಲೆ ವಾಲಿದ.. 

ರಾತಿ ಸೊಗಸಾದ ಊಟವಾಯಿತು... ಆ ತಣ್ಣನೆ ಗಾಳಿ, ಹದವಾದ ಬೆಂಕಿಯ ಶಾಖ.. ನದಿಯ ನೀರಿನ ಜುಳು ಜುಳು.. ಪ್ರಾಣಿಗಳು ಬರುವ ಸೂಚನೆ ಇರದಿದ್ದರೂ, ರಕ್ಷಣೆಗಾಗಿ ಒಂದು ದೊಡ್ಡ ಮರದ ದಿಮ್ಮಿಯನ್ನೇ ಹುಡುಕಿ ಆ ಬೆಂಕಿಯ ಬಾಯಿಗೆ ಇಟ್ಟಿದ್ದ.. ಹಾಗಾಗಿ ಬೆಳಗಿನ ತನಕ ಬೆಂಕಿ ಉರಿಯುತ್ತಲೇ ಇರುವ ಸಾಧ್ಯತೆ ಇತ್ತು.. 

ಹಾಗೆ ಅದು ಇದು ಮಾತಾಡುತ್ತಾ.. ಇಬ್ಬರ ಮನಸ್ಸು ಒಂದೇ ಹಾದಿಯಲ್ಲಿ ಯೋಚಿಸತೊಡಗಿತು.. 

"ಗಣೇಶ್ ಇಬ್ಬರೂ ನಗರವನ್ನು ಬಿಟ್ಟು ಕಾಡಿಗೆ ಬಂದಿದ್ದೇವೆ.. ಸುಮ್ಮನೆ ಎರಡು ಬೈಕ್ ಉಪಯೋಗಿಸೊಕ್ಕಿಂತ ಒಂದೇ ಬೈಕ್ ಹೇಗೆ.. ಮುಂದಿನ ಊರಿನಲ್ಲಿ ಈ ಒಂದು ಬೈಕನ್ನು ನನ್ನ ಊರಿಗೆ ಕಳಿಸುವ ಏರ್ಪಾಡು ಮಾಡಿದರೆ ಹೇಗೆ.. "

"ಒಳ್ಳೆ ಉಪಾಯ ಲಾವಣ್ಯ ಹಾಗೆ ಮಾಡೋಣ" ತುಸು ಕಡಿಮೆ ಮಾತಾಡುವ ಗಣೇಶ ಸುಮ್ಮನೆ ಯಾಕೆ ಹೆಚ್ಚು ಮಾತು ಅಂತ.. ಅಲ್ಲಿಗೆ ಮೊಟಕು ಗೊಳಿಸಿದ. 

ಮಾರನೇ ದಿನ ಸುಮಾರು ಇನ್ನೂರು ಕಿಮೀಗಳು ಆದ ಮೇಲೆ ಕಾಡಿನಿಂದ ಹೊರಗೆ ಬಂದ ಮೇಲೆ.. ಅಲ್ಲಿಗೆ ಇದ್ದ ಒಂದು ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಲಾವಣ್ಯ ತನ್ನ ಬೈಕ್, ಅದರ ದಾಖಲೆ ಪಾತ್ರಗಳು, ತನ್ನ ವಿಳಾಸ  ಎಲ್ಲವನ್ನೂ ಕೊಟ್ಟು , ರಶೀದಿ ಪಡೆದು ತಾನು ಊರಿಗೆ ಹೋದ ಮೇಲೆ ಕರೆ ಮಾಡಿ ಬೈಕ್ ತೆಗೆದುಕೊಳ್ಳುವ ಬಗ್ಗೆ ಹೇಳಿ.. ಗಣೇಶನ ಬೈಕ್ ಹತ್ತಿದಳು.. 

ಸಕ್ಕರೆ ಹಚ್ಚಿದ ಕತೆ ಎಣಿಸಬಹುದು.. ಆದರೆ ಭಗವಂತನ ಲೀಲೆ ಕಂಡವರು ಯಾರು.. 

ಒಂದು ವಾರದ ಪಯಣ.. ಇನ್ನೊಂದು ವಾರಕ್ಕೆ ಮುಂದುವರೆಯಿತು.. ಗಣೇಶನ ಜೊತೆಯಲ್ಲಿ ಪ್ರಕೃತಿ, ಪ್ರಕೃತಿಯ ಜೊತೆಯಲ್ಲಿ ಲಾವಣ್ಯ.. ಹೀಗೆ ಇಬ್ಬರಿಗೂ ಒಬ್ಬರಿಗೊಬ್ಬರು  ಇಷ್ಟವಾಗತೊಡಗಿದರು.. 

ಹದಿನೈದು ದಿನಗಳು ಕಳೆದವು.. ಮನಸ್ಸು ಹಕ್ಕಿಯಾಗಿದ್ದ ಈ ಇಬ್ಬರು ಹಕ್ಕಿಗಳು ತಮ್ಮ ತಮ್ಮ ಗೂಡಿಗೆ ಸೇರಿದ ಮೇಲೆ, ಫೋಟೋಗಳನ್ನು ಹಂಚಿಕೊಳ್ಳಲು ಒಂದು ರೆಸ್ಟೋರೆಂಟ್ ನಲ್ಲಿ ಸೇರಲು ನಿರ್ಧರಿಸಿದರು.. 

ಗುಲಾಬ್ ಜಾಮೂನ್ ಆರ್ಡರ್ ಮಾಡಿ.. ಇಬ್ಬರೂ ತಿಂದರು.. ಫೋಟೋ ಬದಲಿಸಿಕೊಂಡರು.. ಫೋಟೋಗಳ ಮೇಲೆ ಅದರ ಕತೆ.. ಪ್ರಕೃತಿ, ಜಲಪಾತ, ನದಿ ತೀರ, ಬೆಟ್ಟ ಗುಡ್ಡ, ಊಟ ತಿಂಡಿ ಎಲ್ಲವೂ ಮತ್ತೆ ಮಾತುಗಳಲ್ಲಿ ಬಂದವು 

ಇಬ್ಬರೂ ಒಂದು ಹಗ್ ಮಾಡಿಕೊಂಡು.. ತಮ್ಮ ತಮ್ಮ ಮನೆಗೆ ಬಂದರು.. 

ಇಬ್ಬರೂ ಒಬ್ಬರಿಗೊಬ್ಬರು ಮನೆ ಮುಟ್ಟಿದ ಸಂದೇಶ ಕಳಿಸಿ.. "Some Stories Are Real! " ನಮ್ಮ ಕತೆಯೂ ನಿಜವಾಗಲಿ.. ಲೆಟ್ಸ್ ಬಿಗಿನ್ ಅವರ್ ಲೈಫ್ ಟುಗೆದರ್"  

ಅಂತ ಅರಿವಿಲ್ಲದೆ ಇಬ್ಬರೂ ಒಂದೇ ರೀತಿಯ ಅರ್ಥ ಬರುವ ಸಂದೇಶ ಓದಿಕೊಂಡು ಇಬ್ಬರೂ ಹೆಬ್ಬೆರಳಿನ ಗುರುತು ಹಾಕಿದರು.. !

****
ಸೀಮಾ ಎಷ್ಟು ಚೆನ್ನಾಗಿದೆ ಅಲ್ವ ಕತೆ.. 

ಹೌದು ಸವಿತಾ ತುಂಬಾ ಇಷ್ಟವಾಯಿತು.. ಈ ಜಗವೇ ಹಾಗೆ.. ಪ್ರತಿ ದಿನವೂ ಅಚ್ಚರಿಯ ಗೂಡಾಗಿರುತ್ತದೆ.. 

ಹೌದು ಹೌದು.. ಇದೆ ಅಲ್ಲವೇ ಜೀವನ.. ಜೀವನ ಒಂದು ರಿಲೇ ಓಟ ಇದ್ದ ಹಾಗೆ.. ಕೆಲವೊಮ್ಮೆ ಒಬ್ಬರೇ ಇಡೀ ಓಟವನ್ನು ಪೂರೈಸಿದರೆ.. ಇನ್ನು ಕೆಲವೊಮ್ಮೆ ಓಡುತ್ತ ಓಡುತ್ತಾ ಇನ್ನೊಬ್ಬರ ಕೈಗೆ ಬೇಟನ್ ದಾಟಿಸಿ ಓಟ ಮುಂದುವರೆಸಲು ಅನುವು ಮಾಡಿಕೊಡುತ್ತಾರೆ.. 

ಹೌದು ನಿಜ.. ಅರೆ ಇವತ್ತು ನಿನ್ನ ಜನುಮದಿನ ಅಲ್ವೇ.. ಶ್ರೀ ಹೇಳಿದ್ದರು.. ಸವಿತಾ ಜನುಮದಿನ ಸುಂದರ ಶುಭಾಶಯಗಳು.. ನೀವು ಕಟ್ಟಿದ ಗೂಡನ್ನು ಬೆಳಗಲು ನನಗೆ ಅವಕಾಶ ಸಿಕ್ಕಿದೆ .. ನಿಮ್ಮ ಆಸೆಯಂತೆ.. ನಿಮ್ಮ ಇಷ್ಟದಂತೆ.. ಈ ಗೂಡನ್ನು ಜೋಪಾನ ಮಾಡುತ್ತೇನೆ.. ಆ ಗೂಡಿನಲ್ಲಿರುವ ಹಕ್ಕಿಗಳು ಸದಾ ಸಂತಸದಲ್ಲಿ ಇರುವಂತೆ ನೋಡಿಕೊಳ್ಳುತ್ತೇನೆ..... 




ಅದು ನನಗೆ ಗೊತ್ತು ಸೀಮಾ.. ನಿನ್ನ ಶುಭಾಶಯಗಳಿಗೆ ಧನ್ಯವಾದಗಳು ಶ್ರೀ ಆಯ್ಕೆ ಅಂದರೆ ಹಾಗೆ.. ಅವರ ನಿರ್ಧಾರಗಳ ತಕ್ಕಡಿ ಎಂದಿಗೂ ಸಮವಾಗಿಯೇ ಇರುತ್ತದೆ.. .. ಬಿಡು ಅದರ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ..  ಸರಿ ಮತ್ತೆ ಸಿಗೋಣ ಸೀಮಾ.. ಬರುತ್ತೇನೆ ಅರವತ್ತೈದು ದಿನಗಳಾದ ಮೇಲೆ ಮತ್ತೆ ಸಿಗೋಣ.. ಬೈ.. "

*****
ನೀ ಕಟ್ಟಿದ ಗೂಡು ಸುಂದರವಾಗಿರಲು ನಿನ್ನ ಅನುಗ್ರಹ ಸದಾ ಇರಬೇಕು. ಸವಿತಾರ್ಥಕತೆ ಎಂದಿಗೂ ಆನಂದದ ಗೂಡಾಗಿರುತ್ತದೆ... ಜನುಮದಿನದ ಶುಭಾಶಯಗಳು ಟೀ... !

2 comments:

  1. Superb honey. At a time you joined old memories and new.. great..
    Love you so much..

    ReplyDelete
  2. ಮನ ಮೆಚ್ಚಿಸುವ ನಿರೂಪಣೆ.
    "ಗಣೇಶನ ಜೊತೆಯಲ್ಲಿ ಪ್ರಕೃತಿ, ಪ್ರಕೃತಿಯ ಜೊತೆಯಲ್ಲಿ ಲಾವಣ್ಯ.." ಉಲ್ಲಾಸ ತುಂಬುವ ವಾಕ್ಯ.

    ReplyDelete