Sunday, November 15, 2020

ಅಮ್ಮ ಎನ್ನುವ ದೈತ್ಯ Server - ಭಾಗ ೪

ಮತ್ತೆ ಬರ್ತೀನಿ ಅಂದಿದ್ದೆ ಆಲ್ವಾ ಹಿಂದಿನ ಲೇಖನದಲ್ಲಿ.. ನೋಡಿ ಮತ್ತೆ ಬಂದೆ.. 

ಗರುಡ ಪುರಾಣ.. ಪಂಚಾಂಗ.. ನಮ್ಮ ಶಾಸ್ತ್ರಗಳು ಸಾವಿನಾಚೆಯ ಪ್ರಪಂಚವನ್ನು ಸೂಕ್ಷ್ಮವಾಗಿ ಹೇಳುತ್ತವೆ.. ನಿಮಗೆಲ್ಲ ಗೊತ್ತಿರುವ ಹಾಗೆ ೨೭ ನಕ್ಷತ್ರಗಳು ಮಿನುಗುತ್ತಲೇ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ.. ಅದನ್ನು ಮನಸ್ಸಿಗೆ ಇಳಿಯುವಂತೆ ಸರಳವಾಗಿ ತಮ್ಮತನದ ಬಗ್ಗೆ ಉಪದೇಶ ಮಾಡದೆ ತಿಳಿ ಹೇಳುವವರೇ ಗುರುಗಳು.. 

ಹೀಗೆ ನಾ ಸಾಕು.. ಸಾಕಾಗಿದೆ.. ಸುಸ್ತಾಗಿದೆ.. ಹುಟ್ಟಿನಿಂದ ದಣಿವರಿಯದೆ ದುಡಿದಿದ್ದ ಈ ನನ್ನ ದೇಹ ಸಾಕು ವಿಶಾಲೂ... ಹೊರಡೋಣ ಅಂದಾಗ.. ಸುಮ್ಮನೆ ತಲೆಯಾಡಿಸಿದ್ದೆ.. 

ಪಂಚಾಂಗದ ಪ್ರಕಾರ ನಾ ಈ ಭೂಮಿಯಿಂದ ಹೊರಟ ದಿನ ವಿಶಾಖ ನಕ್ಷತ್ರವಿತ್ತು ಅಂತ ಹೇಳುತ್ತದೆ ಪಂಚಾಂಗ.. ಪ್ರತಿ ನಕ್ಷತ್ರವನ್ನು ದಾಟಿ ದಾಟಿ.. ದಿನಕ್ಕೊಂದರಂತೆ ನಕ್ಷತ್ರಗಳನ್ನು ಎಣಿಸುತ್ತಾ ಮತ್ತೆ ನನ್ನ ಅನುಗ್ರಹ ಸದನಕ್ಕೆ ಬಂದ ಛೆ ಎಂಥಹ ಮಾತುಗಳನ್ನು ಆಡುತ್ತಿದ್ದೇನೆ.. ನನ್ನ ದೇಹ ಮಾತ್ರ ಅನುಗ್ರಹ ಸದನ ಬಿಟ್ಟಿದೆ.. ನನ್ನ ಆತ್ಮ ಇಂದಿಗೂ, ಎಂದೆಂದಿಗೂ ಇರೋದು ಅನುಗ್ರಹ ಸದನವೇ.. ಇರಲಿ ಆ ಮಾತು 

ಮತ್ತೆ ನಾ ಅನುಗ್ರಹ ಸದನಕ್ಕೆ ಬಂದೆ.. ನಿಮಗೆ ಹಾಗೆ ನನ್ನ ಇಪ್ಪತ್ತೇಳು ದಿನದ ಪಯಣವನ್ನು ಹೇಳದೆ, ಇಪ್ಪತೇಳು ನಕ್ಶತ್ರಗಳ ಹೆಸರನ್ನೇ ತೆಗೆದುಕೊಂಡು, ಹಾಗೆ ಸುಮ್ಮನೆ ನನ್ನ ಬದುಕನ್ನು ಒಮ್ಮೆ ತಿರುಗಿ ನೋಡುವ ಪ್ರಯತ್ನ ಮಾಡುವೆ.. 

ನೋಡಿ ಮೊದಲೇ ಹೇಳಿ ಬಿಡುತ್ತೇನೆ, ನಕ್ಷತ್ರಗಳ ಹೆಸರನ್ನು ಅದಕ್ಕೆ ಅರ್ಥ ಹೊಳೆದರೆ ಅದಕ್ಕೆ ತಕ್ಕಂತೆ ಒಂದಷ್ಟು ಪದಗಳನ್ನು ಹಾಕಿ ಶ್ರೀಕಾಂತನಿಗೆ ಹೇಳಿದ್ದೀನಿ, ಅರ್ಥ ಸಿಗದೇ ಇದ್ದಾಗ, ಆ ಪದದ ಹತ್ತಿರಕ್ಕೆ ಬರುವ ಹಾಗೆ ನನಗಾಣಿಸಿದ ಮಾತನ್ನು ಹೇಳಿದ್ದೀನಿ.. ಇದಕ್ಕೂ ಜ್ಯೋತಿಶಾಸ್ತ್ರಕ್ಕೂ ಏನೂ ನಂಟಿಲ್ಲ.. ನನ್ನ ಬದುಕನ್ನು ತೆರೆದಿಡುವ ಒಂದು ಪ್ರಯತ್ನ ಅಷ್ಟೇ . !

ವಿಶಾಖ - 19.10.2020
ವಿಶಾಲೂ ಎಂದು ಎಲ್ಲರೂ ಪ್ರೀತಿಯಿಂದ ಕರೆಯುತಿದ್ದ ನನ್ನನ್ನು.. ವಿಶಾಖ ನಕ್ಷತ್ರದಂದೇ ಹೊರಟು ಬರುತ್ತೇನೆ ಎಂದು ಯಾರೂ ಅರಿತಿರಲಿಲ್ಲ... ವಿಶಾಖ ಶಾಖ ವಿಶಾಲವಾದ ನನ್ನ ಬದುಕನ್ನು ಬಿಸಿ ಮಾಡಿತ್ತು.. ಕಷ್ಟ ನಷ್ಟಗಳು ನನ್ನ ಮನಸ್ಸನ್ನು ಬಿಸಿ ಮಾಡಿದ್ದರೂ, ದೇಹ ಮಾತ್ರ ನನಗೆ ಸಾತ್ ನೀಡಿತ್ತು. ಕಷ್ಟಕೋಟಲೆಗಳನ್ನು ದಾಟುತ್ತಾ ನೆಡೆಯುವ ನನ್ನ ಮನಸ್ಸಿಗೆ ಶಾಖ ನೀಡಿದ್ದು ಈ ವಿಶಾಖ ನಕ್ಷತ್ರವೇ.. 

ಅನುರಾಧ - 20.10.2020
ಅನುದಿನವೂ ರಾಧ ಕೃಷ್ಣನನ್ನು ನೆನೆಸಿಕೊಳ್ಳುವ ಹಾಗೆ.. ನನ್ನ ಪ್ರೀತಿಯ ಬಂಧು ಬಳಗವನ್ನು, ನನ್ನ ಪ್ರೀತಿಯ ಅನುಗ್ರಹ ಸದನಕ್ಕೆ ಶುಭಕೋರುವ ಪ್ರತಿಯೊಬ್ಬರನ್ನು ಅನುಸರಿಸುತ್ತಲೇ ಇದ್ದೆ.. ಇರುತ್ತೇನೆ.. 

ಜ್ಯೇಷ್ಠ - 21.10.2020
ನಮ್ಮ ಯಜಮಾನರು ಜೇಷ್ಠ ಪುತ್ರರಾಗದಿದ್ದರೂ, ನಮ್ಮ ಭಾವನವರಾದ ಅಪ್ಪು ಅಲಿಯಾಸ್ ರಾಮಸ್ವಾಮಿ ಕೂಡ ಅಪ್ಪು ಬಂದ ಎಲ್ಲರೂ ಸುಮ್ಮನಿರಿ ಎನ್ನುವಷ್ಟು ಗೌರವ ಪಡೆದಿದ್ದರು.. ದೊಡ್ಡವರಾಗಬೇಕಾದರೆ, ದೊಡ್ಡವರೇ ಆಗಬೇಕಿಲ್ಲ.. ವ್ಯಕ್ತಿತ್ವ ದೊಡ್ಡದಾಗಿರಬೇಕು.. ಜೇಷ್ಠ ನಕ್ಷತ್ರದಂತೆ ಎಲ್ಲರಲ್ಲೂ ತಮ್ಮ ನೆಡೆ ನುಡಿಯಿಂದ ಜೇಷ್ಠರಾಗೆ ಇದ್ದ ನನ್ನ ಯಜಮಾನರನ್ನು ಅನುಸರಿಸುತ್ತಾ ಬಂದೆ 

ಮೂಲ 22.10.2020
ನಮ್ಮ ಯಜಮಾನರ ಮೂಲ ಸ್ಥಾನ ಹಾಸನದ ಬಳಿಯ ಕೋರವಂಗಲ.. ನನ್ನ ಮೂಲ ಸ್ಥಾನ ಯಾವುದೇ ಇದ್ದರೂ.. ನನ್ನ ಬದುಕಿನ ಪ್ರಕಾರ ನನ್ನ ಮೂಲ ಸ್ಥಾನ ಕಿತ್ತಾನೆ.. ಕೋರವಂಗಲಕ್ಕೆ ಒಮ್ಮೆ ನನ್ನ ಮಕ್ಕಳು ಹೋದಾಗ ವಿಜಯನನ್ನು ನೋಡಿ ನಮ್ಮ ಯಜಮಾನರನ್ನು ನೆನೆಪಿಟ್ಟುಕೊಂಡವರು.. ಮಂಜಯ್ಯನ ಮಗನಾ... ಅದೇ ಅಂದುಕೊಂಡೆ ಮಾತು, ಮುಖ ಲಕ್ಷಣ ನೋಡಿ ಮಂಜಯ್ಯನ ಮಗನೆ ಇರಬೇಕು ಅಂತ ಅನ್ನುವಷ್ಟು ಹೆಸರಾಗಿದ್ದರು ತಮ್ಮ ವ್ಯಕ್ತಿತ್ವದಿಂದ.. 

ಪೂರ್ವಾಷಾಡಾ - 23.10.2020
ನಮ್ಮ ಪೂರ್ವದ ಜೀವನ ನಮಗೆ ಬದುಕುವ ಪಾಠವನ್ನು ಕಲಿಸಿತು.. ಯಾವುದಕ್ಕೂ ಕೊರಗದೆ, ಕಷ್ಟಕ್ಕೆ ನಲುಗದೆ ಬದುಕುವ ಜೀವನವನ್ನು ನಮ್ಮ ಪೂರ್ವಶ್ರಮ ತಿಳಿಸಿಕೊಟ್ಟಿತು.. 

ಉತ್ತರಾಷಾಡಾ - 24.10.2020
ನಮ್ಮ ಬದುಕಿನ ಉತ್ತರ ಭಾಗ ಕೊಂಚ ಹಾಯ್ ಎನಿಸಿತ್ತು.. ಪಟ್ಟ ಬವಣೆ, ಬದುಕಿನ ಸಂಕಷ್ಟಗಳು ಸ್ವಲ್ಪ ಸ್ವಲ್ಪವೇ ಮರೆಯಾಗಿ ತಂಗಾಳಿ ಸುಯ್ ಎಂದು ಬರುವಂತೆ ಗಾಳಿ ಬೀಸಲು ಶುರು ಮಾಡಿತ್ತು.. 

ಶ್ರವಣ - 25.10.2020
ಅಪ್ಪ ಅಮ್ಮನಿಗೆ ಶ್ರವಣಕುಮಾರ ಸೇವೆ ಮಾಡಿದಂತೆ ಸೇವೆ ಮಾಡಬೇಕು ಎನ್ನುವ ಆಸೆಯಿತ್ತು.. ಆದರೆ ವಿಧಿ.. ಅಪ್ಪನಿಗೆ ಬೇಡವಾದ ಮಗಳಾದೆ.. ಅಮ್ಮ ಎಂದು ನಾ ಗುರುತಿಸುವ ಮೊದಲೇ ಜನ್ಮ ನೀಡಿದ ಅಮ್ಮ ಸಾಕು ಮಗಳೇ ಈ ಪ್ರಪಂಚ ಎಂದು ಹೊರಟೆ ಬಿಟ್ಟಿದ್ದರು.. ನನ್ನ ಅಜ್ಜ ಅಜ್ಜಿ, ಸೋದರ ಮಾವ ಅತ್ತೆಯರು.. ಜೊತೆಗೆ ನನ್ನ ದೊಡ್ಡಪ್ಪ ದೊಡ್ಡಮ್ಮಂದಿರನ್ನೇ ತಾಯಿ ತಂದೆ ಎಂದು ಅವರಿಗೆ ಸೇವೆ ಮಾಡಿದೆ.. ಮದುವೆಯ ನಂತರ ನನ್ನ ಅತ್ತೆ ಮಾವನೇ ನನಗೆ ಮಾತಾ ಪಿತೃಗಳಾಗಿದ್ದರು.. 

ಧನಿಷ್ಠ - 26.10.2020
ಜೀವನ ಕನಿಷ್ಟವಾಗೇನೋ ಇರೋಲ್ಲ.. ಸಂಪತ್ತುಗಳು ಧನಿಷ್ಠವಾಗೇನೋ ಇರದೇ ಇದ್ದರೂ.. ಬದುಕನ್ನು ಅತಿ ಕೆಳಮಟ್ಟದಿಂದ ಮೇಲಕ್ಕೆ ಎತ್ತಿಕೊಂಡು ಬರಲು ಸಹಕಾರ ನೀಡಿದ ನನ್ನ ಬಂಧು ಮಿತ್ರರು, ನಮ್ಮ ಅನುಗ್ರಹ ಸದನ ಧನಿಷ್ಠ ಮಟ್ಟದ ಜೀವನವನ್ನು ಕಾಣಲು ಸಹಾಯ ಮಾಡಿತು.. 

ಶತಭಿಷ - 27.10.2020
ಶತಮಾನ ಮುಟ್ಟಬೇಕೆಂಬ ಅಭಿಲಾಷೆ ಅವರಿಗೂ ಇತ್ತು, ನನಗೂ ಇತ್ತು.. ಆದರೆ ಏನು ಮಾಡುವುದು, ನೆಟ್ವರ್ಕ್ ಚೆನ್ನಾಗಿ ಇತ್ತು, ಆದರೆ ಮೊಬೈಲಿನಲ್ಲಿ ಚಾರ್ಜ್ ಇಲ್ಲದ ಸ್ಥಿತಿ ನಮ್ಮಿಬ್ಬರದಾಗಿತ್ತು.. ಹಾಗಾಗಿ ಶತಾಯುಷಿ ಆಗಬೇಕೆಂಬ ಅಭಿಲಾಷೆಯನ್ನು ಕಳಚಿ ಹೊರತು ಬಂದೆವು... 

ಪೂರ್ವಭಾದ್ರ - 28.10.2020
ನಮ್ಮ ಪೂರ್ವ ಜೀವನ ಭದ್ರಪಡಿಸಲು ಅನುಕೂಲವಾಗಿದ್ದು ಬದುಕು ಹಸಿವಿನಲ್ಲಿ ಕಲಿಸಿದ ಪಾಠ .. ಹಸಿವು, ಜೀವನದಲ್ಲಿ ಮುಂದೆ ಬರುವ ಹಪಾಹಪಿ ಎಂಥಹ ಬದುಕನ್ನು ಹಸನು ಮಾಡುತ್ತೆ.. 

ಉತ್ತರಭಾದ್ರ - 29.10.2020
ಉತ್ತರಾರ್ಧ ಬದುಕು ಸುಂದರಕಾಂಡವಾಗುವ ಎಲ್ಲಾ ಲಕ್ಷಣಗಳು ಇತ್ತು.. ಬದುಕು ಹಸನಾಗಲು ಆರಂಭವಾಗಿತ್ತು... ಮಕ್ಕಳು ಏಳಿಗೆಯನ್ನು ಕಾಣಲು ಶುರು ಮಾಡಿದ್ದರು.. ನಮಗೆ ಮಾಡಬೇಕಾದ ಎಲ್ಲಾ ಸಂಸ್ಕಾರಗಳನ್ನು ಮಾಡುತ್ತಾ ಸಾಗಿದರು ಮಕ್ಕಳು.. 

ರೇವತಿ - 30.10.2020
ಕರುಣಾ ರಸ ಸೂಸುವ ರೇವತಿ ರಾಗದಂತೆ ನನ್ನ ಬದುಕು ಸುಮಧುರವಾಗಿ ಏರಿಳಿತದ ಹಾದಿಯಲ್ಲಿ ಸಾಗಿತ್ತು.. ಜಗ್ಗದೆ ಕುಗ್ಗದೆ ಸಾಗುವ ನಮ್ಮಿಬ್ಬರ ಮನೋಭಾವವೇ ಮಕ್ಕಳಿಗೂ ಹರಡಿತ್ತು.. ಹಾಗಾಗಿ ಬದುಕು ಹಸನಾಗಿತ್ತು... !

ಅಶ್ವಿನಿ ನಕ್ಷತ್ರ - 31.10.2020
ಅಶ್ವಿನಿ ದೇವತೆಗಳು ನೋಡಲು ಸುಂದರ.. ನನ್ನ ಮಕ್ಕಳು ಸ್ಪುರದ್ರೂಪಿಯಾಗದೆ ಇದ್ದರೂ (ಮಕ್ಕಳ ಬೈಯ್ಯ ಬೇಡ್ರಪ್ಪ) ಬದುಕನ್ನು ಸುಂದರ ಮಾಡಿಕೊಂಡರು.. ಅದೇ ತಾನೇ ನಿಲ್ಲುವುದು.. ಬದುಕನ್ನು ಎತ್ತಿ ಹಿಡಿದು ನಿಲ್ಲಬೇಕು.. ಆಗಲೇ ಬದುಕಿಗೆ ಒಂದು ಸಾರ್ಥಕತೆ.. !

ಭರಣಿ - 01.11.2020
ಬಡತನದ ಬೇಗೆಯಲ್ಲಿ ಬಳಲುವಾಗ ಭರಣಿಯಲ್ಲಿ ಕೂಡಿಟ್ಟ ಅಷ್ಟೋ ಇಷ್ಟೋ ಪುಡಿಗಾಸು ಕೈ ಹಿಡಿದಿತ್ತು.. ಬೆರಣಿಯಲ್ಲಿ ಸೌದೆಯಲ್ಲಿ ಬೆಂದ ಅಡಿಗೆ.. ಭರಣಿಯಲ್ಲಿ ಕೂಡಿಟ್ಟ ಧನ ಅಂದ ಎನ್ನುವ ಹಾಗೆ .. ಎಷ್ಟೋ ವಾರಗಳನ್ನು ಹಿಡಿದಿಟ್ಟಿದ್ದು ಇದೆ ಭರಣಿಯಲ್ಲಿ ಕೂಡಿಡುವ ಅಭ್ಯಾಸ.. !

ಕೃತಿಕಾ - 02.11.2020
ಕಾರ್ತಿಕ ಮಾಸ ಬಲು ಸೊಗಸು.. ಕತ್ತಲೆಯನ್ನು ಹೊಡೆದೋಡಿಸುವ ಬೆಳಕಿನ ಹಬ್ಬ ಮೂಡುವ ಮಾಸ.. ಅದೇ ಗುಂಗಿನಲ್ಲಿ ಇರುವ ಎಲ್ಲರ ಬದುಕು.. ಕತ್ತಲೆಯಿಂದ ಬೆಳಕಿಗೆ ಬರಲೇ ಬೇಕು.. ಬಂದೆ ಬರುತ್ತದೆ.. ಅದಕ್ಕೆ ನಮ್ಮ ಬದುಕೇ ಸಾಕ್ಷಿ.. !

ರೋಹಿಣಿ - 03.11.2020
ಕೃಷ್ಣ ಹುಟ್ಟಿದ್ದು ರೋಹಿಣಿ ನಕ್ಷತ್ರದಲ್ಲಿ. ಹೆತ್ತ ಅಪ್ಪ ಅಮ್ಮನ ಮಮತೆ ಸಿಗಲಿಲ್ಲ.. ಆದರೆ ಸಾಕು ತಾಯಿ ತಂದೆಯ ಪ್ರೀತಿಯಾಮೃತವನ್ನು ಸವಿದು ಬೆಳೆದು ಬಂದ.. ನನಗೂ ಹಾಗೆ ಹೆತ್ತವರ ಪ್ರೀತಿ ಹೃದಯಕ್ಕೆ ತಾಗಲಿಲ್ಲ.. ಆದರೆ ಆ ಪ್ರೀತಿಗಿಂತ ಮಿಗಿಲಾಗಿ ನನ್ನ ಬದುಕಿಸಿದ್ದು ನನ್ನ ಪ್ರೀತಿಯ ಕಿತ್ತಾನೆಯ ಮತ್ತು ಹಾಸನದ ಕುಟುಂಬ.. 

ಮೃಗಶಿರ - 04.11.2020
ಮೃಗಕ್ಕೆ ಶಿರ ಮುಖ್ಯ ಕಾರಣ.. ಪ್ರಪಂಚವನ್ನು ನೋಡುತ್ತದೆ.. ನಮ್ಮ ಬದುಕು ಕೂಡ ಕಷ್ಟಗಳು ಬಂದಾಗ ತಲೆ ಎತ್ತಿ ಎದುರಿಸಿ, ಯಶಸ್ಸು ಬಂದಾಗ ಶಿರಬಾಗಿ ನೆಡೆದೆವು.. ಅದೇ ನಮ್ಮ ಬದುಕನ್ನು ರೂಪಿಸಿತು.. !

ಆರ್ದ್ರಾ (ಆರಿದ್ರಾ) - 05.11.2020
ಇದನ್ನು ಕೆಂಪು ಮಹಾ ನಕ್ಷತ್ರ ಅಂತ ಹೇಳ್ತಾರೆ ಅನ್ನುತ್ತೆ ಜ್ಯೋತಿಶ್ಯಾಸ್ತ್ರ... ನನಗೆ ಗೊತ್ತಿಲ್ಲ.. ಆದರೆ ಕೆಂಪು ಕೆಂಪಾಗಿ ಶುರುವಾಗಿದ್ದ ಜೀವನ ತಂಪು ತಂಪಾಗಿ ಬದಲಾಗಿದ್ದು ಅಚ್ಚರಿ ಅನಿಸಿದರೂ.. ಅದರ ಹಿಂದೆ ಅನೇಕ ಸಹಾಯಕ ಪೋಷಕರ ಕೈಗಳು ಕಾಣುವುದಿಲ್ಲ.. ಮರೆಯಲ್ಲಿಯೇ ನಿಂತು ನನ್ನ ಅನುಗ್ರಹ ಸದನವನ್ನು ಅನುಗ್ರಹಿಸಿದ್ದು ನಮ್ಮ ಬದುಕಿನ ವಿಶಿಷ್ಟ ಸಂಗತಿಗಳಲ್ಲಿ ಒಂದು.. 

ಪುನರ್ವಸು - 06.11.2020
ಈ ಹೆಸರಿನ ಒಂದು ಬಿದಿರಿನ ವರ್ಗವಿದೆ ಅಂತ ತಿಳಿಯಿತು.. ಬಿದಿರು ಒಳಗೆ ಟೊಳ್ಳಾಗಿದ್ದರೂ ಒತ್ತಡ ತಡೆದುಕೊಂಡು ಅನೇಕ ಪೀಠೋಪಕರಣಗಳಿಗೆ ಉಪಯೋಗಕ್ಕೆ ಬರುತ್ತದೆ.. ಬದುಕು ಹಾಗೆ ಅಲ್ಲವೇ ಒಳಗೆ ಹೇಗಾದರೂ ಇರಲಿ, ಎಲ್ಲರ ಉಪಯೋಗಕ್ಕೆ ಬದುಕಬೇಕು.. ಯಾವುದೇ ಕಾರ್ಯಕ್ರಮವಾದರೂ ಮೈಮುರಿಯುವಂತೆ ಕೆಲಸ ಮಾಡುತ್ತಾ, ನಮ್ಮ ಭಾಗವಹಿಸುವಿಕೆಯನ್ನು ತೋರಿಸುತ್ತಿದ್ದ ರೀತಿ ಹೀಗೆ ಇತ್ತು.. ಪುನಃ ಪುನಃ ವಸು ಅಂದರೆ ಅಭಿವೃದ್ಧಿಯಾಗುತ್ತಲೇ ಇರಲಿ ಎನ್ನುವಂತೆ ಸಾಗಿತ್ತು ಬದುಕು.. ! 

ಪುಷ್ಯ - 07.11.2020
ಪುಷ್ಯ ಮಾಸದಲ್ಲಿ ಶಾಖ ಕಡಿಮೆಯಾಗಿ ಕೊಂಚ ಚಳಿ ಹೆಚ್ಚು ಎನ್ನುತ್ತಾರೆ.. ಬದುಕು ಹಾಗೆ ಅಲ್ಲವೇ.. ಸಂಕಷ್ಟಗಳ ಬವಣೆ ದಾಟುತ್ತಾ ಹೋದ ಹಾಗೆ ಶಾಖ ಕಡಿಮೆಯಾಗಿ ತಂಪು ಹೆಚ್ಚಾಗುತ್ತದೆ.. ಬದುಕು ಒಂದು ಹೂವಿನ ಹಾಗೆ.. ನಗುವೇ ಆ ಸುಮದ ಪರಿಮಳವು ಅನ್ನುವ ಹಾಡಿನಂತೆ.. ಬದುಕಿಗೆ ತಿರುವು ಸಿಗುತ್ತಲೇ ಇರುತ್ತದೆ.. ಬೇಕಾಗಿರೋದು ಕೊಂಚ ತಾಳ್ಮೆ!

ಆಶ್ಲೇಷ - 08.11.2020
ಆಹಾ.. ಬದುಕನ್ನು ಒಂದು ಹಾವಿಗೆ ಹೋಲಿಸುವುದಾದರೆ, ಈ ಅಶ್ಲೇಷದಂತೆ ಬದುಕು ಸಾಗುತ್ತದೆ.. ಸಂಕಷ್ಟಗಳ ಪೊರೆಯನ್ನು ಕಳಚಿ ಮುಂದೆ ಹೊಸ ಬದುಕು ಎಂಬ ಪೊರೆಯನ್ನು ಬೆಳೆಸಿಕೊಳ್ಳುತ್ತಾ ಸಾಗಬೇಕು.. !

ಮಖ - 09.11.2020
ಪುಷ್ಯ ಮಾಸ ಜಾರಿ ಮಾಘ ಮಾಸ ಬಂದಾಗ ಮೆಲ್ಲಗೆ ಶಾಖವೂ ಹೆಚ್ಚುತ್ತದೆ.. ತಂಪು ತಂಪು ಹೆಚ್ಚಾದಾಗ ಕಷ್ಟದ ಅರಿವು ಬೇಕು ಎನ್ನುವ ಹಾಗೆ ಮೆಲ್ಲನೆ ಬದುಕಿನಲ್ಲಿ ಬಿಸಿ ಏರುತ್ತದೆ.. ಬದುಕಬೇಕು ಎನ್ನುವ ಹಂಬಲ ಹೆಚ್ಚಾಗಿ, ಜಡತ್ವ ತೊರೆಯಲು ಈ ಮಘಾ ಅಥವ ಮಾಘ ಮಾಸ ಸಹಕಾರಿಯಾಗುತ್ತದೆ.. ನನ್ನ ಬದುಕಿನಲ್ಲಿ ಈ ರೀತಿ ಮಾಘ ಮಾಸಗಳು ಬಂದು, ನಮ್ಮ ಬದುಕಿನ ಮಖವನ್ನು ಬದಲಿಸಿತು.. 

ಪುಬ್ಬ (ಪೂರ್ವ ಫಲ್ಗುಣಿ) - 10.11.2020
ಸಂವತ್ಸರದ ಅಂತ್ಯ ಎನ್ನುವಂತೆ ಬರುವ ಈ ಪೂರ್ವ ಫಾಲ್ಗುಣ ಮಾಸ.. ಫಲ್ಗುಣಿ ತಾರೆಯಂತೆ ಹೊಸ ಋತುವಿಗಾಗಿ ಕಾಯುತ್ತದೆ.. ಬದುಕಲ್ಲಿ ಮತ್ತೆ ವಸಂತವಾಗಲು ಇದೆ ನಾಂದಿ.. ಪುಬ್ಬೇ ಎನ್ನುವಂತೆ ಬದುಕು ಹೊಸ ಹಾದಿಗೆ ಹೊರಳುವ ಪರಿ ಸುಂದರ ಅನನ್ಯ.. !

ಉತ್ತರಾ (ಉತ್ತರ ಫಲ್ಗುಣಿ) - 11.11.2020
ಎಲ್ಲಾ ಪ್ರಶ್ನೆಗಳಿಗೂ ಉತ್ತರಾ ಕೊಡುವೆ ಎನ್ನುವ ಛಲ ಬದುಕಲ್ಲಿ ಬಂದಾಗ ಪ್ರತಿ ಕ್ಷಣವೂ ಸುಂದರ ಎನ್ನುವುದನ್ನು ಈ ಉತ್ತರಾ ಫಾಲ್ಗುಣದಲ್ಲಿ ಕಲಿಯುವ ಅವಕಾಶ ನನ್ನ ಬದುಕಿನಲ್ಲಿ ಹಲವಾರು ಬಾರಿ ಬಂದಿತು.. !

ಹಸ್ತ - 12.11.2020
ಸಂಕಷ್ಟಗಳು ಬದುಕನ್ನು ಹಣ್ಣು ಹಣ್ಣು ಮಾಡಲು ಹಾತೊರೆಯುವಾಗ.. ಹಸ್ತವನ್ನು ತಲೆಯ ಮೇಲೆ ಇಟ್ಟುಕೊಳ್ಳದೆ, ಅದೇ ಹಸ್ತದಲ್ಲಿ ಬದುಕೆಂಬ ಶಿಲೆಯನ್ನು ಕೆತ್ತುವ ಶಿಲ್ಪಿಯಾಗಬೇಕು ನಾವು.. ಅದೇ ಹಾದಿಯಲ್ಲಿ ಸಾಗಿದಾಗ ಬದುಕು ಹಸನಾಗಿದ್ದು ಕಂಡು ಮನಸ್ಸಿಗೆ ಹಾಯ್ ಎಂದಿತು.. !

ಚಿತ್ತಾ - 13.11.2020
ಬದುಕಲೇ ಬೇಕು ಎಂಬ ಆಶಯ, ಛಲ ಚಿತ್ತದೊಳಗೆ ಬಂದರೆ ಸಾಕು, ಅಡೆ ತಡೆಗಳು ಹೂವಿನ ಸರವಾಗುತ್ತದೆ.. ಬದುಕುವ ಛಲವೆಂಬುದು, ಹರಿಯುವ ನೀರಿನಂತೆ, ಒಮ್ಮೆ ಹರಿಯಲು ಶುರು ಮಾಡಿದ ನದಿ, ಯಾವುದೇ ಅಡೆ ತಡೆಗಳಿಗೆ ಜಗ್ಗದೆ ಸಾಗುವ ಹಾಗೆ, ಬದುಕಿಗೆ ಹಾದಿಯನ್ನು ಹುಡುಕುತ್ತಾ ಮುನ್ನುಗ್ಗಬೇಕು.. ಇದೆ ನಾ ಕಂಡುಕೊಂಡ ಯಶಸ್ಸಿನ ಸೂತ್ರ!

ಸ್ವಾತಿ - 14.11.2020
ಈ ಸ್ವಾತಿ ಮುತ್ತಿನ ಹನಿಗಳು ಮುತ್ತನ್ನು ಮಾಡುತ್ತದೆ ಎನ್ನುತ್ತಾರೆ.. ದೇಹಕ್ಕೂ ಮನಸ್ಸಿಗೂ ಈ ಸ್ವಾತಿ ಮಳೆಯ ಹನಿಗಳು ಒಳ್ಳೆಯದು ಎಂದು ಎಲ್ಲೋ ಕೇಳಿದ್ದ ನೆನಪು.. ಇರಲಿ, ಮುತ್ತಾಗುವ ಈ ಹನಿಗಳು, ಬದುಕನ್ನೇ ಬದಲಿಸುತ್ತವೆ ಎನ್ನುವುದು ಮಾತ್ರ ಸುಳ್ಳಲ್ಲ. 

ವಿಚಿತ್ರ ಅನ್ನಿಸುತ್ತೆ ಅಲ್ವೇ ಈ ಲೇಖನ.. ಮನುಕುಲದ ಬದುಕೇ ಒಂದು ವಿಚಿತ್ರ ಪುಸ್ತಕ..ಅದರಲ್ಲಿ ನನ್ನ ಬದುಕಿನ ಕೆಲವು ಪುಟಗಳು ನಿಮಗಾಗಿ.. ಅಷ್ಟೇ.. 

ಮತ್ತೆ ಸಿಗುವೆ.. !

4 comments:

  1. ವಾವ್ಹ್ 27 ನಕ್ಷತ್ರದ ವರ್ಣನೆ ಅರ್ಥಪೂರ್ಣ,ಬಾಳು & ಬದುಕನ್ನು ಬಳಸಿಕೊಂಡು ಒಂದು ಸುಂದರ ಚಿತ್ರಣ ಪರಿಚಯಿಸುವ ಶೈಲಿ ಅದ್ಬುತ. ಸತ್ಯ ಹೇಳಬೇಕೆಂದರೆ ಕವಿಗಳು ಇನ್ನೂ ಹೆಚ್ಚಿನ ಪರಿಶ್ರಮನ ಪಣಕ್ಕಿಟ್ಟಿದ್ದೇ ಆಗಿದ್ದಲ್ಲಿ 9ನೇ ರಾಷ್ಟ್ರ ಪ್ರಶಸ್ತಿ ಅನುಗ್ರಹದ ಬಾಗಿಲಿಗೆ ಬರತ್ತಿತ್ತೇನೋ.
    ತುಂಬಾ ಸೊಗಸಾಗಿದೆ ಶ್ರೀ ನಿನ್ನ ಕವಿತಾ ಶೈಲಿ ಓದುಗರನ್ನು ಮಾತೊಂದು ಲೋಕಕ್ಕೆ ಕೊಂಡೊಯ್ಯುವ ತಾಕತ್ತು ನೀ ಹಿಡಿದಿರುವ ಲೇಖನಿಗಿದೆ.
    ಮತ್ತೊಮ್ಮೆ ನಿನ್ನ ಬರವಣಿಗೆಗೆ ಹಾಗೂ ಅರ್ಥಪೂರ್ಣ ಜೀವನ ಪರಿಚಯಿಸಿರುವ ಧಾಟಿಗೆ ತಲೆಬಾಗುವೆ.

    ReplyDelete
  2. Hmmmm just ಈಗ ಓದಿದೆ ಶ್ರೀ.... ಅಬ್ಬಾ! ಏನು ಹೇಳಲಿ ಪದಗಳೆ ಸಿಗುತ್ತಿಲ್ಲ ಎಂಥಹ ಬರವಣಿಗೆ ಶ್ರೀ! ಯಾಕೆಂದರೆ ಎಷ್ಟು ನಕ್ಷತ್ರಗಳು ಹಾಗೂ ಅದರ ಹೆಸರುಗಳು ತಿಳಿಯದಂತಹ ಈ ಕಾಲದಲ್ಲಿ, ಅಷ್ಟೂ ನಕ್ಷತ್ರಗಳ ಹೆಸರಿನಲ್ಲಿ ನಿನ್ನ ತಾಯಿಯವರ ಜೀವನದ ಚಿತ್ರಣವನ್ನು ನಿನ್ನ ಬರವಣಿಗೆಯ ಮೂಲಕ ಹೊರ ಹೊಮ್ಮಿರುವುದು ನಿಜಕ್ಕೂ ಶ್ಲಾಘನೀಯ! ಹಾಗೂ ಅದನ್ನು ಮನಸ್ಸಿನ ಆಳಕ್ಕೆ ಇಳಿಸುವ ನಿನ್ನ ಪ್ರತಿಯೊಂದು ಪದಕ್ಕೆ ಮತ್ತು ಪದ ಜೋಡಣೆಗೆ ನಿನಗೆ ನೀನೆ ಸಾಟಿ !ನಿನ್ನ ತಾಯಿಯವರ ಜೀವನ ಚರಿತ್ರೆ ಚಿತ್ರಣದಂತೆ ಚಿತ್ರಿಸಿತುವೆ‌. ನಿನ್ನ ಬರವಣಿಗೆ ಹೀಗೆ ಸಾಗಲಿ ಹಾಗೂ ನಿನ್ನ ಜ್ಞಾನ ದೀವಿಗೆ ಹೆಚ್ಚಲಿ ಎಂದು ಮನಸಾರೆ ಆಶಿಸುವೆ ಶ್ರೀ....

    ReplyDelete