Monday, May 21, 2018

ಕಾಡುವ ಹುಬ್ಬಿನ ಹುಡುಗಿ - ಬಲಗಣ್ಣಿನ ಹುಬ್ಬು!

ಸರಿ ಇವತ್ತು ಆಗಿದ್ದಾಗಲಿ.. ಮಾತಾಡಿಸುವ.. ಅಂತ ಬೈಕನ್ನು ಸರಿಯಾಗಿ ನಿಲ್ಲಿಸಿ.. ಕೈಲಿದ್ದ ಬ್ಯಾಗು.. ಹೆಲ್ಮೆಟ್ಟು.. ಎಲ್ಲವನ್ನು ಬೈಕಿಗೆ ಸಿಗಿಸಿ.. ಮೊಬೈಲ್ ಜೋಬಿನಲ್ಲಿಟ್ಟುಕೊಂಡು... ಹಾರಾಡುತ್ತಿದ್ದ ತಲೆಗೂದಲನ್ನು   ಸರಿಪಡಿಸಿಕೊಂಡು... ಕನ್ನಡಕವನ್ನು ಸರಿ ಮಾಡಿಕೊಂಡು ರಸ್ತೆ ದಾಟಲು ಹೆಜ್ಜೆಹಾಕಿದೆ ..

ಆಕೆಯೂ ತನ್ನ ಸ್ಥಳದಿಂದ ರಸ್ತೆ ದಾಟಿ  ಬರಲು ಹೆಜ್ಜೆ ಹಾಕಲು ಶುರು ಮಾಡಿದಳು..

ಢಮಾರ್.. ದಬಕ್.. .. ಜನರೆಲ್ಲಾ ಕೂಗುತ್ತಾ ಓಡಿ ಬರುವ ಸದ್ದು ಕೇಳಿಸಿತು ..

ಮೊದಲ ಭಾಗ ಇಲ್ಲಿದೆ  ಎಡಗಣ್ಣಿನ ಹುಬ್ಬು 

ಬೆಳಗಿನ ಹೊತ್ತು ಪುಟ್ಟ ಜನಗಳ ಜಾತ್ರೆ ಆಗಿತ್ತು.. ನನ್ನ ಕಣ್ಣುಗಳು ಆ ಪುಟ್ಟಿಯನ್ನು ಹುಡುಕುತ್ತಿತ್ತು.. ಆಕೆ ತನ್ನ ಹಾರುತ್ತಿದ್ದ ತಲೆಗೂದಲನ್ನು ಸರಿ ಪಡಿಸಿಕೊಂಡು.. ತನ್ನ ಪುಸ್ತಕಗಳನ್ನ ಹೆಕ್ಕಿಕೊಳ್ಳುತ್ತಿದ್ದಳು.. ಸಮಾಧಾನವಾಯಿತು.. ಜನರ ಮಧ್ಯೆ ನುಗ್ಗಿದವನೇ.. ಏನಾಯಿತು ಎಂದು ನೋಡಿದೆ..

ಒಂದು ಬೈಕಿನಲ್ಲಿ ಮೂವರು ಹೋಗುತ್ತಿದ್ದದ್ದು.. ಮತ್ತು ಅಚಾನಕ್ ಬಲಗಡೆಯಿಂದ ತಮ್ಮ ಮುಂದಿದ್ದ ಆಟೋವನ್ನು ಹಿಂದಿಕ್ಕಲು ಹೋದಾಗ ಅಚಾನಕ್ ಅವರ ಎದುರಿಗೆ ಒಂದು ಟೆಂಪೋ ಟ್ರಾವೆಲ್ಲರ್ ತಿರುವಿನಲ್ಲಿ ತುಸು ಜೋರಾಗಿಯೇ ಬಂದಿತ್ತು.. ಅದನ್ನು ನಿವಾರಿಸಿಕೊಳ್ಳಲು ಬ್ರೇಕ್ ಹಾಕಿದಾಗ.. ಮಳೆಯ ನೀರು.. ಜಾರುತ್ತಿದ್ದ ನೆಲ.. ತಹಬದಿಗೆ ಸಿಗದೇ.. ಟೆಂಪೋ ಟ್ರಾವೆಲ್ಲರಿಗೆ ಡಿಕ್ಕಿ ಡಿಕ್ಕಿ ಹೊಡೆದೇಬಿಟ್ಟರು.. ಮುಂದೆ ಕೂತಿದ್ದವನ ಹೆಲ್ಮೆಟ್ ಹಾರಿ ವಾಹನದ ಗಾಜಿಗೆ ಬಡಿದು.. ಅವನಿಗೆ ಸ್ವಲ್ಪ ತರಚು ಗಾಯವಾಗಿತ್ತು.. ವಾಹನದ ಗಾಜು ಪುಡಿ ಪುಡಿಯಾಗಿತ್ತು..ಇನ್ನಿಬ್ಬರು .. ಒಬ್ಬರ ಮೇಲೆ ಒಬ್ಬರು ಬಿದ್ದು.. ಸ್ವಲ್ಪ ದೂರ ಉಜ್ಜಿಕೊಂಡು ಹೋಗಿದ್ದರು.. ಹತ್ತು ಹದಿನೈದು ಮಂದಿ ಅಲ್ಲಿ ನಿಂತಿದ್ದರೂ. ಮೊಬೈಲಿನಲ್ಲಿ ಫೋಟೋ ತೆಗೆಯುತ್ತಿದರೇ ವಿನಃ. ಸಹಾಯಕ್ಕೆ ಯಾರೂ ಧಾವಿಸಿರಲಿಲ್ಲ..

ನಾ ಬಿದ್ದಿದ್ದ ಬೈಕ್ ಎತ್ತಿ ಪಕ್ಕಕ್ಕೆ ಇಟ್ಟು . ಅಲ್ಲಿ ಬಿದ್ದಿದ್ದ ಬ್ಯಾಗು ಹೆಲ್ಮೆಟ್ಟು ಪಕ್ಕಕ್ಕೆ ಇಟ್ಟೆ .. ಅಷ್ಟರಲ್ಲಿ ಆ ಹುಡುಗಿ ತನ್ನ ಬ್ಯಾಗಿನಿಂದ ನೀರಿನ ಬಾಟಲು ತೆಗೆದು ಒಬ್ಬನಿಗೆ ಕೊಟ್ಟಳು.. ನಾ ಇಬ್ಬರೂ ಉಜ್ಜಿಕೊಂಡು ಹೋಗಿದ್ದರಲ್ಲ ಅವರನ್ನು ಇನ್ನಿಬ್ಬರ ಸಹಾಯದಿಂದ ಫುಟ್ಪಾತ್ ಪಕ್ಕಕ್ಕೆ ಕೂರಿಸಿದೆ..

ಒಬ್ಬನಿಗೆ ತೀವ್ರವಾಗಿ ಗಾಯವಾಗಿತ್ತು.. ಅವನ ಕೈಯಿಂದ ರಕ್ತ ಸುರಿಯುತ್ತಿತ್ತು.. ನೀರು ನೀರು ಎನ್ನುತ್ತಿದ್ದ.. ನಾ ಪುಟ್ಟಿ ಸ್ವಲ್ಪ ನೀರು ಕೊಡಿ ಪ್ಲೀಸ್ ಅಂದೇ.. ಅವಳು ಒಂದು ಕ್ಷಣ ಆಶ್ಚರ್ಯದಿಂದ ನೋಡಿ.. ಬಾಟಲ್ ಕೊಟ್ಟಳು.. ಅವನಿಗೆ ಕುಡಿಸಿ.. ಇನ್ನೊಬ್ಬನನ್ನು ಮಾತಾಡಿಸಿದೆ.. ಯಾರಿಗೂ ಪ್ರಾಣಹಾನಿಯಾಗುವ ಮಟ್ಟಿಗೆ ಪೆಟ್ಟಾಗಿರಲಿಲ್ಲ.. ಮಿಕ್ಕವರ ಸಹಾಯ ಹಸ್ತದಿಂದ ಮೂವರನ್ನು ಒಂದು ಆಟೋದಲ್ಲಿ ಹತ್ತಿರದಲ್ಲಿಯೇ ಇದ್ದ ಆಸ್ಪತ್ರೆಗೆ ಕರೆದುಕೊಂಡು ಹೋದೆವು..

ಲಗುಬಗೆಯಿಂದ.. ಆಸ್ಪತ್ರೆಯ ಒಳಗೆ ಓಡಿಹೋಗಿ.. ಸ್ಟ್ರೆಚರ್ ಜೊತೆ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆದು ತಂದಳು.. ಮೂವರು ಒಳಗೆ ಹೋದ ಮೇಲೆ.. ಅಲ್ಲಿದ್ದ ಸ್ವಾಗತ ಕಾರಿಣಿಗೆ ನೆಡೆದ ವಿಷಯ ಹೇಳಿ.. ಆ ಮೂವರು ಮಾತಾಡುವ ಸ್ಥಿತಿಯಲ್ಲಿ ಇದ್ದುದರಿಂದ.. ಅವರ ಮೊಬೈಲಿನಲ್ಲಿ ಮನೆಗೆ ಕರೆ ಮಾಡಿ ಹೇಳಿದ್ದರು..

ಟೆಂಪೋ ಟ್ರಾವೆಲಿನ ಚಾಲಕ.. "ಸರ್ ನನ್ನದೇನೂ ತಪ್ಪಿಲ್ಲ ಸರ್.. ಅವರ ಬೈಕ್ ಅಚಾನಕ್ ಬಲಗಡೆಯಿಂದ ನುಗ್ಗಿಬಂದರು.. ನಾ ತಕ್ಷಣ ಬ್ರೇಕ್ ಹಾಕಿಲ್ಲ ಅಂದಿದ್ದರೇ.. ಇನ್ನೂ ದೊಡ್ಡ ಮಟ್ಟದ ಅಪಘಾತವಾಗುತ್ತಿತ್ತು.. ಸರ್ ."

"ಇರಲಿ ಬಿಡಪ್ಪ ದೇವರು ದೊಡ್ಡವನು.. ಗಾಜಿನ ಪುಡಿ ನಿನಗೆ ಹಾರಿಲ್ಲ ತಾನೇ.. ಏನೂ ತೊಂದರೆ ಆಗಿಲ್ಲ ತಾನೇ?"

"ಇಲ್ಲ ಸರ್.. ಚಳಿ ಅಂತ ಮಫ್ಲರ್ ಕಟ್ಟಿಕೊಂಡಿದ್ದೆ. ಕನ್ನಡಕ ಹಾಕಿದ್ದೆ.. ನನ್ನ ಗಾಡಿಯಲ್ಲಿ ಯಾರೂ ಇರಲಿಲ್ಲ.. ದೇವರು ದೊಡ್ಡವನು ಸರ್.. ಇಷ್ಟರಲ್ಲಿ ಎಲ್ಲಾ ಮುಗಿಯಿತು. ಗಾಜೊಂದು ಹಾಕಿಸಬೇಕು.. ಮೊದಲು ಅವರು ಗುಣವಾಗಲಿ.. ಆಮೇಲೆ ಇನ್ಶೂರೆನ್ಸ್ ಜೊತೆ ಮಾತಾಡಿ ಹಾಕಿಸಬಹುದು.. ನನ್ನ ಯಜಮಾನರು ಅದೇ ಹೇಳಿದರು.. ಅವರ ಹತ್ತಿರ ಇನ್ಶೂರೆನ್ಸ್ ಡೀಟೇಲ್ಸ್ ತಗೊಂಡು.. ಹೊರಡು.. ಅಂತ.."

"ಸರೀ.. ಹೋಗಿ ಬನ್ನಿ ದೇವರು ಒಳ್ಳೆಯದನ್ನೇ ಮಾಡ್ತಾನೆ".

ನಮಸ್ಕಾರ ಹೊಡೆದು.. ಚಾಲಕ ಹೊರಟ.. ಸ್ವಾಗತ ಕಾರಿಣಿಗೆ ವಂದನೆ ಹೇಳಿ. . ನಾ ಹೊರಗೆ ಬಂದೆ..

"ಅಣ್ಣ ಅಣ್ಣ"  ಎಂದು ಕೂಗಿತು ಒಂದು ಕೋಗಿಲೆ ಧ್ವನಿ..

ಅಷ್ಟೊತ್ತು.. ಮರೆತೇ ಬಿಟ್ಟಿದ್ದೆ.. ಮತ್ತೆ ಮನದಲ್ಲಿ ಹಾಡತೊಡಗಿತು.. "ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ" 

"ಅಣ್ಣ.. ತುಂಬಾ ಥ್ಯಾಂಕ್ಸ್ ಅಣ್ಣ.... ಯಾರದು ತಪ್ಪು ಯಾರದು ಸರಿ ಅಂತ ಹೊಡೆದಾಡದೆ.. ಒಂದು ಪುಟ್ಟ ಅಪಘಾತ.. ಆದರೆ ಎಲ್ಲವೂ ತಿಳಿಯಾಗಿ ಬಗೆ ಹರಿಯಿತು.. ಆ ಮೂವರನ್ನು ಮಾತಾಡಿಸಿಬಂದೆ.. ಆರಾಮಾಗಿದ್ದಾರೆ.. ತೊಂದರೆ ಏನೂ ಇಲ್ಲ ಅಂತ ಡಾಕ್ಟರ್ ಹೇಳಿದರು.. ನೀವು ಮಾತಾಡಿಸುತ್ತಿದ್ದ ಆ ಚಾಲಕ ಕೂಡ ನನಗೆ ಗೊತ್ತಿದ್ದವನೇ.. ಆವ ಹೋಗುವಾಗ.. ಎಷ್ಟು ಚೆನ್ನಾಗಿ ಮಾತಾಡ್ತಾರೆ ಅಂತ ನಿಮ್ಮನ್ನು ಹೊಗಳಿ ಹೋದ.. ಅದು ಸರಿ.. ಒಂದು ಪ್ರಶ್ನೆ.. ಅಣ್ಣ"

"ಕೇಳಿ ಪುಟ್ಟಿ"

"ಅದೇನು ಅಚಾನಕ್ ಪುಟ್ಟಿ ಅಂತ ನನ್ನ ಕರೆದಿರಲ್ಲ... ಒಮ್ಮೆಲೇ ಆಶ್ಚರ್ಯ ಆಯಿತು.. ನನ್ನನ್ನು ಇದುವರೆಗೂ ಯಾರೂ ಪುಟ್ಟಿ ಅಂತ ಕರೆದಿಲ್ಲ.. ನೀವೇ ಫಸ್ಟ್ ಹಾಗೆ ಕರೆದದ್ದು.. "

"ಫ್ರೀ ಇದ್ದೀರಾ?.. ಫ್ರೀ ಇದ್ರೆ!.. ಹೋಟೆಲಿನಲ್ಲಿ ಕಾಫಿ ಕುಡಿದು.. ಮಾತಾಡಬಹುದು.. "

"ಕಾಲೇಜಿಗೆ ಹೋಗಬೇಕಿತ್ತು.. ಆದರೆ ಆ ಆಕ್ಸಿಡೆಂಟ್.. ಹೋಗಲಿ ಬಿಡಿ.. ಇವತ್ತು ನನಗೆ ಅಣ್ಣ ಸಿಕ್ಕಿದ ಖುಷಿಯಲ್ಲಿ ಕಾಲೇಜಿಗೆ ಚಕ್ಕರ್.. ನೆಡೆಯಿರಿ ಹೋಗೋಣ.. "

ಹತ್ತಿರದಲ್ಲಿಯೇ ಇದ್ದ ಹೋಟೆಲಿಗೆ ಹೋಗಿ ಇಬ್ಬರೂ ಕಾಫಿ ಕುಡಿಯುತ್ತಾ ನಾ ರಾಜಕುಮಾರ ಕಥೆ ಹೇಳಿದೆ.. ಮತ್ತು ಪುಟ್ಟಿ ಎನ್ನುವ ಪದ ಹುಟ್ಟಿದ ಘಟನೆ ಹೇಳಿದೆ..

ಫುಲ್ ಖುಷಿ ಆಗಿಬಿಟ್ಟಳು.. "ಬ್ರೋ ನನ್ನ ಹೆಸರು ಸುನೀತಾ.. ನಿಮ್ಮ ಹೆಸರು ಕೇಳಬಹುದೇ?"

"ನಾ ಶ್ರೀಕಾಂತ್ ಮಂಜುನಾಥ್"

"ಓಹ್ ಶ್ರೀ ಅಣ್ಣ.. ಇನ್ಮೇಲೆ ಶ್ರೀ ಬ್ರೋ ಅಂತೀನಿ" 

ನಾ ಜೋರಾಗಿ ನಗಲು ಶುರು ಮಾಡಿದೆ..

"ಯಾಕೆ ಬ್ರೋ.. ಚೆನ್ನಾಗಿಲ್ವ?"

"ಸೂಪರ್ ಇದೆ.. ನಿನ್ನನ್ನು ನೋಡಲು ಶುರು ಮಾಡಿದ್ದೆ ರಾಜಕುಮಾರ ಚಿತ್ರದ ನಾಯಕಿ ಇದ್ದ ಹಾಗೆ ಇದ್ದೀಯ ಮತ್ತೆ.. ನಿನ್ನ ಐ ಬ್ರೋ ಚೆನ್ನಾಗಿದೆ ಅಂತ.. ನೀನು ಬ್ರೋ ಅಂದಾಗ ಅದು ನೆನಪಿಗೆ ಬಂದು. .ಮನದಲ್ಲಿ ಹೇಳಿತು. ಸರಿಯಾಗಿದ್ದೀರಾ ಇಬ್ಬರೂ ಅಂತ ಅದಕ್ಕೆ ನಗು ಬಂತು.. "

ಕ್ಯಾಶ್ ಕೌಂಟರಿನಲ್ಲಿ ಹಾಕಿದ್ದ ರೇಡಿಯೋ "ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ" ಹಾಡು ಶುರುವಾಯಿತು.. ಇಬ್ಬರೂ ನಗುತ್ತಾ ಕೈಬೀಸಿ ಹೊರಟೆವು..

2 comments:

  1. ಸದಭಿರುಚಿಯ ಹಾಗು ಸದ್ವಿಚಾರದ ಲೇಖನಗಳು ಖುಶಿಯನ್ನು ಕೊಡುತ್ತವೆ. ಅದರ ಜೊತೆಗೆ, ಪ್ರಸ್ತುತ ಪಡಿಸುವ ನಿಮ್ಮ ಶೈಲಿ ಇದೆಯಲ್ಲ, ಬಂಗಾರಕ್ಕೆ ಕುಂದಣವನ್ನು ಕೂಡಿಸಿದಂತೆ; ಅದು ನನಗೆ ತುಂಬಾ ಇಷ್ಟವಾಗುತ್ತದೆ!

    ReplyDelete
    Replies
    1. ನಿಮ್ಮ ಪ್ರತಿಕ್ರಿಯೆಯೇ ಬಹುಮಾನ.. ಅದರಲ್ಲಿ ನಿಮ್ಮ ಬೆನ್ನುತಟ್ಟುವಿಕೆ ಸೋನೆಪೆ ಸುಹಾಗ್.. ಧನ್ಯವಾದಗಳು ಗುರುಗಳೇ

      Delete