Friday, November 18, 2016

ಕಣ್ಣಂಚಿನ ನೋಟ.....ಈ ಕಡೆ ದೃಶ್ಯ!

ಕಣ್ಣಂಚಿನ ನೋಟ - ಆ ಕಡೆ ದೃಶ್ಯ

ಕನ್ನಡಿ ಮುಂದೆ ನಿಂತ ವೀಣಾ, ತನ್ನ ಸಾಧಾರಣ ಎನ್ನಿಸುವ ರೂಪವನ್ನೊಮ್ಮೆ ನೋಡಿಕೊಂಡಳು. ತನ್ನ ನೀಳಕೇಶ ರಾಶಿಯನ್ನೊಮ್ಮೆ ಸರಿ ಮಾಡಿಕೊಂಡಳು, ನಿದ್ದೆ ಮಾಡಿ ಎದ್ದದ್ದರಿಂದ, ತಲೆಗೂದಲು ಗಾಳಿಗೆ ಸಿಕ್ಕ ಹುಲ್ಲುಗಾವಲಾಗಿತ್ತು. ಒಮ್ಮೆ ಹಾಗೆ ಕೈಯಲ್ಲಿಯೇ, ಮಕ್ಕಳು ಸ್ಲೇಟನ್ನು ತಮ್ಮ ಅಂಗೈಯಲ್ಲಿ ಮನಸ್ಸಿಗೆ ಬಂದಂತೆ ಒರೆಸುವಂತೆ, ಸರಿ ಮಾಡಿಕೊಂಡು ಮನೆಯ ಹತ್ತಿರವೇ ಇದ್ದ ಪಾರ್ಕ ಕಡೆಗೆ ಹೆಜ್ಜೆ ಇಟ್ಟಳು.

ಗೇಟ್ ಕಿರ್ರ್ ಎಂದು ಸದ್ದು ಮಾಡುತ್ತಾ ತೆರೆದುಕೊಂಡಿತು, ಗೇಟಿನ ಬಳಿಯೇ ಮಲಗಿದ್ದ ಬೀದಿ ನಾಯಿ ಒಮ್ಮೆ ಹಾಗೆ ವೀಣಾಳನ್ನು ನೋಡಿ ಹಲ್ಲು ಕಿಸಿದು ಬಾಲ ಅಲ್ಲಾಡಿಸಿತು. ಕೈಯಲ್ಲಿದ್ದ ಬಿಸ್ಕತ್ತನ್ನು ನಾಯಿಗೆ ಹಾಕಿ, ಒಮ್ಮೆ ತಲೆ ಸವರಿ ಹೊರಟಳು. ಎದುರು ಮನೆಯ ಆಂಟಿ, "ವೀಣಾ ಯಾಕೆ ಇವತ್ತು ಸ್ವಲ್ಪ ಲೇಟ್.."

"ಹೌದು ಆಂಟಿ ನಿನ್ನೆ ಬಂಗಾರದ ಮನುಷ್ಯ ಚಿತ್ರ ನೋಡ್ತಾ ಇದ್ದೆ,  ಎದ್ದಿದ್ದು ಲೇಟ್ ಆಯಿತು", ಆಂಟಿ ನಕ್ಕರು.

"ಒಂದೆರಡು ರೌಂಡ್ ಕಡಿಮೆ ಮಾಡಿದರೆ ಆಯ್ತು.. ಕೆಲಸಕ್ಕೆ ಹೋಗೋಕೆ ಸಮಯ ಅಡ್ಜಸ್ಟ್ ಆಗುತ್ತೆ ಅಲ್ವೇ ಆಂಟಿ"

"ವೀಣಾ.. ನೀನು ಉಪೇಂದ್ರಿ.... "

ಇಬ್ಬರೂ ಜೋರಾಗಿ ನಕ್ಕರು..

ಆಂಟಿ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದರು. ಇವಳಿಗೆ ಆತುರ, ಕಾತುರ, ತಳಮಳ.. ಆದರೆ ಆಂಟಿಗೆ ವಯಸ್ಸಾದ ಕಾರಣ, ಬೇಗನೆ ಹೆಜ್ಜೆ ಹಾಕಲು ಸಾಧ್ಯವಿರಲಿಲ್ಲ.

ಪಾರ್ಕಿಗೆ ಬಂದ ಕೂಡಲೇ, ಯಥಾಪ್ರಕಾರ, ಮೊದಲನೇ ಸುತ್ತು ಮಾತ್ರ ಇಬ್ಬರೂ ಜೊತೆಯಲ್ಲಿ ಸುತ್ತಿದರು, ನಂತರ, ಬೆಂಗಳೂರಿನ ಆಟೋ ತರಹ ವೇಗ ಪಡೆದುಕೊಂಡಳು ವೀಣಾ.  ಎರಡು ಕೈಯನ್ನು ಬೀಸುತ್ತಾ, ನೆಲ ನೋಡಿಕೊಂಡು ತನ್ನ ಪಾಡಿಗೆ ಹೆಜ್ಜೆ ಹಾಕತೊಡಗಿದಳು. ಮನಸ್ಸಲ್ಲಿ ಒಂದು ರೀತಿಯ ತಳಮಳ.. ಮನಸ್ಸು ಅರಿಯದೆ ಹಿಂದಿನ ದಿನದ ಸಂಜೆಗೆ ಓಡಿತು.

ಮರಗಿಡಗಳ ಮಧ್ಯೆ ತೂರಿ ಬರುತ್ತಿದ್ದ ಚಂದಿರನ ಬೆಳದಿಂಗಳು.. ಹಣ್ಣಿನ ಅಂಗಡಿ ಮುಂದೆ ಜನ. ಅದರ ಪಕ್ಕದಲ್ಲಿಯೇ ಇದ್ದ ಏಟಿಎಂ ಮುಂದೆ ನೂರಾರು ಮಂದಿ (ಕಾರಣ ಹೇಳಬೇಕಿಲ್ಲ ಅಲ್ಲವೇ.. ಎಲ್ಲರಿಗೂ ಗರಿ ಗರಿ ೨೦೦೦ ನೋಟನ್ನು ನೋಡುವ, ಮುಟ್ಟುವ ತವಕ.. ಖರ್ಚು ಮಾಡೋಕೆ ಅಲ್ಲ.. ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ಇತ್ತೀಚಿಗಷ್ಟೇ ಬೀಸುತ್ತಿರುವ ಒಂದು ಬದಲಾವಣೆಯ ಗಾಳಿಗೆ ಮೈಯೊಡ್ಡುವ ತವಕ...!), ಅವರು ನಿಲ್ಲಿಸಿದ್ದ ಗಾಡಿಗಳು, ಮಕ್ಕಳು ಆಟದ ಸಾಮಾನುಗಳನ್ನು ಎಲ್ಲೆಂದರಲ್ಲಿ ಬಿಸಾಕಿದ ರೀತಿ ಇತ್ತು..!

ಅಚಾನಕ್, ಒಂದು ಚಹರೆ ತನ್ನನ್ನು ಹಾದು ಹೋದಂತೆ ಅನುಭವ.  ಅರೆ ಅರೆ.. ಉಫ್.. ಓಹ್.. ಛೆ.. ಅನ್ನುವಷ್ಟರಲ್ಲಿ ಹಾಗೆ ಮುಂದಕ್ಕೆ ಹೋದರೆ, ಆಗಲೇ ಆ ವ್ಯಕ್ತಿ ಅಲ್ಲಿಯೇ ಅಡ್ಡ ಬಂದ ಗಾಡಿಯವನಿಗೆ ಸಾರಿ ಹೇಳುತ್ತಾ ನಿಂತಿದ್ದ. . ವೀಣಾ ಗಾಡಿಯನ್ನು ತೆಗೆಯುವಾಗ, ಪಕ್ಕದ ಗಾಡಿಗೆ ತಗುಲಿ, ಅದರ ಒಡತಿ ಆ ಮಂದ ಬೆಳಕಲ್ಲೂ ಕಣ್ಣನ್ನು ಕೆಂಪಗೆ ಮಾಡಿಕೊಂಡದ್ದು ಕಂಡು ಬಂತು. ಆಕೆಗೆ ಸಾರಿ ಹೇಳಿ, ಗಾಡಿ ತೆಗೆದುಕೊಂಡು ಹೊರಟ ವೀಣಾಳಿಗೆ ಮನದಲ್ಲಿಯೇ ಸಾಗರ ತರಂಗಗಳು. ಒಮ್ಮೆ ತಿರುಗಿ ನೋಡಿದಳು.. ಅದೇ ಚಹರೆ.. ಅನುಮಾನವೇ ಇಲ್ಲ.. ಮೊಗದಲ್ಲಿ ಮಂದಹಾಸ ಹಾಗೆ ಬಂದು ಹೋಯಿತು..

ನಿಲ್ಲಿಸಲೇ, ಬೇಡವೇ.. ಮಾತಾಡಲೇ, ಏನು ಅಂದುಕೊಳ್ಳುತ್ತಾರೋ ಏನೋ.. ಈ ತುಮುಲಗಳಲ್ಲಿಯೇ ಇದ್ದ ವೀಣಾ ಹಾಗೆ ಮುಂದಕ್ಕೆ ಬಂದುಬಿಟ್ಟಿದ್ದಳು. ಹಾಗೆ ತುಸು ತಿರುಗಿನೋಡಿದಳು..  ಆ ಚಂದ್ರನನ್ನು ನೋಡುತ್ತಾ.. ಏನೋ ಯೋಚನೆಯಲ್ಲಿಯೇ ನೆಡೆದುಹೋಗುತ್ತಿದ್ದ ವ್ಯಕ್ತಿಯ ಮೊಗವನ್ನು ನೋಡಿ.. ಇವನು ಆ ವ್ಯಕ್ತಿಯೇ ಎಂದು ಧೃಡ ಪಡಿಸಿಕೊಂಡಳು.

"ಹೇ ವೀಣಾ ಇದೇನೇ ಇವತ್ತು ಇಷ್ಟೊಂದು ಸುತ್ತು ಹೊಡಿತಿದ್ದೀಯಾ.. ಬರೋಲ್ವಾ ಮನೆಗೆ.. ನಿನ್ನ ಕ್ಯಾಬ್ ಬೇಗ ಬರುತ್ತೆ ಅಲ್ವಾ"

ಆ ವ್ಯಕ್ತಿಯ ಯೋಚನೆಯಲ್ಲಿಯೇ ಇದ್ದ ವೀಣಾಳಿಗೆ.. ಹಿಂದಿನ ದಿನದಿಂದ ಇಂದಿನ ದಿನದ ಬೆಳಿಗ್ಗೆಗೆ ಜರ್ ಅಂತ ಇಳಿದು ಬಂದಳು.

ಆಫೀಸ್ ಕ್ಯಾಬ್ ಹತ್ತಿದಾಗ.. ಕನ್ನಡ ಪ್ರೇಮಿ ಡ್ರೈವರ್ ಹಾಕಿದ್ದ ೯೨.೭ ಎಫ್ ಎಂ ನಲ್ಲಿ "ಈ ಹೃದಯ ಹಾಡಿದೆ ಆಸೆಗಳ ತಾಳದೆ ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ" ಆ ಹಾಡನ್ನು ಕೇಳುತ್ತಾ ಹಾಗೆ ಒಂದು ವರ್ಷದ ಹಿಂದಕ್ಕೆ ಓಡಿತು ಅವಳ ಮನಸ್ಸು.

ದಿನವೂ, ೨೫ ಕಿಮಿ ದೂರದ ಆಫೀಸ್ ಹೋಗಬೇಕಿತ್ತು... ಹೊತ್ತು ಗೊತ್ತಿಲ್ಲದೇ ಆಫೀಸ್ ಕೆಲಸ, ಊಟ, ತಿಂಡಿ ಸರಿಯಾದ ಸಮಯಕ್ಕೆ ತಿನ್ನದೇ, ಬೊಂಡ ಬಜ್ಜಿ ಅದು ಇದು ಅಂತ ತಿಂದು, ಸ್ವಲ್ಪ ಮಟ್ಟಿಗೆ ದೇಹದ ತೂಕ ಏರಿತ್ತು. ಆಫೀಸಿನಲ್ಲಿ ವೈದ್ಯರನ್ನು ಕಂಡು ಕೇಳಿದಾಗ, ಬೆಳಿಗ್ಗೆ ೨೦-೨೫ ನಿಮಿಷ ವಾಕಿಂಗ್ ಮಾಡಿ ಅಂತ ಹೇಳಿದ್ದರು. ಮನೆಯ ಹತ್ತಿರ ಇದ್ದ ಪಾರ್ಕಿಗೆ, ಜನುಮೇಪಿ ಹೋಗದ ವೀಣಾಳಿಗೆ, ಹೋಗಲೇಬೇಕಾದ ಅನಿವಾರ್ಯತೆ.. ಇಲ್ಲದೆ ಹೋದರೆ, ಇಷ್ಟ ಪಟ್ಟು ಕೊಂಡುಕೊಂಡ ಬಟ್ಟೆಗಳೆಲ್ಲ ಮುಷ್ಕರ ಹೂಡಲು ಸಿದ್ಧವಾಗಿದ್ದವು.

ರೈಲು ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ಬರುವಂತೆ, ಒಂದು ಸಮಯ ನಿಗದಿ ಪಡಿಸಿಕೊಂಡು, ಪ್ರತಿದಿನವೂ ಪಾರ್ಕಿಗೆ ವಾಕಿಂಗ್ ಹೋಗೋಕೆ ಶುರುಮಾಡಿದಳು. ಎದುರು ಮನೆಯ ಆಂಟಿ ಕೂಡ ಇವಳಿಗೆ ಜೊತೆಯಾದರು. ಹೀಗೆ ಸಾಗಿತ್ತು ದಿನಚರಿ. ಇಪ್ಪತ್ತು ನಿಮಿಷ ವಾಕಿಂಗ್, ತದನಂತರ, ಆಫೀಸಿಗೆ ಸಿದ್ಧವಾದರೆ ಸಾಕು, ಅದು ಹೇಗೋ ಸಂಜೆಯ ತನಕ ಸಮಯ ಓಡುವುದೇ ಅರಿವಾಗುತ್ತಿರಲಿಲ್ಲ.

ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ ಆಂಟಿಗೆ, "ಆಂಟಿ ನೀವು ಬರುತ್ತಿರಿ, ನಾನು ಸುತ್ತು ಜಾಸ್ತಿ ಹಾಕುತ್ತೇನೆ ಎಂದಳು"

"ಆಹಾ ಸುಂದರಿ ಕಣೆ ನೀನು.. ಸರಿ ಈ ಮುದುಕಿ ಜೊತೆಯಲ್ಲಿ ನಿಧಾನಕ್ಕೆ ಹೆಜ್ಜೆ ಹಾಕೋಕೆ ನಿನಗೆಲ್ಲಿ ಆಗುತ್ತೆ.. ಸರಿ ಹಾಗೆ ಮಾಡು"

ವೀಣಾ.. ಬಿಲ್ಲಿನಿಂದ ಬಿಟ್ಟ ಬಾಣದ ತರಹ.. ತಲೆ ತಗ್ಗಿಸಿಕೊಂಡು ಭರ ಭರ ಹೆಜ್ಜೆ ಹಾಕೋಕೆ ಶುರುಮಾಡಿದಳು.. ಪೇಪರ್ ಹಂಚುವ ಹುಡುಗನ ಸೈಕಲ್ ಕಿರ್ ಕಿರ್ ಎಂದು ಬ್ರೇಕ್ ಹಾಕುವುದ ಕೇಳಿ.. ಆ ಕಡೆ ಕಣ್ಣಾಯಿಸಿದಳು.. ತುಸುಗಪ್ಪು ಬಣ್ಣ, ಆಕರ್ಷಕ ಅನ್ನಿಸದೆ ಇದ್ದರೂ, ಒಮ್ಮೆ ನೋಡಿದರೆ.. ಇರಲಿ ಇನ್ನೊಮ್ಮೆ ನೋಡಬಹುದು ಎನ್ನಿಸುವಂತಹ ಮುಖಚರ್ಯೆ, ಬೆರಳಲ್ಲಿ ಏನೋ ಎಣಿಸುತ್ತಾ ಹೆಜ್ಜೆ ಹಾಕುವುದು ಕಾಣಿಸಿತು. ಬೆನ್ನಿಗೆ ಆಫೀಸ್ ಬ್ಯಾಗ್, ಕೈಯಲ್ಲಿ ಊಟದ ಡಬ್ಬಿ ಹಿಡಿದು ಸಾಗುತ್ತಿದ್ದ.. ಬೇಡ ಎಂದರೂ ಆ ಕಣ್ಣುಗಳು ಕೆಲ ಕ್ಷಣ ಅವನನ್ನೇ ಹಿಂಬಾಲಿಸಿತು. ಆ ರಸ್ತೆಯ ತಿರುವಿನ ತನಕ ಹೋಗಿ ಮರೆಯಾದ.. ಅಂದು ಏನೂ ವಿಶೇಷ ಎನ್ನಿಸಲಿಲ್ಲ..

ಮಾರನೇ ದಿನ, ಸರಿ ಸುಮಾರು ಅದೇ ಸಮಯ.. ಮತ್ತೆ ಪುನಾವಾರವರ್ತನೆ... ಹೀಗೆ ಸಾಗಿತ್ತು ಅನೇಕ ದಿನಗಳು, ವಾರಗಳು, ತಿಂಗಳುಗಳು..

ಪಾರ್ಕಿಗೆ ಬರುವುದು, ಇವನನ್ನು ನೋಡಲೇ ಎನ್ನುವಂತಾಗಿತ್ತು ಅವಳ ಮನಸ್ಸಿಗೆ, ಆದರೂ, ವೀಣಾ ಬರಿ ತನ್ನ ಕಾಯಕ ಮುಂದುವರೆಸುತ್ತಿದ್ದಳು, ಆದರೆ ದಿನ ದಿನಕ್ಕೆ ಅವನ ಬಗ್ಗೆ ಅವಳಿಗೆ ಆಕರ್ಷಣೆ ಹೆಚ್ಚಾಯಿತು. ಶಿಸ್ತುಬದ್ಧವಾಗಿ ಅಲಂಕರಿಸಿಕೊಂಡು, ತನ್ನ ಬಣ್ಣಕ್ಕೆ ಒಪ್ಪುವ ಅವನ ವೇಷಭೂಷಣ, ಮೊಗದಲ್ಲಿ ಯಾವಾಗಲೂ ಮಂದಹಾಸ, ಬೆಳಗಿನ ತಣ್ಣನೆ ಗಾಳಿಗೆ ರೇಷ್ಮೆಯಂತಹ ಅವನ ತಲೆಗೂದಲು ಹಾರಾಡುವಾಗ ಅವನು ರಜನಿಕಾಂತ್ ತರಹ ತಲೆಗೂದಲನ್ನು ಸರಿಪಡಿಸಿಕೊಂಡು ಹೋಗುವ ರೀತಿ, ಸುತ್ತಮುತ್ತಲೂ ನೋಡಿಕೊಂಡೆ ಹೋಗುವ ಅವನ ಸಿಂಹಾವಲೋಕನಾದ ನಡಿಗೆ, ಆಕರ್ಷಕ ಎನ್ನಿಸುವ ಕಂದು ಬಣ್ಣದ ಕಣ್ಣುಗಳು.. ಒಂದು ರೀತಿಯಲ್ಲಿ ವೀಣಾಳ ಮನಸ್ಸಿನೊಳಗೆ ಕೂತಿದ್ದ.

ಯಾವುದೇ ಮೋಹಪಾಶ ಸೆಳೆಯುತ್ತಲಿರಲಿಲ್ಲ, ಆದರೆ ಈ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಏನೋ ಅಯಸ್ಕಾಂತ ಇದೆ ಎನ್ನಿಸುತ್ತಿತ್ತು ವೀಣಾಳಿಗೆ.  ದಿನವೂ ಅವನೂ ಕೂಡ ಓರೇ ಗಣ್ಣಿನಲ್ಲಿ ನೋಡುವುದು ಅರಿವಾಗುತ್ತಿತ್ತು. ಕೆಲವೊಮ್ಮೆ, ತಾನು ಪಾರ್ಕಿಗೆ ಹೋಗುವುದು ತಡವಾದರೆ, ಅವನು ಹಾದು ಹೋಗುವಾಗ, ಅಲ್ಲಿ ಓಡಾಡುವ ಜನರ ಮಧ್ಯೆ ನನ್ನನ್ನು ಹುಡುಕುವ ಅವನ ಕಣ್ಣುಗಳು ಇಷ್ಟವಾಗುತ್ತಿತ್ತು, ಎಷ್ಟೋ ದಿನ, ಎದುರಿಗೆ ಸಿಕ್ಕ ಉದಾಹರಣೆಗಳು ಇದ್ದವು, ಆಗ ಆತ ನನ್ನ ಮೊಗವನ್ನು ದಿಟ್ಟಿಸಿ ನೋಡದೆ, ಒಮ್ಮೆ ಒಂದು ಝಲಕ್ ಕೊಟ್ಟು, ಮತ್ತೆ ಆಗಸ ನೋಡುತ್ತಾ ಸಾಗುವುದ ನೋಡಿ, ಅವನ ಬಗ್ಗೆ ಗೌರವ ಭಾವ ಹೆಚ್ಚಾಗಲು ಶುರುವಾಗಿತ್ತು.

ಗೆಳೆಯ ಅಂದರೆ ಇವನ ರೀತಿ ಇರಬೇಕು ಅನ್ನಿಸುವ ರೀತಿಯಲ್ಲಿ, ಹೇಳಿ ಮಾಡಿಸಿದಂತಹ ವ್ಯಕ್ತಿ ಎಂದು ಯಾಕೋ ಅವಳ ಮನಸ್ಸಿಗೆ ಪದೇ ಪದೇ ಅನ್ನಿಸುತ್ತಿತ್ತು. ಒಮ್ಮೆಯಾದರೂ ಮಾತಾಡಿಲ್ಲ, ಬರಿ ನೋಟ ನೋಟ ನೋಟ ಅಷ್ಟೇ. ಆದರೆ ದಿನ ಕಾಣುವ ಹುಡುಗಿಯನ್ನು ಕೆಟ್ಟ ನೋಟದಲ್ಲಿ ನೋಡದ ಅವನ ವ್ಯಕ್ತಿತ್ವ ಇಷ್ಟವಾಗತೊಡಗಿತ್ತು. ಅವನನ್ನು ಕಾಣದ ದಿನ ಸೂರ್ಯನನ್ನು ಕಾಣದ ಕಮಲದಂತೆ ಆಗುತ್ತದೆ ಎನ್ನುವ ಒಂದು ಭಾವ ವೀಣಾಳ ಮನದೊಳಗೆ ಕಾಲಿಡುತ್ತಲೇ ಇತ್ತು. 

ಸಂಜೆ ಆಫೀಸ್ ಹತ್ತಿರ ಕ್ಯಾಬಿಗೆ ಕಾಯುತ್ತಾ ನಿಂತಿದ್ದಾಗ, ಮೊಬೈಲ್ ಹೊಡೆದುಕೊಂಡಿತು, ಮೊಗದಲ್ಲಿ ಹಾಗೆ ಮಂದಹಾಸ.. ತನ್ನ ಭಾವಿ ಪತಿರಾಯ.. !

"ವೀಣಾ.. ಇಲ್ಲಿ ಇದ್ದೀನಿ.. ಬಾ ಇವತ್ತು ಸುತ್ತಾಡಿ ಬರೋಣ.. ನಿಮ್ಮ ಮನೆಗೆ ಫೋನ್ ಮಾಡಿ ಹೇಳಿದ್ದೀನಿ.. ಸ್ವಲ್ಪ ಹೊತ್ತಾಗುತ್ತೆ ಅಂತ"

ಮನಸ್ಸು ಹಕ್ಕಿಯ ಹಾಗೆ ಹಾರಾಡಿತು...ಆಕಾಶ ನೀಲಿ ಬಣ್ಣದ ಅವಳ ಚೂಡಿದಾರ್, ಪೂರ್ತಿ ಇಳಿಬಿಟ್ಟಿದ್ದ ನೀಳ ತಲೆಗೂದಲು ಸಂಜೆಯ ಗಾಳಿಗೆ ಹಾರಾಡುತ್ತಿತ್ತು. ಅಲ್ಲಿಯೇ ನಿಂತಿದ್ದ ಬೈಕಿನ ಕನ್ನಡಿಯಲ್ಲಿ ಒಮ್ಮೆ ತನ್ನನ್ನೇ ನೋಡಿಕೊಂಡಳು. ಹಣೆಗೆ ಇಟ್ಟಿದ್ದ ಬೊಟ್ಟು, ಆಫೀಸಿನಲ್ಲಿ ತನ್ನ ಗೆಳತಿ ಕೊಟ್ಟ ಗಣಪನ ಪ್ರಸಾದದ ಕುಂಕುಮವನ್ನು ಆ ಬೊಟ್ಟಿನ ಕೆಳಗೆ ಇಟ್ಟುಕೊಂಡಿದ್ದರಿಂದ, ಅವಳ ಮೊಗದ ಚೆಲುವು ಇನ್ನಷ್ಟು ಹೆಚ್ಚಿತ್ತು, ಕಣ್ಣಿಗೆ ಹಚ್ಚಿದ್ದ ಕಾಡಿಗೆ ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ತನ್ನ ಭಾವಿ ಪತಿರಾಯ ಯಾವಾಗಲೂ ಹೇಳುತ್ತಿದ್ದ "ವೀಣಾ.. ನಿನ್ನ ಕಣ್ಣುಗಳು ಮತ್ತು ನಿನ್ನ ಮೂಗುತಿ ಹೊತ್ತ ನಾಸಿಕ ತುಂಬಾ ಕಾಡುತ್ತದೆ ಕಣೆ.. ಬ್ರಹ್ಮ ನನಗಾಗಿಯೇ ಪುರುಸೊತ್ತಾಗಿ ಸೃಷ್ಟಿ ಮಾಡಿದ ರತ್ನಮಣಿ ಕಣೆ ನೀನು"
ಚಿತ್ರ ಕೃಪೆ : ಗೂಗಲ್ ಕಣ್ಣಿಂದ ನೋಡಿದ್ದು 

ಈ ಮಾತನ್ನು ಕಳೆದ ಆರು ತಿಂಗಳಿಂದ ಹೇಳುತ್ತಲೇ ಇದ್ದ. ಅವಳಿಗೂ ಕೂಡ ಈ ಮಾತನ್ನು ಕೇಳುವುದು ಎಂದರೆ ಖುಷಿಯೋ ಖುಷಿ.. ಒಮ್ಮೆ ತಲೆಗೂದಲನ್ನು ಸರಿ ಪಡಿಸಿಕೊಂಡು, ಭಾವಿ ಪತಿರಾಯನ ಬೈಕ್ ಏರಿದಳು.

ಶಾಪಿಂಗ್ ಎಲ್ಲಾ ಮುಗಿದು, ಹೋಟೆಲಿನಲ್ಲಿ ಊಟ ಮಾಡುತ್ತಾ ಕೂತಿದ್ದಾಗ.. ವೀಣಾ ಹಿಂದಿನ ದಿನದ ಘಟನೆ ಬಗ್ಗೆ ಹೇಳಿದಳು..ಇಬ್ಬರೂ ಕೂಡ ಒಬ್ಬರಿಗಾಗಿಯೇ ಒಬ್ಬರು ಹುಟ್ಟಿದ್ದಾರೆ ಎನ್ನುವಂತಹ ಜೋಡಿ, ಅಸೂಯೆ, ಅನುಮಾನ ಎನ್ನುವ ಪದದ ಅರ್ಥ ಏನು ಎನ್ನುವಂತಹ ನಂಬಿಕೆ ಇಬ್ಬರಲ್ಲೂ ಇತ್ತು. ಎಲ್ಲಾ ವಿಷಯವನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದರು, ಗುಟ್ಟು, ರಹಸ್ಯ ಎನ್ನುವ ಪದಗಳು ಇಬ್ಬರಿಗೂ ಗೊತ್ತಿರಲಿಲ್ಲ.

"ವೀಣಾ.. ನನಗೆ ಅರ್ಥವಾಗುತ್ತೆ ನಿನ್ನ ತಳಮಳ.. ನೀನು ನಿನ್ನ ಬದಲಾದ ಆಫೀಸ್ ವಿಳಾಸದಿಂದ ನಿನ್ನ ಆಫೀಸ್ ಸಮಯವೂ ಬದಲಾಗಿದೆ, ಅದಕ್ಕಾಗಿ ನಿನ್ನ ವಾಕಿಂಗ್ ಸಮಯ ಕೂಡ ಬದಲಾಗಿದೆ.. ನೀನು ಅವನನ್ನು ನೋಡಲಾಗುತ್ತಿಲ್ಲ.. ಜೊತೆಯಲ್ಲಿ ನಿನ್ನೆ ನೀನು ಸ್ವಲ್ಪ ಯೋಚಿಸಿದ್ದರೆ, ಇದುವರೆಗೂ ಮಾತಾಡದೆ ಬೆಳೆದು ನಿಂತಿರುವ ನಿಮ್ಮ ನಿರ್ಮಲ ಸ್ನೇಹಕ್ಕೆ ಒಂದು ಅದ್ಭುತ ಆರಂಭ ಸಿಗುತ್ತಿತ್ತು. ಇರಲಿ ಯೋಚಿಸಬೇಡ..ಅವನ ಮೊಗವನ್ನು ನೀ ಗುರುತಿಸಬಲ್ಲೆ, ಅವನ ಹೆಸರು ತಿಳಿದುಕೊಂಡರೆ, ಫೇಸ್ಬುಕ್ ನಲ್ಲಿ ಹೇಗಾದರೂ ಹುಡುಕಬಹುದು.. ಮತ್ತೆ ಇನ್ನೊಂದು ಉಪಾಯ.. ಒಂದೆರಡು ದಿನ ಮನೆಯಿಂದಲೇ ಕೆಲಸ ಮಾಡುತ್ತೇನೆ ಎಂದು ನಿನ್ನ ಮ್ಯಾನೇಜರ್ ಗೆ ಹೇಳಿ, ನಿನ್ನ ಮೊದಲ ಸಮಯಕ್ಕೆ ವಾಕಿಂಗಿಗೆ ಹೋಗು.. ಆಗ ಅವನು ಸಿಕ್ಕಿದರೇ , ಸ್ವಲ್ಪ ಧೈರ್ಯ ಮಾಡಿ ನೀನೇ ಮಾತಾಡು.. ಮನಸ್ಸಿಗೆ ಗೊಂದಲ ಕಡಿಮೆಯಾಗುತ್ತದೆ.."

ವೀಣಾಳ ಕಣ್ಣಲ್ಲಿ ಹೊಳಪು.. ತನ್ನ ಭಾವಿ ಪತಿರಾಯನ ಬಗ್ಗೆ ಶಭಾಷ್ ಎನ್ನಿಸಿತು...

"ರೇವಂತ್.. ಎಂತಹ ಅದ್ಭುತ ಗೆಳೆಯ ನೀನು.. ನಿನ್ನ ಪಡೆದ ನಾನೇ ಧನ್ಯ.. ಸಾಮಾನ್ಯ ಈ ರೀತಿಯ ಸನ್ನಿವೇಷ ಎದುರಾದಾಗ.. "

ಇನ್ನೂ ವೀಣಾ ಮಾತನ್ನು ಮುಗಿಸಿರಲಿಲ್ಲ.. "ನೋಡು ಬಂಗಾರಿ ನಿನ್ನ ಮನಸ್ಸು ನನಗೆ ಗೊತ್ತು.. ನಿನ್ನ ಬಗ್ಗೆ ನನಗೆ ಗೊತ್ತು..ಸ್ನೇಹ ಎಂದರೆ ಹಾತೊರೆಯುವ ಮನಸ್ಸು ನಿನ್ನದು.. ನಿನ್ನ ಬಾಳಸಂಗಾತಿಯಾಗಿ ಪಡೆದ ನಾನೇ ಧನ್ಯ.. ಇಂತಹ ಅದ್ಭುತ ಗೆಳತಿಯ ಬಗ್ಗೆ ಅನುಮಾನ ಯಾಕೆ ಪಡಬೇಕು.. ನೀನು ಪ್ರತಿಯೊಂದನ್ನು ನನ್ನ ಬಳಿ ಹೇಳುವುದೇ ತಿಳಿಸುತ್ತೆ ನಿನ್ನ ಮನಸ್ಸು ತಿಳಿಯಾದ ಮಾನಸ ಸರೋವರ ಎಂದು.. ಯೋಚಿಸಬೇಡ ಬಂಗಾರಿ.. ಆ ವ್ಯಕ್ತಿಯ ಬಗ್ಗೆ ವಿಷಯ ತಿಳಿದರೆ... ಹೇಳು..ಒಮ್ಮೆ ಹೋಟೆಲಿನಲ್ಲಿ ಊಟ ಮಾಡೋಣ.. ನಿನ್ನ ಗೆಳೆಯ ನಮ್ಮ ಗೆಳೆಯ.. "

ಹೋಟೆಲಿನಲ್ಲಿ ಕೂತಿದ್ದರೂ, ಎಂದೂ ಭಾವೋದ್ವೇಗಕ್ಕೆ ಒಳಗಾಗದ ವೀಣಾ.. ಎದುರು ಕೂತಿದ್ದ ಭಾವಿ ಪತಿ ದೈವನ ಕೈಯನ್ನು ತನ್ನ ಎದೆಗೆ ಆನಿಸಿಕೊಂಡು "ರೇವಂತ್.. ಮೈ ಲವ್.. ಐ ಲವ್ ಯು ಕಣೋ"

ಪಕ್ಕದ ಟೇಬಲಿನಲ್ಲಿ ಕೂತಿದ್ದ ಇಳಿ ವಯಸ್ಸಿನ ದಂಪತಿಯೊಬ್ಬರ ಮೊಬೈಲಿಗೆ ಕರೆ ಬಂತು ಕಾಲರ್ ಟ್ಯೂನ್
"ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ"

ಆದಷ್ಟು ಬೇಗ ಆ ವ್ಯಕ್ತಿಯನ್ನು ಮಾತಾಡಿಸಲೇ ಬೇಕು.. ಎಂದು ನಿರ್ಧರಿಸಿ ತನ್ನ ಮ್ಯಾನೇಜರ್ ಗೆ ಸಂದೇಶ ಕಳಿಸಿದಳು
"ಡಿಯರ್ ಕಾರ್ತಿಕ್
ಐ ವಿಲ್ ಬಿ ವರ್ಕಿಂಗ್ ಫ್ರಮ್ ಹೋಂ ಟುಮಾರೋ ಅಂಡ್ ಡೇ ಆಫ್ಟರ್ ಟುಮಾರೋ ...
ದಿಸ್ ಐಸ್ ಫಾರ್ ಯುವರ್ ಇನ್ಫರ್ಮೇಷನ್..
ವೀಣಾ"

12 comments:

 1. ಕೆಲವು ಕಥೆಗಳ ಮಾಯೆ ಹಾಗೆ. ಮೊದಲ ಭಾಗ ಓದಿದಾಗ.. ವಾಹ್ ಸುಪರ್ಬ್ ಕರೆಕ್ಟ್ ಜಾಗದಲ್ಲಿ ನಿಲ್ಸಿದ್ದೀರಿ ಅಂತ ಅನ್ನಿಸ್ತು. ಎರಡನೇ ಭಾಗ ಓದಿದಾಗ ತಕ್ಷಣ.. ಅರೆ ಇದು ಬಂದಿದ್ದೆ ಕಥೆ ಇನ್ನೂ ಸೂಪರ್ ಆಗಿದೆ ಅನ್ನಿಸ್ತಾ ಇದೆ, ಪಾತ್ರಗಳ ವಿವರಣೆ, ಅವರ ಭಾವನೆ ಮನ ಮುಟ್ಟುತ್ತದೆ. ತುಂಬಾ ಇಷ್ಟಾ ಆಯಿತು.. ಮುಂದಿನ ಭಾಗಕ್ಕೆ ಬಹಳ ಬಹಳ ಬಹಳ ಕಾತುರದಿಂದ ಕಾಯ್ತಾ ಇದ್ದೀನಿ.

  ReplyDelete
  Replies
  1. ​​
   ವೀಣಾಳ ಪಾತ್ರ ಬರೆಸಿಕೊಂಡು ಹೋಯಿತು. ಎರಡನೇ ಭಾಗ ಬರೆಯುವ ಬಗ್ಗೆ ಅಚಾನಕ್ ಒಂದು ಸ್ಪೂರ್ತಿಯ ಎಳೆ ಸಿಕ್ಕಿತು.. ಹಾಗಾಗಿ ಬಂದೆ ಬಿಡ್ತು. ನೀವು ಅಣು ಅಣುವಾಗಿ ಪುಟ್ಟದಾಗಿ ವಿವರಿಸಿರುವ ಪರಿ ಇಷ್ಟವಾಯಿತು. ಧನ್ಯವಾದಗಳು ಸಿಬಿ

   Delete
 2. ಸರಳವಾಗಿ ಶುರುವಾದ ಈ ಕಡೆ ದೃಶ್ಯ ಸುಂದರವಾಗಿ ಮುಂದುವರಿಯುತ್ತಾ ಅಚಾನಕ್ಕಾಗಿ ಕೊಟ್ಟ ತಿರುವು ಚೆನ್ನಾಗಿತ್ತು..

  ReplyDelete
 3. Odugaralli kutuhala moodisuva nimma shaili tumba chennagidae Bhava :) waiting continues....

  ReplyDelete
 4. Oh! I never expected that you will take up the story from Veena’s side in this episode. You always surpise readers with your sudden twists and turns. I loved this story because of the concept of true friendship. Else this would have been one more love story. Now that Veena’s fiancé is also introduced, this story is taking a beautiful turn. Waiting for next episode.

  ReplyDelete
  Replies
  1. Thank you Roopa..

   Yeah..lets see how the story takes turn..am also curious how i will take this story further :-)

   Delete
 5. ಸೊಗಸಾಗಿದೆ ದಾರಾವಾಹಿ.. ಅಂತ್ಯ ಸುಖವಾಗಿರಲಿ.. ಈ ಭಾವಿಗಂಡನಿಗು ನಿರಾಸೆ ಯಾಗಬಾರಾದು ಆ ಮಾತನಾಡದ ಗೆಳೆಯನಿಗು ಬೇಸರವಾಗಬಾರದು ಓದುಗರಿಗಂತು ಖುಷಿಯಾಗಬೇಕು ... ಎಲ್ಲ ನಿಮ್ಮಕೈಲಿದೆ ಶ್ರೀಕಾಂತ್ ಜಿ..

  ReplyDelete
  Replies
  1. ಇಂತಹ ಮಾತು ಉಮೇಶ್ ಸರ್..

   ಧನ್ಯೋಸ್ಮಿ ಅಂತ ಹೇಳದೆ ಬೇರೆ ಕಾಣುತ್ತಿಲ್ಲ. ನೋಡೋಣ ಒಳಗಿರುವ ಸ್ಫೂರ್ತಿ ಹೇಗೆ ದಾರಿ ತೋರಿಸುತ್ತದೆ ಎಂದು.. ಅವ ಹೇಳಿದಂತೆ ಬರೆಯುವ ಸೇವಕ ನಾನು.. :-)

   Delete
 6. ಶ್ರೀ,
  ರೇವಂತ್ ಸ್ವಭಾವ ಬಹಳ ಇಷ್ಟವಾಯ್ತು. ಮುಂದೇನಾಗುಬಹುದೋ ಅಂತ ಕುತೂಹಲ ಉಳಿಸಿದ್ರಿ.
  ಮುಂದೆ ಆ ವ್ಯಾಕ್ತಿಯ ಭೇಟಿಯಾದಾಗ ವೀಣಾಳ ಪ್ರತಿಕ್ರಿಯೆ ಹೇಗಿರಬಹುದು, ಏನಿರಬಹುದು!!!

  ReplyDelete
  Replies
  1. ಧನ್ಯವಾದಗಳು DFR.... ರೇವಂತ್ ಒಂದು ಶುದ್ಧ ಸ್ನೇಹದ ಸೇತುವಾಗಿ ನಿಂತದ್ದು ನನಗೂ ಖುಷಿ ಕೊಟ್ಟಿತು.. ಧನ್ಯವಾದಗಳು

   Delete