Monday, August 11, 2014

ಕಾಂತೆ ಕಾಂತ ಒಂದಾದ ಮೇಲೆ

ಕಾಂತ ಮತ್ತು ಕಾಂತೆ ಬೆಟ್ಟದ ತುದಿಯಲ್ಲಿ ಕೂತು ಮಾತಾಡುತ್ತಿದ್ದರು... ಅಥವಾ ಹರಟೆ ಕೊಚ್ಚುತ್ತಿದ್ದರು..

ಇಬ್ಬರದು ಹನ್ನೆರಡು ವರ್ಷಗಳ ಸುಮಧುರ ದಾಂಪತ್ಯ.. ಇಬ್ಬರದೂ ಉತ್ತರ ಧ್ರುವಧಿಂ ದಕ್ಷಿಣ ಧ್ರುವಕೂ ಅನ್ನುವ ವಿಭಿನ್ನ ಬಿನ್ನ ರಾಶಿಯೇ ಇದ್ದರೂ ದೇವರು ಬೆಸೆದ  ಪ್ರೀತಿಯ ಹಾರವನ್ನು ತೊಟ್ಟ ಆ ದಂಪತಿಗಳು ಪ್ರೇಮಿಗಳ ಹಾಗೆ ಸದಾ ಜಗದಲ್ಲಿ ಜಗಳವಾಡುತ್ತಲೇ ಪ್ರೀತಿ ಪ್ರೇಮ ವಿಶ್ವಾಸವನ್ನು ಹಂಚಿಕೊಂಡು ನೆಂಚಿಕೊಂಡು ಬಾಳುವೆ ಮಾಡುತ್ತಿದ್ದರು.

ಕಾಂತೆ "ಕಾಂತ .. ನಿನ್ನ ಸಿನಿಮಾ ಹುಚ್ಚು ಗೊತ್ತು.. ಸಿನೆಮಾವನ್ನು ನಿನ್ನ ಪ್ರಾಣ ಎನ್ನುವಂತೆ ನೋಡುತ್ತೀಯೆ.. ಒಂದು ಚಿತ್ರದ ಗೀತೆಯನ್ನು ನಮ್ಮ ಹನ್ನೆರಡು ವರ್ಷದ ದಾಂಪತ್ಯಕ್ಕೆ ಅರ್ಪಣೆ ಮಾಡುವುದಾದರೆ ಯಾವ ಗೀತೆ ಆರಿಸುತ್ತೀಯ?"

ಕಾಂತ.. "ಕಾಂತೆ.. ಹಃ ಹಃ ಹಃ ಚಲನ ಚಿತ್ರಗಳು, ಗೀತೆಗಳು ನನ್ನ ತಾಯಿಯ ಬಸಿರಲ್ಲಿದ್ದಾಗಲೇ ಉಸಿರಾಗಿತ್ತು ಅನ್ನಿಸುತ್ತದೆ.. ಹೀಗೆ ಅಂತ ಯಾವ ಗೀತೆಯೂ ಹೇಳಲಾರೆ.."

ಹೇಳು ಕಾಂತ.. ಅಪರೂಪಕ್ಕೆ ನಾ ಏನಾದರೂ ಕೇಳುತ್ತೇನೆ.. ಅದು ಆರ್ಥಿಕ..  ಪಾರಮಾರ್ಥಿಕ ಯಾವುದೂ ಇಲ್ಲ.. ಲೌಕಿಕ.. ನಿನಗೆ ಅನ್ನಿಸಿದ ಗೀತೆಯನ್ನು ಹೇಳು.. ಪ್ಲೀಸ್sssssssss!"

ಯಾವತ್ತೂ  ಏನೂ ಕೇಳದ ಕಾಂತೆ.. ಅಪರೂಪಕ್ಕೆ ಒಮ್ಮೆ ಕೇಳಿದ ನಲ್ಲೆಗೆ ಬೇಸರ ಏಕೆ ಮಾಡಬೇಕು ಎಂದು ನೀಲಿ ಅಗಸವನ್ನೇ ನೋಡುತ್ತಾ ಕುಳಿತ.. ಹತ್ತಿಯ ಹಾಗೆ ಹಿಂಜಿ ಹಿಂಜಿ ತೇಲುತ್ತಿತ್ತು.. ಮೋಡ, ಪ್ರಕೃತಿ, ಕಣಿವೆ ಇವೆಲ್ಲಾ ಕಾಂತನಿಗೆ ಉತ್ಸಾಹ ಚಿಮ್ಮುವ ಚಿಲುಮೆಯಾಗಿತ್ತು.. ನಲ್ಲೆಯ ಒಂದು ಚಿಕ್ಕ ಆಸೆಯನ್ನು ಈಡೇರಿಸಿ ಬಿಡೋಣ ಅಂತ.. ತೋಳು ಮಡಿಸಿ.. ತನ್ನ ಹೃದಯದ ಹಾರ್ಡ್ ಡಿಸ್ಕ್ ಓಪನ್ ಮಾಡಿದ..

ಕೈಗೆ ಕಟ್ಟಿದ ಗಡಿಯಾರ ಹಿಂದಕ್ಕೆ ಓಡತೊಡಗಿತು.. ದಶಕಗಳ ಹಿಂದೆ ಚಿತ್ರ ಪರದೆಯಲ್ಲಿ ನಡುಕ ಹುಟ್ಟಿಸಿದ ನಾ ನಿನ್ನ ಬಿಡಲಾರೆ ಚಿತ್ರ ನೆನಪಿಗೆ ಬಂತು..

"ಕಾಂತೆ.. ಈ ಚಿತ್ರದ ಒಂದು ಗೀತೆಯನ್ನು ನಾ ಹಾಡುತ್ತೇನೆ.. ನೀನು ಹಾಡಬೇಕು.. ಒಂದು ವಿಚಿತ್ರ ಶಕ್ತಿ ಇದೆ ಈ ಹಾಡಲ್ಲಿ.. ಒಂದು ವಿಭಿನ್ನ ರೋಮಾಂಚನ ನೀಡುವ ಪ್ರೇಮ ಗೀತೆ ಇದು.. .. ಈ ಹಾಡನ್ನು ಹಾಡುವ ಯಾವುದೇ ಸುಮಧುರ ಎರಡು ಹೃದಯಗಳು ಒಂದಕ್ಕೊಂದು ಬೆಸೆದುಕೊಂಡು ಹೊಸ ಜೀವನದ ಹಾಡಿಗೆ ತೆರಳುತ್ತದೆ.. "

"ಹೌದಾ.. ಹಾಗಾದರೆ ನಾ ಸಿದ್ಧ" ಕೈ ಕೊಡವಿಕೊಂಡು ನಿಂತೇ ಬಿಟ್ಟಳು ಕಾಂತೆ..

ಶುರುವಾಯಿತು..

"ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ದೂರ ಓಡುವೆ . 
ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ ಕಣ್ ತುಂಬಾ ನಾ ನೋಡುವೆ!!!"

"ವಾವ್ ಕಾಂತ ಸೂಪರ್..ಕಾಂತ  "

"ನೀನು ಹಾಡಬೇಕು ಕಾಂತೆ"

ನಾಚಿ ಸ್ವಲ್ಪ ದೂರ ನಿಂತು "ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ನನ್ನ ನೋಡುವೆ
ಕಣ್ಣಲ್ಲೂ ನೀನೆ ಮನದಲ್ಲೂ ನೀನೆ ಎಲ್ಲೆಲ್ಲೂ ನೀ ಕಾಣುವೆ"

ಕಾಂತ... "ಸೂಪರ್ ಸೂಪರ್"

ಕಾಂತೆ ಮುಗುಳು ನಗುತ್ತಾ.. "ಕಾಂತ . ನೀ ನನ್ನ ಉಸಿರಲ್ಲಿ ಬೆರೆತಿರುವೆ.. ಆ ಉಸಿರನ್ನು ಹಿಡಿದು ಹಾಡಲು ಸಾಧ್ಯವೇ.."

"ಪ್ರಯತ್ನ ಪಡುವೆ"

"ನನಗಾಗಿ ಹೆಣ್ಣಾಗಿ ಬಂದೆ.. ನನ್ನಲ್ಲಿ ನಿನ್ನಾಸೆ ತಂದೆ.. 
ಹಗಲಿಲ್ಲಾ ಇರುಳಿಲ್ಲಾ ನಿನ್ನಲ್ಲೇ ಮನವೆಲ್ಲ ನೆನಪಿಂದ ನಾ ಸೋತು ಹೋದೆ"... ಎಂದು ಹೇಳಿ ಕಾಂತ ಕಣ್ಣು ಹೊಡೆದ..

ಕಾಂತೆ "ಉಸಿರು ಬಿಡುತ್ತಲೇ ಇದ್ದೆ.. ನಾ  ಹಿಡಿದಿಡು ಅಂತ ಅಂದೇ.. "

"ನಿನ್ನನ್ನು ಒಂದು ನಿಮಿಷ ಹಿಡಿದಿಡಲು ನನಗೆ ಮನಸಿಲ್ಲ.. ನೀನು ಗಾಳಿಯ ಹಾಗೆ ಬೀಸುತ್ತಲೇ ಇರಬೇಕು ಪ್ರಿಯೆ.. ನಿನಗೆ ಸಾಧ್ಯವೇ.. ಹಾಡು ನೋಡೋಣ"

"ಕೈ ಕೊಡವಿ.. ಹುಬ್ಬನ್ನು ಮೇಲೇರಿಸಿ.. ಕಾಂತ ನೀ ನನಗೆ ಕಳಿಸಿಕೊಟ್ಟ ಪಾಠ ಅಸಾಧ್ಯ ಯಾವುದು ಇಲ್ಲ ಎಂದು .. ನೋಡು ನನ್ನ ಪ್ರತಾಪ....

"ಸಂಗಾತಿ ನೀನಾಗಿ ಬಂದೆ.. ಸಂತೋಷ ಬಾಳಲ್ಲಿ ತಂದೆ.. " ಈಗ ಕೇಳು ಉಸಿರಿನ ತಾಕತ್
"ಹಗಲಲ್ಲಿ ಇರುಳಲ್ಲಿ ಮನವೆಲ್ಲ ನಿನ್ನಲ್ಲಿ ನೆನಪಿಂದ ನಾ ನೊಂದು ಹೋದೆ"

ಬಿಟ್ಟ ಕಣ್ಣು ಬಿಟ್ಟಂಗೆ ಕಾಂತ ನೋಡುತ್ತಲೇ ಇದ್ದಾ.. ಕಾಂತೆ (ಹಗಲಲ್ಲಿ ಇರುಳಲ್ಲಿ ಮನವೆಲ್ಲ ನಿನ್ನಲ್ಲಿ ನೆನಪಿಂದ ನಾ ನೊಂದು ಹೋದೆ) ಈ ಸಾಲನ್ನು ಹೇಳುವಾಗ ಒಂದು ಅರೆ ಘಳಿಗೆ ಕೂಡ ನೀ ಉಸಿರನ್ನು ಒಳಗೆ ತೆಗೆದುಕೊಳ್ಳಲಿಲ್ಲ.. ಸೂಪರ್ ಕಾಂತೆ.. "

"ಇನ್ನೆಂದು ಈ ಚಿಂತೆ ನಿನಗಿಲ್ಲವೇ.. ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ದೂರ ಹೋಗುವೆ ಮುತ್ತಲ್ಲೆ ನಿನ್ನ ಸಿಂಗಾರಮಾಡಿ ಕಣ್ ತುಂಬಾ ನಾ ನೋಡುವೆ"

"ಕಾಂತೆ ಮೊದಲ ಪಲ್ಲವಿ ನಾ ಹಾಡಿದೆ ಅದನ್ನು ನೋಡಿಕೊಂಡು ನೀ ಉಸಿರು ಬಿಗಿ ಹಿಡಿದು ಹಾಡಿದೆ.. ಈಗ ನೀನೆ ಎರಡನೇ ಪಲ್ಲವಿಯನ್ನು ನೀನೆ ಮೊದಲು ಹಾಡು ನೋಡೋಣ.. ಆಗುತ್ತಾ ನಿನಗೆ.. ನೀನು ಹಾಡಿದ್ದನ್ನು ಕೇಳಿ ನಾ ಪ್ರಯತ್ನ ಪಡುವೆ.. "

"ಓಕೆ.. ನಾ ಸಿದ್ಧ"     "ಲತೆಯಲ್ಲಿ ಹೂವಾಗಿ ನಾನು ಮರಿ ದುಂಭಿಯಂತಾಗಿ ನೀನು.. 
ಹೂವಲ್ಲಿ ಹೊರಳಾಡಿ ಜೇನಾಟ ನಾವಾಡಿ ಆನಂದ ಹೊಂದೋಣವೇನು" 

ಸುಸ್ತಾಗಿ ಬಿಟ್ಟಾ.. "ಯಪ್ಪಾ ನೀನು ಹಾಡುಗಾರಿಕೆಯಲ್ಲಿ ರಾಕ್ಷಸಿ.. ನಿನಗೆ ಎಂಟು ಶ್ವಾಸಕೋಶಗಳು ಇವೆ ಅನ್ನಿಸುತ್ತೆ.. ಇರಲಿ ನಾನು ಪ್ರಯತ್ನ ಪಡುವೆ.. "

"ಬಾನಾಡಿ ನಾವಾಗಿ ಹಾರಿ.. ಬಾನಲ್ಲಿ ಒಂದಾಗಿ ಸೇರಿ.. ಹೊಸ ಆಟ ಆಡೋಣ ಹೊಸ ನೋಟ ನೋಡೋಣ ಮುಗಿಲಿಂದ ಜಾರೋಣವೇನು.. " ನಾ ಸೋತೆ.. ನಿನ್ನ ಹಾಗೆ ನಾ ಹಾಡಲು ಸಾಧ್ಯವೇ ಇಲ್ಲ..

ಕಾಂತ ನಾವಿಬ್ಬರು ಒಂದಾದ ಮೇಲೆ ಸೋಲು ಗೆಲುವಿನ ಮಾತೆಲ್ಲಿ ಇದೆ.. ಇರು ಈ ಹಾಡನ್ನು ಪೂರ್ತಿ ಮಾಡೋಣ
"ಇನ್ನೆಂದು ನೆರಳಾಗಿ ನಾ ಬಾಳುವೆ.. ನಾನು ನೀನು ಒಂದಾದ ಮೇಲೆ ಹೀಗೇಕೆ ನನ್ನನ್ನೇ ನೋಡುವೆ.. "

ಇಬ್ಬರೂ "ಕಣ್ಣಲ್ಲೂ ನೀನೆ ಮನದಲ್ಲೂ ನೀನೆ ಎಲ್ಲೆಲ್ಲೂ ನೀ ಕಾಣುವೆ"

ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ ಜೋಗದ ಧಾರೆಯಾಗಿತ್ತು.. "ಹೌದು ಕಷ್ಟ ಸುಖ ದುಖಃ ಇವೆಲ್ಲವೂ ನಮ್ಮನ್ನು ಬಂಧಿಸಿಡುವ ದಾರಗಳು.. ಇವುಗಳ ಜೊತೆಯಲ್ಲಿ ಬಾಂಧ್ಯವದಲ್ಲಿ ನಾ ನಾಕ ಕಾಣಬೇಕು.. ಎನ್ನುವ ನಿನ್ನ ಮಾತು ನನಗೀಗ ಅರ್ಥವಾಗುತ್ತಿದೆ.. ಕಾಂತ.. ನೀ ನನ್ನ ಬಾಳಿನ ಬೆಳಕು.. ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರೆ ಹಸಿರು... ಕಣೋ ಕಾಂತ.. "

"ಕಾಂತೆ.. ಜೀವನದ ಹೂ ಹಾಸಿನ ಮೇಲೆ.. ಕಣ್ಣಿಗೆ ಕಾಣದ ಚಿಕ್ಕ ಚೊಕ್ಕ ಮುಳ್ಳುಗಳು ಇರುತ್ತವೆ.. ಹಾಗೆಯೇ ಕಣ್ಣಿಗೆ ಕಾಣದ ಆದರೆ ನಾಸಿಕಕ್ಕೆ ಮುದ ನೀಡುವ ಸುವಾಸನೆಯು ಇರುತ್ತದೆ.. ಮುಳ್ಳಿಗೆ ಹೆದರಿದರೆ ಸುವಾಸನೆ ಸಿಗೋಲ್ಲ.. ಸುವಾಸನೆಯಲ್ಲಿ ಮುಳ್ಳಿನ ನೋವು ಮಾಯಾ.. ಅಲ್ಲವೇ.. "

ಹೌದು ಹೌದು.. ಐ ಲವ್ ಯು ಕಾಂತ.. ಬಿಗಿದಪ್ಪಿ.. ಗಲ್ಲಕ್ಕೆ ಒಂದು ಪಪ್ಪಿ ಕೊಟ್ಟಳು.. ಮೊಬೈಲ್ ನಲ್ಲಿ "ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ಗಲ್ಲಕ್ಕೆ ಕೆನ್ನೆಗೆ ಮತ್ತೊಂದು ಕಾಂತೆ ಕೊಡುವೆಯ"

ನಾಚಿ ನೀರಾದ ಕಾಂತೆ ಆ ಹಾಡಲ್ಲಿ ಹೇಳಿದಂತೆ ............





(ಈ ಹಾಡು ಸುಮಾರು ಇಪ್ಪತ್ತೈದು ವರ್ಷಗಳಿಂದ ನನ್ನನ್ನು ಕಾಡಿತ್ತು.. ಏನೋ ಒಂದು ವಿಚಿತ್ರ ಶಕ್ತಿ ಇದೆ.. ಈ ಹಾಡಲ್ಲಿ ಎಂದು.. 
ಒಂದು ದಿನ.. ವಾಕ್ ಮ್ಯಾನ್ ನಲ್ಲಿ ಕಿವಿ ಕಿತ್ತು ಹೋಗುವ ಹಾಗೆ ಈ ಹಾಡನ್ನು ಕೇಳಿದೆ.. ನನಗೆ ಅನಿಸಿದ ಮಾತು 

ಶ್ರೀ ಎಸ್ ಪಿ ಬಾಲೂ ಹಾಗೂ ಶ್ರೀಮತಿ ಎಸ್ ಜಾನಕಿಯಮ್ಮ ಹಾಡಿದ ಶ್ರೇಷ್ಠ ಹಾಡು ಇದು.. ಎಸ್ಪಿ ಸ್ವಲ್ಪ ಉಸಿರು ಬಿಟ್ಟು ಬಿಟ್ಟು ಪಲ್ಲವಿಯನ್ನು ಹಾಡಿದರೆ.. ಜಾನಕಿಯಮ್ಮ ಒಂದೇ ಓಘದಲ್ಲಿ ಹೇಳುತ್ತಾರೆ.. ಅದರಲ್ಲೂ "ನೆನಪಿಂದ" ಎನ್ನುವ ಪದ ಹಾಡುವಾಗ ಅವರ ಧ್ವನಿ.. ಆಹಾ ಅದನ್ನು ಕೇಳಿ ನೋಡಿ.. ಈ ಹಾಡನ್ನು ನೀವು ಅಪ್ಪಿಕೊಳ್ಳುತ್ತೀರ.. 

ಈ ಹಾಡಿಗೆ ಅಭಿನಯಿಸಿದ ಅನಂತ್ ನಾಗ್ ಲಕ್ಷಿ.. ಇವರಿಬ್ಬರ ನಡುವೆ ನಾಚಿಕೆ, ತುಸು ಪ್ರೀತಿ, ತುಸು ರೋಮಾಂಚನ, ಕಣ್ಣಲ್ಲೇ ಹಾಡುವ ಪರಿ, ಒಬ್ಬರನ್ನು ಒಬ್ಬರು ಮೀರಿಸುವಂತೆ ಅಭಿನಯ.. ನಿಜವಾದ ಸತಿ ಪತಿಯರು ಅಥವಾ ಪ್ರೇಮಿಗಳು ಎನ್ನುವ ರೀತಿಯಲ್ಲಿ ಕಣ್ಣಲ್ಲೇ ಜಗಳ.. ಆಹಾ.. ಸೂಪರ್ 

ಇಂತಹ ಪ್ರಣಯ ಗೀತೆಯನ್ನು ಬರೆದ ಶ್ರೀ ಚಿ ಉದಯಶಂಕರ್.. ಅದಕ್ಕೆ ಬಂಗಾರದ ಸಂಗೀತವನ್ನು ಕೊಟ್ಟ ಶ್ರೀ ರಾಜನ್ ನಾಗೇಂದ್ರ ಜೋಡಿ.... ಹತ್ತಕ್ಕೆ ಹತ್ತು ಅಂಕಗಳು.. 

ಬಹುದಿನಗಳ ಕನಸು.. ಈ ಹಾಡಿನ ಬಗ್ಗೆ ಬರೆಯಬೇಕು ಎಂದು.. ಈ ಹಾಡನ್ನು ಕೇಳಿದಾಗೆಲ್ಲ ನೋಡಿದಾಗೆಲ್ಲ ನನಗೆ ನೆನಪಿಗೆ ಬರುವುದು ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆ.. ಈ ಹಾಡಿನಲ್ಲಿ ಬರುವ ಪ್ರತಿ ಸಾಲುಗಳು, ಪ್ರತಿ ಅಭಿನಯ ನನಗೆ ಇವರಿಬ್ಬರನ್ನು ನೆನಪಿಗೆ ತರುತ್ತದೆ.. ಅವರ ವಿವಾಹ ದಿನಕ್ಕೆ ಬರೆಯಬೇಕು ಎಂದು ಅಂದುಕೊಂಡಿದ್ದೆ.. ಸಮಯದ ಅಭಾವ ಆಗಿರಲಿಲ್ಲ.. ಆದರೇನಂತೆ.. ಪ್ರಕಾಶಣ್ಣ ಆಶಾ ಅತ್ತಿಗೆ ಯಾವ ನಾಯಕ ನಾಯಕಿಗೆ ಕಮ್ಮಿ.. ನಮ್ಮ ಬ್ಲಾಗ್ ಲೋಕದ ಸೂಪರ್ ನಾಯಕ ನಾಯಕಿ.... ಧನ್ಯೋಸ್ಮಿ ಬ್ಲಾಗ್ ಲೋಕ.. )

6 comments:

  1. ವಾಹ್!
    ಬರೆದಿದ್ದೇನಿದ್ದೀತು ಈ ಹಾಡು ಈ ರಾಗಗಳು ಅಂತ ಯೋಚನೆಗೆ ಬಿದ್ದೆ ಓದೋವಾಗ...
    ಕೊನೆಯ ಪ್ಯಾರಾಕ್ಕೆ ಬರೋ ಹೊತ್ತಿಗೆ ಮುಖದಲ್ಲಿ ನಗು,ಮನದಲ್ಲಿ ಖುಷಿ :)
    ಬ್ಲಾಗ್ ,ಫೇಸ್ಬುಕ್ ಲೋಕದ ಎವರ್ ಗ್ರೀನ್ ಪ್ರೇಮಿಗಳಿಗೆ ಸೂಪರ್ ಸಾಂಗ್..
    ನೋ ವರ್ಡ್ಸ್ ಅಣ್ಣಾ...ಭಾವ ,ಬರಹ ಎರಡೂ ಆತ್ಮೀಯ ನಿಮ್ಮಷ್ಟೇ.

    ReplyDelete
  2. ಶ್ರೀಕಾಂತೂ..
    ನಿಜ ಹೇಳಲಾ.. ?

    ಇದು ನಮ್ಮಿಬ್ಬರ ಪ್ರೀತಿಯ ಹಾಡು... ನೆನಪಿನ ಹಾಡೂ ಕೂಡ..

    ನಮ್ಮ ನಿಶ್ಚಿತಾರ್ಥದ ದಿನ ಈ ಹಾಡನ್ನು ಅವಳೆದುರು ಗುನುಗಿದ್ದೆ...

    ಮತ್ತೆ ನಿಮ್ಮ ಲೇಖನ ಓದಿ..
    ಹಾಡನ್ನು ಕೇಳಿ ಕಣ್ ತುಂಬಿ ಬಂತು...

    ನಾವು ಆ ದಿನಗಳಿಗೆ ಹೋಗಿಬಿಟ್ಟೆವು..

    ಶ್ರೀಕಾಂತೂ ಯಾವ ಜನ್ಮದಲ್ಲೋ ನಾವಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದೆವೆನೊ..
    ಇಲ್ಲಿ ಮತ್ತೆ ಒಂದಾಗಿದ್ದೇವೆ..

    ಆಶಾ ಕಣ್ ತುಂಬಿಕೊಂಡು ದೇವರಿಗೆ ಕೈ ಮುಗಿದು ಬಂದಳು..

    ನಾನು ಏನು ಕೇಳಲಿ ದೇವರನ್ನು ?

    ನಿನ್ನ ಬಾಳು ಸದಾ ಹಸಿರಾಗಿರಲಿ..
    ಸುಖ .. ಶಾಂತಿ.. ನೆಮ್ಮದಿ ಸದಾ ತುಂಬಿರಲಿ..

    ಇನ್ನೂ ಬರೆಯಬೇಕೆಂದರೆ ಗಂಟಲು ಕಟ್ಟಿದೆ..

    ಪ್ರೀತಿಯ ಹಗ್ ನಿನಗೆ... Love you....

    ReplyDelete
  3. ಚಿರಕಾಲ ಇರಲಿ ಈ ಬಾಂಧವ್ಯ :-)

    ReplyDelete
  4. ಗಾನ ಸಂವಾಧ ಮುಖೆನ ಕಾಂತ ಕಾಂತೆಯರ ದಶಕಗಳ ಒಲವಿನ ಸಾಫಲ್ಯತೆಯನ್ನೂ ಕಟ್ಟಿಕೊಟ್ಟಿದ್ದೀರಿ.

    ಚಿ. ಉದಯಶಂಕರ್ ಮತ್ತು ರಾ-ನಾ ಅವರು ಕನ್ನಡದ ಮಾಣಿಕ್ಯಗಳು.

    ಬಹುಶಃ ಮಾನು ಜೀವನದಲ್ಲಿ ಅಮಿತವಾಗಿ ಪ್ರೀತಿಸುವ ಗಾಯಕರಲ್ಲಿ ಬಾಲೂ ಮತ್ತು ಜಾನಕಮ್ಮರಿಗೆ ಅಗ್ರ ಸ್ಥಾನ. ಬಹು ಭಾಷಾ ಗಾಯಕರಾದ ಇವರು ಹಲವು ಪ್ರಯೋಗಗಳನ್ನು ಮಾಡಿದ್ದಾರೆ.
    ಜಾನಕಮ್ಮ ಪಲುಕುಗಳನ್ನು ಪೋಣಿಸುವಲ್ಲಿ ತಮಗೆ ತಾವೇ ಸಾಟಿ. ಉದಾಹರಣೆಗೆ: ನೀನಾದೆ ಬಾಳಿಗೆ ಜ್ಯೋತಿ, ಪ್ರೇಮಕೆ ಪರ್ಮಿಟ್ ಬಂತು ಅಥವಾ ನನ್ನೆದೆ ಕೋಗಿಲೆಯ ಹಾಡುಗಳನ್ನೇ ಗಮನಿಸಿರಿ.
    ಜಾನಕಮ್ಮ ಯಾವುದೇ ವಯೋಮಾನದವರಿಗೂ ದ್ವನಿ ಹೊಂದಿಸಿ ಹಾಡಬಲ್ಲ ಪ್ರತಿಭೆ.

    ಸದರಿ ಗೀತೆಯಲ್ಲಿ ಬಾಲೂ ಅವರು ಉಸಿರುಹಿಡಿಯದೆ ಹಿಡಿಯದೇ ಹಾಡಿರುವುದು, ಬುಶಃ ಸಂಯೋಜನೆಯ ಭಾಗವೇ ಆಗಿರಬಹುದು. ಯಾಕೆಂದರೆ ಬಾಲೂ ಸಾರ್ ಇಡೀ ಗೀತೆಯನ್ನೂ ಒಂದೇ ಉಸಿರಿನಲ್ಲಿ ಶೃತಿ ತಪ್ಪದೆ ಹಾಡಿದ್ದಾರೆ.

    ReplyDelete

  5. ನಂಗೆ "ತುಂತುರು ಅಲ್ಲಿ ನೀರ ಹಾಡು ... " ಅನ್ನೋ ಇಷ್ಟದ ಗೀತೆಗೆ ಚೆಂದದ ಜೋಡಿಯಾಗಿ ಕಣ್ಣ ಮುಂದೆ ಬರುತ್ತಾರೆ ಆಶತ್ತಿಗೆ ಮತ್ತು ಪ್ರಕಾಶಣ್ಣ ...
    super article

    ReplyDelete