Monday, March 24, 2014

ಕಾಡುವ ಸುಡುಗಾಡು...... ಜೀವ ಒಡಲಿಂದ ದೂರಾದಂತೆ!!!!

"ನೀ ಇರಲು ಜೊತೆಯಲ್ಲಿ" ಒಳಗೆ ಜೀವ ಇರುವವರೆಗೂ.....

ಯಾಕೋ ಏನೋ ಗೊತ್ತಿಲ್ಲ ತುಂಬಾ ಕಾಡಲು ಹತ್ತಿತ್ತು.. ಒಂದು ಜೀವ ತಾನು ಪ್ರೀತಿಸುತ್ತಿದ್ದ ದೇಹವನ್ನು ಬಿಟ್ಟು ಹೋಗುವಾಗ ಹೇಗೆಲ್ಲ ಹಾಡುತ್ತಿರುತ್ತದೆ. ಅದರ ತಳಮಳವೇನು ತಿಳಿಯ ಬೇಕು ಎನ್ನಿಸಿತು..

ಸಹೋದ್ಯೋಗಿಯ ಪಿತ ಇಹಲೋಕದಿಂದ ಬಿಡುಗಡೆ ಪಡೆದು ಸುಂದರ ಲೋಕಕ್ಕೆ ಧಾವಿಸಿದ್ದ ಸಮಯ.. ಅಲ್ಲಿಯೇ ಕೂತಿದ್ದೆ..
ನಿರ್ಜೀವ ಎನ್ನಿಸಿಕೊಂಡ ಒಂದು ಕೃಶ ದೇಹ.. ಅದರಿಂದ ಹೊರಗೆ ನಿಂತು ಹಾಡುತ್ತಿದ್ದ ಆತ್ಮ... ಒಬ್ಬರನೊಬ್ಬರು ಅಗಲಿದ ಸಮಯ..  ಅವರಿಬ್ಬರ ಸಂಭಾಷಣೆ ಕಿವಿಗೆ ಬಡಿಯುತ್ತಿತ್ತು... !

"ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ"

ಆತ್ಮದೊಳಗೆ ಜೀವವಿದ್ದಾಗ.. ದೇಹದಲ್ಲಿ ಆತ್ಮವಿರುತ್ತದೆ.. ಆದರೆ ದೇಹ ಹೇಳುತ್ತದೆ

"ನಗುತ ನೀ ಕರೆದರೆ
ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ"

ಸುತ್ತಲು ಆ ದೇಹದ ಜೊತೆ ರಕ್ತ ಸಂಬಂಧ ಹೊಂದಿದ್ದವರು ಭಾವನಾತ್ಮಕ ಸಂಬಂಧ ಹೊಂದಿದ್ದವರು.. ಗುರುತು ಪರಿಚಯ ಇರುವವರ ಹಿಂಡೇ ನೆರೆದಿತ್ತು.. ಎಲ್ಲರ "ಮಾತಲ್ಲಿ ಏನೊ ಹೊಸತನ.. ಮಗುವನ್ನು ಹೋಲೋ ಹೂ ಮನ"

ಆತ್ಮ ತನ್ನ ಹಳೆಯ ದೇಹದ ಯಜಮಾನನಿಗೆ ಹೇಳುತ್ತಿತ್ತು.. "ರಸಕಾವ್ಯ ನಿನ್ನ ಯೌವ್ವನಾ.. ಎದೆ ತುಂಬಿ ನಿಂತೆ ಪ್ರತಿಕ್ಷಣ .. ಆಗ ಬಿಕ್ಕುತ್ತಾ ಬಿಕ್ಕುತ್ತಾ "ಹಳ್ಳಿ ಮಣ್ಣಲಿ" ಬೆರೆಯಬೇಕು ಎನ್ನುವ ಹಂಬಲ ಇತ್ತು.. ಇನ್ನಷ್ಟು ದಿನ ನೀನು ನನ್ನೊಳಗೆ ಇರಬೇಕು ಎನ್ನಿಸಿತ್ತು" ಆದರೆ "ಬಿರಿದ ಮಲ್ಲಿಗೆ" ನನ್ನ ಎದೆಯ ಮೇಲೆ ಹಾಕುತ್ತಿದ್ದಾರೆ.. ಎಲೆ ಆತ್ಮ ಬಂಧುವೇ "ಬೆರೆತೆ ಉಸಿರಲ್ಲಿ ಒಂದಾದಂತೆ" ನಾನು ನಿನ್ನೊಳಗೆ ಬೆರೆಯಲು ಸಾಧ್ಯವೇ.. ?

"ಈ ನೀಲಿ" ಆಕಾಶದಲ್ಲಿ ನನ್ನ "ಕಣ್ಣ ಬೆಳಕಲ್ಲಿ" ಏನು ಕಾಣುತ್ತಲೇ ಇಲ್ಲಾ.. "ಮನೆಯೆಲ್ಲ ಎಂದು ಬೆಳಗಲಿ" ಎಂದು ದುಡಿದ ಮನೆ ಮನ ಇಂದು ನನ್ನದಲ್ಲ.. ಆತ್ಮವೇ "ನೀ ತಂದ ಪ್ರೀತಿ ಲತೆಯಲಿ" ನನ್ನ ಜೀವನದಲ್ಲಿ "ನಗುವೆಂಬ ಹೂವು ಅರಳಲಿ" ಅಥವಾ ಮುದುಡಲಿ ಸದಾ ಗೆದ್ದೇ ಗೆಲ್ಲುವೆ ಎಂಬ ಆತ್ಮ ವಿಶ್ವಾಸ ಬೆಟ್ಟದಷ್ಟಿತ್ತು. ಸಂಕಟ ಬಂದಾಗ ಸುಂಕವೂ ಕಟ ಕಟ ಎಂದು ಬಾಗಿಲು ಬಡಿಯುತ್ತದೆ.. ಆತ್ಮವೇ "ಅಗಲಿ ನಿನ್ನನು ಬಾಳಲಾರೆನು.....  ಜೀವ ಒಡಲಿಂದ ದೂರಾದಂತೆ"  ಇಂದು ನೀನು ನನ್ನೋಳಗಿಲ್ಲ.. "ನೀ ಇರಲು ಜೊತೆಯಲ್ಲಿ" ಅಯ್ಯೋ ಇದು ಸಾಧ್ಯವೇ.. ದಾಸರ ಗಿಳಿಯು ಪಂಜರದೊಳಿಲ್ಲ ಗೀತೆ ನೆನಪಿಗೆ ಬರುತ್ತಿದೆ..

ಯಾಕೋ ಮೈಯೆಲ್ಲಾ ನಡುಗುತ್ತಿರುವಂತೆ ಭಾಸವಾಯಿತು.. ನೋಡಿದರೆ ಒಬ್ಬರಾಗಿ ಒಬ್ಬರು ಎಣ್ಣೆ ಸೀಗೆಕಾಯಿ ತಿಕ್ಕಿ ನಡು ಬೀದಿಯಲ್ಲಿ ಮಜ್ಜನ ಮಾಡಿಸುತ್ತಿದ್ದಾರೆ.. ಅಳುತ್ತಾ ಇರುವರು ಕೆಲವರು..ಅಯ್ಯೋ ಇಂದು ಇವರು ನಾಳೆ ನಾವು ಎನ್ನುವ ಸ್ಮಶಾನ ವೈರಾಗ್ಯದಲ್ಲಿ ಕೆಲವರು.. .. ದೇಹದಿಂದ ಆತ್ಮವೇಕೆ ಹೊರಕ್ಕೆ ಹೋಯಿತು ಎನ್ನುವ ಕುತೂಹಲ ತಣಿಯದ ಪ್ರಶ್ನೆಗಳಲ್ಲಿ ಮುಳುಗಿದವರು ಹಲವರು..

ಇವೆಲ್ಲದರ ಪರಿವೆ ಇಲ್ಲದೆ.. ಯಾವುದೋ ಪ್ರಾಣಿ ತನ್ನ ಚರ್ಮವನ್ನು ದಾನ ಮಾಡಿ...  ಅದರಿಂದ ಎದೆ ನಡುಗುವಂತೆ ಬಡಿಯುತ್ತಿರುವ ತಮಟೆ ಸದ್ದು.. ಅರೆ ಅರೆ ಯಾಕೆ ಹೀಗೆ ಬಡಿಯುತ್ತಿದ್ದಾರೆ.. ಬದುಕಿದ್ದವರು ಓಡಲಿ ಎಂದೇ.. ಅಥವಾ ಹೊರಗೆ ಹೋದ ಆತ್ಮ ಮತ್ತೆ ಬರಲು ರಹದಾರಿಯೇ.. ಯಾಕೆ.. ಹೀಗೆ.. ?

ನೋಡು ನೋಡುತ್ತಲೇ ಅಲ್ಲೇ ಒಬ್ಬ ಕುಳಿತಿದ್ದ ಭಾವುಕ ತದೇಕ ಚಿತ್ತದಿಂದ ತಮಟೆ ಸದ್ದನ್ನೇ ಕೇಳುತ್ತಾ.. ಬಡಕಲು ದೇಹವನ್ನೇ ನೋಡುತ್ತಿದ್ದ.. ಅವನೊಳಗೆ ಭಾವ ಸಾಗರದ ಅಲೆಗಳು ಬಡಿಯುತ್ತಾ ಬಡಿಯುತ್ತಾ ಕಣ್ಣಂಚಿಗೆ ಬಂದು ಬೀಳಲೋ ಬೇಡವೋ ಅಂತ ಅಪ್ಪಣೆ ಕೇಳುತ್ತಿದ್ದವು..!

ದೇಹಕ್ಕೆ ಮೆಲ್ಲನೆ ಬಿಸಿ ತಾಗ ತೊಡಗಿತು.. ಬೆಚ್ಚನೆ ಹೊದಿಕೆ.. ಘಮ ಘಮ ಗುಟ್ಟುವ ಹೂವಿನ ಹಾರ.. ಹಣೆಗೆ ವಿಭೂತಿ.. ಕುಂಕುಮ.. ಅಯ್ಯೋ ಈ ದೇಹಕ್ಕೆ ಬೇಕೇ.. ಇವೆಲ್ಲ ಅನ್ನುವಷ್ಟರಲ್ಲಿಯೇ.. ಹಟಾತ್ ನಾಲ್ಕೈದು ಮಂದಿ ದೇಹವನ್ನು ಎತ್ತಿ ಹೂವಿನ ಪಲ್ಲಕ್ಕಿ (?????)ಯಲ್ಲಿ ಕೂರಿಸಿದರು.. ಹೌದು ಕೂರಲು ಶಕ್ತಿಯಿಲ್ಲದೆ ಲೋಕ ಬಿಟ್ಟಿದ ದೇಹಕ್ಕೆ ವಿಪರೀತ ಮುತುವರ್ಜಿ ವಹಿಸಿ ಪಲ್ಲಕ್ಕಿ ಸಿದ್ಧಪಡಿಸಿದ್ದರು.. ಹೂವಿನ ಪರಿಮಳದ ಜೊತೆಯಲ್ಲಿ ಘಂ ಎನ್ನುವ ಗಂಧದ ಪರಿಮಳ.. ಊದುಬತ್ತಿಯ ಧೂಪ.. ಜೀವನವಿಡಿ ಹೊಗೆ ಹಾಕಿಸಿಕೊಳ್ಳದ ಈ ದೇಹಕ್ಕೆ ಇಂದು ಹೊಗೆಯಲ್ಲಿ ಅಭ್ಯಂಜನ..

 ಅಂತರಂಗದ ಅಗ್ನಿ ಬಹಿರಂಗದ ಅಗ್ನಿಯನ್ನು ಸಂಧಿಸುವ ತಾಣ!!!

ಆಫೀಸ್ಗೆ ಹೋಗಬೇಕು.. ಅಯ್ಯೋ ಬೆಳಿಗ್ಗೆಯಿಂದ ತಿಂಡಿ ತಿಂದಿಲ್ಲ.. ಬೇಗ ಮುಗಿದರೆ ಸಾಕು ಊರಿಗೆ ಹೋಗಬೇಕು.. ಬಸ್ ಎಷ್ಟೊತ್ತಿಗೆ.. ದೇಹದ ಉಸಾಭರಿಯನ್ನು  ಕೇಳುವವರೇ ಇಲ್ಲ.. ದೇಹ ಬೇಸರದಲ್ಲಿದ್ದಾಗ ಆತ್ಮ ನಗುತ್ತಾ ಹಾಡಲು ಶುರುಮಾಡಿತು... 

"ಹೆಂಡತಿ ಮಕ್ಕಳು  ಬಂಧು ಬಳಗ 
ರಾಜಯೋಗದ ವೈಭೋಗ 
ಕಾಲನು ಬಂದು ಬಾ ಎಂದಾಗ 
ಎಲ್ಲವೂ ಶೂನ್ಯ ಚಿತೆ ಏರುವಾಗ
ಎಲ್ಲಾ ಶೂನ್ಯ ಎಲ್ಲವೂ ಶೂನ್ಯ 
ಉಳಿಯುವುದೊಂದೇ ದಾನ ಧರ್ಮ ತಂದ ಪುಣ್ಯ"

ದೇಹಕ್ಕೆ ನಿಜದ ಅರ್ಥವಾಯಿತು

"ನಾನೇ ಎಂಬ ಭಾವ ನಾಶವಾಯಿತು.. ನೀನೆ ಎಂಬ ನೀತಿ ನಿಜವಾಯಿತು.. ಒಳಗಿನ ಕಣ್ಣನು ತೆರೆಸಿದೆಯೋ.. ಗೀತೆಯ ಮರ್ಮವಾ ತಿಳಿಸಿದೆಯೋ.. "


ಅರೆ ಕಣ್ಣಿಗೆ ಏನೋ ಬೀಳುತ್ತಿದ್ದೆ ಎಂದು ಮೇಲೆ ನೋಡಿತು ದೇಹ.. ಎಲ್ಲರೂ ಒಂದು ಹಿಡಿ ಮಣ್ಣನ್ನು ಹಾಕುತ್ತ ಹೋದರು.. ತಲೆಯೆಲ್ಲಾ ಮಣ್ಣು.. ಕಣ್ಣು ಬಿಡಲಾಗುತ್ತಿಲ್ಲ.. ಉಸಿರು ಸಿಕ್ಕಿಕೊಳ್ಳುತ್ತಿದೆ.. ಅರೆ ಇದೇನು ಕಣ್ಣಿಗೆ ಕಪ್ಪು ಕತ್ತಲೆ.. ಅರೆ ಅರೆ.. ಏನಾಗು.... "ಈ ದೇಹದಿಂದ ದೂರವಾದೆ ಏಕೆ ಆತ್ಮವೇ.. ಈ ಸಾವು ನ್ಯಾಯವೇ.. "

ಆತ್ಮ ಇನ್ನೊಂದು ದೇಹವನ್ನು ಹುಡುಕುತ್ತಾ.. ಹಾಡುತ್ತಾ ಸಾಗಿತು

ಇಲ್ಲಿಗೆ ಬರಲೇ ಬೇಕು !!!


"ಕಥೆ ಮುಗಿಯಿತೇ ಆರಂಭದ ಮುನ್ನಾ.. ಎಲ್ಲಿಗೆ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ.. !!!!

5 comments:

  1. ಇದ್ದಾಗ ಸಮೀಕರಣ, ಮುಗಿದ ದಿನ ಸಮಾಕರಣ.
    ಅಂತಿಮ ಯಾತ್ರೆಯ ಬರಹ ನಮ್ಮೊಳ ಅಹಮ್ಮಿಗೆ ಸರಿಯುತ್ತರ.

    ReplyDelete
  2. ಬಹಳ ಭಾವನಾತ್ಮಕ ಲೇಖನ. ಆತ್ಮಕ್ಕೆ ದೇಹದ ಬಗ್ಗೆ ಅಥವಾ ದೇಹಕ್ಕೆ ಆತ್ಮದ ಬಗ್ಗೆ ಇರಬಹುದಾದ ಒಂದು ನಂಟನ್ನು ಬಹಳ ಚೆನ್ನಾಗಿ ಬಣ್ಣಿಸಿದ್ದೀರಿ. ಹಾಡಿನ ಸಾಲುಗಳನ್ನು, ಲೇಖನಕ್ಕಿ ಎಳ್ಳು ಲೋಪ ಬರದಂತೆ ಜೋಡಿಸಿದ್ದು ತುಂಬಾ ಸೊಗಸಾಗಿದೆ. ಆ ಸಾಲುಗಳನ್ನು ಓದುವಾಗ ತಾನಾಗೆ ರಾಗವಾಗಿ ಓದಿದೆ ನಾನು :). ನಿಮ್ಮ ಸೈಲಿಯಿಂದ ಬೇರೆಯದಾಗಿ ಬರೆದಿದ್ದೀರಿ. ಈ ತರಹದ ಬರವಣಿಗೆಗಳು ಇನ್ನು ಬರಲಿ :)

    ReplyDelete
  3. ಇವತ್ತು ಬೆಳಿಗ್ಗಿಂದ ಇದು ಎರಡನೇ ಲೇಖನ ನಾನು ಸಾವಿನ ಬಗ್ಗೆ ಓದುತ್ತಾ ಇರುವುದು..
    ಆತ್ಮ ಮತ್ತು ದೇಹದ ನಂಟಿನ ವಿಶ್ಲೇಷಣೆ ನೈಜವಾಗಿದೆ... ಜೊತೆ ಜೊತೆಯಲ್ಲೇ ಸಾಗುವ ಸಾವಿನ ಮನೆಯ ಸೂತಕದ ವಾತಾವರಣದ ವಿವರಣೆ ಲೇಖನದ ತೂಕ..

    ಸುಡುಗಾಡೂ ಕಾಡುತ್ತದೆ ಕೆಲವೊಮ್ಮೆ ಭಯಂಕರವಾಗಿ..
    ಇಷ್ಟವಾಯಿತು..

    ReplyDelete
  4. ಆತ್ಮೀಯ ಶ್ರೀಕಾಂತ,
    ಬಹಳದಿನಗಳ ಮೇಲೆ ಒಂದು ಒಳ್ಳೆಯ ಪತ್ರ ಓದಿದೆಎಲ್ಲಿಗೆ ಪಯಣ ? ಯಾವುದೋ ದಾರಿ? ಏಕಾಂಗಿ ಸಂಚಾರಿ....
    ಎನ್ನುವ ಪಯಣದ ಚಿತ್ರಣ ಮನೋಜ್ಞವಾಗಿ ಮೂಡಿದೆ. ಸ್ಮಶಾನದಲ್ಲಿರುವ ತನಕ ವೈರಾಗ್ಯ ಹೊರಗೆ ಕಾಲಿಟ್ಟೊಡನೆ ಬಂಧನದ ಬದುಕು ಮತ್ತೆ ಪ್ರಾರಂಭ. ಮುಗಿಯದಿ ಈ ಪಯಣ, ಯಾತಕೋ ಈ ಬಾಳು? ಸಾಕುಮಾಡೋ ಜೀವನ .... ಎಂದು ನರಳುತ್ತಿರುವ ಹಿರಿ ಜೀವಗಳ ಬದುಕು ನೆನಪಿಸುವ ನಿನ್ನ ಲೇಖನ ಓದಿದಾಗ ಕಣ್ಣಂಚಿನಲ್ಲಿ ಅರಿವಿಲ್ಲದೆ ನೀರು ತುಂಬಿತ್ತು .
    ಉತ್ತಮ ಲೇಖನ

    ReplyDelete
  5. ಬಹಳ ಅರ್ಥಪೂರ್ಣವಾದ ಗಂಭೀರ ಲೇಖನ. ಪ್ರತಿಯೊಬ್ಬ ಓದುಗನೊಳಗೆ ವಿಚಾರದ ಅಲೆಗಳನ್ನು ಎಬ್ಬಿಸುತ್ತವೆ. nice one.

    ReplyDelete