Sunday, August 18, 2019

ನಲವತ್ತು ವರ್ಷಗಳಿಗೊಮ್ಮೆ ಬರುವ ಇತಿಹಾಸಕ್ಕೆ ಹೆಜ್ಜೆ ಇಟ್ಟ ಕ್ಷಣ.. ಕಾಂಚಿಪುರಂ - ಅತ್ತಿ ವರದರಾಜ ಸ್ವಾಮಿ ದರ್ಶನ

ಇದೊಂತರ ಇಬ್ಬದಿಯಾಗಿತ್ತು.. ಇದು ಪ್ರವಾಸವೋ, ಅನುಭವವೋ.. ಗೆಳೆಯರ ಜೊತೆಯಲ್ಲಿನ ತಿರುಗಾಟವೋ.. ಯಾವ ಬ್ಲಾಗಿನಲ್ಲಿ ತುಂಬಬೇಕು ಎನ್ನುವ ಗೊಂದಲ.. ಕಡೆಗೆ ಇದು ನನ್ನ ಪ್ರಪಂಚದಲ್ಲಿ ನೆಡೆದದ್ದಿರಿಂದ ಶ್ರೀ ಪ್ರಪಂಚದಲ್ಲಿಯೇ ಬರೋದು ಸರಿ ಅನ್ನಿಸಿ ಇಲ್ಲಿಗೆ ಹೆಜ್ಜೆ ಇಟ್ಟೆ..

ಈ ಕಲಿಯುಗದಲ್ಲಿ ಕಣ್ಣಿಗೆ ಕಾಣುವ ವಿಸ್ಮಯಗಳು ಒಂದಾದರೆ. .. ಕಣ್ಣಿಗೆ ಕಾಣದ ವಿಸ್ಮಯಗಳು ಅನೇಕ.. ವಾಟ್ಸಾಪಿನಲ್ಲಿ ೪೦ ವರ್ಷದ ನಂತರ ವಿಗ್ರಹದ ದರ್ಶನ ಅಂತ ವಿಡಿಯೋ ಬಂದಾಗ ಅಯ್ಯೋ ಈ ರೀತಿಯ ಅನೇಕ ಟಿ ಆರ್ ಪಿ ವಿಡಿಯೋಗಳು ಅಂತ ನೋಡದೆ ಬಿಟ್ಟಿದ್ದೆ.. ಆದರೆ ಈ ವಿಗ್ರಹದ ಬಗ್ಗೆ ಮಾತುಗಳು ಹೆಚ್ಚಾಯಿತು.. ಜೊತೆಯಲ್ಲಿ ಗುಪ್ತಗಾಮಿನಿಯ ಹಾಗೆ ದೇವರಲ್ಲಿ ನಂಬಿಕೆ ಇಟ್ಟಿರುವ ನನ್ನ ಆತ್ಮೀಯ ಗೆಳೆಯನ ಸಂದೇಶ "BOD's can we make a visit to Kanchipuram this weekend for Athi Varadar darshan.. I am planning alone.. General Darshan, no ticket" ಈ ಸಂದೇಶ ನೋಡಿದ ತಕ್ಷಣ ನಾನೇ ಮೊದಲು ಉತ್ತರಿಸಿದೆ.. ಬರ್ತೀನಿ ಅಂತ.. ಅಲ್ಲಿಂದ ಶುರುವಾಯಿತು ನಮ್ಮ ಪಯಣ.. ಎರಡೇ ದಿನ ಇದ್ದದ್ದು ಸಿದ್ಧವಾಗೋಕೆ..

ನನ್ನ ಕಾರು ಪುಣ್ಯ ಮಾಡಿತ್ತು.. ಸರಿ ಬೆಳಗಿನ ಜಾವ ಮೂರು ಮೂವತ್ತಕ್ಕೆ ವೆಂಕಿ ಮನೆಯ ಮುಂದೆ ನಿಂತಾಗ.. ದೇವರ ದರ್ಶನಕ್ಕೆ ಮುಂಚೆಯೇ ನನಗೆ ಸಹಸ್ರನಾಮ ಮತ್ತು ಮಂಗಳಾರತಿ ಆಗಿತ್ತು ಅವನಿಂದ.. ಸೌಮ್ಯ ಮತ್ತು ವೆಂಕಿ ಜೊತೆಯಾದರು.. ಅಲ್ಲಿಂದ ಹೊರಟಿತ್ತು ನಮ್ಮ ಸವಾರಿ ಶಶಿ ಮತ್ತು ಪ್ರತಿಭಾ ಜೋಡಿಯನ್ನು ಕರೆದುಕೊಂಡು ಹೊಸೂರಿನತ್ತ.. ..

ಕೃಷ್ಣಗಿರಿ ಆಸುಪಾಸಿನಲ್ಲಿ ಹೋಟೆಲಿನಲ್ಲಿ ಹೊಟ್ಟೆ ತುಂಬಾ ತಿಂದೆವು ..ತಿಂಡಿ ಸೊಗಸಾಗಿತ್ತು.. ದಾರಿಯುದ್ದಕ್ಕೂ ನಮ್ಮ ತರಲೆ ಮಾತುಗಳು..
ಜೀವದ ಗೆಳೆಯರು 

ಈ ಗೆಳೆತನಕ್ಕೆ ಜೀವ ತುಂಬಿದ ನನ್ನ ಪುಟ್ಟಿಯರು 

ನಲವತ್ತು ವರ್ಷಗಳ ನಂತರ ಅತ್ತಿ ವರದರಾಜ ದೇವರ ದರ್ಶನಕ್ಕೆ ಮೂವತ್ತೈದು ವರ್ಷಗಳ ಗೆಳೆಯರ ಜೊತೆಯಲ್ಲಿ ನಾ ಹೊರಟಿದ್ದೆ.. ರೇಗಿಸಿ ರೇಗಿಸಿ.. ಬಯ್ಸಿಕೊಂಡು, ಪ್ರೀತಿಯಿಂದ ಹೊಡೆಸಿಕೊಂಡು  ನಮ್ಮ ಪಯಣ ಸಾಗಿತ್ತು.. ನಮ್ಮ ಗುಂಪೇ ಹಂಗೆ.. ಯಾವುದಕ್ಕೂ ಜಗ್ಗುವುದಿಲ್ಲ.. ತರಲೆ ಮಾತುಗಳಿಲ್ಲದೆ ಪಯಣ ಸಾಗೊಲ್ಲ..

ಸೂಪರ್ ಹಾದಿ 


ಕಾಂಚಿಪುರಂ ನಗರಕ್ಕೆ ನಮ್ಮ ಕಾರು ಪ್ರವೇಶಿಸಿತು.. ಇನ್ನೂ ಸುಮಾರು ಹತ್ತು ಕಿಮೀಗಳಿದ್ದವು.. ಆಗಲೇ ಅಡ್ಡಪಟ್ಟಿಗಳು, ಫಲಕಗಳು ವಾಹನ ನಿಲುಗಡೆಗೆ ದಾರಿ ಅಂತ ತೋರಿಸುತ್ತಿತ್ತು.. ಪೊಲೀಸರನ್ನು ಬಯ್ದುಕೊಂಡರು.. ಅಲ್ಲಿಯೇ ವಾಹನ ನಿಲುಗಡೆಗೆ ನಿಗದಿಯಾಗಿದ್ದ ಜಾಗದಲ್ಲಿ ನಿಲ್ಲಿಸಿ.. ಅಲ್ಲಿಂದ ಬಸ್ ಹತ್ತಿದೆವು.. ಆ ಬಸ್ಸು ಒಂದು ಕಡೆ ನಿಂತು.. ಅಲ್ಲಿಂದ ಇನ್ನೊಂದು ಪುಟಾಣಿ ಬಸ್ಸಿನಲ್ಲಿ ಹೋಗಬೇಕೆಂದು ಮಾಹಿತಿ ಸಿಕ್ಕಿತು..

ಫಲಕಗಳು ದಾರಿ ತೋರಿಸುವ ಸಹಾಯ ಮಾಡಿದವು 

ಸರಿ.. ಆ ಪುಟಾಣಿ ಬಸ್ಸಿನಲ್ಲಿ ಹೊರಟು ದೇವಸ್ಥಾನದ ಬಳಿ ಬಂದಾಗ.. ದೇವಾಲಯಕ್ಕೆ ದಾರಿ ಅನ್ನುವ ಫಲಕ ನೋಡುತ್ತಲೇ ಸಾಗಿದೆವು... ಎಡ ಬಲ ಭಾಗದಲ್ಲಿ ಸೀರೆಯ ಜಾಹಿರಾತುಗಳು.. ಬಣ್ಣ ಬಣ್ಣದ ಸೀರೆಗಳು.. ಸುತ್ತ ಮುತ್ತಲು ಜನಸಾಗರ.. ಕಾಲಿಗೆ ಕಾಲಿಗೆ ಸಿಕ್ಕುವಷ್ಟು ಜನ ದಟ್ಟಣೆ ..ಲಘುಬಗೆಯಿಂದ  ಹೆಜ್ಜೆ ಹಾಕಿದೆವು.. ಬಿಸಿಲು ನಿಧಾನವಾಗಿ ಏರುತ್ತಿತ್ತು.. ಮೈಬೆವರು ಬೆಳಗಿನ ತಿಂಡಿ ಸಾಕಾಗಿಲ್ಲ ಅಂತ ಹೇಳುತ್ತಿತ್ತು.. ನೀರಿನ ಬಾಟಲ್ ಖಾಲಿಯಾಗುತ್ತಿತ್ತು.. ಮನದಲ್ಲಿ ನಾರಾಯಣನ ಧ್ಯಾನ ಜೊತೆಯಲ್ಲಿ ನಮ್ಮ ತರಲೆ ಮಾತುಗಳು ಸಾಗುತಿದ್ದವು..

ಆಲಯ ...ದೇವಾಲಯ 

ಅಲ್ಲಿನ ಸಿದ್ಧತೆಗಳನ್ನು ನೋಡಿ ಒಂದು ಕ್ಷಣ ಅಚ್ಚರಿಗೊಂಡೆವು.. ಜನದಟ್ಟಣೆ ಹೆಚ್ಚಾಗಿತ್ತು.. ಶ್ರಾವಣ ಮಾಸದ ಮೊದಲ ಶನಿವಾರ.. ಜೊತೆಯಲ್ಲಿ ವಿಷ್ಣು ದೇವರು.. ಇದಕ್ಕಿಂತ ಇನ್ನೇನು ಸುಯೋಗ ಬೇಕು.. ಜನಸಾಗರವೇ ಇತ್ತು..  ಸುತ್ತ ಮುತ್ತಲ ಸಿದ್ಧತೆ ಚೆನ್ನಾಗಿತ್ತು.. ದೇವಸ್ಥಾನದ ಹತ್ತಿರದ ದಾರಿಯಲ್ಲಿ ಮೇಲ್ಛಾವಣಿ ಇತ್ತು.. ನೀರಿನ ಸೌಕರ್ಯ, ಅರೋಗ್ಯ ತಪಾಸಣೆ ಕೇಂದ್ರ.. ನಿಶ್ಯಕ್ತಿ ಆದವರಿಗೆ ಜೀವ ಜಲ..ಶೌಚಾಲಯ..  ದೊಡ್ಡ ಪರದೆಯಲ್ಲಿ ದೇವರ ದರ್ಶನ.. ಎಲ್ಲವೂ ಇತ್ತು.. ಊಟದ ಸೌಕರ್ಯ ಒಂದು ಇರಲಿಲ್ಲ.. ಆ ಜನಸಾಗರಕ್ಕೆ ಊಟದ ವ್ಯವಸ್ಥೆ ಕಷ್ಟಸಾಧ್ಯವೇ ಸರಿ.. ಆದರೆ ದೇವಸ್ಥಾನದ ಹತ್ತಿರ ಬಂದಾಗ ಅನೇಕ ಅಡಿಕೆ ತಟ್ಟೆಗಳಲ್ಲಿ ಆಹಾರ ಚೆಲ್ಲಿದ್ದು.. ಮುತ್ತುಗದ ಎಲೆಯ ಬಟ್ಟಲಿನಲ್ಲಿ ಪ್ರಸಾದ ಚೆಲ್ಲಿದ್ದು ಗಮನಕ್ಕೆ ಬಂತು.. ಬಹುಶಃ ಹಿಂದಿನ ದಿನಗಳಲ್ಲಿ ಕೊಟ್ಟಿರಬಹುದು.. ಶನಿವಾರ ಜನಸಂದಣಿ ಹೆಚ್ಚಿರುವ ಕಾರಣ ಇಂದು ಕೊಟ್ಟಿಲ್ಲ ಅನಿಸುತ್ತೆ ಎಂದುಕೊಂಡು ಮುನ್ನೆಡೆದೆವು..

ಸರತಿಯಲ್ಲಿ ನಿಂತಾಗ 

ದೇಗುಲದ ಪ್ರಾಂಗಣಕ್ಕೆ ಪ್ರವೇಶ ಮಾಡಿದಾಗ ಮನಸ್ಸು ನಾರಾಯಣನ ಧ್ಯಾನದಲ್ಲಿ ಮುಳುಗಿತ್ತು.. ಗೋವಿಂದ ಗೋವಿಂದ ನಾಮ ಜೋರಾಗಿ ಕೇಳಿಬರುತ್ತಿತ್ತು.. ಜನರು, ಭಕ್ತರು ಭಾವೋದ್ವೇಗಕ್ಕೆ ಒಳಗಾಗಿದ್ದರು... ಮನದೊಳಗೆ ಫುಳಕ.. ಸಾಮಾನ್ಯ ಮನುಜನ ಜೀವಿತಾವಧಿಯಲ್ಲಿ ಒಮ್ಮೆ ನೋಡಬಹುದಾದ ಸಂಭ್ರಮವಿದು..

ಭಕ್ತಾದಿಗಳು 

ಬೆಳಿಗ್ಗೆ ಸುಮಾರು ಹತ್ತು ಘಂಟೆಗೆ ನಿಂತದ್ದಕ್ಕೆ ದರ್ಶನ ಸಿಕ್ಕಿದ್ದು ಸಂಜೆ ನಾಲ್ಕು ಘಂಟೆಗೆ.. ಮನಸ್ಸು ಹಗುರಾಗಿತ್ತು.. ಆ ಮಹಾಮಹಿಮ ದರ್ಶನ ಕೆಲವೇ ಕ್ಷಣಗಳು ಸಿಕ್ಕಿದ್ದು ಆದರೂ ಕಣ್ಣು ತುಂಬಿಕೊಂಡಿತ್ತು.. ಜೀವ ಸಾರ್ಥಕ ಅನಿಸಿತ್ತು..

ದೊಡ್ಡ ದೊಡ್ಡ ಗೋಪುರ 

ಮೊದಲ ದೃಶ್ಯ - ಪರದೆಯಲ್ಲಿ 

ಆರಕ್ಷಕ ಸಿಬ್ಬಂಧಿಗೆ ಒಂದು ಸಲಾಂ 




ಕ್ಲೈಮಾಕ್ಸ್ .. 

ಈ ಮಂಟಪದಲ್ಲಿಯೇ ವಿಗ್ರಹ ಇಟ್ಟಿದ್ದು 

ಕೃಪೆ - ಗೂಗಲೇಶ್ವರ 

ಕೃಪೆ ಗೂಗಲೇಶ್ವರ 

ದೇವಸ್ಥಾನದಿಂದ ಹೊರಗೆ ಬಂದಾಗ ಕಣ್ಣುಗಳು ಅರಸಿದ್ದು ಈ ದೇವಾಲಯದ ಅಥವ ಈ ಮೂರ್ತಿಯ ಬಗ್ಗೆ ಮಾಹಿತಿಯ ಪುಸ್ತಕ.. ಆದರೆ ಕಣ್ಣಿಗೆ ದೇವರ ಬಗೆ ಬಗೆಯ ಚಿತ್ರಗಳು, ಫೋಟೋಗಳು ಕಾಣುತ್ತಿದ್ದವೇ ಹೊರತು ಮಾಹಿತಿ ಭಂಡಾರ ಕಾಣಲಿಲ್ಲ..

ವಿಧಿಯಿಲ್ಲದೇ ಗೂಗಲೇಶ್ವರನ ಮೊರೆ ಹೋಗೋಣ ಅಂತ.. ತೀರ್ಮಾನಿಸಿ ಬೆಂಗಳೂರಿನ ಕಡೆಗೆ ಹೆಜ್ಜೆ ಹಾಕಿದೆವು.. ಹೊಟ್ಟೆ ತಾಳಹಾಕುತ್ತಿತ್ತು .. ಹೆಸರುವಾಸಿಯಾಗಿದ್ದ ಸರವಣ ಭವನಕ್ಕೆ ಹೋದೆವು.. ನಿರಾಶೆಯಾಯಿತು.. ಆರ್ಡರ್ ತೆಗೆದುಕೊಳ್ಳುವವನ ನಿರ್ಲಕ್ಷ್ಯ, ಧಿಮಾಕು.. ಬೇಸರ ತರಿಸಿತು.. ಜೊತೆಯಲ್ಲಿ ಕೊಟ್ಟ ತಿಂಡಿಯೊ ದೇವರಿಗೆ ಪ್ರೀತಿ.. ಬಯ್ದುಕೊಂಡೆ ಬಿಲ್ ಪಾವತಿ ಮಾಡಿ ಹೊರಗೆ ಬಂದು.. ಕಾರಿನ ಕಡೆಗೆ ಹೋಗೋಕೆ ಆಟೋ ಹಿಡಿದೆವು..

ಕಾರಿನ ಹತ್ತಿರ ಬಂದು.. ಬೆಂಗಳೂರಿನ ಕಡೆಗೆ ದೌಡಾಯಿಸಿದೆವು.. ಹೊಸೂರಿನ ಬಳಿಯಲ್ಲಿ A2Bಯಲ್ಲಿ ಹೊಟ್ಟೆ ತುಂಬಿಸಿಕೊಳ್ಳುವಷ್ಟು ತಿಂದು.. ಮನೆಯ ಕಡೆಗೆ ಹೊರಟೆವು ..

ಹೊಟ್ಟೆಗೆ ಬಿದ್ದಾಗ ಬೆಳಕು ಮೂಡುತ್ತದೆ 



ಇಡೀ ದಾರಿಯಲ್ಲಿ ನನಗೆ ಕಾಡಿದ ಪ್ರಶ್ನೆ. ಈ ಕ್ಷೇತ್ರದ ಮಹತ್ವವೇನು.. ಸೀರೆಗಳಿಗೆ ಹೆಸರಾದ ಕಾಂಚಿಪುರಂ ಈ ದೇವಾಲಯ/ಈ ಸಂಭ್ರಮಕ್ಕೆ ಕಾರಣವೇನು ಎಂದು ಹುಡುಕುತ್ತ ಹೋದಾಗ.. ನೆಲವನ್ನು ಬಗೆದಾಗ ಹಲವಾರು ವಿಷಯಗಳು ಸಿಗುವಂತೆ.. ಭರಪೂರ ಮಾಹಿತಿ ದೊರೆಯಿತು.. ಆದರೂ ಇದು ಕಲಿಯುಗ. ಇಲಿ ಹೋಯ್ತು ಅಂದ್ರೆ ಹುಲಿ ಹೋಯ್ತು ಎನ್ನುವ ತವಕ.. ಆದರಿಂದ ನನಗೆ ಎಟುಕಿದ ಮಾಹಿತಿ.. ಮತ್ತು ನನಗೆ ಸರಿ ಅನಿಸಿದ ಕೆಲವು ಮಾಹಿತಿಗಳನ್ನುದಾಖಲಿಸಿದ್ದೇನೆ .. ಇದರ ಕೃಪೆ ಗೂಗಾಲೇಶ್ವರ ಮತ್ತು ಯು ಟ್ಯೂಬ್ ಅಕ್ಕ..

ಕೃತಯುಗದಲ್ಲಿ ಬ್ರಹ್ಮ ಮತ್ತು ಸರಸ್ವತಿಯ ಮಧ್ಯೆ ಭಿನ್ನಾಭಿಪ್ರಾಯ ಬಂದು.. ಸರಸ್ವತಿ ಮುನಿದು ಬ್ರಹ್ಮನನ್ನು ತೊರೆದು ಭುವಿಗೆ ಇಳಿಯುತ್ತಾಳೆ.. ಬ್ರಹ್ಮನು ತನ್ನ ಪಿತ ವಿಷ್ಣುವಿನ ಬಳಿಯಲ್ಲಿ ಇದಕ್ಕೆ ಪರಿಹಾರ ಕೇಳಿದಾಗ ಸಾವಿರ ಅಶ್ವಮೇಧಯಾಗ ಮಾಡಬೇಕು ಎಂದು ಹೇಳುತ್ತಾನೆ . ಒಂದು ಅಶ್ವಮೇಧ ಮಾಡುವುದೇ ಸಾಹಸ ಇನ್ನೂ ಸಾವಿರ ಅಂದರೆ ಕಷ್ಟ ಎಂದಾಗ.. ಈಗಿನ ಕಾಂಚಿಪುರಂ ಪ್ರದೇಶದಲ್ಲಿ ಒಂದು ಅಶ್ವಮೇಧ ಮಾಡು ಎನ್ನುತ್ತಾನೆ ವಿಷ್ಣು..

ಬ್ರಹ್ಮ ಯಾಗ ಶುರುಮಾಡಿದಾಗ ಸರಸ್ವತಿ ವೇದಾವತಿ ನದಿಯಾಗಿ ಯಜ್ಞಕ್ಕೆ  ಅಡ್ಡಿ ಪಡಿಸಲು ಪ್ರಯತ್ನಿಸುತ್ತಾಳೆ.. ಆಗ ವಿಷ್ಣು ಯಜ್ಞಕುಂಡದಲ್ಲಿ ಪ್ರತ್ಯಕ್ಷನಾಗಿ ಸರಸ್ವತಿಯನ್ನು ಸಮಾಧಾನ ಪಡಿಸುತ್ತಾನೆ.. ಬ್ರಹ್ಮನು ವಿಷ್ಣುವಿಗೆ ಈ ಯಜ್ಞದ ಹವಿಸ್ಸು ನಿನಗೆ ಕೊಡುತ್ತೇನೆ.. ನೀನು ಇಲ್ಲಿಯೇ ನೆಲೆ ನಿಂತು ಭಕ್ತರಿಗೆ ಆಶೀರ್ವದಿಸು ಎಂದು ಕೇಳಿಕೊಂಡಾಗ.. ವಿಶ್ವಕರ್ಮ ಅತ್ತಿ ಮರದಲ್ಲಿ ವಿಷ್ಣುವಿನ ಮೂರ್ತಿಯನ್ನು ಕೆತ್ತಿ..  ಅದಕ್ಕೆ ಪೂಜೆ ಸಲ್ಲಿಸುವ ಕಾರ್ಯ ನೆಡೆದಾಗ ಅದು ಅತಿ(ಅತ್ತಿ) ವರದರಾಜ ದೇವರು ಎಂದು ಪ್ರಚಲಿತ ಗೊಳ್ಳುತ್ತದೆ.. ಮಹಾಮಹಿಮರು ಈ ವಿಗ್ರಹಕ್ಕೆ ಪೂಜೆ ಮಾಡಿದ್ದಾರೆ ಮತ್ತು ಸಾವಿರಾರು ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ..

ನಂತರ ಕಲಿಯುಗದ ಕಾಲದಲ್ಲಿ ಸುಮಾರು ಹದಿನಾರನೇ ಶತಮಾನದಲ್ಲಿ ಮೊಘಲರ ದಾಳಿಯಿಂದ ಸುಂದರ ವಿಗ್ರಹಗಳನ್ನು ರಕ್ಷಿಸುವ ಸಾಹಸದಲ್ಲಿ ಭರದಲ್ಲಿ ಈ ಅತ್ತಿ ವರದರಾಜ ವಿಗ್ರಹವನ್ನು ದೇವಸ್ಥಾನದ  ಮೂಲ ಅರ್ಚಕರಾಗಿದ್ಧ ಅಣ್ಣ ತಮ್ಮ ಅಲ್ಲಿಯೇ ಇದ್ದ ಅನಂತ ಸರೋವರದಲ್ಲಿ ಬಚ್ಚಿಡುತ್ತಾರೆ.. ಈ ವಿಷಯ ಮೂಲದೇವರ ಅರ್ಚಕರಾಗಿದ್ದ ಅಣ್ಣ ತಮ್ಮನಿಗೆ ಮಾತ್ರ ಗೊತ್ತಿರುತ್ತದೆ..ಬೇರೆ ಯಾರಿಗೂ ಇದರ ಸುಳಿವು ಕೊಟ್ಟಿರುವುದಿಲ್ಲ ..  ಕಾಲಾನಂತರ ಅಣ್ಣ ತಮ್ಮ ನಿಧನವಾದ ನಂತರ.. ಯಾರಿಗೂ ಈ ವಿಗ್ರಹದ ಎಲ್ಲಿದೆ ಎಂದು ಗೊತ್ತಾಗದೆ.. ಹುಡುಕಾಟದಲ್ಲಿ ವಿಫಲರಾಗಿರುತ್ತಾರೆ..

ಸುಮಾರು ನಲವತ್ತು ವರ್ಷಗಳ ಕಾಲ ವಿಗ್ರಹವಿಲ್ಲದೆ ದೇವಸ್ಥಾನದಲ್ಲಿ ಪೂಜೆ ನೆಡೆಯದೆ ಸಾಗಿರುತ್ತದೆ.. ಶಿಲೆಯಲ್ಲಿ ವರದರಾಜರ ಮೂರ್ತಿಯನ್ನು ಕೆತ್ತಿಸಿ ಪ್ರತಿಷ್ಠಾಪಿಸಿ ಪೂಜೆಯನ್ನು ಮತ್ತೆ ಶುರುಮಾಡುತ್ತಾರೆ.. ಒಂದು ವರ್ಷ.. ದೇವಸ್ಥಾನದ ಬಳಿಯ ಸರೋವರ/ಕಲ್ಯಾಣಿಯಲ್ಲಿ ನೀರು ಇಂಗಿ ಹೋದಾಗ ಈ ವಿಗ್ರಹ ಇರುವ ಬಗೆ ಗೊತ್ತಾಗುತ್ತದೆ.. ವಿಗ್ರಹವನ್ನು ಹೊರಗೆ ತೆಗೆದು ಪೂಜೆ ಪುನಸ್ಕಾರ ಸಲ್ಲಿಸಿ.. ಮತ್ತೆ ಈ ವಿಗ್ರಹವನ್ನು ಅದೇ ಕಲ್ಯಾಣಿಯಲ್ಲಿ ಇಡುವ ಪದ್ಧತಿ ಶುರುಮಾಡುತ್ತಾರೆ.. ತದನಂತರ.. ಈ ವಿಗ್ರಹವನ್ನು ನಲವತ್ತು ವರ್ಷಗಳಿಗೊಮ್ಮೆ ಅದೇ ಕಲ್ಯಾಣಿಯಿಂದ ಹೊರಗೆ ತೆಗೆದು.. ಒಂದು ಮಂಡಲ ಪೂಜೆ ಅಂದರೆ ೪೮ದಿನಗಳ ಕಾಲ ಪೂಜೆ ಸಲ್ಲಿಸಿ ಮತ್ತೆ ಕಲ್ಯಾಣಿಯಲ್ಲಿ ಸಿಕ್ಕ ಜಾಗದಲ್ಲಿಯೇ ವಿಗ್ರಹವನ್ನು ಇಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ..

ಕಲ್ಯಾಣಿಯಿಂದ ಹೊರಗೆ ತೆಗೆದ ಮೇಲೆ .. ಈ ಮೂರ್ತಿಯು ಮೊದಲ ೨೪ದಿನ ಶಯನ ಭಂಗಿಯಲ್ಲಿ ನಂತರ  ಮುಂದಿನ ೨೪ದಿನಗಳು ನಿಂತ ಭಂಗಿಯಲ್ಲಿ ಪೂಜೆ ಪುನಸ್ಕಾರಗಳನ್ನು ಸ್ವೀಕರಿಸುತ್ತಾರೆ..

ಕಾರಣಗಳು ಏನೇ ಇರಬಹುದು.. ಅಥವಾ ಐತಿಹ್ಯ ಏನೇ ಇರಬಹುದು.. ಆದರೆ ಈ ಅತ್ತಿಯ ಮರದಲ್ಲಿ ಮಾಡಿದ ವಿಗ್ರಹ ನೋಡಲು ಸುಂದ್ರವಾಗಿದೆ ಮತ್ತು ಮನಮೋಹಕವಾಗಿದೆ.. ಸುಮಾರು ಒಂಭತ್ತು/ಹತ್ತು ಅಡಿಯ ವಿಗ್ರಹವನ್ನು ಅತ್ತಿ ಮರದಲ್ಲಿ ಕೆತ್ತನೆ ಮಾಡಲಾಗಿದೆ.. ಅತ್ತಿ ಮರವು ನೀರಿನಲ್ಲಿ ನೆಂದಷ್ಟು ಗಟ್ಟಿಯಾಗುತ್ತದೆ ಎನ್ನುತ್ತಾರೆ.. ಮತ್ತೆ ನೀರಿನಲ್ಲಿಯೇ ಇರುವ ಈ ವಿಗ್ರಹವನ್ನು ಸಂರಕ್ಷಿಸಲು ಕೆಲವು ರಾಸಾಯನಿಕವನ್ನು ಬಳಸುತ್ತಾರೆ ಎಂಬ ಮಾಹಿತಿ ನಿಜವೋ ಸುಳ್ಳೋ ಗೊತ್ತಿಲ್ಲ.. ಆದರೆ ದೇವನ ಮಹಿಮೆ ಕಂಡವರಾರು..


  • ಬೆಂಗಳೂರಿನ ಬಳಿಯಿರುವ ಶಿವಗಂಗೆಯ ಲಿಂಗದ ಮೇಲೆ ತುಪ್ಪ ಸವರಿದರೆ ಬೆಣ್ಣೆ ಬರುವ ಪವಾಡ ನೋಡಿದ್ದೇವೆ..
  • ಶಿವಗಂಗೆ ಬೆಟ್ಟ ಒಂದು ಬದಿಯಿಂದ ಗಣೇಶನ ಹಾಗೆ, ಸರ್ಪದ ಹಾಗೆ, ಲಿಂಗದ ಹಾಗೆ, ಬಸವಣ್ಣನ ಹಾಗೆ ಕಾಣುವುದು ವಿಶೇಷ..
  • ಹಾಸನದ ಹಾಸನಾಂಬಾ ದೇವಿಯ ದರ್ಶನ ವರ್ಷಕ್ಕೊಮ್ಮೆ ಸುಮಾರು ಎಂಟರಿಂದ ಹತ್ತು ದಿನ ದರ್ಶನವಾಗುತ್ತದೆ.. ಗಾಳಿ ಸಹ ಒಳಗೆ ಹೋಗಲಾರದ ದೇವಾಲಯದ ಒಳಗೆ ಬಾಗಿಲು ಹಾಕುವ ಮುನ್ನ ಇಟ್ಟಿರುವ ನೈವೇದ್ಯ, ಹಚ್ಚಿದ ದೀಪ, ಕುಂಕುಮ, ಅರಿಶಿನ, ಹಣ್ಣು ಹಂಪಲುಗಳು, ಹೂವುಗಳು ಒಂದು ವರ್ಷದ ನಂತರವೂ ಒಣಗದೆ ಆಗ ತಾನೆ ತಂದಿಟ್ಟಂತೆ ಹೊಸದಾಗಿರುತ್ತದೆ..
  • ಹಾಸನಾಂಬ ದೇವಾಲಯದ  ಪಕ್ಕದಲ್ಲಿಯೇ ಇರುವ ಸಿದ್ದೇಶ್ವರನ ಮೂರ್ತಿಯೂ ಹಾಗೆ.. ಅಮ್ಮನ ಕಾಲದಲ್ಲಿ ಬಾರಿಯ ಒಂದು ಶಿಲೆಯಂತೆ ಕಾಣುತ್ತಿತ್ತು.. ಸ್ವಲ್ಪ ಸ್ವಲ್ಪ ಆಕಾರ ಕಾಣುತ್ತಿತ್ತು ಅಂತಿದ್ದರು.. ಈಗ ಶಿವ ಕಿರಾತ ರೂಪದಲ್ಲಿ ಕಾಣುತ್ತಾನೆ.. ಸೊಗಸಾದ ಶಿಲೆಯಾಗಿ ಉದ್ಭವವಾಗಿದೆ..
  • ಚಿಕಮಗಳೂರಿನ ಕಳಸಾಪುರದ ಬಳಿಯ ಬೆಳವಾಡಿ ಗಣೇಶ.. ನಾ ಬಾಲ್ಯದಲ್ಲಿ ನೋಡಿದಾಗ ಬರಿಯ ಒಂದು ಬಂಡೆಯಂತೆ ಕಾಣುತ್ತಿತ್ತು.. ಇಂದು ಸುಂದರ ಗಣಪನ ಆಕೃತಿಯಲ್ಲಿ ಕಾಣುತ್ತದೆ.
  • ಬನವಾಸಿಯ ಲಿಂಗ ಜೇನುತುಪ್ಪದ ವರ್ಣದಲ್ಲಿರುವುದು..
  • ಹೆಸರು ನೆನಪಿಗೆ ಬರುತ್ತಿಲ್ಲ.. ಘಟ್ಟ ಪ್ರದೇಶದ ಬಳಿಯ ಒಂದು ದೇವಾಲಯದಲ್ಲಿ ಶಿಲೆಯ ಲಿಂಗ ಬೆಳಿಗ್ಗೆಯಿಂದ ಸಂಜೆಯ ತನಕ ಬೇರೆ ಬೇರೆ ಬಣ್ಣದಲ್ಲಿ ಕಾಣುವುದು..
  • ಬೆಂಗಳೂರಿನ ಗವಿಗಂಗಾಧರೇಶ್ವರನ ಸನ್ನಿಧಿಯಲ್ಲಿ ಪ್ರತಿ ಸಂಕ್ರಾಂತಿ ಹಬ್ಬದಂದು ಸಂಜೆ ಅಸ್ತಮಿಸುವ ಮುನ್ನ ಸೂರ್ಯ ದೇವ ಲಿಂಗಕ್ಕೆ ನಮಿಸುವುದು..
  • ಶೃಂಗೇರಿಯ ವಿದ್ಯಾಶಂಕರ ದೇವಾಲಯದಲ್ಲಿರುವ ರಾಶಿ ಆಧಾರಿತ ಕಂಬದ ಮೇಲೆ ಪ್ರತಿ ತಿಂಗಳು ಆಯಾ ರಾಶಿಯ ಕಂಬದ ಮೇಲೆ ಸೂರ್ಯನ ಕಿರಣಗಳು ನಿಗದಿತ ಸಮಯದಲ್ಲಿ ಬೆಳಗುವುದು..
  • ಹೊಸದುರ್ಗದ ಬಳಿಯ ಹಾಲ್ ರಾಮೇಶ್ವರದಲ್ಲಿ ಭಕ್ತಾದಿಗಳು ತಮ್ಮ ಕೋರಿಕೆಯನ್ನು ಕೇಳಿಕೊಂಡಾಗ ಅದು ಫಲಿಸುವ ಉತ್ತರವಾಗಿ ಎಲೆ ಅಡಿಕೆ, ಹೂವು ಮುಂತಾದ ಶುಭಕರ ವಸ್ತುಗಳು ನೀರಿನಲ್ಲಿ ತೇಲಿ ಬರುವುದು..  

ಹೀಗೆ ಕಂಡಷ್ಟು, ಕೇಳಿದಷ್ಟು ಅನೇಕಾನೇಕ ಸಂಗತಿಗಳು ನಮ್ಮ ಅರಿವಿನ ಎತ್ತರಕ್ಕಿಂತ ಮೇಲೆ ಇರುತ್ತದೆ.. ಮಾನವನ ಸೃಷ್ಟಿ ಕೆಲವು ಆದರೆ ಕೆಲವು ದೇವನ ಲೀಲೆ.. ಇದನ್ನು ಒಪ್ಪುವುದು ಬಿಡುವುದು ಚರ್ಚೆಗೆ ಬಿಟ್ಟ ವಿಷಯವಾದರೂ.. ಈ ವಿಸ್ಮಯಗಳು ಭಗವಂತನ ಇರುವನ್ನು ತೋರಿಸುತ್ತಲೇ ಇರುತ್ತದೆ ಅಲ್ಲವೇ.. !!!

ವೆಂಕಿ - ದಿ ಡ್ರೈವಿಂಗ್ ಬಾಂಡ್ 
ಬೆಂಗಳೂರಿನಿಂದ ಸುಮಾರು ಹೊಸೂರು ದಾಟಿ ಸುಮಾರು ದೂರ ನಾ ಓಡಿಸಿದೆ.. ನಂತರ ಶಶಿ ಕಾಂಚಿಪುರಂ ನಗರಕ್ಕೆ ಬರುವ ತನಕ ಓಡಿಸಿ ನಂತರ ವೆಂಕಿಗೆ ಕೊಟ್ಟ.. ಅಲ್ಲಿಂದ ದಣಿವರಿಯದೆ ಕಾರನ್ನು ಚಲಾಯಿಸಿದ ವೆಂಕಿಗೆ ಧನ್ಯವಾದಗಳು.. ವಾಪಸ್ ಬರುವಾಗ ವೆಂಕಿಗೆ ಮಾತಿನಲ್ಲಿ ಸಾತ್ ಕೊಟ್ಟ ಅವನ ಮಡದಿ ಸೌಮ್ಯಗೆ ಥ್ಯಾಂಕ್ಸ್.. ಜಟ್ ಫಟ್ ಅಂತ ಕಾರ್ಯಕ್ರಮ ಆಯೋಜಿಸಿ  ಶಶಿಯ ಮನದನ್ನೆ ಪ್ರತಿಭಾ ನನ್ನ ಮೇಲೆ ಯಾವಾಗಲೂ ಗೂಬೆ ಕೂರಿಸುತ್ತ ಇದ್ದರು.. ಇಡೀ ಕುಟುಂಬ ಹೋಗುವ ಯಾವ ಪ್ರವಾಸವನ್ನು ನಾನು ಪ್ಲಾನ್ ಮಾಡಿಲ್ಲ ಅಂತ.. ಆ ಗೂಬೆ ನನ್ನ ತಲೆಯಿಂದ ಇಳಿಯುವುದಕ್ಕೆ ಪರೋಕ್ಷವಾಗಿ ಸಹಾಯ ಮಾಡಿದ ಶಶಿಗೆ ಧನ್ಯವಾದಗಳು.. ಇಡೀ ಪ್ರವಾಸದ ಕೇಂದ್ರ ಬಿಂದು ಅಕ್ಕಯ್ಯ ಅಲಿಯಾಸ್ ಪ್ರತಿಭಾ .. ತಮ್ಮ ಮಧುರವಾದ ಮಾತುಗಳಿಂದ ರೇಗಿಸುತ್ತಲೇ.. ನಮ್ಮನ್ನು ನಿಯಂತ್ರಿಸಿದ ಕೀರ್ತಿ ಅವರಿಗೆ..... ಜೊತೆಯಲ್ಲಿ ಸೌಮ್ಯ.. ಇತ್ತ ಕಡೆ ತಮ್ಮ ಯಜಮಾನರಾದ ವೆಂಕಿಯ ಜೊತೆಯಲ್ಲಿಯೇ ಸಾಗುತ್ತಾ.. ರೇಗಿಸುತ್ತಾ.. ಸಾಗಿದ್ದು ಇಡೀ ಪ್ರವಾಸ ಹಿತಕರವಾಗುವಂತೆ ಮಾಡಿದರು..

ದೇವರ ದರ್ಶನ, ಶ್ರಾವಣ ಶನಿವಾರ, ಗೆಳೆಯರ ಜೊತೆಯಲ್ಲಿ ಹರಟೆ, ಪ್ರವಾಸ.. ಜೊತೆಯಲ್ಲಿ ನಲವತ್ತು ವರ್ಷಗಳಿಗೊಮ್ಮೆ ನೆಡೆಯುವ ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಇವೆಲ್ಲವೂ ಆ ಸುಂದರ ಶನಿವಾರವನ್ನು ಅಷ್ಟೇ ಸೊಗಸಾಗಿ ಕಳೆದ ಪುಣ್ಯ ನನ್ನದಾಗಿತ್ತು.. !!!



Sunday, July 7, 2019

ಯೋಗ V/s ಯೋಗ್ಯತೆ....!

ಮದುಮಗನ ಹಾಗೆ ತಯಾರಿ ಮಾಡಿಸಿ ಕೂರಿಸಿದ್ದರು.. ಸುತ್ತ ಮುತ್ತಲು ನೋಡುತ್ತಾ.. ಆ ಒಂದು ಘಳಿಗೆಗೆ ಕಾಯುತ್ತ ಕುಳಿತಿದ್ದ.. ತಮಗೆ ವಯಿಸಿದ್ದ ಕಾರ್ಯಗಳನ್ನು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು ..ಬಂದವರ ಯೋಗಕ್ಷೇಮ  ವಿಚಾರಿಸುತ್ತಾ ಅವರ ಬೇಕು ಬೇಡಗಳನ್ನು ಗಮನಿಸುತ್ತಾ ಬಂದವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು..

ಬಂದವರು ಯಾರೂ ಕೂಡ ತಮಗೆ ಬೇಕಾದ ಅನುಕೂಲತೆಗಳು ಸಿಗಲಿಲ್ಲ ಅಥವ ತಾವು ಕರೆತಂದ ಸಂಬಂಧಿಗಳಿಗೆ ತಕ್ಕ ಉಪಚಾರ ಸಿಗಲೇ ಬೇಕು ಎನ್ನುವ ಧಾವಂತ ಅಲ್ಲಿದ್ದವರಿಗೆ ಇದ್ದದ್ದು ಅವರುಗಳ ಕಾಳಜಿಯಲ್ಲಿ ಕಾಣುತಿತ್ತು..

ಸುಮಾರು ಒಂದು ವಾರದ ಗಡ್ಡ ಮೀಸೆಯನ್ನು ನುಣುಪಾಗಿ ತೆಗೆದು.. ಕೆನ್ನೆಯನ್ನು ಫಳ ಫಳ  ಹೊಳೆಯುವಂತೆ ಮಾಡಿದ್ದರು.. ಆಗಾಗ ಬಂದು ಸುಮಾರು ಹನ್ನೆರಡು ಘಂಟೆಗೆ ಮಹೂರ್ತ.. ಆಗ ನಿಮ್ಮನ್ನು ಕರೆದು ಕೊಂಡು ಹೋಗುತ್ತೇವೆ.. ಸುಮಾರು ಒಂದು ಘಂಟೆಯ ಕಾರ್ಯಕ್ರಮ.. ಆಮೇಲೆ ಜೀವನದ ಇನ್ನೊಂದು ಮಗ್ಗುಲು ಶುರುವಾಗುತ್ತೆ ನಿಮಗೆ ಅಂತ ಹುರಿದುಂಬಿಸುತ್ತಿದ್ದರು.. ಆ ಕ್ಷಣಕ್ಕೆ ಕಾಯುತ್ತಾ ಕೂತಿದ್ದವ ಕೈಯಲ್ಲಿ ಕೈಗಡಿಯಾರ ಕಟ್ಟಿರಲಿಲ್ಲ.. ಆದರೆ ಆತನ ಎದುರಿಗೆ ಒಂದು ದೊಡ್ಡ ಗಡಿಯಾರ ನಾ ಇದ್ದೇನೆ ಎನ್ನುವ ಸುಳಿವು ಕೊಡುತ್ತಿತ್ತು..

ಸೆಕೆಂಡುಗಳ ಮುಳ್ಳು ತನಗೇನೂ ಕೆಲಸವಿಲ್ಲ ಸುಮ್ಮನೆ ಯಾಕೆ ಸುತ್ತೋದು ಅಂತ ಮೆಲ್ಲಗೆ ಸುತ್ತುತ್ತಿತ್ತು.. ಸೆಕೆಂಡು ಮುಳ್ಳೇ ನಿಧಾನ ಮಾಡುವಾಗ ನನಗೇಕೆ ತರಾತುರಿ ಅಂತ ನಿಮಿಷದ ಮುಳ್ಳು ತನ್ನ ಪಾಡಿಗೆ ಮೆಲ್ಲನೆ ಹೆಜ್ಜೆ ಇಡುತ್ತಿತ್ತು.. ಹೋಗ್ರಲೇ.. ನಿಮಗಿಬ್ಬರಿಗೆ ಇರದ ಆತುರ ನನಗೇಕೆ.. ಹತ್ತಿರ ಬಂದಾಗ ನನ್ನ ಎಬ್ಬಿಸಿ ಅಂತ ಒಂದು ಸಂಖ್ಯೆಯ ಮೇಲೆ ಮಲಗಿತ್ತು..

ಮೆಲ್ಲನೆ ಮೆಲ್ಲನೆ ಸಮಯ ಸರಿಯುತ್ತಿತ್ತು.. ಆತಂಕದ ಕ್ಷಣವೋ ಮುಂದಿನ ಬಾಳಿನ ಹಾದಿಯನ್ನು ನೆನೆದು ಬರುವ ಯೋಚನೆಯೋ.. ಯೋಜನೆಯೋ ಅರಿಯದು.. ಆದರೆ ಎದೆ ಬಡಿತ ಮಾತ್ರ ಮಾಮೂಲಿಗಿಂತ ತುಸು ಹೆಚ್ಚೇ ಇತ್ತು..

ನೀವು ಸ್ವಲ್ಪ ಹೊತ್ತು ಕೂತಿರಿ.. ಈಗ ಬರುತ್ತೇವೆ ಅಂತ ಸುತ್ತ ಮುತ್ತಲಿದ್ದವರು ಒಬ್ಬನನ್ನೇ ಬಿಟ್ಟು ಹೋದರು.. ಯಥಾ ಪ್ರಕಾರ.. ಗೋಡೆಗಳು, ಗಡಿಯಾರ, ಸೆಕೆಂಡು, ನಿಮಿಷ, ಘಂಟೆಗಳ ಮುಳ್ಳನ್ನು ನೋಡುತ್ತಾ ಕೂತೆ ಇದ್ದ.. ಹಾಗೆ ಚೇರಿಗೆ ಒರಗಿಕೊಂಡು ಕಣ್ಣು ಮುಚ್ಚಿದ.. ಯಾವುದು ನೆನಪಿಗೆ ಬರುತ್ತಿಲ್ಲ.. ಎಷ್ಟೇ ಯೋಚನೆ ಮಾಡಿದರೂ ಊಹುಂ ನೆನಪಾಗುತ್ತಿಲ್ಲ.. ಕೆನ್ನಷ್ಟೇ ಸವರಿಕೊಂಡ.. ನುಣುಪಾಗಿ ನಾ ಇದ್ದೀನಿ ಕಣೋ ಎಂದು ಹೇಳುತ್ತಿತ್ತು.. ಹಾಗೆ ಸಣ್ಣ ಮಂಪರು..

ಮೆಲ್ಲಗೆ ಯಾರೋ ಭುಜದ ಮೇಲೆ ಕೈಯಿಟ್ಟ ಅನುಭವ.. ಕಣ್ಣು ಬಿಟ್ಟ.. ಸುಮಾರು ಮೂರು ಮಂದಿ ಕಣ್ಣ ಮುಂದೆ ಇದ್ದರು..

" ಹೇಗಿದ್ದೀರಾ.. "
"ನಾನು ಆರಾಮಾಗಿದ್ದೀನಿ"
"ಸಿದ್ಧವಾಗಿದ್ದೀರಾ"
"ಹಾ ಸಿದ್ಧವಾಗಿದ್ದೀನಿ.. ಬೆಳಿಗ್ಗೆ ನಿಮ್ಮವರು ಹೇಳಿದರು ಸುಮಾರು ಹನ್ನೆರಡು ಘಂಟೆಗೆ ಹೊತ್ತಿಗೆ ಹೋಗೋದು ಅಂತ.. ಒಂದು ಘಂಟೆಯ ಕಾರ್ಯಕ್ರಮ ಅಂತ.. ನಾ ಸಿದ್ಧವಾಗಿದ್ದೀನಿ.. "
"ಓಹೋ ಗುಡ್ .. ನಿಮಗೆ ಒಂದು ವಿಷಯ ಹೇಳಬೇಕಿತ್ತು.. "
"ಹೇಳಿ ಸರ್... "
"ನಿಮ್ಮ ಜೊತೆ ಬರಬೇಕಿದ್ದವರು ಬರಲಾಗೋಲ್ಲ ಅಂತ ಲೆಟರ್ ಬರೆದಿಟ್ಟಿದ್ದಾರೆ.. ಯಾವುದೋ ಒಂದು ತುರ್ತು ಕೆಲಸ ಅಂತೇ.. ಏಳು ಮನೆಗೆ ಬೆಳಕು ನೀಡಬೇಕು ಅಂತ ಹೇಳಿದ್ದಾರೆ.. ನಾವು ಎಷ್ಟೋ ರೀತಿಯಲ್ಲಿ ಅವರನ್ನು ಸಮಾಧಾನ ಪಡಿಸಲು ಪ್ರಯತ್ನ ಮಾಡಿದೆವು.. ಆದರೆ ಅವರು ತಾವು ಮಾಡಬೇಕಾದ ಕೆಲಸದಲ್ಲಿ ಸಂಪೂರ್ಣ ನಂಬಿಕೆ ಮತ್ತು ಪರಿಶ್ರಮ ಹಾಕಿದ್ದರಿಂದ.. ಆ ಕೆಲಸವನ್ನು ಮಾಡಲೇ ಬೇಕು ಅಂತ ಹೊರಟೆ ಬಿಟ್ಟಿದ್ದಾರೆ.. ಅವರು ಕೊಟ್ಟ ಲೆಟರ್ ನಿಮಗೆ ಕೊಡುತ್ತಿದ್ದೇನೆ.. ನೀವು ಅದನ್ನು ಓದಿ ನಿಮ್ಮ ಮುಂದಿನ ಯೋಜನೆ ಹೇಳಿದರೆ ಅದಕ್ಕೆ ತಕ್ಕ ಹಾಗೆ ನಾವು ಸಿದ್ಧರಾಗುತ್ತೇವೆ.. "

ಹತ್ತು ಸೆಕೆಂಡುಗಳು ಗಡಿಯಾರವನ್ನೇ ನೋಡುತ್ತಿದ್ದ.. ಸೆಕೆಂಡು ಮುಳ್ಳು ಇನ್ನೂ ನಿಧಾನವಾಗಿ ತಿರುಗತೊಡಗಿತು.... ಸರಿ ಸರ್.. ಅವರ ಇಚ್ಛೆ ಅದೇ ಆಗಿದೆ ಅಂದರೆ ಇನ್ನೇನು ಮಾಡೋಕೆ ಆಗುತ್ತೆ.. ಹಾಗಾದ್ರೂ ಅವರು ಅಂದುಕೊಂಡ ಕಾರ್ಯ ನೆರವೇರಲಿ.. ಏಳು ಮನೆಗಳಿಗೆ ಬೆಳಕು ನೀಡೋದು ಸಣ್ಣ ಕೆಲಸವೇನಲ್ಲ .. ಹಾಗೆ ಆಗಲಿ ಸರ್.. "

ಅವರು ಕೊಟ್ಟ ಲೆಟರ್ ಇನ್ನೊಮ್ಮೆಓದಿದೆ .. ಕಣ್ಣುಗಳು ಹಾಗೆ ಮಂಜಾದವು.. ಅಗಸ ನೋಡುತ್ತಾ ಕೆನ್ನೆಯನ್ನೊಮ್ಮೆ ಮುಟ್ಟಿ ನೋಡಿದೆ.. ನುಣುಪಾಗಿತ್ತು.. ಮುಂದಿನ ದಿನಗಳು ಇಷ್ಟು ನುಣುಪಾಗಿರೋಲ್ಲ ಅಂತ ಸೂಚನೆ ನೀಡಿತ್ತೋ . ಅಥವಾ ಹೇಗಾದರೂ ಆಗಲಿ.. ಏನಾದರೂ ಆಗಲಿ.. ಮುಂದಿನ ಬದುಕು ಹೀಗೆ ನುಣುಪಾಗಿ ಇಟ್ಟುಕೊಳ್ಳೋದು ನಿನಗೆ ವಯಿಸುತ್ತಿರುವ ಕರ್ತವ್ಯ ಅಂತೋ.. ಒಟ್ಟಿನಲ್ಲಿ ನುಣುಪಾಗಿರೋದು ಮುಖ್ಯವಾಗಿತ್ತು..

ಜೀವನದ ಹಾದಿ ಹೇಗಾದರೂ ಇರಲಿ.. ಹೆಜ್ಜೆ ಇಡುತ್ತಾ ಸಾಗೋದು ಮುಖ್ಯ ಅನ್ನಿಸಿತು.. ಗಡಿಯಾರ ನೋಡಿದೆ.. ನೋಡು ಗುರು.. ನನ್ನ ಕಡೆ ಯಾರೇ ನೋಡಲಿ ಬಿಡಲಿ .. ನನ್ನೊಳಗೆ ಇರುವ ಸೆಲ್ ಅಥವಾ ಬ್ಯಾಟರಿಯಲ್ಲಿ ಶಕ್ತಿ ಇರುವ ತನಕ ನೆಡೆಯುತ್ತಲೇ ಇರುತ್ತೇನೆ.. ಅದೇ ಜೀವನ ಎಂದಿತು.. !!!

ಜೀವನದ ಪಾಠ ಹೇಳಿಕೊಟ್ಟ ಗಡಿಯಾರಕ್ಕೆ ಒಂದು ಸಲಾಂ ಹೊಡೆದು ಹೆಜ್ಜೆ ಹಾಕುತ್ತ ಹೊರಬಂದ!!!

(ಸುಮಾರು ಹನ್ನೊಂದು ಘಂಟೆ ಮೂವತ್ತು ನಿಮಿಷ ಇರಬಹುದು... ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಕೂತಿದ್ದೆ.. ಕಣ್ಣಿನ ಬಳಿ ಶಸ್ತ್ರ ಚಿಕಿತ್ಸೆ ಆಗಬೇಕಿತ್ತು.. ಇನ್ನೊಂದು ಮೂವತ್ತು ನಿಮಿಷ ಆಪರೇಷನ್ ಥೀಯೇಟರಿಗೆ ಕರೆದೊಯ್ಯುತ್ತಿದ್ದರು.. ಆಗ ಡಾಕ್ಟರ್ ನನ್ನ ಬಳಿ ಬಂದು.. 

"ಶ್ರೀಕಾಂತ್.. ನಿಮ್ಮ ಆರೋಗ್ಯ ಸುಧಾರಿಸಿದೆ.. ಈ ಶಸ್ತ್ರ ಚಿಕಿತ್ಸೆ ಆಗಿಬಿಟ್ಟ ಮೇಲೆ ನೀವು ಆರಾಮಾಗಿರಬಹುದು.." 

ಎಂದಾಗ.. ಅಬ್ಬಾ ಈ ಒಂದು ವಾರದ ಯಾತನೆ ಮುಗಿಯುತ್ತೆ.. ಮತ್ತೆ ನನ್ನ 
ಜೀವನಕ್ಕೆ ಮರಳಿ ಬರಬಹುದು ಅನ್ನಿಸಿತು.. ಕಾರಣ ಹಿಂದಿನ ದಿನವಷ್ಟೇ ಮಗಳು ಶಸ್ತ್ರ ಚಿಕಿತ್ಸೆ ಮುಗಿಸಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮನೆಗೆ ಮರಳಿದ್ದಳು.. .. ಮನದಲ್ಲಿ ಹಕ್ಕಿ ಹಾರುತ್ತಿತ್ತು.. 

"ಆದರೆ ಶ್ರೀಕಾಂತ್.. ನಿಮ್ಮ ಪತ್ನಿ..ಸವಿತಾಳನ್ನು ಉಳಿಸಲು ತುಂಬಾ ಪ್ರಯತ್ನ ಪಟ್ಟೆವು.. ಆಗಲಿಲ್ಲ.. " 

"ಡಾಕ್ಟರ್.. ಸೆಕೆಂಡ್ ಒಪೀನಿಯನ್ ತಗೊಳ್ಳಿ.. ಹೇಗಾದರೂ ಮಾಡಿ ಉಳಿಸಿಕೊಡಿ.. " ಗಂಟಲು ತುಂಬಿ ಬಂದಿತ್ತು.. ಕಣ್ಣುಗಳಲ್ಲಿ ನೀರು ತುಂಬಿತ್ತು.. ಆದರೆ ಶಸ್ತ್ರ ಚಿಕಿತ್ಸೆ ಆಗಬೇಕಾದ ಕಾರಣ ಅಳುವ ಹಾಗೆ ಇರಲಿಲ್ಲ.. ಕಣ್ಣುಗಳಿಗೆ ಚಿಕಿತ್ಸೆ ಆಗಬೇಕಿತ್ತು.. 

"ಶ್ರೀಕಾಂತ್.. ನಾವೂ ಪೂರ್ಣ ಪರೀಕ್ಷೆ ಮಾಡಿದ್ದೇವೆ.. ಮತ್ತು ಎಲ್ಲಾ ರೀತಿಯ ಚಿಕಿತ್ಸೆ ಕೊಟ್ಟಿದ್ದೇವೆ.. ಉಳಿಯುವ ಸಾಧ್ಯತೆ ಇಲ್ಲವೇ ಇರಲಿಲ್ಲ.. ಹಾಗಾಗಿಯೂ ಮೂರು ದಿನ ಉಳಿಸಿಕೊಂಡೆವು.. ಆದರೆ ಯಾವುದೇ ಚಿಕಿತ್ಸೆ ತಲುಪುತ್ತಿಲ್ಲ.. "

"ಅಂದ್ರೆ ಬ್ರೈನ್ ಡೆಡ್ ಡಾಕ್ಟರ್"

"ಸರಿಯಾಗಿ ಹೇಳಿದಿರಿ.. ಇನ್ನೂ ನಿಮಗೆ ಏನೂ ಹೇಳಬೇಕಿಲ್ಲ.. ಆದರೆ ಒಂದು ಅವಕಾಶ ಇದೆ ಅವರನ್ನು ಬದುಕಿಸಿಕೊಳ್ಳಲು"

"ಹೇಳಿ ಡಾಕ್ಟರ್"

"ಅವರ ಅಂಗಗಳನ್ನ ದಾನ ಮಾಡಬಹುದು.. ಸುಮಾರು ಏಳು ಮಂದಿಗೆ ಬೆಳಕಾಗಬಹುದು.. ಅದು ನೀವು ಒಪ್ಪಿಗೆ ಕೊಟ್ಟರೆ ಮಾತ್ರ"

"ಡಾಕ್ಟರ್ ಅವಳು ನನ್ನ ಜೊತೆಯಲ್ಲಿ ಸದಾ ಇರುತ್ತಾಳೆ..  ಆದರೆ ಭೌತಿಕವಾಗಿ ನನ್ನ ಜೊತೆಯಲ್ಲಿ ಇಲ್ಲದೆ ಹೋದರು.. ವರ್ಚುಯಲ್ ಆಗಿ ಇನ್ನೊಬ್ಬರಿಗೆ ಬೆಳಕಾಗಿರುತ್ತಾಳೆ.. ಆಗಲಿ ಡಾಕ್ಟರ್ ಅದೇನೋ ಕಾಗದ ಪತ್ರಗಳಿಗೆ ಸಹಿ ಬೇಕೋ ಕೊಡಿ ಹಾಕುತ್ತೇನೆ.. ಮೊದಲು ಆ ಕೆಲಸ ಆಗಲಿ.. ನೀವೇ ಹೇಳಿದ ಹಾಗೆ ನನ್ನ ಶಸ್ತ್ರ ಚಿಕಿತ್ಸೆ ತಡವಾದರೂ ತೊಂದರೆಯಿಲ್ಲ.. ಆದರೆ ಅವಳ ಅಂಗಗಳು ಸಮಯ ಮೀರದ ಹಾಗೆ ಇನ್ನೊಬ್ಬರಿಗೆ ಬೆಳಕಾಗಲಿ ಡಾಕ್ಟರ್.. "

"ನಿಜವಾಗಿಯೂ ಶ್ರೀಕಾಂತ್ ನೀವು ಗ್ರೇಟ್.. ಈ ಪರಿಸ್ಥಿತಿಯಲ್ಲೂ ಈ ತರಹದ ನಿರ್ಧಾರ.. ತುಂಬಾ ವಿರಳ.. ಗ್ರೇಟ್ ನೀವೂ ಮತ್ತು ನಿಮ್ಮ ಕುಟುಂಬದವರು" ಅಂತ ಹೇಳಿ ಹೊರಟರು ಮುಂದಿನ ಸಿದ್ಧತೆ ಮಾಡಿಕೊಳ್ಳಲು.. 

ನಾನು  ಗ್ರೇಟ್ ಅಂತ ಹೇಳಿದ್ದಕ್ಕೆ ಖುಷಿ ಪಡಲೋ.. ಅಥವ ಗ್ರೇಟ್ ಕೆಲಸ ಮಾಡಿ ನಮ್ಮನ್ನು ಉಳಿಸಿದ ಸವಿತಾ ಗ್ರೇಟ್ ಅಂತ ಹೇಳಿ ಸಮಾಧಾನಪಟ್ಟುಕೊಳ್ಳಲೋ.. ಅಂತ ತೊಯ್ದಾಡುತ್ತಿದ್ದಾಗ.. ಅಪಘಾತ ಆಗುವ ಸ್ವಲ್ಪ ಹೊತ್ತಿನ ಮುಂಚೆ ನನ್ನ ಕಾರಿನಲ್ಲಿ ಬರುತ್ತಿದ್ದ ಹಾಡಿನ ಸಾಲು ನೆನಪಿಗೆ ಬಂತು.. 

"ಯೋಗವೋ ಒಮ್ಮೆ ಬರುವುದು ನಮಗೆ.. 
ಯೋಗ್ಯತೆ ಒಂದೇ ಉಳಿವುದೇ ಕೊನೆಗೆ"

ಎಷ್ಟು ನಿಜ.. ಯೋಗ ನಮಗೆ.. ಯೋಗ್ಯತೆ ಅವಳಿಗೆ!!!

ಇಂದಿಗೆ ಎರಡು ವರ್ಷ.. ಡಾಕ್ಟರ್ ಅವಳಿಲ್ಲ ಅಂತ ಹೇಳಿ..ಅವಳ ನೆನಪು ಸದಾ ಇದ್ದರೂ.. ಅವಳು ಗುಪ್ತಗಾಮಿನಿಯಾಗಿ ಪ್ರೀತಿಸುತ್ತಿದ್ದ ನನ್ನ ಬರಹದ ಮೂಲಕ ಅವಳಿಗೊಂದು ನಮನ!!!)


Friday, June 28, 2019

ಶ್ರೀ ಬೊಬ್ಬೆ ರಾಮಯ್ಯನವರ ಜೊತೆ ಒಂದು ಸುತ್ತು - ಎರಡನೇ ಆವೃತ್ತಿ 2019


 ಶ್ರೀ ಬೊಬ್ಬೆ ರಾಮಯ್ಯ: ಎನ್ರಪ್ಪ ಈ ವರ್ಷವೂ ಕುಟುಂಬ ಮಿಲನ ಮಾಡ್ತಾ ಇದ್ದೀರಾ

ಸುಬ್ರಮಣ್ಯ ಮತ್ತು ವಿಜಯ : ಹೌದು ಅಜ್ಜಯ್ಯ... ಮಕ್ಕಳಿಗೆ ಪರೀಕ್ಷೆಗಳು ನೆಡೀತಾ ಇವೆ.. ಮುಗಿದೊಡನೆ ಮಾಡ್ತೀವಿ

ಶ್ರೀ ಬೊಬ್ಬೆ ರಾಮಯ್ಯ : ಈ ಸಾರಿ ದಂಪತಿ ಸಮೇತ ಬರುವೆ.. ನಿಮ್ಮನ್ನು ಆಶೀರ್ವದಿಸಲಿಕ್ಕೆ

ಸುಬ್ರಮಣ್ಯ ಮತ್ತು ವಿಜಯ : ಆಗಲೇ ಅಜ್ಜಯ್ಯ.. ನಿಮ್ಮನ್ನು ವಾಟ್ಸಾಪ್ ಗುಂಪಿಗೆ ಸೇರಿಸಿದ್ದೀವಿ.. ಚೆಕ್ ಮಾಡ್ತಾ ಇರಿ.. ತಾರೀಕು ದಿನ ಹೇಳುತ್ತೇವೆ..

ಶ್ರೀ ಬೊಬ್ಬೆ ರಾಮಯ್ಯ : ಆಗ್ಲೇ ಮಕ್ಕಳ .. ಶುಭದಿನ ನಿಮದಾಗಿರಲಿ..

ಹೀಗೆ ೨೭ನೇ ತಾರೀಕು ಮಾರ್ಚ್ ೨೦೧೯ ರಂದು ಒಂದು ಪುಟ್ಟ ಚುಟುಕು ಸಂಭಾಷಣೆ ನಮ್ಮ ಬಾಸ್ ಜೊತೆ ನೆಡೆದಿತ್ತು..

ನಂತರ ಒಂದು ತಿಂಗಳು ಯಾವ ಸೂಚನೆಯೂ ಕಾಣದೆ ಇದ್ದದರಿಂದ.. ೦೧ನೇ ಮೇ ೨೦೧೯ ರಂದು..ಮತ್ತೆ ಬಾಸ್ ಸಂದೇಶ ಕಳಿಸಿಬೇಕು ಎನ್ನುವಷ್ಟರಲ್ಲಿ ಸುಬ್ರಮಣ್ಯ ಅವರಿಂದ ವಾಟ್ಸಾಪ್ ಸಂದೇಶ ಬಂತು..

ಸುಬ್ರಮಣ್ಯ : "ಪ್ರಸಕ್ತ ವರ್ಷದ ಕಿತ್ತಾನೆ ಬೊಬ್ಬೆ ರಾಮಯ್ಯ ಬಳಗದ ಕುಟುಂಬ ಮಿಲನ ಕಾರ್ಯಕ್ರಮವನ್ನು ಬರುವ ಜೂನ್ ೨೨ ಶನಿವಾರ ಮತ್ತು ೨೩, ಭಾನುವಾರದಂದು ಕಿತ್ತಾನೆ ಗ್ರಾಮದಲ್ಲಿ ನೆಡೆಸಲು ನಿರ್ಧರಿಸಲಾಗಿದೆ. ಬಳಗದವರೆಲ್ಲರೂ ಈ ದಿನಗಳನ್ನು ಕ್ಯಾಲೆಂಡರಿನಲ್ಲಿ ಗುರುತು ಮಾಡಿ ತಪ್ಪದೆ ಭಾಗವಹಿಸಬೇಕೆಂದು ಕೋರುತ್ತೇವೆ.. ಮಿಕ್ಕ ವಿಷಯಗಳಿಗೆ ನಿರೀಕ್ಷಿಸಿ.. "

ಶ್ರೀ ಬೊಬ್ಬೆ ರಾಮಯ್ಯ : ಸುಬ್ಬಣ್ಣ.. ನಾನು ಕಣಪ್ಪ ನಿನ್ನ ತಾತಾ.. ಬಹಳ ಸಂತೋಷ ಆಯ್ತು.. ದಿನವೂ ನಿನ್ನ ಅಜ್ಜಿ ಯಾವಾಗ ಹೋಗೋದು ಕಿತ್ತಾನೆಗೆ ಎಂಬ ಪ್ರಶ್ನೆ ಕೇಳಿ ಕೇಳಿ ಸಾಕಾಗಿ ಹೋಗಿತ್ತು.. ಖಂಡಿತ ಅಂದು ನನ್ನ ಪರಿವಾರದ ಜೊತೆಯಲ್ಲಿ ಬರುತ್ತೇನೆ.. ಎಲ್ಲರೂ ಜೊತೆಯಾಗಿರಿ.. ಬರುತ್ತೇವೆ.. ಹರಸುತ್ತೇವೆ.. ಇಂತಿ ನಿನ್ನ ತಾತಾ ಬೊಬ್ಬೆ ರಾಮಯ್ಯ..

ಈ ಸಂದೇಶ ಬಂದಾಗ ಎಲ್ಲರಿಗೂ ಖುಷಿಯೂ ಖುಷಿ .. ಅತ್ತ ದೇವಲೋಕದಲ್ಲಿಯೂ ಕಿತ್ತಾನೆಗೆ ಹೋಗೋದು ಅಂತ.. ರಾಮಯ್ಯನವರ ಕುಟುಂಬದ ಕೃಷ್ಣಪ್ಪ, ಶಂಕರಪ್ಪ, ಅನ್ನಪೂರ್ಣ, ರಾಮಣ್ಣ, ಮಂಜುನಾಥ್, ಸವಿತಾ, ಹೀಗೆ ಹಲವರು ಸಿದ್ಧವಾಗತೊಡಗಿದರು...

ಕಿತ್ತಾನೆಯಿಂದ  ೯೮೮೦೭ ೦೧೭೬೦ ಈ ನಂಬರಿಗೆ ಒಂದು ಕರೆ ಬಂತು.. "ಶ್ರೀ ರಾಮಯ್ಯನವರ ಹತ್ತಿರ ಮಾತಾಡಬೇಕು.. ದಯಮಾಡಿ ಅವರಿಗೆ ಕನೆಕ್ಟ್ ಮಾಡ್ತೀರಾ"

ಅತ್ತ ಕಡೆ ಸವಿತಾ ಕರೆ ಸ್ವೀಕರಿಸಿದ್ದಳು "ಒಹ್ ಹೌದಾ ಒಂದು ನಿಮಿಷ ಅವರನ್ನು ಕರೆಯುತ್ತೀನಿ.. ಹಾಗೆ ಲೈನಿನಲ್ಲಿ ಇರಿ.. " ಎಂದಿದ್ದೆ.. ತನ್ನ ಜೋರು ದನಿಯಲ್ಲಿ "ತಾತಾ ಕಿತ್ತಾನೆಯಿಂದ ಕರೆ ಬಂದಿದೆ.. ಬೇಗ ಬನ್ನಿ.. ಅಜ್ಜಿ, ತಾತಾ ಎಲ್ಲರೂ ರೆಡಿಯಾಗಿ ಹೋಗೋಣ.. "

ಆ ಕರೆ ಮುಗಿದಿತ್ತು.. ಅತ್ತ ಕಡೆಯಿಂದ ಹೇಳಿದ್ದಕ್ಕೆಲ್ಲ ರಾಮಯ್ಯನವರು ಒಪ್ಪಿಕೊಂಡಿದ್ದರು.. ಗರಿಗರಿ ಪಂಚೆ, ಜರತಾರಿ ಸೀರೆ.. ಲಕ್ಷಣವಾದ ಅಲಂಕಾರ ಮಾಡಿಕೊಂಡು ಎಲ್ಲರೂ ಧರೆಗಿಳಿದರು..

"ಅರೆ ವಾಹ್ ಕಿತ್ತಾನೆ ಎಷ್ಟೊಂದು ಬದಲಾಗಿದೆ.. ಕೆರೆ ಏರಿಗೆ ಟಾರು ಬಂದಿದೆ.. ನಮ್ಮ ಊರಿನ ದಾರಿ ಅಗಲಮಾಡುತ್ತಿದ್ದಾರೆ.. ಕಾಂಕ್ರೀಟ್ ರಸ್ತೆ ಬಂದಿದೆ.. ಕೆರೆ ಹಾಗೆ ಇದೆ.. ಉಡುಸಲಮ್ಮ ದೇವಸ್ಥಾನ ನಿರ್ಮಾಣ ಗೊಂಡಿದೆ.. ನಮ್ಮ ಮನೆ ನವೀಕರಣಗೊಂಡಿದೆ .. ಅಬ್ಬಾ ಎಷ್ಟೊಂದು ಬದಲಾವಣೆ.. ಇದು ನಾವಿದ್ದ ಊರೇ.. " ಎಂದು ಎಲ್ಲರೂ ಹೇಳಿದಾಗ..

"ನೋಡ್ರಪ್ಪಾ.. ಬದಲಾವಣೆ ಜಗದ ನಿಯಮ ..ಇಂದಿದ್ದು ನಾಳೆಯಿಲ್ಲ.. ನಾಳೆ ಬರೋದಕ್ಕೆ ಇಂದು ತ್ಯಾಗ.. ಹೀಗೆ ನೆಡೆಯುತ್ತಲೇ ಇರುತ್ತದೆ.. ಕಿತ್ತಾನೆ ಕೆರೆ ಏರಿ ಮೇಲೆ ಎಲ್ಲರೂ ನೆಡೆದು ಬರುತ್ತಿದ್ದರು.. ಸವಿತಾ ಅಜ್ಜನನ್ನು ಕುರಿತು "ಅಜ್ಜಾ.. ಈ ಗ್ರಾಮಕ್ಕೆ ಕಿತ್ತಾನೆ ಎಂಬ ಹೆಸರು ಯಾಕೆ ಬಂತು.. ಕಿತ್ತಾನೆ ಎಂದರೆ ಏನು.. ಸ್ವಲ್ಪ ಹೇಳಿ ಅಜ್ಜ"



"ಮಗು.. ಈ ನಮ್ಮ ಗ್ರಾಮ ಸುಮಾರು ತಲೆಮಾರುಗಳ ಹಿಂದೆ ನಮ್ಮ ಪೂರ್ವಜರಿಗೆ ವಿಜಯನಗರ ಸಂಸ್ಥಾನದಿಂದ ಸಿಕ್ಕ ಬಳುವಳಿ ಅಂತ ಹೇಳುತ್ತಾರೆ.. ನನ್ನ ಕಾಲದಲ್ಲಿ ನಾ ನೋಡಿದ್ದ ತಾಮ್ರ ಪಾತ್ರದ ಮೂಲಕ ತಿಳಿದದ್ದು.. ಮತ್ತೆ ನನ್ನ ಅಪ್ಪ.. ಅವರ ಅಪ್ಪ ಹೀಗೆ ಕಿವಿಯಿಂದ ಕಿವಿಗೆ ತಾಕಿದ್ದ ಸುದ್ದಿಯ ಪ್ರಕಾರ.. ನಮ್ಮೂರಿನ ತೋಟದಲ್ಲಿ ಶಕ್ತಿ ದೇವರು ನೆಲೆಸಿದ ತಾಣವನ್ನು ದೇವರತೋಟವೆಂದು ಕರೆಯುವ ಪ್ರತೀತಿ ಇದೆ.. ಆ ತೋಟದಲ್ಲಿ ಒಬ್ಬ ಬ್ರಾಹ್ಮಣ ತನ್ನ ಆಹಾರ ಸಾಮಗ್ರಿ ತಂದು ಅಲ್ಲಿಯೇ ಇದ್ದ ಕಲ್ಲು ಭಾವಿಯಲ್ಲಿ ಸ್ನಾನ ಮಾಡಿ ಜಪ ತಪ ಮಾಡಿಕೊಂಡು ಅಡಿಗೆ ಮಾಡಿಕೊಂಡು .. ಊಟ ಮಾಡುವುದಕ್ಕೆ ಅದೇ ತೋಟದಲ್ಲಿದ್ದ ಬಾಳೆಯ ಗಿಡದಿಂದ ಬಾಳೆಯ ಎಲೆಯನ್ನು ತೆಗೆದುಕೊಂಡಾಗ, ಆ ತೋಟದೊಡೆಯ.. ಆ ಬ್ರಾಹ್ಮಣನಿಗೆ ಸ್ನಾನ, ಅಡಿಗೆ ಮಾಡಿಕೊಳ್ಳಲು ಮಾತ್ರ ಅನುಮತಿ ಕೊಟ್ಟಿದ್ದೆ ನೀ ಯಾಕೆ ಬಾಳೆ ಎಲೆ ತೆಗೆದುಕೊಂಡೆ ಎಂದು ಕುಪಿತನಾಗಿ, ಅನ್ನದ ಪಾತ್ರೆಯನ್ನು ಕಾಲಿನಿಂದ ಒದ್ದು.. ಬ್ರಾಹ್ಮಣನಿಗೆ ಅವಮಾನ ಮಾಡುತ್ತಾರೆ.. ಆ ಒಡೆಯ ಜಂಗಮ ಮಾತಾಡುವ ಆಗಿದ್ದರಿಂದ ಊರಿನ ಜನ ಮರು ಮಾತಾಡದೆ ಮೂಕರಾಗಿ ಆ ದೃಶ್ಯಗಳನ್ನು ಅಸಹಾಯಕರಾಗಿ ನೋಡುತ್ತಿರುತ್ತಾರೆ.. ಹಸಿದ ಬ್ರಾಹ್ಮಣನನ್ನು ಕೆಣುಕುವುದು .. ಒಂಟಿ ಸಲಗವನ್ನು ಕೆಣಕುವುದು ಎರಡು ಒಂದೇ ಎಂಬ ಗಾದೆಯಿದೆ ಅಲ್ಲವೇ.. ಹಾಗೆ ಕುಪಿತನಾದ ಬ್ರಾಹ್ಮಣ.. ತನ್ನ ಶಿಖೆಯನ್ನು ಬಿಚ್ಚಿ.. ನಿನ್ನ ಪ್ರಭಾವವನ್ನು ತಗ್ಗಿಸಿ.. ನಿನ್ನ ಮಠವನ್ನು ಈ ಜಾಗದಿಂದ ಕಿತ್ತು ಹಾಕದಿದ್ದರೆ ನಾ ಬ್ರಾಹ್ಮಣನೇ ಅಲ್ಲ.. ತೊಟ್ಟ ಜನಿವಾರವನ್ನು ಹರಿದು ಹಾಕುತ್ತೇನೆ ಎಂದು ಶಪಥ ಮಾಡಿ.. ಅಲ್ಲಿಂದ ಹೊರಡುತ್ತಾನೆ..

ಅಲ್ಲಿದ್ದ ಊರಿನ ಮಂದಿ "ಅರೆ ಜಂಗಮನ ಶಕ್ತಿ ಏನೂ.. ಈ ಬಡ ಬ್ರಾಹ್ಮಣನ ಶಕ್ತಿ ಏನು.. ಈ ಮನುಷ್ಯ ಜಂಗಮನನ್ನು ಮತ್ತು ಮಠವನ್ನು ಕಿತ್ತಾನೆಯೇ... ಏನೋ ಅಪ್ಪ.. ಅನುಮಾನ.. ಎಂದು ಮಾತಾಡಿಕೊಳ್ಳುತ್ತಾರೆ..

ಬಡ ಬ್ರಾಹ್ಮಣ ಆ ಪ್ರಾಂತ್ಯದ ಅರಸನ ಬಳಿ ಹೋಗಿ ತನಗಾದ ಅವಮಾನದ ಬಗ್ಗೆ ಹೇಳಿಕೊಂಡು.. ಸಹಾಯ ಬೇಡದೆ.. ತಪ್ಪು ಒಪ್ಪಿನ ಬಗ್ಗೆ ಅರಿವು ಮೂಡಿಸುವಂತೆ ಮಾತಾಡುತ್ತಾನೆ... ಆ ಅರಸರು ಈ ಘಟನೆಯ ಪೂರ್ಣ ವಿವರ ಪಡೆದು.. ತಪ್ಪು ಸರಿಗಳನ್ನು ಪರಾಮರ್ಶಿಸಿ ಬ್ರಾಹ್ಮಣನಿಗೆ ಆದ ಅವಮಾನಕ್ಕಿಂತ.. ಇದು ಮಾನವೀಯವಾಗಿ ನೆಡೆದುಕೊಳ್ಳಬೇಕಾದ ಸಂದರ್ಭ.. ಆದರೆ ಆ ಕ್ಷಣಕ್ಕೆ ವಿವೇಚನೆ ಕಳೆದುಕೊಳ್ಳುವ ರೀತಿಯಲ್ಲಿ ಘಟನೆ ನೆಡೆದಿದ್ದರಿಂದ.. ಮತ್ತು ಆ ಊರಿನ ಮಂದಿ ಮಠದ ಕೆಲವು ಅಧಿಕಾರಿಗಳಿಂದ ಆಗುತ್ತಿದ್ದ ತಾರತಮ್ಯಗಳನ್ನು ಅರಸರ ಗಮನಕ್ಕೆ ತಂದಿದ್ದರಿಂದ... ಒಂದು ಪ್ರಶಸ್ತ ದಿನವನ್ನು ಗುರುತು ಮಾಡಿ.. ಸುಮಾರು ೨೮ ಬ್ರಾಹ್ಮಣರಿಗೆ ಈ ಗ್ರಾಮದ ಸುತ್ತಾ ಮುತ್ತಲಿನ ಪ್ರದೇಶವನ್ನು ಬಳುವಳಿಯಾಗಿ ಕೊಟ್ಟು.. ಆ ಮಠವನ್ನು ದೂರದ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಆಜ್ಞೆ ಮಾಡುತ್ತಾರೆ.. ಮತ್ತೆ ಬ್ರಾಹ್ಮಣ ಈ ನಮ್ಮ ಗ್ರಾಮಕ್ಕೆ ಬಂದು.. ದೇವರ ತೋಟದಲ್ಲಿ ಪೂಜೆ ಮಾಡಿ, ಜಪ ತಪ ಮಾಡಿ... ಕೆರೆಗೆ ನೀರು ಬರುವಂತೆ ಪ್ರಾರ್ಥನೆ ಮಾಡಿ ಮಳೆ ಬರಿಸಿ ಈ ಗ್ರಾಮದ ಅಭಿವೃದ್ಧಿಯ ಕಡೆಗೆ ಗಮನ ಹರಿಸುತ್ತಾನೆ.. ಕಾಲ ಕ್ರಮೇಣ ಲಕ್ಷ್ಮೀದೇವಿ ಪುರ ಅಥವಾ ಲಕ್ಷ್ಮೀಪುರ
ಎಂಬ ಹೆಸರಿದ್ದ ಈ ಗ್ರಾಮದ ಮಂದಿ "ಅಲ್ಲ ಕನ್ಲಾ ಈ ಐನೋರು ಏನೋ ಅಂದುಕೊಂಡಿದ್ದೆ.. ಆ ಮಠವನ್ನು ಕಿತ್ತಾನೆಯೇ ಎಂದು ಕೊಂಡಿದ್ದೆವು.. ಹೇಳಿದ ಹಾಗೆ ಮಾಡಿಯೇ ಬಿಟ್ರಲ್ಲಪ್ಪ.. ಈತ ನಿಜಕ್ಕೂ ಕಿತ್ತೆ ಬಿಟ್ಟರು.. ಅನುಮಾನವೇ ಇಲ್ಲ.. ಧೈರ್ಯವಂತ ಎಂದು ಹಾದಿ ಹೊಗಳಿದರು.. ಕಾಲ ಕ್ರಮೇಣ ಆ ಊರಿಗೆ ಬರುವವರೆಲ್ಲ ವಿಳಾಸ ಕೇಳಿಕೊಳ್ಳುವಾಗ.. ಆ ಮಠವನ್ನು ಕಿತ್ತ ಊರು ಎಂದು ಜನಜನಿತವಾಗಿ ಮಠ ಕಿತ್ತಾ ಊರು.. ಮಠ ಕಿತ್ತಾನು.. ಕಿತ್ತಾನೆಯೇ.. ಹೋಗಿ ಕಡೆಯಲ್ಲಿ ಕಿತ್ತಾನೆ ಎಂಬ ಹೆಸರು ಸುತ್ತಮುತ್ತಲ ಹಳ್ಳಿಯಲ್ಲಿ ಪ್ರಸಿದ್ಧಿಯಾಯಿತು.. ಇದು ಎಷ್ಟು ಕಾಲ್ಪನಿಕವೋ, ನಿಜವೋ ಅರಿಯದು.. ಜಾನಪದ ಗೀತೆಯಂತೆ ಎಲ್ಲೋ ಉಗಮವಾಯಿತು.. ಹೆಸರು ಮಾತ್ರ ಶಾಶ್ವತವಾಯಿತು.. ಹೀಗೆ ಆಯಿತು ನಮ್ಮ ಊರಿನ ಹೆಸರು ಕಿತ್ತಾನೆ.. !!!

ಎಲ್ಲರೂ ಜೋರಾದ ಚಪ್ಪಾಳೆ ತಟ್ಟಿದರು.. ತಾವು ಬೆಳೆದು ಬಂದ ಊರಿನ ಐತಿಹ್ಯ ಕಾಲ್ಪನಿಕವೋ, ನಿಜವೋ ಏನೇ ಆಗಿದ್ದರೂ ವಿಚಾರಕ್ಕೆ ಹತ್ತಿರವಾಗಿದ್ದರಿಂದ ಎಲ್ಲರೂ ಖುಷಿ ಪಟ್ಟರು..

ಅಷ್ಟರಲ್ಲಿ ರಾಮಣ್ಣನವರು.. "ಅಜ್ಜ ಅಲ್ಲಿ ನೋಡಿ.. ಆಗಲೇ ಶಾಮಿಯಾನ ಹಾಕಿದ್ದಾರೆ.. ಅರೆ ಅರೆ.. ನಿಮ್ಮ ಫೋಟೋ ಕೂಡ ಇದೆ.. ಅಜ್ಜಿ ನಿಮ್ಮ ಫೋಟೋ.. ಓಹೋ ಕಳೆದ ವರ್ಷದ ಕುಟುಂಬ ಮಿಲನ ಕಾರ್ಯಕ್ರಮದ ವಿವರ ನೀವು ನೀಡಿದ್ದೀರಿ.. ಅದರ ಕೆಲವು ಚಿತ್ರಗಳು ಅಲ್ಲಿವೆ.. ಸೂಪರ್ ಅಜ್ಜ.. ನೀವು ಎಷ್ಟು ಮುದ್ದಾಗಿ ಕಾಣ್ತೀರ.. " ಎನ್ನುತ್ತಾ ಇತರರನ್ನು ತಮ್ಮ ಮಾಮೂಲು ದಾಟಿಯಲ್ಲಿ ಹುರುದುಂಬಿಸಿ ಮುನ್ನೆಡೆದರು..

ಮಂಜುನಾಥ  ತನಕ ಮಾತಾಡದೆ ಸುಮ್ಮನೆ ಮಾತು ಕೇಳುತ್ತ ಬಂದಿದ್ದರು.. "ಅಜ್ಜಯ್ಯ ನಿಮ್ಮ ಆರೈಕೆಯಲ್ಲಿ ಬೆಳೆದ ವಿಶಾಲುವಿಗೆ ಕಿತ್ತಾನೆ ಎಂದರೆ ಸ್ವರ್ಗ.. ಮತ್ತೆ ಇಲ್ಲಿಗೆ ಬರುತ್ತಿರುವುದು ಖುಷಿ ಕೊಡುತ್ತಿದೆ.. ನಮ್ಮನ್ನೆಲ್ಲ ಕರೆದು ತಂದ ನಿಮಗೆ ಧನ್ಯವಾದಗಳು ಅಜ್ಜಯ್ಯ" ಎಂದು ಮತ್ತೆ ಹೆಜ್ಜೆ ಹಾಕತೊಡಗಿದರು..  ಎನ್ನುತ್ತಾ



ಅಜ್ಜಿ ತಾನು ಬೆಳೆದು ಬಂದ ಮನೆಯನ್ನು ನೋಡಿ ಕಣ್ಣು ತುಂಬಿಕೊಂಡು.. "ಆಹಾ ಎಷ್ಟು ಸುಂದರವಾಗಿ ನವೀಕರಣ ಮಾಡಿದ್ದಾರೆ.. ಸುಂದರವಾಗಿದೆ.. ಅರೆ ಶಂಕರನ ಮನೆಯೂ ಕೂಡ ಸೊಗಸಾಗಿದೆ.. ಎಲ್ಲರೂ ಚೆನ್ನಾಗಿರಲಿ.. ಅರೆ ನನ್ನ ಚಿತ್ರ ಕೂಡ ಇದೆ.. ನನ್ನ ಮರಿ ಮೊಮ್ಮಕ್ಕಳ ಕೈಚಳಕ ಚೆನ್ನಾಗಿ ಬಂದಿದೆ.. " ಎಂದು ತಮ್ಮ ಪಾಡಿಗೆ ತಮ್ಮ ಪತಿದೇವರ ಕೆಳಗೆ ಕೂತರು..

ಸವಿತಾ ಸುಮ್ಮನೆ ಆ ಚಿತ್ರಗಳನ್ನೆಲ್ಲ ನೋಡುತ್ತಾ.. "ಈ ಫೋಟೋ ಕೆಲಸವೆಲ್ಲ ನಮ್ಮ ಕಪಿ ಯಜಮಾನರದ್ದೇ ಅಲ್ವ ಶೀತಲ್  "  ಎಂದಾಗ ಶೀತಲ್ ನನ್ನ ಕಡೆ ನೋಡಿ ಕಣ್ಣು ಹೊಡೆದಳು..


"ಅರೆ ಶಾಮಣ್ಣ .. ನಾ ಹೋದಾಗ.. ನನ್ನ ಯಾತ್ರೆಯ ಹಿಂದೆಯೇ ಓಡಿ ಬಂದಿದ್ದೆಯಲ್ಲ ಮಗು.. ನಿನ್ನ ಜೀವನದಲ್ಲಿ ಸಾಧಿಸಿದ ಏಳಿಗೆ ನೋಡಿ ಖುಷಿಯಾಗುತ್ತಿದೆ ಮಗು.. ನನ್ನ ಆಶೀರ್ವಾದ ಸದಾ ನಿನ್ನ ಮೇಲಿದೆ.. ಏಳು ಬೀಳುಗಳನ್ನು ದಾಟಿ ನೀ ನಿಂತಿರುವುದು ನೋಡಿ ಖುಷಿಯಾಗುತ್ತಿದೆ ಮಗು .. ನಿನ್ನ ಮಂತ್ರೋಚ್ಚಾರಣೆ.. ಪೂಜಾ ವಿಧಾನ ಎಲ್ಲವೂ ಸೊಗಸು.. ಶುಭವಾಗಲಿ" ಎಂದು ಅನ್ನಪೂರ್ಣಮ್ಮನವರು ತಮ್ಮ ಪುತ್ರ ಶಾಮಣ್ಣನನ್ನ ಕಂಡು ಹರಸಿದರು.. ಶಂಕರಪ್ಪನವರು ಎಲೆ ಅಡಿಕೆ ಮೆಲ್ಲುತ್ತಾ.. ನನ್ನ ಮಕ್ಕಳೆಲ್ಲ ಚೆನ್ನಾಗಿದ್ದಾರೆ.. ಎಲ್ಲರೂ ಅವರವರ ಕಾಲಮೇಲೆ ನಿಂತಿದ್ದಾರೆ.. ಅದೇ ಖುಷಿ.. ನಾ ನೆಡೆದ ಹಾದಿಯಲ್ಲಿ ಎಲ್ಲರೂ ಹೆಜ್ಜೆ ಹಾಕುತ್ತಿದ್ದಾರೆ.. ನನ್ನ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು. ಎಲ್ಲರಿಗೂ ನನ್ನ ಶುಭ ಆಶೀರ್ವಾದಗಳು ಎಂದರು..

ಕೃಷ್ಣಪ್ಪನವರು ತಮ್ಮ ಇಷ್ಟವಾದ ಮನೆಯ ಮುಂದಿನ ಜಗಲಿಯ ಮೇಲೆ ಕೂತು.. ತಮ್ಮ ಬೃಹತ್ ಸಂಸಾರದ ಪರಿವಾರವನ್ನು ಕಂಡು ಖುಷಿ ಪಟ್ಟರು.. ತಮ್ಮ ಹತ್ತು ಮಂದಿ ಮಕ್ಕಳು, ಅವರ ಬೆಳೆಯುತ್ತಿರುವ ಪರಿವಾರ, ಕಾರ್ಯಕ್ರಮ ಎಂದರೆ ಎಲ್ಲರೂ ಕೈಜೋಡಿಸಿಕೊಂಡು ಮುನ್ನುಗ್ಗುತ್ತಿರುವ ರೀತಿ ಎಲ್ಲವೂ ಸುಂದರ ಅನಿಸಿತು..

ಕುಟುಂಬ ಗೀತೆಯನ್ನು ಸಿದ್ಧಪಡಿಸಿ ಅದಕ್ಕೆ ರಾಗ ಜೋಡಿಸಿ ಹಾಡಿದ ಸಂದರ್ಭದಿಂದ ಕಾರ್ಯಕ್ರಮ ಶುರುವಾಯಿತು.. ಸ್ವರ್ಗದಿಂದ ಬಂದವರೆಲ್ಲ ಪಠದಲ್ಲಿ ಕೂತು ನೋಡುತ್ತಿದ್ದರು.. ಕೆಲವು ಸಣ್ಣ ಪುಟ್ಟ ಆಟಗಳು ಶುರುವಾದವು.. ಪ್ರತಿ ಅಂಕಕ್ಕಾಗಿ ಮಕ್ಕಳು, ಮೊಮ್ಮಕ್ಕಳು, ಛೋಟುಗಳು ಗಲಾಟೆ ಮಾಡುತ್ತಿದ್ದದ್ದು ಕಂಡು ಅಜ್ಜಯ್ಯ ಶಭಾಷ್ ಮಕ್ಕಳ.. ಮನೋರಂಜನೆಗೆ ಇರುವ ಕಾರ್ಯಕ್ರಮದಲ್ಲಿಯೇ ನೀವೆಲ್ಲ ಇಷ್ಟೆಲ್ಲಾ ಗಮನವಿಟ್ಟು ಆಟವಾಡುವಾಗ.. ಇನ್ನೂ ನಿಮ್ಮ ಜೀವನದಲ್ಲಿ ಸಾಧನೆ ಮಾಡುವ ಎಷ್ಟು ಜವಾಬ್ಧಾರಿಯುತರಾಗಿರುತ್ತೀರಾ.. ಸೂಪರ್ ಮಕ್ಕಳ ನಿಮ್ಮ ಏಳಿಗೆಯನ್ನು ಕಂಡು ಖುಷಿ ಪಡುವ ಸಂತಸ ನನ್ನದು ಎಂದರು..

ಪ್ರತಿಯೊಂದು ಆಟ... ಅದರ ಅಂಕಗಳಿಗೆ ಗುದ್ದಾಡುವುದು.. ಕಬಡ್ಡಿ ಆಟ.. ಗುಪ್ತ ನಿಧಿ ಹುಡುಕಾಟ, ಸಂಜ್ಞೆ ಆಟ, ನೃತ್ಯ.. ಎಲ್ಲವೂ ಬೊಂಬಾಟ್ ಆಗಿತ್ತು.. ಊಟವೊಂತು ಭರ್ಜರಿ... ಯಾವುದಕ್ಕೂ ಕಮ್ಮಿಯಿಲ್ಲದಂತೆ ನೆಡೆದ ಕಾರ್ಯಕ್ರಮ ಸೊಗಸಾಗಿತ್ತು..

ಊರಿನಲ್ಲಿ ಬೆಳಗಿನ ಹೊತ್ತು ನೆಡಿಗೆ.. ತೋಟ ಗದ್ದೆಗಳಿಗೆ ಭೇಟಿ ಆಹ್ಲಾದಕರ ವಾತಾವರಣ.. ನೋಡೇ ಲಕ್ಷ್ಮಿ ನನ್ನ  ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಸೊಸೆಯಂದಿರು ಓಡಾಡೋದು.. ವಾಹ್ ಈ ಮೊಬೈಲ್ ಎಲ್ಲಾ ಕಡೆ ದಾಳಿಯಿಟ್ಟಿದೆ.. ಫೋಟೋಗಳು, ಸೆಲ್ಫಿಗಳು... ಸೂಪರ್... ಎನ್ನುತ್ತಾ ಅಜ್ಜಯ್ಯ ಎಲ್ಲರನ್ನು ಹಿಂಬಾಲಿಸತೊಡಗಿದರು..

ಅರೆ ಅರೆ ನಮ್ಮೂರಿನಲ್ಲಿ ರಾಮಮಂದಿರಕ್ಕೆ ಗುದ್ದಲಿ ಪೂಜೆ ನೆಡೆಯುತ್ತಿದೆ.. ಮುಂದಿನ ವರ್ಷ.. ನಮ್ಮ ಕಾರ್ಯಕ್ರಮ ಇಲ್ಲಿಯೇ ನೆಡೆಯಬಹುದು ಅಲ್ವೇ ಸುಬ್ಬಣ್ಣ..





ಸುಬ್ರಮಣ್ಯ ಏನೋ ಮಾತಾಡುತ್ತಿದ್ದವರು ಅಚಾನಕ್ ತಿರುಗಿ "ಆಗಬಹುದು ಅಜ್ಜಯ್ಯ.. ನೋಡೋಣ ಅಷ್ಟೋತ್ತಿಗೆ ಸಿದ್ಧವಾಗಿದ್ದಾರೆ.. ಪ್ರಯತ್ನ ಪಡಬಹುದು.. ಆಲ್ವಾ ವಿಜಯ"

"ಹೌದು ಕಣೋ ಸುಬ್ರಮಣ್ಯ.. ಅಜ್ಜಯ್ಯ ಆಗಲಿ ಪ್ರಯತ್ನ ಪಡುವೆವು.. ಅಜ್ಜ ನನಗೆ ಒಂದು ಅನುಮಾನ.. ಉತ್ತರ ಹೇಳುವಿರಾ.. "

"ಕೇಳು ಮಗು"

"ಈ ಮೇಲಿನ ವಿವರವೆಲ್ಲ ಹೇಳುತ್ತಿದ್ದೀರಲ್ಲ.. ಅದು ಹೇಗೆ ತಿಳಿಯುತ್ತದೆ ನಿಮಗೆ.. ನಮಗೆ ತಿಳಿಸುವ ವಿಧಾನವೇನು. ಮುಂದೆಯೂ ನಮಗೆ ಅನುಮಾನ ಇದ್ದರೇ ಅದನ್ನು ಬಗೆ ಹರಿಸುವ ಬಗೆ ಹೇಗೆ.. ಮತ್ತೆ ಅದು ನಮಗೆ ತಿಳಿಯುವ ಬಗೆ ಹೇಗೆ.. "

ನೋಡು ಮಗು.. ನನ್ನ ಮನೆಯ ಮೇಲೆ ಟಾಟಾ ಸ್ಕೈ ಬಾಣಲಿ ಇದೆಯಲ್ಲ..ಅದನ್ನು ಒಮ್ಮೆ ನೋಡು...ಮತ್ತೆ ಈ  ನನ್ನ ಮಾನಸ ಪುತ್ರಿ ವಿಶಾಲೂ ಮಗ ಶ್ರೀಕಾಂತ ಯೋಗ ನಿದ್ರೆಯಲ್ಲಿದ್ದಾನಲ್ಲ ಹಾಗೆ ಸುಮ್ಮನೆ ಒಂದು ಕ್ಷಣ ಕಣ್ಣು ಮುಚ್ಚಿ ಕುಳಿತರೆ ಸಾಕು ನನ್ನಿಂದ ನಿಮಗೆ ಎಲ್ಲಾ ವಿಚಾರಗಳೂ ತಿಳಿಯುತ್ತವೆ.. "


ವಿಜಯ ಸುಬ್ರಮಣ್ಯ ಇಬ್ಬರೂ ತಲೆಯಾಡಿಸಿದರು..

ಕಿತ್ತಾನೆ ಕುಟುಂಬ ಸದಸ್ಯರ ಪರವಾಗಿ ನಮ್ಮ ಪರಿವಾರದ ಹಿರಿಯ ಜೀವಗಳಿಗೆ ನಮ್ಮ ಪುಟ್ಟ ಗೌರವ ಪೂರ್ವಕವಾಗಿ ಸನ್ಮಾನವಿದೆ..

ಮೊದಲನೆಯದಾಗಿ ಶಂಕರಪ್ಪನವರ ಎರಡನೇ ಪತ್ನಿ ಶ್ರೀಮತಿ ಪಾರ್ವತಮ್ಮನವರು.. ತಮ್ಮ ಅಕ್ಕ ಅನ್ನಪೂರ್ಣ ಅವರ ಮಕ್ಕಳು ಸೇರಿದಂತೆ ತಮ್ಮ ಮಕ್ಕಳನ್ನು ಜೊತೆ ಜೊತೆಯಾಗಿ ಬೆಳೆಸಿದರು.. ಕುಟುಂಬದ ಕಷ್ಟದ ದಿನಗಳಲ್ಲಿ ಕುಗ್ಗದೆ.. ಸಂಸಾರ ನಿಭಾಯಿಸಿದರು..

ಎರಡನೆಯದಾಗಿ ಕೃಷ್ಣಪ್ಪನವರ ಮೊದಲ ಕೂಸು ಗಿರಿಜಾ.. ಹಿರಿಯಕ್ಕನಾಗಿ ತನ್ನ ತಮ್ಮ ತಂಗಿಯರನ್ನು  ನೋಡಿಕೊಂಡು.. ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದಾರೆ..

ಮೂರನೆಯವರಾಗಿ ಅಜ್ಜಯ್ಯನ ಮಾನಸ ಪುತ್ರಿ ಎಂದೇ ಹೆಸರಾದ . ಜೀವನದ ಕಷ್ಟ ನಷ್ಟಗಳನ್ನು ತಲೆಗೆ ಹಾಕಿಕೊಳ್ಳದೆ ದಿಟ್ಟತನದಿಂದ ಮುನ್ನುಗ್ಗುತ್ತಿರುವ ವಿಶಾಲೂ..


ಎಲ್ಲರೂ ಜೋರಾದ ಚಪ್ಪಾಳೆ.. ಹಿರಿಯರಿಂದ ಆಶೀರ್ವಾದ.. ಕಾರ್ಯಕ್ರಮಕ್ಕೆ ಕಳೆಕಟ್ಟಿತು..

ಅವರ ಖುಷಿ ನಮ್ಮ ಖುಷಿ.. ಅಣ್ಣಾವ್ರ  ಭಕ್ತ ಕುಂಬಾರ ಚಿತ್ರದ ಸಂಭಾಷಣೆ ನೆನಪಿಗೆ ಬಂತು..

ಇದು ಕಿತ್ತಾನೆ ಗ್ರಾಮದಲ್ಲಿ ನೆಡೆದ ಕುಟುಂಬ ಮಿಲನದ ಎರಡನೇ ಆವೃತ್ತಿಯ ಒಂದು ಪುಟ್ಟ ಝಲಕ್.. ಎಂದು ಬೊಬ್ಬೆ ರಾಮಯ್ಯನವರು ಹೇಳಿದಾಗ.. ಎಲ್ಲರಿಗೂ ಆನಂದ ಭಾಷ್ಪ... ನಾವಿರಲಿ ಇಲ್ಲದೆ ಇರಲಿ.. ನಾ ಹಚ್ಚಿದ ಕುಟುಂಬ ಜ್ಯೋತಿ ಸದಾ ಬೆಳಗುತ್ತಿರುತ್ತದೆ ಎಂಬ ಸಾರ್ಥಕತೆಯ ಭಾವ ಹೊತ್ತು ಸ್ವರ್ಗದ ಹಾದಿಯಲ್ಲಿ ಪುಷ್ಪಕವಿಮಾನವೇರಿ ಎಲ್ಲರಿಗೂ ಕೈ ಬೀಸಿದರು..


ಟಾಟಾ ಸ್ಕೈ ಬಾಣಲಿ ಇದಕ್ಕೆಲ್ಲ ಸಾಕ್ಷಿಯಾಗಿ ಮನೆಯ ಮೇಲೆ ನಗುತ್ತಿತ್ತು ಮುಂದಿನ ವಿವರಕ್ಕಾಗಿ ನಾ ಸಿದ್ಧವಾಗಿದ್ದೇನೆ ಎಂಬ ಭಾವದಲ್ಲಿ !!!

Friday, May 31, 2019

ಸಾರ್ಥಕತೆ ಎನ್ನುವುದು ಹೇಗೆ .....!

ಸಾರ್ಥಕತೆ ಎನ್ನುವುದು ಹೇಗೆ ...ಅದರ ವಿಸ್ತಾರವೇನು.. ಅದರ  ಅಗತ್ಯತೆ ಏನು.. ಇದಕ್ಕೆ ಉತ್ತರವನ್ನು ಕಂಡುಹಿಡಿದವರಿಲ್ಲ.. ಒಬ್ಬರದು ಒಂದೊಂದು ವಿವರಣೆ... ಎಲ್ಲವೂ ಕಣ್ಣು ಕಾಣದವರು ಆನೆಯನ್ನು ಮುಟ್ಟಿ ನೋಡಿ ವಿವರಿಸಿದ ಹಾಗೆ.. ಒಂದೇ ಆದರೂ ಅನುಭವ ವಿಭಿನ್ನ ..

ತುಂಬು ಸಂಸಾರವನ್ನು ಎತ್ತಿ ಹಿಡಿದು... ಹತ್ತು ಮಕ್ಕಳಿಗೆ ಭವಿಷ್ಯ ನೀಡಿದ ಒಂದು ಹೆಂಗಸಿನ ಸಾರ್ಥಕ ಬದುಕಿನ ಒಂದು  ಕ್ಷಣಗಳ ಬಗ್ಗೆ ನಾ ಕಣ್ಣಾರೆ ಕಂಡ ಬಗ್ಗೆ ಒಂದು ಪುಟ್ಟ ಲೇಖನ... ಉತ್ಪ್ರೇಕ್ಷೆಯಿಲ್ಲ... ಅತೀಂದ್ರಿಯ ಶಕ್ತಿಯೂ ಅಲ್ಲ.. ಆದರೆ ಅದಕ್ಕಿಂತ ಮೇಲೆ ಇರುವ ಶಕ್ತಿ ನೆಡೆಸಿದ ಒಂದು ಘಟನೆ.. 

ನನ್ನ ಮನದನ್ನೆ ಸವಿತಾಳ ಅಜ್ಜಿ .. ಸಹಸ್ರಚಂದ್ರ ದರ್ಶನದ ಸಂಭ್ರಮ.. ಹತ್ತು ಮಕ್ಕಳು.. ಸೊಸೆಯಂದಿರು.. ಮೊಮ್ಮಕ್ಕಳು .. ಮರಿ ಮೊಮ್ಮಕ್ಕಳು.. ಬಂಧು ಮಿತ್ರರು.. ಊರಿನ ಹಿರಿ ಕಿರಿಯರು ನೆರೆದಿದ್ದ ಸಂಭ್ರಮ.. 

ಈ ಸಹಸ್ರ ಚಂದ್ರ ದರ್ಶನ ಅಂದರೆ ನಾ ಒಂದು ಕಡೆ ಓದಿದ್ದು. ಜೀವತಾವಧಿ... ಎಂಭತ್ತು ವಸಂತಗಳನ್ನು ಕಂಡಿದ್ದರೇ.. ಸಾವಿರ ಚಂದ್ರ ಅಂದರೆ ಸಾವಿರ ಹುಣ್ಣಿಮೆಯನ್ನು ಕಂಡಿದ್ದಾರೆ ಎಂದು ಶಾಸ್ತ್ರ ಹೇಳುತ್ತದೆ... ಆ ಅವಧಿಯಲ್ಲಿ ಮೂರು ತಲೆಮಾರುಗಳಿಗೆ ಬುನಾದಿ ಹಾಕಿರುತ್ತಾರೆ ಎನ್ನುವುದು ನಂಬಿಕೆ.. ಮಕ್ಕಳು.. ಮೊಮ್ಮಕ್ಕಳು.. ಮರಿ ಮೊಮ್ಮಕ್ಕಳು ಹೀಗೆ ..

ನಾ ಈ ರೀತಿಯ ಆಚರಣೆಯನ್ನು  ಮೂರು ಬಾರಿ ಕಂಡಿದ್ದೇನೆ.. ಒಂದು  ಅಮ್ಮನ ಸೋದರತ್ತೆಯ ಜೋಡಿಯದು.. ಎರಡನೆಯದು ನಾ ಸ್ವಾಮೀಜಿ ಎಂದು ಕರೆಯುವ ನನ್ನ ಮಡದಿಯ ಚಿಕ್ಕಪ್ಪನ ಅಪ್ಪ ಅವರ ಸಂಭ್ರಮ.. ಮೂರನೆಯದು ಸವಿತಾಳ ಅಜ್ಜಿ.. 

ಹಿರಿಕಿರಿಯರು ಕಿಕ್ಕಿರಿದು ಸೇರಿದ್ದರು.. ಅವರ ಮುಂದೆ ಈ ರೀತಿಯ ಸಂಭ್ರಮ ಒಂದು ಕಡೆಯಲ್ಲಿ ಸಂಕೋಚದ ಭಾವ ಮೂಡಿಸಿದರೆ..  ಇನ್ನೊಂದು ಬದಿಯಲ್ಲಿ ಸಾರ್ಥಕ ಬದುಕು ನೆಡೆಸುತ್ತಿರುವ ಅಜ್ಜಿಗೆ ತನ್ನ ಕಣ್ಣ ಮುಂದಿನ ಈ ವೈಭವದ ಸಂಭ್ರಮದ ಸಂತಸ.. 

ಎರಡೂ ಭಾವವನ್ನು ಅವರು ವ್ಯಕ್ತಪಡಿಸುತ್ತಿದ್ದ ರೀತಿಯನ್ನು ನನ್ನ ಕಣ್ಣುಗಳು ನನ್ನ ಮೂರನೇ ಕಣ್ಣಿನ ಮೂಲಕ  ಸೆರೆ ಹಿಡಿಯುತ್ತಿದ್ದವು.. ಅದನ್ನು ನೋಡೋದೇ ಒಂದು ಸಂತಸ ನನಗೆ... ಅವರ ಮುಖಭಾವ ಗಮನಿಸುತ್ತಲೇ ಇದ್ದೆ.. ಅವರ ಕೆಲವು ಕ್ಷಣದ ಮುಖ ಭಾವದಲ್ಲಿ ಏನೋ ಒಂದು ರೀತಿಯ ದುಗುಡ ಕಂಡು ಕಾಣದೆ ಇಣುಕುತಿತ್ತಾದರೂ.. ಸಂಭ್ರಮದ ಛಾಯೆ ಈ ದುಗುಡವನ್ನು ದೂರ ದೂರ ಸರಿಸುತ್ತಿತ್ತು.. 

ಮಂತ್ರೋಕ್ತ ಪೂಜೆ ಪುನಸ್ಕಾರಗಳು ಭರ್ಜರಿಯಾಗಿ ನೆಡೆದಿದ್ದವು.. ಮಂತ್ರೋಕ್ತ ಜಲ.. ಕಲಶದಲ್ಲಿ ಕಾಯುತ್ತಿತ್ತು.. ಇತ್ತೀಚೆಗಷ್ಟೇ ಕಾಶಿ ಯಾತ್ರೆ ಮಾಡಿದ್ದರಿಂದ ಗಂಗಸಮಾರಾಧನೆ ಕೂಡ ನೆಡೆದಿತ್ತು.. ಕಳೆದ ಐದು ವರ್ಷಗಳಲ್ಲಿ ಗಂಗಾನದಿಯನ್ನು ಗಂಗೆಯನ್ನಾಗಿ ಮಾಡಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲಬೇಕು.. ಆ ಗಂಗಾಜಾಲವನ್ನು ಮಂತ್ರೋಕ್ತ ಸಹಿತ ಆಹ್ವಾನಿಸಿ ರುದ್ರ ಚಮಕಗಳೆಲ್ಲ ಮುಗಿದಿತ್ತು.. ಮಂತ್ರದಿಂದ ಸಿದ್ಧವಾಗಿದ್ದ ಜಲದಿಂದ ಸಹಸ್ರ ಚಂದ್ರ ದರ್ಶನದ ಹೀರೋಯಿನ್ ಅವರಿಗೆ ಜಲಾಭಿಷೇಕ.. (ಇದಕ್ಕೆ ಪರ್ಯಾಯ ಪದ ತಕ್ಷಣಕ್ಕೆ ಹೊಳೆಯುತ್ತಿಲ್ಲ ಹಾಗಾಗಿ ಜಲಾಭಿಷೇಕ ಎನ್ನುವ ಪದವನ್ನು ಉಪಯೋಗಿಸಿದ್ದೇನೆ)... ನೆಡೆಯುವ ಹೊತ್ತು..


ಮನೆಯ ಮಕ್ಕಳಾದಿಯಾಗಿ ಬಂಧು ವರ್ಗವೆಲ್ಲ ಸರತಿಯಲ್ಲಿ ಬಂದು ತಮ್ಮ ಗೌರವ ಸೂಚಿಸಿದ್ದರು... ಬಂದವರೆಲ್ಲ ಈ ಕಳಸದ ಜಲದಿಂದ ಅಭ್ಯಂಜನ ನೆಡೆದಿತ್ತು... ಆಗ ಅವರ ಮುಖಭಾವವನ್ನೇ ಗಮನಿಸುತ್ತಿದ್ದೆ.. ಸಂತಸ.. ದುಃಖ.. ಅಭಿಮಾನ.. ಉತ್ಸಾಹ.. ಎಲ್ಲವೂ ಕಾಣುತಿತ್ತು.. ಮುಖದ ಮೇಲೆ ಹರಿಯುತ್ತಿದ್ದ ಮಂತ್ರಜಲ ಧಾರೆ.. ಅವರ ಮುಖಭಾವವನ್ನು ಕಾಮನಬಿಲ್ಲಿನ ಕಾಂತಿಯಂತೆ  ಬದಲಿಸುತ್ತಲೇ ಇತ್ತು.. 

ನಂತರ ಹೊಸವಸ್ತ್ರವನ್ನು ಉಟ್ಟು.. ಮುಂದಿನ ಕಾರ್ಯಕ್ರಮಕ್ಕೆ ಅಣಿಯಾಗಿದ್ದರು.. ದೇವರಿಗೆ ಪೂಜೆ..ಮಂಗಳಾರತಿ.. ಹೀಗೆ ಕಾರ್ಯಗಳು ನೆಡೆದಿದ್ದವು.. ಅಜ್ಜಿಯ ಮುಖಭಾವದಲ್ಲಿ ಯಾರನ್ನೋ ನಿರೀಕ್ಷೆ ಮಾಡುತ್ತಿರುವ ನೋಟ.. ಸುತ್ತ ಮುತ್ತಲು ತಿರು ತಿರುಗಿ ನೋಡುತ್ತಲೇ ಇದ್ದರು.. ನನ್ನ ಕ್ಯಾಮೆರಾ ಕೂಡ ಕೇಳಿತು ..

"ಏನು ಶ್ರೀ ಅದು ಅಜ್ಜಿ ಯಾರನ್ನು ನಿರೀಕ್ಷೆ ಮಾಡುತ್ತಿದ್ದಾರೆ?".. 

"ಗೊತ್ತಿಲ್ಲ ನಿಕೋನ್ .. ನೋಡೋಣ ಕಾದು ನೋಡೋಣ" ಎಂದು ಹೇಳಿದೆ.. 


ಕೊಂಚ ಗದ್ದಲ.. ಕೊಂಚ ಗಲಿಬಿಲಿ.. ನೋಡಿದರೆ.. ಅಜ್ಜಿ ಮನೆಯ ಕಾಂಪೌಂಡ್ ಮೇಲೆ ಒಂದು ವಾನರ ಬಂದು ಕೂತಿತ್ತು.. ಅಲ್ಲಿದ್ದವರೊಬ್ಬರು ಮಾವಿನಹಣ್ಣು ಕೊಟ್ಟರು.. ಅಚ್ಚುಕಟ್ಟಾಗಿ ಸಿಪ್ಪೆ ಸುಲಿದು ತಿಂದುಹಾಕಿತು .. ಇನ್ನೊಂದು ಮಾವಿನ ಹಣ್ಣು ಅದಕ್ಕೂ ಅದೇ ಗತಿಯಾಯಿತು.. ಬಾಳೆ ಹಣ್ಣು ಕೊಟ್ಟರು.. ತಿಂದಿತು.. ಹಾಗೆ ಮತ್ತೆ ಅಜ್ಜಿಯ ಕಡೆ ಕ್ಯಾಮೆರಾ ತಿರುಗಿಸಿದೆ.. ಸ್ವಲ್ಪ ಹೊತ್ತಿನಲ್ಲಿಯೇ . ಅದೇ ವಾನರ.. ಹೋಮದ ಕುಂಡದ ಹತ್ತಿರ ಬಂದು ಅಲ್ಲಿದ್ದ ಪದಾರ್ಥವನ್ನು ತಿಂದಿತು.. ನಂತರ ಅಜ್ಜಿಯ ಕಾಲು ಬುಡದಲ್ಲಿ ಕೂತಿತು.. ಪಕ್ಕದಲ್ಲಿಯೇ ಕೂತಿದ್ದ ಅಜ್ಜಿಯ ಹಿರಿಯ ಸೊಸೆ ಮತ್ತು ಮಗ.. ಮೆಲ್ಲಗೆ ಅಲ್ಲಿದ ಹಣ್ಣು ಕೊಟ್ಟರು.. ಪುರೋಹಿತರು ನೈವೆದ್ಯ ಮಾಡಬೇಕು ಎಂದರು.. ಸೊಸೆ ಮತ್ತು ಮಗ ಅದಕ್ಕೆ ಸಿದ್ಧವಾಗಬೇಕೆಂದಿದ್ದಾಗ... ವಾನರ ಒಂದು ಲೋಟದಲ್ಲಿದ್ದ ಕಲೆಸಿದ ಮೊಸರನ್ನವನ್ನು ಅಚ್ಚುಕಟ್ಟಾಗಿ ನಾವು ಊಟ ಮಾಡುವಂತೆ ತಿಂದು ಮುಗಿಸಿತು.. ನಂತರ ಹಾಲು.. ಜೇನು ತುಪ್ಪ.. ಎಲ್ಲವನ್ನು ತಿಂದು ಮುಗಿಸಿತು.. ನಂತರ ಪಂಚ ಪಾತ್ರೆಯಲ್ಲಿದ್ದ ನೀರಿನಲ್ಲಿ ಕೈಯನ್ನು ಅದ್ದಿ.. ಕೊಡವಿಕೊಂಡು.. ಮೆಲ್ಲಗೆ ಜಾಗ ಖಾಲಿ ಮಾಡಿತು.. 






ಊರಿನವರ ಪ್ರಕಾರ .. ಮಂಗಗಳು ಬಂದಿದ್ದೆ ಅಥವಾ ಕಾಣಿಸಿಕೊಂಡಿದ್ದೆ ಬಲು ಅಪರೂಪವಂತೆ.. ಒಂದು ರೀತಿಯಲ್ಲಿ ಪವಾಡ ಎನಿಸಿತು.. ವಾನರ ತಿಂದು ಮುಗಿಸಿದ್ದನ್ನೆಲ್ಲ ಫೋಟೋ ತೆಗೆದೇಬಂದು .. ಸುಮಾರು ಹೊತ್ತಾದ ಮೇಲೆ.. ಯಾಕೋ ಅಜ್ಜಿಯ ಮುಖ ನೋಡಿದೆ ..ತಮ್ಮ ಆಶಯ ಈಡೇರಿದ ಭಾವ.. ಅವರು ಯಾರನ್ನು ನಿರೀಕ್ಷಿಸಿದ್ದರೋ ವಾನರ ರೂಪದಲ್ಲಿ ಬಂದು ದರ್ಶನ ನೀಡಿದರು ಎನ್ನುವ ತೃಪ್ತಿ ಭಾವ.. ಅವರ ಮೊಗದಲ್ಲಿತ್ತು.. 

ಆಗಸವನ್ನೊಮ್ಮೆ ನೋಡಿದೆ.. ಅಣ್ಣಾವ್ರ ನಾದಮಯ ಹಾಡಿನ ಒಂದು ಸಾಲು ಮನದಲ್ಲಿ ಹಾಡತೊಡಗಿತು .. 

"ಸುರರು ಬಂದು, ಹರಿಯ ಕಂಡು ಹರುಷದಿ ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು ನಾದಮಯ ಈ ಲೋಕವೆಲ್ಲಾ ಕೊಳಲಿಂದ ಗೋವಿಂದ ಆನಂದ ತಂದಿರಲು ನಾದಮಯ ಈ ಲೋಕವೆಲ್ಲ ನಾದಮಯ" 

ಅಲ್ಲವೇ.. ತನಗೆ ಬೇಕಾದವರನ್ನು ವಾನರ ರೂಪದಲ್ಲಿ ದರ್ಶನ ಕೊಡಿಸಿದ ಆ ಮಹಾಮಹಿಮನ ಪವಾಡವನ್ನು ಕಂಡು ಅಜ್ಜಿಯು ಸಂತಸ ಪಟ್ಟ ಕ್ಷಣ ಒಂದು ಕಡೆಯಲ್ಲಾದರೆ.. ನಿರ್ಲಿಪ್ತ ಮನಸ್ಸಿನಿಂದ.. ಅಂದುಕೊಂಡ ಕಾರ್ಯ ಆಗಿಯೇ ಆಗುತ್ತದೆ ಎನ್ನುವ ಪವಾಡ ಸಾದೃಶ್ಯ ಕಂಡ ಸಂತಸ ನಮಗೆ 

ಒಂದು ಸಾರ್ಥಕತೆಯನ್ನು ಕಣ್ಣಾರೆ ಕಂಡ ತೃಪ್ತಿ ನಮಗೆ.. 

ಅದರ ಕೆಲವು ಚಿತ್ರಗಳು ನಿಮಗಾಗಿ.. !!!

Wednesday, May 8, 2019

ಕಣ್ಣೀರಲ್ಲ ಶ್ರೀ ಪನ್ನೀರು ಪನ್ನೀರು

ಮಳೆ ಬರುತ್ತದೆ.. ಬರಬಹುದು.. ಬಂದರೆ.. ಈ ರೇ ರೇ ರೇ ಗಳಲ್ಲಿ ದಿನವೂ ಆಫೀಸಿಗೆ ಹೋಗುವಾಗ ಛತ್ರಿ ತೆಗೆದುಕೊಂಡು ಹೋಗುವ ಅಭ್ಯಾಸ ಮಾಡಿಕೊಂಡೆ.. ಆ ದಿನದಿಂದ ಒಂದು ದಿನವೂ ಮಳೆಯ ಸುಳಿವಿಲ್ಲ.. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಛತ್ರಿ ಬ್ಯಾಗಿನೊಳಗೆ ಇರುತ್ತಿತ್ತು..

ನಿನ್ನೆ ಮಧ್ಯಾನ್ಹ ಸಿಹಿ ವಾರ್ತೆ ಕೇಳಿದ ಮೇಲೆ.. ಮನಸ್ಸು ಹಗುರಾಗಿತ್ತು.. ಅದೇ ಗುಂಗಿನಲ್ಲಿ ವಾಟ್ಸಾಪ್ ಸ್ಟೇಟಸ್ ಹಾಕಿದೆ..

"ಸವಿತಾ ನಗುತ್ತಿದ್ದಾಳೆ..
ತನ್ನ ಮಗಳು ೮೬% ನಲ್ಲಿ
ಜೀವನದ ಮೊದಲ ಘಟ್ಟ ದಾಟಿದ್ದಾಳೆ ಎಂದು"
#ಸವಿತಾರ್ಥಕತೆ!!!

ಮನಸ್ಸು ಇನ್ನೂ ಹಗುರಾಯಿತು.. ಸಂಜೆ ಆಫೀಸಿನಿಂದ ಹೊರಟೆ..

ಒಂದೆರಡು ಮಳೆ ಹನಿ ಬಿದ್ದವು..

"ಯಾಕೆ ಟೀ ಹನಿಗಳು" ಅಂದೇ..

"ಶ್ರೀ ನಿಮ್ಮ ಅಣ್ಣಾವ್ರ ಹಾಲುಜೇನು ಚಿತ್ರದ ಶೈಲಿಯಲ್ಲಿ "ಕಣ್ಣೀರಲ್ಲ ಶ್ರೀ ಪನ್ನೀರು ಪನ್ನೀರು"

 "ವಾಹ್ ಸೂಪರ್ ಟೀ.. ಎಂಥಹ ಮಾತು.. ಖುಷಿಯಾಯಿತೇ"

"ಹೌದು ಶ್ರೀ.. ನಾವು ಪಟ್ಟ ಶ್ರಮ ಒಂದು ಘಟ್ಟಕ್ಕೆ ಬಂದು ನಿಂತಿದೆ.. ಇಷ್ಟೆಲ್ಲಾ ಮಾನಸಿಕ ಒತ್ತಡದ ನಡುವೆಯೂ ನಮ್ಮ ಕಂದಮ್ಮ ಇಷ್ಟು ಚೆನ್ನಾಗಿ ಓದಿದ್ದಾಳೆ.. ಅದಕ್ಕಿಂತ ಇನ್ನೇನು ಬೇಕು.. ಅವಳಿಗೆ ಶುಭವಾಗುತ್ತೆ ಶ್ರೀ.. ನೀನು ಇದ್ದೀಯ ಜೊತೆಯಲ್ಲಿ. ಅದಕ್ಕಿಂತ ಇನ್ನೇನು ಬೇಕು ಅವಳಿಗೆ"

"ಹಾ ಟೀ.. ನನಗೂ ಒಂದೊಮ್ಮೆ ಅನಿಸಿತ್ತು .. ಅವಳು ಎಷ್ಟು ಅಂಕ ತೆಗೆಯುತ್ತಲೋ ತೆಗೆಯಲಿ.. ಯಾವುದೇ ಒತ್ತಡ ಹಾಕೋದು ಬೇಡ ಅಂತ ..ಅವಳು ಇಷ್ಟು ಅಂಕ ತೆಗೆದಿದ್ದಾಳೆ ಅಂದರೆ.. ಅದು ಅವಳ ಮಾನಸಿಕ ಒತ್ತಡವನ್ನು ನಿಭಾಯಿಸಿದ ರೀತಿಗೆ ಶರಣು ಎನ್ನಬೇಕು.. ಮತ್ತು ಆ ಶ್ರೇಯಸ್ಸು ಅವಳಿಗೆ ಸಲ್ಲಬೇಕು.. ತನ್ನ ಪಾಡಿಗೆ ತನ್ನ ಪ್ಲಾನ್ ಪ್ರಕಾರ ಓದುತ್ತಾ ಸಾಗಿದ್ದು.. ಮಧ್ಯೆ ಮಧ್ಯೆ.. ಮೊಬೈಲು, ಸಿನಿಮಾ, ಟಿವಿ.. ಹೀಗೆಲ್ಲಾ ಇದ್ದರೂ ಓದುವುದರಿಂದ ದೂರವಿರಲಿಲ್ಲ.. ಇದೆ ರೀತಿ ಇನ್ನು ಐದರಿಂದ - ಏಳು ವರ್ಷ ಓದಿಬಿಟ್ಟರೆ.. ಅವಳ ಹಾದಿ ಸುಂದರವಾಗಿರುತ್ತೆ.. "

"ನಿಜ ಶ್ರೀ... ನಾನಿದ್ದೇನೆ ಅವಳ ಜೊತೆಯಲ್ಲಿ ಮಾನಸಿಕ ಧೈರ್ಯ ತುಂಬುವುದಕ್ಕಾಗಿ.. ಜೊತೆಗೆ ನಾನು ಅವಳಿಗೆ ಹೇಳಿದ್ದೆ ಪಮ್ಮಿ ಅಕ್ಕನ ತರಹ ಚಾರ್ಟರ್ಡ್ ಅಕೌಂಟೆಂಟ್ ಆಗು ಅಂತ.. ಅದನ್ನು ನಿಜ ಮಾಡುವುದೇ ಅವಳ ಗುರಿಯಾಗಬೇಕು.. ಅದನ್ನು ನನಸು ಮಾಡೋದಕ್ಕೆ ನೀ ಇದ್ದೀಯ ಜೊತೆಯಲ್ಲಿ.. ಅಷ್ಟು ಸಾಕು ನನಗೆ.. "

ಆಗಸ ನೋಡಿದೆ ..ಅದರ ತುಂಬೆಲ್ಲ ಸವಿತಾಳ ಆ ಮುಗ್ಧ ನಗು ಮೊಗವೆ ಕಾಣುತ್ತಿತ್ತು.. ಹಾಗೆ ಅವಳ ಜೊತೆ ಮಾತಾಡಿಕೊಂಡು.. ಮೆಟ್ರೋ ಹತ್ತಿ.. ನನ್ನ ಬೈಕ್ ಹತ್ತಿರ ಬಂದಾಗಲೂ ಮಳೆಯ ಹನಿಗಳಿದ್ದವೇ  ಹೊರತು ಭೋರ್ಗರೆಯುವ ಮಳೆ ಇರಲಿಲ್ಲ.. ಸರಿ ಬೈಕಿನಲ್ಲಿ ಹಾಡಾಡಿಕೊಂಡು ಬರುತ್ತಿದ್ದೆ..

ಒಮ್ಮೆ ಆಗಸ ನೋಡಿದೆ.. ಮತ್ತೆ ಸವಿತಾ ಕಂಡಳು.. "ಟೀ ಒಂದು ಪ್ರಶ್ನೆ"

"ಹೇಳು ಶ್ರೀ"

"ಆನಂದಭಾಷ್ಪ ಅಂದೇ. .. ಬರೀ ಒಂದೆರಡು ಹನಿಗಳು ಮಾತ್ರ ಬಿದ್ದವು.. ಅಷ್ಟೇನಾ ಖುಷಿಯಾಯ್ತಾ "

"ಹಾ ಶ್ರೀ.. ಕುಶಿಯಾಯ್ತು.. ಓಹ್ ಗೊತ್ತಾಯ್ತು.. ಇರು ಒಂದು ಕ್ಷಣ.. ನಿನಗೆ ಮ್ಯಾಜಿಕ್ ತೋರಿಸುತ್ತೇನೆ"

"ಏನು ಟೀ ಮ್ಯಾಜಿಕ್"

"ಇರಪ್ಪ ..ಇಂದು ನಿನ್ನ ಇಷ್ಟದ ಮಂಗಳವಾರ.. ನನ್ನಿಷ್ಟದ ತಾರೀಕು (ಏಳು)... ಎರಡೂ ಇದ್ದ ಮೇಲೆ ಇನ್ನೊಂದು ನಿನಗೆ ಇಷ್ಟವಾದುದನ್ನು ಕಳಿಸುತ್ತೇನೆ.. "

ಅರೆ ಕ್ಷಣ.. ಭೋರ್ಗರೆತ ಶುರುವಾಯಿತು.. ಕಣ್ಣು ಕಾಣದಷ್ಟು ದಪ್ಪ ದಪ್ಪ ಹನಿಗಳ ಮಳೆ.. ಬೈಕ್ ಓಡಿಸಲಾಗಲಿಲ್ಲ.. ತಕ್ಷಣ.. ರಸ್ತೆಯ ಅಂಚಿನಲ್ಲಿದ್ದ ಅಂಗಡಿಯ ಮುಂದೆ ಬಂದು.. ಮೊಬೈಲು, ವಾಚು, ಪರ್ಸ್ ಎಲ್ಲವನ್ನೂ ಬ್ಯಾಗಿನಲ್ಲಿ ಹಾಕಿ.. ಕನ್ನಡಕವನ್ನು ಜೇಬಿನಲ್ಲಿ ಹಾಕಿಕೊಂಡು.. ಮತ್ತೆ ಬೈಕ್ ಬಳಿ ಬಂದೆ.. ಅಲ್ಲಿಯ ತನಕ ನನ್ನ ಕಾರ್ಯವನ್ನು ನೋಡುತ್ತಿದ್ದ ಅಕ್ಕ ಪಕ್ಕದ ಮಂದಿ ಸುಮ್ಮನಿದ್ದರು.. ಬೈಕ್ ಬಳಿ  ಬಂದು. .. ಬೈಕ್ ಸ್ಟಾರ್ಟ್ ಮಾಡಿದಾಗ.. ಅಲ್ಲಿದ್ದ ಒಬ್ಬ ತಲೆ ಚಚ್ಚಿಕೊಂಡದ್ದು ಕಣ್ಣಿಗೆ ಬಿಟ್ಟು.. ನಸು ನಗುತ್ತಾ "ಟೀ ಸೂಪರ್" ಎಂದು ಸಲ್ಯೂಟ್ ಹೊಡೆದದ್ದೇ.. ಸೀದಾ ಮನೆ ಕಡೆ..  ಆ ಮಳೆಯಲ್ಲಿ ಬೈಕ್ ಚಾಲನೆ.. ಸುಂದರ ಅನುಭವ ಕೊಟ್ಟಿತು.. ಹಾಗೆ ನನ್ನ SSLC ದಿನಗಳ ಕಡೆಗೆ ಜಾರಿತು..

"ಶ್ರೀಕಾಂತ ಇವತ್ತು ನಿನ್ನ ರಿಸಲ್ಟ್.. ಶಾಲೆಗೆ ಹೋಗಿ ನೋಡಿಕೊಂಡು ನನ್ನ ಆಫೀಸ್ ಹತ್ತಿರ ಬಾ" ಅಂತ ನನ್ನ ಅಪ್ಪ ಹೇಳಿ ಆಫೀಸಿಗೆ ಹೋದರು..

ನಾನು ಠಾಕು ಠೀಕಾಗಿ ಸಿದ್ಧವಾಗಿ.. ಶಾಲೆಯ ಹತ್ತಿರ ಹೋದೆ.. ನೋಟೀಸ್ ಬೋರ್ಡಿನಲ್ಲಿ ಫಲಿತಾಂಶ ಹಾಕಿದ್ದರು.. ನನ್ನ ರೋಲ್ ನಂಬರ್ ಹುಡುಕುತ್ತಾ ಬಂದಾಗ ಅಚ್ಚರಿ ಕಾದಿತ್ತು.. ನನ್ನ ನಂಬರಿಗೆ ಒಂದು ಗೆರೆ ಎಳೆದಿದ್ದರು. .. ಅಲ್ಲಿ ಇನ್ಯಾರ ನಂಬರಿಗೂ ಹಾಗೆ ಮಾಡಿರಲಿಲ್ಲ.. ಸರಿ ಮಾರ್ಕ್ಸ್ ಎಷ್ಟು ಬಂದಿದೆ ಎಂದು ತಿಳಿದುಕೊಂಡು.. ಅಪ್ಪನ ಆಫೀಸಿಗೆ ಹೋದೆ.. ಹೇಳಿದೆ..

"ಅಣ್ಣ ಫಸ್ಟ್ ಕ್ಲಾಸಿನಲ್ಲಿ ಪಾಸಾಗಿದ್ದೇನೆ.. ಇದು ನೋಡಿ ಮಾರ್ಕ್ಸ್"

"ನನಗೆ ಗೊತ್ತು.. ನೋಡಿಲ್ಲಿ ಬರೆದುಕೊಂಡು ಬಂದಿದ್ದೇನೆ" ಎಂದು ತೋರಿಸಿದರು.. "ಆಫೀಸಿಗೆ ಬರುವಾಗ ಶಾಲೆಗೆ ಹೋಗಿ ನಿನ್ನ ರಿಸಲ್ಟ್ ನೋಡಿ.. ನನ್ನ ಬಾಸ್ ಸೀತಾರಾಮುಗೆ ಹೇಳಿದ್ದೀನಿ.. ನಾನೇ ನಿನ್ನ ನಂಬರ್ ಕೆಳಗೆ ಗೆರೆ ಎಳೆದದ್ದು. "

ಅಪ್ಪನ ಬಾಸ್ ಸೀತಾರಾಮು ಸರ್ ಹತ್ತಿರ ಹೋಗಿ ಹೇಳಿದೆ.. "ಖುಷಿ ಆಯ್ತು ಶ್ರೀಕಾಂತ.. ಕೆ ಆರ್ ಪಟ್ಟ ಕಷ್ಟಕ್ಕೆ ಸರಿಯಾದ ಬೆಲೆ ಸಿಗುತ್ತಿದೆ.. ಶುಭವಾಗಲಿ.. ಮುಂದೆ ಏನು ಓದುತ್ತೀಯ ನಿರ್ಧಾರ ಮಾಡಿ ಹೇಳು.. ನನ್ನ ಕೈಲಾದ ಸಹಾಯ ಮಾಡುತ್ತೇನೆ" ಎಂದರು ... ಅವರು ನುಡಿದಂತೆಯೇ.. ನನ್ನ ಪೂರ್ಣ ವಿದ್ಯಾಭ್ಯಾಸಕ್ಕೆ ಅವರ ಸಹಾಯ ಇತ್ತು.. ಇಂದು ನಾನು ಏನಾದರೂ ಆಗಿದ್ದೇನೆ ಎಂದರೆ ಅದಕ್ಕೆ ಭದ್ರ ತಳಪಾಯ ಹಾಕಿದ್ದು.. ಸೀತಾರಾಮ್ ಸರ್..

 ಇದೆಲ್ಲ ನೆನೆದು..ಮಳೆಯಿಂದ ನೆನೆದು ಮನೆಗೆ ಬಂದಾಗ.. ಮಗಳು ಫುಲ್ ಕುಶಿಯಲ್ಲಿದ್ದಳು.. ಹಾಗೆ ಒದ್ದೆ ಬಟ್ಟೆಯಲ್ಲಿಯೇ.. ಕಂಗ್ರಾಜುಲೇಷನ್ ಪಾಪ  ಎಂದು ಹೇಳಿ ಅಪ್ಪಿಕೊಂಡು ಸಿಹಿ ತಿನ್ನಿಸಿದೆ..

ಹೊರಗೆ ಬಂದು ನೋಡಿದೆ.. ಆನಂದಭಾಷ್ಪ ಇನ್ನೂ ಧಾರಾಕಾರವಾಗಿ ಸುರಿಯುತ್ತಲೇ ಇತ್ತು.. ಅವಳ ಫೋಟೋ ನೋಡಿದೆ .. ಸೂಪರ್ ಶ್ರೀ ಎಂದಳು ನನ್ನ ಟೀ!!!

Sunday, March 24, 2019

ಗಂಗೆಯೇ ಮಡಿಲು ಗಂಗೆಯೇ ಕಡಲು...!

ಒಂದು ಕುಗ್ರಾಮ..ಅಮೋಘ ಇತಿಹಾಸವಿದ್ದರೂ ಕುಗ್ರಾಮವಾಗಿತ್ತು ..  ಮಳೆ ಬೆಳೆ ಎಂದರೆ ಅದೇನು ಅಂತ ಜನಗಳಿಗೆ ಮರೆತೇ ಹೋಗಿತ್ತು..  ಜಪ ತಪಗಳು ನೆಡೆದೆ ಇತ್ತು.. ಆದರೂ ಆ ಹಳ್ಳಿಗೆ ಭರವಸೆಯ ಬೆಳಕು ಮರೀಚಿಕೆ ಆಗಿತ್ತು.. ಪ್ರತಿ ಮಳೆಗಾಲದಲ್ಲಿಯೂ ದಟ್ಟವಾದ ಮೋಡಗಳು ಆವರಿಸಿಕೊಂಡು ಜನರಿಗೆ ಮಳೆ  ಬರಬಹುದೇನೋ ಎಂಬ ಆಶಯ ಬಿತ್ತುತ್ತಿತ್ತೇ ವಿನಃ ಮಳೆಯ ಸೋಂಕಿಲ್ಲದೆ ಸೊರಗಿತ್ತು.. ಬರುಬರುತ್ತಾ ಜನರು ಮಳೆ, ಮೋಡ, ಹನಿ, ಬೆಳೆ ಈ ಪದಗಳು ಪಠ್ಯ ಪುಸ್ತಕದ ಪದಗಳಾಗಿವೆ ಎಂದು ಮಾತ್ರ ತಿಳಿಯುವ ಹಾಗಿತ್ತು..

ಹೀಗೆ ಸಾಗುತ್ತ ಹೋದ ಕಾಲದಲ್ಲಿ ... ಒಂದು ದಿನ ಒಬ್ಬರು ಸಂತ ತೀರ್ಥಯಾತ್ರೆಯ ಹಾದಿಯಲ್ಲಿ ಆ ಊರಿಗೆ ಬಂದರು.. ನೀರಿಗಾಗಿ ಬವಣೆ ಪಡುತ್ತಿದ್ದ ಹಳ್ಳಿಯನ್ನೊಮ್ಮೆ ಸುತ್ತು ಹಾಕಿ.. ಊರಿನ ಮಧ್ಯಭಾಗದಲ್ಲಿದ್ದ ಅರಳಿ ಕಟ್ಟೆಗೆ ನಮಸ್ಕರಿಸಿ ಕುಳಿತುಕೊಂಡರು.. ಜನರಿಗೆಲ್ಲ ಕೆಲಸ ಕಾರ್ಯ ಏನೂ ಇರಲಿಲ್ಲ.. ದಿನವೂ ತಮ್ಮ ಊರಿನ ಭಾಗ್ಯದ ಬಗ್ಗೆ ಶಾಪ ಹಾಕುತ್ತ ಹಿಂದಿನ ಜೀವನವನ್ನು ನೆನೆಸಿಕೊಂಡು ಇಂದಿನ ಕಾಲದ ಬಗ್ಗೆ ಕೋಪದಿಂದ ಮಾತಾಡೋದೇ ಆಗಿತ್ತು ಕೆಲಸ..

ತನ್ನ ಪಾಡಿಗೆ ತಾನು ಕೂತಿದ್ದ ಸಂತನನ್ನು ಕಂಡು ಆ ಊರಿನ ಪ್ರಮುಖರಲ್ಲಿ ಒಬ್ಬರಾಗಿದ್ದ ಜ್ಞಾನದೇವ.. "ಸ್ವಾಮೀ ನಮಸ್ಕಾರ... ತಾವು ಯಾವ ಊರಿನವರು.. ಎಲ್ಲಿಗೆ ನೆಡೆಯುತ್ತಿದೆ ನಿಮ್ಮ ಪಯಣ.. ಈ ಊರಿಗೆ ಬಂದ ವಿಶೇಷವೇನು.. ಹೀಗೆ ಉಭಯಕುಶಲೋಪರಿ ಮಾತುಗಳನ್ನ ಕೇಳಿ.. ಕಣ್ಣು ಬಿಟ್ಟ ಸಂತ .. "ಮೆಲ್ಲನೆ ನಸು ನಕ್ಕು.. ತೀರ್ಥಯಾತ್ರೆಗೆ ಹೊರಟಿದ್ದೆ .. ನಿಮ್ಮ ಊರಿನ ಮಗ್ಗುಲಲ್ಲಿ ಹೋಗುವಾಗ ನಿಮ್ಮ ಊರಿನ ಹೆಸರು ನನ್ನ ಕಾಡಿತು.. ಮಳೆಹಳ್ಳಿ ಎಂಬ ಹೆಸರು.. ಯಾಕೋ ನನ್ನ ತಡೆದು ನಿಲ್ಲಿಸಿತು. ಮಳೆಗಾಲವಾದರೂ ಭೂಮಿ ಬಿರಿದು ಬಾಯಿ ಬಿಟ್ಟಿದೆ..ಊರ ಮುಂದಿನ  ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ಕಾಣದೆ ಜೇಡರ ಬಲೆ ಕಟ್ಟಿದ್ದು ಕಂಡೆ..  ಜಾನುವಾರುಗಳು ಸೊರಗಿ ನಿಂತಿವೆ.. ಹೊಲಗದ್ದೆಗಳು ನೀರು ಕಾಣದೆ ಬರಡಾಗಿವೆ.. ಅದಕ್ಕಾಗಿ ನನ್ನ ತೀರ್ಥಯಾತ್ರೆಯನ್ನು ಕೊಂಚ ಮುಂದೆ ಮಾಡಿ.. ಈ ಹಳ್ಳಿಯಲ್ಲಿ ಕೆಲವು ದಿನಗಳನ್ನು ಕಳೆಯೋಣ ಅಂತ ಬಂದೆ.. ತೊಂದರೆಯಾಯಿತೇ.. ?"

"ಅಯ್ಯೋ ಸ್ವಾಮೀ ತೊಂದರೆಯೇನು ಬಂತು.. ನಮ್ಮ ಊರಲ್ಲಿ ತೊಂದರೆ ಎನ್ನೋದು ಹಾಸಿಕೊಂಡು ಮಲಗಿಬಿಟ್ಟಿದೆ.. ಹೊಸ ತೊಂದರೆ ಬರಲು ಸಾಧ್ಯವೇ ಇಲ್ಲ" ಮಾತಿನಲ್ಲಿ ಉದಾಸೀನ ರಾಜ್ಯಭಾರ ಮಾಡುತ್ತಿತ್ತು..

"ನಿಮ್ಮ ಹಳ್ಳಿಯನ್ನು ಮೂರು ಸಾರಿ ಸುತ್ತಿ ಬಂದಿದ್ದೇನೆ.. ನಾ ಹೇಳೋದನ್ನ ನೀವು ಕೇಳಿದರೆ.. ನಿಮ್ಮ ಊರಿನ ಹಣೆಬರಹವನ್ನು ನಾ ಕೊಂಚ ಬದಲಿಸಬಲ್ಲೆ ಆದರೆ ನಿಮ್ಮ ಸಹಕಾರವಿಲ್ಲದೆ ನಾ ಏನೂ ಮಾಡೋಕೆ ಆಗಲ್ಲ.. ಆಗುತ್ತಾ?"

"ಸರಿ ಸ್ವಾಮಿ.. ನಾವೂ ಏನೇನೂ ನೋಡಿ ಆಯ್ತು.. ಇದನ್ನು ನೋಡುತ್ತೇವೆ.. ಕೇಳುತ್ತೇವೆ.. ಅದೇನೋ ಹೇಳ್ತಿರೋ ಹೇಳಿ.. "
ಮಾತಿನಲ್ಲಿ ಬೇಜವಾಬ್ಧಾರಿ ಅನ್ನೋದಕ್ಕಿಂತ ಬೇಸರವೇ ಹೆಚ್ಚು ಮನೆ ಮಾಡಿತ್ತು.. "ಆಶಾಕಿರಣ" ಅಂದರೇನು  ಎಂದರೆ ಅದು ಆಶಾ ಮತ್ತು ಕಿರಣ ಇಬ್ಬರ ಹೆಸರು ಎನ್ನುವ ಮಟ್ಟಕ್ಕೆ ಹೋಗಿತ್ತು..

ಆ ಸಂತರು ತಮ್ಮ ಜೋಳಿಗೆಯಿಂದ ಒಂದು ರುದ್ರಾಕ್ಷಿ ಮಾಲೆ ತಗೆದು.. ಪಕ್ಕದಲ್ಲಿಟ್ಟುಕೊಂಡರು.. ಅವರ ಕೈಯಲ್ಲಿ ಒಂದು ಕರಿದಾರ ಕಟ್ಟಿಕೊಂಡಿದ್ದರು.. ಹಾಕಿದ್ದ ಉಡುಪು ಪೂರ್ಣ ಕಪ್ಪು..

ಅಷ್ಟುಹೊತ್ತಿಗೆ ಊರ ಜನರೆಲ್ಲಾ ಸೇರಿದ್ದರು.. ಕೆಲಸವಿರಲಿಲ್ಲ.. ಹೇಗೋ ಹೆಂಗೋ ಬೆಳಗಿನ ತಿಂಡಿಯಾಗಿತ್ತು.. ಇನ್ನು ಊಟದ ಸಮಯದ ತನಕ ಮಾಡೋಕೆ ಕೆಲಸವಿದ್ದರೆ ತಾನೇ.. ಸಂತರ ಚಟುವಟಿಕೆಗಳನ್ನೇ ನೋಡುತ್ತಾ ಕೂತಿದ್ದರು..

"ನೀವು ಒಬ್ಬೊಬ್ಬರೇ ನನ್ನ ಬಳಿಗೆ ಬನ್ನಿ... ನಿಮ್ಮ ಹೆಸರು ಬರೆದು.. ನಿಮ್ಮ ಮನೆಯಿಂದ ಒಂದು ಚೊಂಬು ನೀರನ್ನು ತಂದು ಈ ಅರಳಿಕಟ್ಟೆಯ ಹಿಂಭಾಗದಲ್ಲಿರುವ ಕೆರೆಯೊಳಗೆ ಹಾಕುತ್ತಾ ಹೋಗಿ .. "

ಜನಕ್ಕೆ ಹುಚ್ಚು ಅನ್ನಿಸಿತು.. ಕುಡಿಯೋದಕ್ಕೆ ನೀರಿಲ್ಲ.. ಇನ್ನೂ ಗುಂಡಿಯೊಳಗೆ ಸುರಿಯೋಕೆ ಎಲ್ಲಿಂದ ತರೋದು.. "ಸ್ವಾಮೀ ನೀರೆಲ್ಲಿ ಇದೆ ..ನೀರೇ ಇಲ್ಲ.. ಇನ್ನೂ ಗುಂಡಿಯೊಳಗೆ ಸುರಿಯೋದು... ಎಲ್ಲಿಂದ ತರೋದು.. ಆಗದು ಆಗದು " ಎನ್ನುತ್ತಾ ಎಲ್ಲರೂ ತಲೆ ಅಲ್ಲಾಡಿಸತೊಡಗಿದಾಗ.. ಸುಮಾರು ತೊಂಬತ್ತು ವರ್ಷಕ್ಕೂ ಹೆಚ್ಚಿನ ಅಜ್ಜ.. ತನ್ನ ಜೋಳಿಗೆಯಿಂದ ಒಂದು ಪುಟ್ಟ ನೀರಿನ ಸೀಸೆ ತೋರಿಸಿ.."ಸ್ವಾಮಿಗಳೇ ನಂತಾವ ಈಟೆ ನೀರಿರೋದು.. ಹಾಕ್ಲಾ?"

"ಅಜ್ಜ ಹನಿ ಹನಿಗೂಡಿದರೆ ಹಳ್ಳ ಅಂತಾರಲ್ವ.. ಹಾಕಿ ಅಜ್ಜ"

ಅಲ್ಲಿದ್ದ ಒಬ್ಬ ಪುಟ್ಟ ಬಾಲಕ.. "ಅಜ್ಜ ನಿನಗೆ ಊರುಗೋಲಾಗಿ ನಾ ಬರುವೆ.. " ಎನ್ನುತ್ತಾ ಅಜ್ಜನನ್ನು ಮೆಲ್ಲಗೆ ಕೆರೆಯ ದಂಡೆಗೆ ಕರೆದೊಯ್ದ.. ಅಜ್ಜ ತನ್ನ ಎರಡು ಕೈಗಳನ್ನು ಆಗಸಕ್ಕೆ ಮುಗಿಯುತ್ತಾ "ದೇವರೇ.. ಈ ಸಂತ ನಮ್ಮ ಈ ಹಳ್ಳಿಗೆ ಏನೋ ಒಳ್ಳೇದು ಮಾಡೋಕೆ ಬಂದವ್ರೆ.. ಅವರ ಆಸೆ ಕೈಗೂಡಲಿ ಕಣ್ಣಪ್ಪ" ಎನ್ನುತ್ತಾ "ಹರ ಹರ ಮಹಾದೇವ" ಎಂದು ಕೂಗಿ ತನ್ನ ಬಳಿಯಿದ್ದ ಸೀಸೆಯ ನೀರನ್ನು ಕೆರೆಗೆ ಹಾಕಿದ..

ಎಲ್ಲರೂ ಒಮ್ಮೆ ನಸು ನಕ್ಕರೂ.. ಆದರೂ ಎಲ್ಲರಿಗೂ ಏನೋ ತವಕ ಏನೋ ಆಗುತ್ತೆ ಅಂತ

ಆ ಪುಟ್ಟ ಬಾಲಕ ತನ್ನ ಗೆಳೆಯರ ಗುಂಪನ್ನು ಕರೆದು ತುಸು ಕಿವಿಯಲ್ಲಿ ಏನೋ ಹೇಳಿ.. ಎಲ್ಲರೂ ಓಡಿ ಹೋಗಿ.. ಪುಟ್ಟ ಪುಟ್ಟ ಪಾತ್ರೆಗಳಲ್ಲಿ ನೀರನ್ನು ತಂದು ತಂದು ಸುರಿಯತೊಡಗಿದರು.. ಬಾಲಕರ ನಂಬಿಕೆಯ ಶ್ರಮ ನೋಡಿ.. ಮಿಕ್ಕವರು ನಾವು ಹಾಗೆ ಮಾಡೋಣ ಅಂತ ಶುರು ಮಾಡಿದರು... ಈ ಸುದ್ದಿ ಕಾಳ್ಗಿಚ್ಚಿನಂತೆ ಸುತ್ತ ಮುತ್ತಲ ಹಳ್ಳಿಗಳಿಗೆಲ್ಲಾ ಹರಡಿತು.. ಗಾಡಿಗಳನ್ನು ಕಟ್ಟಿಕೊಂಡು ಬಂದು ತಮ್ಮ ಕೈಲಾದ ಸಹಾಯ ಮಾಡತೊಡಗಿದರು.. ಹಳ್ಳಿಗಳಲ್ಲಿನ ತರುಣರು.. ಸನಕೆ, ಗುದ್ದಲಿ, ಪಿಕಾಸಿ ಹೀಗೆ ಅನೇಕ ಹತಾರಗಳನ್ನು ತೆಗೆದುಕೊಂಡು.. ಹಳ್ಳಕೊಳ್ಳವಾಗಿದ್ದ ಕೆರೆಯನ್ನು ಸಮತಟ್ಟು ಮಾಡಿದರು.. ನೀರು ನಿಧಾನವಾಗಿ ಹರಡಿಕೊಳ್ಳತೊಡಗಿತು.. ಒಳ್ಳೆಯ ಪವಾಡವೆನ್ನುವಂತೆ.. ನಿಧಾನವಾಗಿ ಮೊಣಕಾಲತನಕ ತುಂಬುವಷ್ಟು ಒಂದು ಕಡೆ ನೀರು ಜಮಾ ಆಗಿತ್ತು...

ಅಂದು ಪೂರ್ಣಚಂದ್ರ ತುಂಬಿದ ರಾತ್ರಿಯಾಗಿತ್ತು.. ಸಂತರು  ಸ್ನಾನ ಜಪತಪಾದಿಗಳನ್ನು ಮುಗಿಸಿ.. ಅರಳಿಕಟ್ಟೆಯಲ್ಲಿಯೇ ಆಗಸ ನೋಡುತ್ತಾ ಕೂತಿದ್ದರು... ಹಳ್ಳಿಯವರೆಲ್ಲ ಹೊತ್ತಾಗಿತ್ತು ಅಂತ ತಮ್ಮ ತಮ್ಮ ಮನೆಗಳಿಗೆ ತೆರಳಿ ಮಲಗಿದರು.. ಸುಮಾರು ನಡುರಾತ್ರಿ ಸಂತರು ... ತಮ್ಮ ಜೋಳಿಗೆಯಿಂದ ಒಂದು ರುದ್ರಾಕ್ಷಿ ಮಾಲೆಯನ್ನು ಕೈಗೆ ತೆಗೆದುಕೊಂಡು.. ಮಿಕ್ಕಿದ್ದನ್ನು ಕಟ್ಟೆಯಲ್ಲಿಯೇ ಬಿಟ್ಟು,  ಮೆಲ್ಲಗೆ ಎದ್ದು ನಿಧಾನವಾಗಿ ಆ ಕತ್ತಲೆಯಲ್ಲಿ ಕೆರೆಯೆಡೆಗೆ ತೆರಳಿದರು.... ಮನದಲ್ಲಿ ಶಾಂತಚಿತ್ತರಾಗಿ.. ಪೂರ್ವ ದಿಕ್ಕಿಗೆ ನಿಂತು ಮೊಣಕಾಲುದ್ದದ ನೀರಿನಲ್ಲಿ ನಿಂತು ತಮಗೆ ಗೊತ್ತಿದ್ದ ಮಂತ್ರವನ್ನು ಜಪಿಸತೊಡಗಿದರು... ತಣ್ಣನೆ ಗಾಳಿ.. ಕಾಲಕೆಳಗೆ ತಣ್ಣಗಿದ್ದ ಮಣ್ಣು.. ಸೊಳ್ಳೆಯ ಝೇಂಕಾರ.. ಸುತ್ತಮುತ್ತಲ ಹಳ್ಳಿಯ ನಾಯಿಗಳ ಬೊಗಳುವಿಕೆ.. ನರಿಗಳ ಊಳಿಡುವಿಕೆ.. ಯಾವುದು ಅವರ ಕಿವಿಗೆ ಬೀಳುತ್ತಿಲ್ಲ ಎನ್ನುವಷ್ಟು ತನ್ಮಯತೆಯಿಂದ ಜಪಿಸತೊಡಗಿದರು..

ಬೆಳಕಾಗಿತ್ತು.. ಹಳ್ಳಿಯ ಪುಟ್ಟ ಬಾಲಕರು... ಅರಳಿಕಟ್ಟೆಯ ಬಳಿಗೆ ಬಂದಾಗ ಸಂತರ ಕಮಂಡಲ, ಬ್ರಹ್ಮದಂಡ, ಜೋಳಿಗೆ ಮಾತ್ರ ಇತ್ತು... ಅಚ್ಚರಿಯಿಂದ ಅತ್ತಿತ್ತ ಹುಡುಕಾಟತೊಡಗಿದಾಗ.. ಒಬ್ಬ ಬಾಲಕ  ನೋಡ್ರೋ ನಮ್ಮ ಸಾಮಿಗಳು ಅಲ್ಲಿ ಇದ್ದಾರೆ.. ಎಂದು ಬೆರಳು ಮಾಡಿ ತೋರಿಸಿದ..

ಚಿ.  ವಿಷ್ಣು ಕಲಾಕುಂಚ 
ಊರಿನವರೆಲ್ಲ ಅಲ್ಲಿಗೆ ಬಂದು ಆ ದೃಶ್ಯವನ್ನು ಎವೆಯಿಕ್ಕದೆ ನೋಡತೊಡಗಿದರು.. ಕಪ್ಪು ವಸ್ತ್ರದ, ಶ್ವೇತ ಕೇಶರಾಶಿ, ಬಿಳಿ ಗಡ್ಡದ ಸ್ವಾಮಿಗಳು ರುದ್ರಾಕ್ಷಿಯನ್ನು ಕೈಯಲ್ಲಿ ಹಿಡಿದು ಜಪಿಸುತ್ತಿದ್ದರು.. ಯಾರಿಗೂ ಹತ್ತಿರ ಹೋಗುವ ಧೈರ್ಯ ಬರಲಿಲ್ಲ.. ಆದರೆ ಅಚ್ಚರಿ ಎನ್ನುವಂತೆ.. ಮೊಳಕಾಲುದ್ದ ಇದ್ದ ನೀರು ಅವರ ಮಂಡಿಯ ತನಕ ಬಂದಿತ್ತು.. ಸಂಜೆ ಸೂರ್ಯಾಸ್ತ ಆಗುವ ತನಕ ಅಲ್ಲಿಂದ ಕದಲಿರಲಿಲ್ಲ ಅವರು.. ಊರಿನ ಜನರೂ ತಮ್ಮ ಕೆಲಸ ಕಾರ್ಯ ಬಿಟ್ಟು.. ಊಟ ತಿಂಡಿ ಮರೆತು.. ಅಲ್ಲಿನ ದೃಶ್ಯವನ್ನೇ ನೋಡುತ್ತಾ ಕೂತಿದ್ದರು..

ಸಂಜೆ ಸೂರ್ಯಾಸ್ತ.. ಆಗಸದಲ್ಲಿ ರಂಗು ತುಂಬಿದ್ದ ಸೂರ್ಯ ಅಸ್ತಮಿಸುತ್ತಿದ್ದ.. ಸಂತರು ತಮ್ಮ ಬೊಗಸೆಯಲ್ಲಿ  ನೀರು ತುಂಬಿಕೊಂಡು ಮೂರು ಬಾರಿ ಅಸ್ತಮಿಸುತ್ತಿದ್ದ ಸೂರ್ಯನ ಕಡೆ ತಿರುಗಿ ಅರ್ಘ್ಯ ಕೊಟ್ಟರು.. ಸೂರ್ಯದೇವನಿಗೆ ನಮಿಸಿ.. ಮೆಲ್ಲನೆ ಕೆರೆಯಿಂದ ಹೊರಗೆ ಬಂದು.. ಒದ್ದೆಯಾಗಿದ್ದ ಮೈಯನ್ನು ಒರೆಸಿಕೊಂಡು, ಜೋಳಿಗೆಯಲ್ಲಿದ್ದ ಕಾವಿಬಟ್ಟೆಯನ್ನು ಧರಿಸಿ.. ವಿಭೂತಿ ಬಳಿದು ಕೊಂಡು.. ಮತ್ತೆ ಜಪಕ್ಕೆ ಕೂತರು...

ಫಲಾಹಾರಗಳು ಬಂದಿದ್ದರೂ, ಅದನ್ನು ಮುಟ್ಟಿರಲಿಲ್ಲ.. ಕತ್ತಲಾಯಿತು.. ಇನ್ನೊಂದು ದಿನ ಕಳೆಯಿತು.. ಅರಳೀಕಟ್ಟೆಯಲ್ಲಿಯೇ ಜಪಮಾಡುತ್ತಾ ಕೂತಿದ್ದ ಅವರ ಮೊಗದಲ್ಲಿ ಅದೇನೋ ಕಾಂತಿಯಿತು.. ಸಮಾಧಾನವಿತ್ತು... ಆಶಯವಿತ್ತು.. ತಾನು ಕೈಗೊಂಡ ಕಾರ್ಯ ಪೂರ್ತಿಯಾಗುತ್ತೆ ಎನ್ನುವ ವಿಶ್ವಾಸ ಅವರ ಮೊಗದಲ್ಲಿ ಎದ್ದು ಕಾಣುತಿತ್ತು..

ಮಧ್ಯರಾತ್ರಿಯಲ್ಲಿ ಸಿಡಿಲು, ಮಿಂಚು, ಗುಡುಗು ಕೂಡಿದ ಆರ್ಭಟ ಶುರುವಾಯಿತು.. ಹಳ್ಳಿಗರಿಗೆ ಕುತೂಹಲ ಏನಿದು ಶಬ್ದ ಎಂದು.. ಸೆಕೆ ಎಂದು ಹೊರಗೆ ಮಲಗಿದ್ದವರೆಷ್ಟೋ ಜನಕ್ಕೆ ಈ ಆರ್ಭಟ ಕೇಳಿ ಎದ್ದು ಕುಳಿತರು... ದಪ್ಪ ದಪ್ಪ ಹನಿಗಳ ಮಳೆ ಶುರುವಾಯಿತು.. ನೋಡು ನೋಡುತ್ತಲೇ ಎಲ್ಲರೂ ಮನೆಯಿಂದ ಹೊರಗೆ ಆ ಬೆಳದಿಂಗಳ ಬೆಳಕಲ್ಲಿಯೇ ಮಳೆಯಲ್ಲಿ ಮಿಂದು ನಲಿದರು..

ಒಂದು ವಾರ ಸತತ ಮಳೆಯಿಂದ.. ಸುತ್ತ ಮುತ್ತಲ ಎಲ್ಲಾ ಕೆರೆಕಟ್ಟೆಗಳು ಕೋಡಿ ಬಿದ್ದವು.. ಹೈನುಗಾರಿಕೆಗೆ ಬಲ ಬಂದಿತು.. ರೈತರು ಬೇಸಾಯ ಆರಂಭಿಸಿದರು.. ಎಲ್ಲರೂ ಈ ಊರಿಗೆ ಮತ್ತೆ ಈ ತರಹ ಬರಗಾಲ ಬರಬಾರದೆಂದು..ನೀರನ್ನು ಶೇಖರಿಸುವ ಕಾಯಕ್ಕೆ ಬಿದ್ದರು.. ಜೊತೆಗೆ ಸಂಜೆಯಲ್ಲಿ ಕಾಲ ಹರಣ ಮಾಡದೆ ತಮಗೆ ಗೊತ್ತಿದ್ದ ಅನೇಕ ವಿಷಯಗಳನ್ನು ಎಲ್ಲರಿಗೂ ಹೇಳಿಕೊಡತೊಡಗಿದರು.. ನೀರಿನ ಬೆಲೆಯನ್ನು ಸಾರುವ ಗೋಡೆಬರಹಗಳು ಎದ್ದು ಬಂದವು..

ಎಲ್ಲೆಡೆ ಸಂಭ್ರಮ.. ಎಲ್ಲೆಡೆ ಖುಷಿ.. ಸಂತರು ಹಳ್ಳಿಯ ಜನರಿಗೆ ಹೇಳಿದ್ದು ಇಷ್ಟೇ..

"ಅಸಾಧ್ಯ ಎಂದು ಯಾವತ್ತೂ ಹೇಳಬೇಡಿ.. ಒಂದೇ ಅಕ್ಷರ ತೆಗೆದುಬಿಡಿ.. ಆಗ ಅದು ಆಗುತ್ತೆ "ಸಾಧ್ಯ".. ಒಂದಾಗಿದ್ದಾರೆ ಎಲ್ಲವೂ ಸಾಧ್ಯ.. " ಎನ್ನುತ್ತಾ ಕೈಮುಗಿದು.. ಇನ್ನೊಂದು ಹಳ್ಳಿಗೆ ಹೋಗುತ್ತಿದ್ದೇನೆ.. ಮತ್ತೆ ಮರಳಿ ಬರುತ್ತೇನೆ ಎಂದು ಎಲ್ಲರಿಗೂ ಕೈ ಬೀಸುತ್ತಾ ಹೊರಟರು..

ಎಲ್ಲಿಗೆ ಅಂದ್ರ.. ಇನ್ನೊಂದು ಹಳ್ಳಿಗೆ.. ಇನ್ನೊಂದು ಕುಗ್ರಾಮಕ್ಕೆ.. ಇನ್ನೊಂದು ಅಭಿವೃದ್ಧಿಯ ಹಾದಿಯನ್ನು ನೋಡಲು.. !

ನಾವೂ ಅವರ ಬರುವಿಕೆಗೆ ಕಾಯಬೇಕೆ ಅಥವ ನಾವೇ ಕೆಲಸ ಶುರು ಹಚ್ಚಿಕೊಳ್ಳೋಣವೇ.. !!!!

(ನನ್ನ ಪ್ರೀತಿಯ ಸಹೋದರಿಯಾರಾದ ಸಮೀಕ್ಷಾ ವಿ ಚಿನ್ನು ಮತ್ತು ಸೌಮ್ಯ ಭಗವತ್ ಅವರ ಬರಹಗಳನ್ನು ಓದಿದಾಗ ಮನದಲ್ಲಿ ಒಂದು ರೀತಿಯ ಸ್ಫೂರ್ತಿ ತುಂಬಿಬಂದಿತ್ತು.. ಅದರಲ್ಲೂ ಶ್ರೀ ನರೇಂದ್ರ ಮೋದಿಯವರ ಗಂಗಾ ನದಿಯಲ್ಲಿನ ದೃಶ್ಯ ಮನದಲ್ಲಿ ಎಬ್ಬಿಸಿದ ತರಂಗಗಳು ಈ ಲೇಖನಕ್ಕೆ ಸ್ಫೂರ್ತಿ.. ನನ್ನ ಅಣ್ಣನ ಮಗ ವಿಷ್ಣುವಿಗೆ ಈ ಚಿತ್ರವನ್ನು ಬರೆದು ಕೊಡು ಎಂದಾಗ.. ಶಾಲೆಯ ಪರೀಕ್ಷೆಗಳು ಇದ್ದರೂ.. ಸಮಯ ಮಾಡಿಕೊಂಡು ಬಿಡಿಸಿದ ಈ ಚಿತ್ರದ ಸುತ್ತಲೂ ಈ ಲೇಖನವನ್ನು ಹೆಣೆಯಲು ಸ್ಫೂರ್ತಿ ನೀಡಿತು..  ಈ ಲೇಖನದ ಆಶಯವನ್ನು ಅರ್ಥೈಸಿಕೊಳ್ಳಲು ಓದುಗರಿಗೆ ಬಿಟ್ಟಿದ್ದೇನೆ ......ಶುಭವಾಗಲಿ)


ಕೃಪೆ : ಸೌಮ್ಯ ಭಾಗವತ್ ಫೇಸ್ಬುಕ್ ಫೋಟೋ 

Thursday, December 27, 2018

ತಾಯಿ ನಿಮಿಷಾಂಬಾ ...ನಿಮಿಷಾಂಬೆಯ ಸನ್ನಿದಿಯಲ್ಲಿ ಪದಗಳ "ನೆರೆ"

"ಮಹೇಶ ನನಗೊಂದು ಟವಲು ಹಾಕಿಬಿಡಿ.."
"ಅಣ್ಣ ಆಗಲೇ ಹಾಕಾಯ್ತು.. "
"ಅರೆ ನಾ ಈಗ ತಾನೇ ಹೇಳಿದ್ದು!!!"
"ನಿಮಗೋಸ್ಕರ ಟವಲ್ ಅಲ್ಲಿ ಹಾಕಿಬಿಟ್ಟಿದ್ದೇನೆ.." ಜೋರಾದ ನಗು..

ನನ್ನ  ಪಾಲಿಗೆ ಹೀಗೆ ಶುರುವಾಗಿದ್ದು.. ಪದಕಮ್ಮಟದ ನಾಲ್ಕನೇ ಆವೃತ್ತಿ..

ಚುಮುಚುಮು ಚಳಿಯಲ್ಲಿ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಹತ್ತಿರ ನಾನು ಗುರು, ಮತ್ತೆ ಗುರು ಜೂನಿಯರ್ ನಿಂತಿದ್ವಿ.. ನಾಗ್ ಅಲಿಯಾಸ್ ನಾಗೇಂದ್ರ ಬಂದ್ರು.. ಉಮೇಶ್ ಸರ್ ಬಂದ್ರು.. ಸಮರ್ಥ್ ನಮಗೆ ಕೊಂಚ ಮುಂಚೆ ಸಿಕ್ಕಿದ್ರು.. ಮಹೇಶ ಇದ್ದ ಟೆಂಪೋ ಟ್ರಾವೆಲ್ಲರ್ ನಮ್ಮ ಬಳಿ ಬಂದು ನಿಲ್ತು.. ಉಭಯಕುಶಲೋಪರಿ ಸಾಂಪ್ರತ ಮಾಡುತ್ತಲೇ.. ಒಳಗೆ ನುಗ್ಗಿದೆವು..

ಶ್ರೀ ರಾಜಕುಮಾರ್ ಅವರು ಆಗಲೇ ಆಸೀನರಾಗಿದ್ದರು.. ಪರಿಚಯವಾದ ನಂತರ ನಮ್ಮ ಬಂಡಿ ಹೊರಟಿತು.. ಇನ್ನೊಂದು ಬಂಡಿಯಲ್ಲಿ ಪ್ರವೀಣ್ ಭಟ್ ಸಂಪ, ಮಲ್ಲೇಶ, ಶ್ರೀನಿಧಿ ಸರ್, ಮೇಡಂ ಒಬ್ಬರು, ಚೌಡಯ್ಯ ಇದ್ದರು.. ಶ್ರೀರಂಗಪಟ್ಟಣದಲ್ಲಿ ಸಿಗೋಣ ಅಂತ ಗಾಡಿ ಬರ್ ಅಂತ ಹೊರಟೆ ಬಿಟ್ಟಿತು..

ಮಾತು ಮಾತು ಮಾತು ಬರಬಿಡದೆ ಸಾಗಿತ್ತು ಮಾತಿನ ಲಹರಿ.. ನಾಲ್ಕು ದಿನದ ಹಿಂದಷ್ಟೇ ಬಿಡುಗಡೆಯಾಗಿ ಬಾರಿ ಸದ್ದು ಮಾಡುತ್ತಿದ್ದ ಕೆ.ಜಿಎಫ್ ಚಿತ್ರದಿಂದ ಮಾತು ಆರಂಭವಾಯಿತು.. ಪ್ರಪಂಚದ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ, ಹಾಸ್ಯ ಸಾಗಿತ್ತು..

ರಾಹುಲ್ ದ್ರಾವಿಡ್ ನನ್ನ ಇಷ್ಟದ ಆಟಗಾರ.. ಯಾವ ಪಿಚ್ ಇರಲಿ, ಯಾವುದೇ ಬೌಲರ್ ಇರಲಿ, ತಾಳ್ಮೆಯಿಂದ ಅದಕ್ಕೆ ತಕ್ಕ ಆಟವಾಡುತ್ತಿದ್ದರು.. ನಮ್ಮ ಬಂಡಿಯಲ್ಲಿದ್ದ ರಾಜಕುಮಾರ್ ಕೂಡ ಹಾಗೆ.. ಕ್ರಿಕೆಟ್, ಸಿನಿಮಾ, ಚುನಾವಣೆ, ರಾಜಕೀಯ, ಸಾಮಾನ್ಯ ವಿಷಯ ಯಾವುದೇ ಇರಲಿ ಅದ್ಭುತವಾಗಿ ಮಾತಾಡುತ್ತಿದ್ದರು.. ನಾನೂ ಮಾತಾಡುತ್ತಲೇ ಯೋಚಿಸುತ್ತಿದ್ದೆ ಯಾವ ವಿಷಯ ಮಾತಾಡೋಣ ಅಂತ.. ಶ್ರೀರಂಗ ಪಟ್ಟಣ ಬರುವ ತನಕ ಯೋಚಿಸುತ್ತಲೇ ಇದ್ದೆ.. ಕಾರಣ ಅಂಬರದ ಕೆಳಗೆ ಯಾವ ವಿಷಯವೇ ಆದರೂ ಅದ್ಭುತವಾಗಿ ಮಾಹಿತಿ ನೀಡುತ್ತಿದ್ದರು..

ಪದಕಮ್ಮಟದ ತಾಣಕ್ಕೆ ಬಂದೆವು.. ಆಗಲೇ ಬಿರುಸಿನ ಚಟುವಟಿಕೆ ನೆಡೆದಿತ್ತು..
ಪದಕಮ್ಮಟದ ತಾಣ 
ಸೊಗಸಾದ ಇಡ್ಲಿ, ವಡೆ, ಮತ್ತು ಪೊಂಗಲ್. .ಆಹಾ ಖಾರವಾದ ಚಟ್ನಿ.. ಸೂಪರ್ ಇತ್ತು.. ಆ ಚಳಿಗೆ ಮೆಣಸು ಸಿಗುತ್ತಿದ್ದ ಪೊಂಗಲ್ ಎರಡು ರೌಂಡ್ ಬಾರಿಸಿದೆವು..
ಚಳಿಗೆ ರುಚಿಕರವಾದ ತಿನಿಸು 
ಅಲ್ಲಿ ನೆಡೆಯುತ್ತಿದ್ದ ಸಿದ್ಧತೆಗಳಿಗೆ ನಾವು ಒಂದಷ್ಟು ಕೈಜೋಡಿಸಿದೆವು.. ಬಂದವರು ಸ್ವಾಗತ ಕಟ್ಟೆಯಲ್ಲಿ ನೋಂದಣಿ ಮಾಡಿಕೊಂಡು ಕಿರುಹೊತ್ತಿಗೆ, ಲೇಖನಿಗಳನ್ನ ತೆಗೆದುಕೊಂಡು ಆಸೀನರಾಗುತ್ತಿದ್ದರು ..ಬಂದವರ ಜೊತೆ ಮಾತು, ಒಂದು ಸೆಲ್ಫಿ.. ನಗು, ಹಾಸ್ಯ ಸಾಗಿತ್ತು..

ಆಲ್ವಾ.. ವಿಶ್ವಾಸವೇ ಪ್ರಗತಿಯ ಕಿರಣ!!!


ಸ್ವಾಗತ ಕಟ್ಟೆ 

ಬಂದ ಗೆಳೆಯರು

ಗುರುತಿನ ಬಿಲ್ಲೆ ಲಗತ್ತಿಸಿದ ಸಮಯ 
ಹಿರೇಮಗಳೂರಿನಿಂದ ಶ್ರೀ ಕಣ್ಣನ್ ಅವರು ಬರುವವರಿದ್ದರು.. ಅವರ ಬರುವಿಕೆಗಾಗಿ ಎಲ್ಲರೂ ಎದುರು ನೋಡುತ್ತಿದ್ದರು.. ಆ ಕ್ಷಣ ಬಂದೆ ಬಿಟ್ಟಿತು.. ಎಲ್ಲರೂ ಅವರನ್ನು ಸ್ವಾಗತಿಸಿ ಆಜಾದ್ ಸರ್ ಪದಕಮ್ಮಟದ ನೆನಪಿನ ಬಿಲ್ಲೆಯನ್ನು ಅವರ ಕೋಟಿಗೆ ಸಿಕ್ಕಿಸಿದಾಗ ಕಾರ್ಯಕ್ರಮಕ್ಕೆ ಒಂದು ಮಿಂಚಿನ ಗತಿ ಬಂದಿತು..

ಬಾಲು ಸರ್ ಅವರ ಸ್ಫೂರ್ತಿಯುತ ಸಿದ್ಧತೆ, ಮತ್ತು ಅದಕ್ಕೆ ಬೇಕಾದ ಸಲಕರಣೆಗಳು ಮತ್ತು ಸಹಾಯ ಹಸ್ತ ನೀಡುವವರು ಇದ್ದದರಿಂದ ಎಲ್ಲವೂ ಸುಗವಾಗಿ ಸಾಗಿತ್ತು.. ವೇದಿಕೆಗೆ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು.. ಸುಸ್ವರದ ಗಾಯಕರಿಂದ ನಾಡಗೀತೆಯೊಂದಿಗೆ ಪದಕಮ್ಮಟದ ನಾಲ್ಕನೇ ಆವೃತ್ತಿ ಆರಂಭವಾಯಿತು.. ಶ್ರೀಮತಿ ವಾಣಿ ಅವರಿಂದ ಪ್ರಾರ್ಥನೆ ಗೀತೆ ಸೊಗಸಾಗಿತ್ತು..
ಪ್ರಾರ್ಥನೆ ಗೀತೆ - ಶ್ರೀಮತಿ ವಾಣಿ ಅವರಿಂದ 
ಸಭಾಂಗಣ ತುಂಬುತ್ತಲೇ ಇತ್ತು.. ಸ್ವಾಗತ ಕಟ್ಟೆಯಲ್ಲಿ ನೋಂದಣಿ ಮಾಡಿಕೊಳ್ಳುವವರ ಸಂಖ್ಯೆ ಏರುತ್ತಲೇ ಇತ್ತು.. ತಿಂಡಿ ಕಾಫಿ ಸಾಗಿತ್ತು.. ಜ್ಯೋತಿಯ ಬೆಳಗುವ ಮೂಲಕ ಸಾಂಕೇತಿಕವಾಗಿ ಶುರುವಾದ ಕಮ್ಮಟ ಸರಾಗವಾಗಿ ಸಾಗಿತು..
ದೀಪಂ ಜ್ಯೋತಿ ಪರಬ್ರಹ್ಮ 
ಶ್ರೀ ಜೆಬಿಆರ್ ಸರ್ ಅವರಿಂದ ಪ್ರಾಸ್ತಾವಿಕ ಭಾಷಣ ಮತ್ತು ಶ್ರೀ ನಾಗೇಂದ್ರ ಅವರಿಂದ ನಿರೂಪಣೆ ಒಳಗೊಂಡಿತ್ತು
ನಾಗ್ ಅಲಿಯಾಸ್ ನಾಗೇಂದ್ರ ನಿರೂಪಣೆಯಲ್ಲಿ 

ಜೆಬಿಆರ್ ಸರ್.. ಸುಂದರ ಮಾತಿನ ಶುರುವಾತು
ಶ್ರೀ ಕಣ್ಣನ್  ಅವರ ಜಲಲ ಜಲಲ ಧಾರೆಯ ನೆರೆ ಆ ಅಂಗಣವನ್ನು ತುಂಬಿತ್ತು.. ಸುಮಾರು ಒಂದು ಒಂದೂವರೆ ಘಂಟೆಗಳ ಕಾಲ ಅದ್ಭುತವಾಗಿ ಮಾತಾಡಿದ ಮಹನೀಯರು.. ಸುಮಾರು ಎರಡು ಸಾವಿರ ವರ್ಷಗಳ ಕಾಲಕ್ಕೆ ನಮ್ಮನ್ನು ಹಾಸ್ಯ ಬಂಡಿಯಲ್ಲಿ ಕೊಂಡೊಯ್ದದ್ದೆ ಅಲ್ಲದೆ.. ಕರುನಾಡಿನ ಭಾಷೆಯ ಎಲ್ಲೆಗಳನ್ನು ಪರಿಚಯಿಸಿದರು.. ಆಡು ಭಾಷೆ, ಗ್ರಾಮ್ಯ ಭಾಷೆ, ಶುದ್ಧ ಭಾಷೆ ಹೀಗೆ ಹತ್ತಾರು ವಿಧಗಳನ್ನು ಘಟನೆಗಳ ಆಧಾರದ ಮೇಲೆ ಹೇಳಿದ್ದು, ಅದಕ್ಕೆ ಹಾಸ್ಯ ಲೇಪನ ಬೆರೆಸಿದ್ದು ಸೊಗಸಾಗಿತ್ತು.. ಅಕ್ಷರಶಃ ಮಂತ್ರ ಮುಗ್ಧರಾಗಿ ಕೂತಿದ್ದವರೆಲ್ಲ ಮಾತು ಮುಗಿದಾಗ ಜೋರಾದ ಚಪ್ಪಾಳೆ ತಟ್ಟಬೇಕೆಂದು ಮರೆತುಹೋಗುವಷ್ಟು ತನ್ಮಯತೆಯಿಂದ ಇದ್ದರು.. ನಾ ಇಲ್ಲಿಗೆ ಮಾತು ಮುಗಿಸುತ್ತಿದ್ದೇನೆ.. ಶುಭವಾಗಲಿ ಎಂದಾಗಲೇ ಅರೆ ಮಾತು ಇಷ್ಟು ಬೇಗ ಮುಗಿದು ಹೋಯಿತೇ ಎಂದು ಅಚ್ಚರಿಪಡುವ ಹಾಗೆ ಆಗಿತ್ತು..

ಪದಗಳ ನೆರೆ
ಪದಗಳ ಪ್ರವಾಹ
ಪದಗಳ ಬಿರುಗಾಳಿ
ಪದಗಳ ಮಳೆಯನ್ನೇ ಹರಿಸಿದ ಆ ಸಮಯ ಅದ್ಭುತ ಎನ್ನಬಹುದು..

ಪದಕಮ್ಮಟದ ಸ್ಮರಣಿಕೆಯನ್ನು ಬಿಡುಗಡೆ ಮಾಡಿ ಎಲ್ಲರಿಗೂ ಹಂಚಿದರು... ಆ ಸ್ಮರಣಿಕೆಯನ್ನು ಸಿದ್ಧಪಡಿಸಿದ ಸಹಾಯ ಹಸ್ತಗಳಿಗೆ ನಮನ ಸಲ್ಲಿಸುತ್ತಾ ರಕ್ಷಾಪುಟವನ್ನು ಸಿದ್ಧಪಡಿಸಿದ ಸೃಷ್ಟಿಕರ್ತರಿಗೆ ಒಂದು ಸಲಾಂ ಹೇಳಿ ಕಾರ್ಯಕ್ರಮಕ್ಕೆ ತಿರುವು ನೀಡಿದರು..
ಸ್ಮರಣಿಕೆ ಬಿಡುಗಡೆ ಮಾಡಿದ ಸಮಯ 
ಅಲ್ಲಿಂದ ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಂದ ಭಾಷೆ ವಿನಿಯೋಗ.. ... ಭಾಷೆ ಬೆಳೆದು ಬಂದಂತ ಹಾದಿ, ಅದಕ್ಕೆ ಇನ್ನೊಂದು ರೂಪ.. ಹೀಗೆ ತಮ್ಮ ಮೂಸೆಯಲ್ಲಿದ್ದ ವಿಷಯಗಳನ್ನು ಬಂದಿದ್ದವರಿಗೆ ತಲುಪಿಸಿದರು.. ಸೊಗಸಾದ ಕಾರ್ಯಕ್ರಮ ಹಂತಹಂತವಾಗಿ ಮೇಲೇರುತ್ತಿತ್ತು.. ಯಶ್ವಸಿಯಾಗುತ್ತಿತ್ತು..
ಶ್ರೀ ಶಂಕರ್ ನಾರಾಯಣ ಅವರ ಮಾತುಗಳು ಸೊಗಸು 
ಪ್ರಶ್ನೆ ಉತ್ತರಗಳ ಸಂವಾದ ನೆಡೆಯಿತು.. ತಮ್ಮ ಸಂದೇಹಗಳಿಗೆ ಉತ್ತರದ ಪೋಷಾಕುಗಳನ್ನು ಹೊದ್ದಿಸಿ ಸಂತಸ ಪಟ್ಟರು.

ಮುಂದೆ ಇದ್ದದ್ದು ಇದುವರೆಗೂ ಉತ್ತರ ಪ್ರದೇಶಕ್ಕೆ ಹೋಗಿದ್ದ ನಾವೆಲ್ಲರೂ ಮಧ್ಯ ಪ್ರದೇಶದ ಕರೆಗೆ ಓಗೊಟ್ಟು.. ಬಿಸಿ ಬೇಳೆ ಬಾತು, ಮೊಸರನ್ನ, ಉಪ್ಪಿನಕಾಯಿ, ಲಾಡುಗಳನ್ನು ಬೇಸರಿಸದೆ ಅದಕ್ಕೆ ದಾರಿ ತೋರಿಸಿದೆವು..
ಪುಷ್ಕಳ ಭೋಜನ 

ಇದರ ಮಧ್ಯೆ .. ಬಂದಿದ್ದವರ ಸ್ವ ಪರಿಚಯ ನೆಡೆಯಿತು.. ಊಟವಾದ ಮೇಲೆ. ... ನಾವು ಹೊರಟಿದ್ದು ಗಮಕದ ಶಾಲೆಗೇ.. ಶ್ರೀಮತಿ ವಿಜಯಮಾಲ ರಂಗನಾಥ್ ಅವರ ದನಿಯಲ್ಲಿ ಗಮಕದ ವಾತಾವರಣಕ್ಕೆ ಜಾರಿದೆವು..
ಗಮಕಿ ಮೇಡಂ ವಿಜಯಮಾಲ ರಂಗನಾಥ್ 

ಶ್ರೀ ಅನಾರ್ಕಲಿ ಸಲೀಮ್ ಅವರ ಮಾತುಗಳು.. ಅವರ ಪರಿಶ್ರಮ ಪದಕಮ್ಮಟದ ಯಶಸ್ಸಿಗೆ ಒಂದು ಕಾರಣ..

ಅನಾರ್ಕಲಿ ಸಲೀಂ ಮಾತುಗಳು ಸೂಪರ್ 

ಮಾಧ್ಯಮದ ಪ್ರತಿನಿಧಿಗಳು ಇಡೀ ದಿನ ನಮ್ಮ ಜೊತೆ ಇದ್ದದ್ದು ವಿಶೇಷವಾಗಿತ್ತು..
ಸುದ್ದಿಗಳು ಪಸರಿಸುವುದೇ ಇವರಿಂದ ಅಲ್ಲವೇ 

ಪುಸ್ತಕಗಳ ಸಾಮ್ರಾಟ್ ಎಂದೇ ಹೆಸರಾದ ಪುಸ್ತಕದ ಮನೆಯ ಶ್ರೀ ಅಂಕೇಗೌಡರು ಆಗಮಿಸಿದ್ದು ಪದಕಮ್ಮಟಕ್ಕೆ ಭೂಷಣವೆನಿಸಿತು. ಹತ್ತಲ್ಲ, ನೂರಲ್ಲ, ಸಾವಿರವಲ್ಲ, ಲಕ್ಷಗಟ್ಟಲೆ ಪುಸ್ತಕಗಳನ್ನು ಹೊಂದಿರುವ ಇವರು ನಿಜಕ್ಕೂ ಸರಸ್ವತಿ ಪುತ್ರರೇ ಹೌದು..
ಶ್ರೀ ಅಂಕೇಗೌಡರು 

ಹ ಹ ಹ.. ಕಾರ್ಯಕ್ರಮದ ಪಟಗ್ರಾಹಿಗಳು (ಅಜಾದ್ ಸರ್ ಮಾತಿನಲ್ಲಿ)

ಅಧ್ಯಕ್ಷತೆ ವಹಿಸಿದ್ದ ಶ್ರೀ ವಸಂತ್ ಕುಮಾರ್ ಪೆರ್ಲ ಅವರಿಂದ ಪದಕಮ್ಮಟಕ್ಕೆ ಶುಭನುಡಿಗಳು .. ಇಡೀ ದಿನದ ಕಾರ್ಯಕ್ರಮವನ್ನು ತಮ್ಮ ಅನುಭವದ ಮೂಸೆಯಲ್ಲಿ ರೂಪಿಸಿದ್ದು ಸೊಗಸಾಗಿತ್ತು..  ಅತಿಥಿಗಳ ಜೊತೆಯಲ್ಲಿ ಮಾತುಕತೆ, ಸಂವಾದ ಕಾರ್ಯಕ್ರಮದಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿದ್ದ ಅಧ್ಯಕ್ಷರಿಗೆ ಧನ್ಯವಾದಗಳು.
ಶ್ರೀ ವಸಂತ್ ಕುಮಾರ್ ಪೆರ್ಲ ಸರ್ 

ಶ್ರೀ ಆಜಾದ್ ಅವರಿಂದ ಪದಕಮ್ಮಟದ ಬಗ್ಗೆ ಒಂದು ಸಿಂಹಾವಲೋಕನ.. ಮತ್ತೆ ಈ ಕಾರ್ಯಕ್ರಮಕ್ಕೆ ಸಹಾಯ ಹಸ್ತಗಳನ್ನು ನೀಡಿದ ಎಲ್ಲರಿಗೂ ಒಂದು ನೆನಪಿನ ಕಾಣಿಕೆ ಕೊಟ್ಟು ಗೌರವಿಸುವುದರಿಂದ ಈ ಕಾರ್ಯಕ್ರಮ ಸಂಪನ್ನವಾಯಿತು...
ಶಕ್ತಿ ಅಜಾದ್ ಸರ್ 


ಸಭಾಂಗಣದ ನೋಟ 

ಸಭಾಂಗಣದ ನೋಟ 
ಇದರ ಮಧ್ಯದಲ್ಲಿ ಬಾಲು ಸರ್ ಈ ಕಾರ್ಯಕ್ರಮದ ಯಶಸ್ಸಿಗೆ ಮತ್ತು ಅತಿಥಿಗಳನ್ನು ಆಹ್ವಾನಿಸುವ ಜವಾಬ್ಧಾರಿ ಹೊತ್ತಿದ್ದ ಸಹಾಯ ಹಸ್ತಗಳಿಗೆ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದರು.. ಹಾಗೆಯೇ ಸಾಮಾಜಿಕ ಜಾಲತಾಣಗಳನ್ನು ಹೇಗೆ ಉಪಯುಕ್ತವಾಗಿ  ಸಮಾಜಕ್ಕೆ ಒಂದು ಕೊಡುಗೆಯಾಗಿ ನೀಡಬಹುದು ಮತ್ತು ಭಾಷೆಯ ಉಪಯುಕ್ತತೆಯನ್ನು ಹೇಗೆ ತಲುಪಿಸಬಹುದು ಎನ್ನುವುದನ್ನು ತಿಳಿಸಿದರು..
ಕಾರ್ಯಕ್ರಮದ ಸಜ್ಜಿಕೆಯ ರೂವಾರಿ ಮತ್ತು ಶಕ್ತಿ 
ಬಂದವರನ್ನೆಲ್ಲ ಒಂದು ಚೌಕಟ್ಟಿನಲ್ಲಿ ಬಂಧಿಸಬೇಕೆಂಬ ನಮ್ಮೆಲ್ಲರ ಹಂಬಲಕ್ಕೆ ತಲೆಬಾಗಿ ವೇದಿಕೆಯನ್ನು ಆಕ್ರಮಿಸಿಕೊಂಡೆವು.. ಒಂದು ಸುಂದರ ಗುಂಪಿನ ಸೊಗಸಾದ ಚಿತ್ರ ನಮ್ಮೆಲ್ಲರ ಕಣ್ಮನಗಳಲ್ಲಿ ದಾಖಲಾಯಿತು..
ಒಂದು ಗುಂಪು.. ಪದಕಮ್ಮಟದ ಗುಂಪು 

ಸಪ್ಪೆ ಎನಿಸಿತಾ.. ಇರಿ ಸರ್.. ಇದು ಪದಕಮ್ಮಟದ ಕಾರ್ಯಕ್ರಮ ವಿವರ..

ಮುಂದೈತೆ ತಮಾಸೆ ಅಬ್ಬಾ!!!

ತುಂಟ ಸದಸ್ಯರ ಗುಂಪೇ ಇರುವಾಗ ಹಾಸ್ಯಕ್ಕೆ ಕೊರತೆಯೇ.. ಮಲೆನಾಡಿನಲ್ಲಿ ಸಿಕ್ಕ ಸಿಕ್ಕಲ್ಲೆ ಹೊರಹುಮ್ಮುವ ನೀರಿನ ಒರತೆಯಂತೆಯೇ ಕ್ಷಣ ಕ್ಷಣಕ್ಕೂ ಹಾಸ್ಯದ ಝರಿ ಉಗಮವಾಗುತ್ತಲೇ ಇತ್ತು..
ಮಹಿಷಾಸುರ 

ಬಕಾಸುರಾಸ್ 

ಕಸ್ತೂರಿ ನಿವಾಸದವರು 

ಒಂದೇ ತಟ್ಟೆ ಮೂರು ಬಾಯಿ

ಎತ್ತಿಕೋ ಚಳುವಳಿ 

ಕಷ್ಟ ಪಟ್ಟು ಎತ್ತಿಕೋ ಚಳುವಳಿ 

ಅಪ್ಪ ಮಗನ ಜುಗಲ್ ಬಂದಿ 

ಲೆಕ್ಕ ಬಿಡಿಸಿದ ಪ್ರವೀಣ್ ಮಾಸ್ತರು 

ಬಿಡಿಸಿದ ಲೆಕ್ಕವನ್ನು ವಿವರಿಸಿದ ಮಲ್ಲೇಶ್ ಸಾರು 

ಎಷ್ಟೋ ಬಾರಿ ನಮ್ಮ ಅಬ್ಬರದ ನಗು ಕಾರ್ಯಕ್ರಮದ ಲಹರಿಗೆ ಅಡಚಣೆಯಾಗಿ. ಅಲ್ಲಿದ್ದವರು ಕೈಯೆತ್ತಿ.. ಸನ್ನೆ ಮಾಡಿ ನಿಶ್ಯಬ್ಧ ಎಂದು ಹೇಳಿದ್ದುಂಟು.. ಆದರೆ ಹರಿಯುವ ನೀರಿಗೆ ಯಾರು ಹೊಣೆ.. ಹಾರುವ ಹಕ್ಕಿಗೆ ಎಲ್ಲಿ ಮನೆ.. ಎಂಥ ಮರುಳಯ್ಯ ಇದು ಎಂಥಾ ಮರುಳು ಎನ್ನುವ ಹಾಗೆ ಆ ಕ್ಷಣಕ್ಕೆ ಸುಮ್ಮನಾದರೂ.. ಮತ್ತೆ ನಲ್ಲಿಯ ನೀರು ಜೋರಾಗಿ ನುಗ್ಗಿ ಬರುವ ಹಾಗೆ ಮತ್ತೆ ಶುರುವಾಗುತ್ತಿತ್ತು ನಮ್ಮ ತರಲೆಗಳು..

ಅಲ್ಲಿದ್ದ ಫಲಕಗಳು ಹಾಸ್ಯಕ್ಕೆ ಅಡಿಪಾಯ ಹಾಕಿದ್ದವು.. ಅದನ್ನೇ ಪ್ರಾಪರ್ಟಿಯಾಗಿ ಉಪಯೋಗಿಸಿಕೊಂಡು ಹಲ್ಲು ಬಿಡಲು ನೂರಾರು ಕಾರಣಗಳು ಸಿಕ್ಕಿದವು.. ಊಟ ಮಾಡುವಾಗ ತರಲೆ, ಕೂತಿದ್ದಾಗ ತರಲೆ..ಹೀಗೆ ಸಾಗಿತ್ತು ನಮ್ಮ ಪಯಣ..

ನಿಮಿಷಾಂಬ ದೇವಾಲಯ ಹತ್ತಿರದಲ್ಲಿಯೇ ಇದೆ.. ಹೋಗಿ ಬರೋಣ ಅಂತ ಹೊರಟೆವು.. ಆದರೆ ಆ ತಾಯಿ ತನ್ನ ಒಡಲಲ್ಲಿ ಈ ಭಕ್ತರಿಗೆ ಇಟ್ಟುಕೊಂಡಿದ್ದ ಪ್ರಸಾದ ನಮಗೆ ಕಂಡಿರಲಿಲ್ಲ..

ದೇವಸ್ಥಾನಕ್ಕೆ ಹೋದೆವು. ದರುಶನ ಪಡೆದೆವು.. ತಾಯಿಗೆ ನಮಿಸಿ.. ಮನದಲ್ಲಿದ್ದ ಅರ್ಜಿಗಳನ್ನು ಗುಜರಾಯಿಸಿ.. ಹೊರಕ್ಕೆ ಬಂದೆವು. .. ಅಲ್ಲೊಬ್ಬ Voot ಅಪ್ಲಿಕೇಶನ್ ನಲ್ಲಿ ಬಿಗ್ ಬಾಸ್ ನೋಡುತ್ತಿದ್ದವ ಅಚಾನಕ್ ಆಗಿ.. ಲೋ ಓಡ್ರಪ್ಪ.. ತಮಿಳುನಾಡಿನಲ್ಲಿ ಪ್ರವಾಹ ಬತ್ತೈತಂತೆ ಅಂದಾಗ.. ನಾವು ಸುಮ್ಮನೆ ಅಯ್ಯೋ ತಲೆ ಕೆಟ್ಟಿರಬೇಕು ಆತನಿಗೆ ಅಂದು ಕೊಂಡೆವು....ತಮಿಳುನಾಡಿನಲ್ಲಿ ಪ್ರವಾಹ ಬಂದರೆ ನಾವ್ಯಾಕೆ ಓಡಬೇಕು ಎನ್ನುವುದು ನಮ್ಮ ಲಾಜಿಕ್!!!

ನದಿ ಹತ್ತಿರ ಒಂದು ಸೆಲ್ಫಿ ಅಂತ ನಿರ್ಧಾರಮಾಡಿದೆವು..

ಸರಿ ಎಲ್ಲರೂ ನದಿಯ ಕಡೆಗೆ ನೆಡೆದೆವು.. ಮೊಬೈಲ್ ನೋಡುತ್ತಿದ್ದವ.. ಬ್ಯಾಡ ಕನ್ರಲಾ.. ನೆರೆ ಬತ್ತೈತೆ.. ಕಾವೇರಿ ನದಿಯಲ್ಲಿ ಪ್ರವಾಹ ಬತ್ತೈತೆ... ಅಂದಾಗಲೂ ನಾವು ತಲೆ ಕೆಡೆಸಿಕೊಳ್ಳದೆ.. ಮಳೆ ಇಲ್ಲ ಮುಸುಡಿ ಇಲ್ಲ.. ಪ್ರವಾಹ ಎಲ್ಲಿ ಬತ್ತೈತೆ ಎಂದುಕೊಂಡು .. ಸಮಯವಿದ್ದಿದ್ದರೆ ತೆಪ್ಪದಲ್ಲಿ ಒಂದು ಸುತ್ತು ಹೋಗಬಹದಿತ್ತು ಅಂದು ಕೊಂಡೆವು ಆದರೆ ಸಮಯವಿರಲಿಲ್ಲ..

ಅಚಾನಕ್ ಆಗಿ ನೀರಿನ ಮಟ್ಟ ಏರಿತು.. ನಮ್ಮ ಮಲ್ಲೇಶ ಮತ್ತು ನಾಗರಾಜ್ ಜೊತೆಯಲ್ಲಿ ಪ್ರವೀಣ್ ನದಿಯಿಂದ ಒಬ್ಬರನ್ನು ಎಳೆದು ದಡಕ್ಕೆ ತಂದರು..

ಯಾರವಳು.. ಯಾರವಳು?
ಆ ವೀರ ವನಿತೆ ಆ ಲಕ್ಷ್ಮವ್ವ
ನಿಮಿಶಾಂಬ ಮರೆಯದ ಲಕ್ಷಮ್ಮವ್ವ
ಕನ್ನಡ ನಾಡಿನ ವೀರ ರಮಣೀಯ
ಪದಕಮ್ಮಟದ ಸ್ವಾಗತಕಾರಣಿಯ ಚರಿತೆಯ ನಾನು ಹಾಡುವೆ..
ನೋಯದೆ ನೆಂದ ತಂಡ 
ತಲೆ ಮೇಲೆ ಏನೋ ಬಿತ್ತು.. ನೋಡಿದರೆ ತನ್ನ ಬಟ್ಟೆಯಂತೆ ಮುಖವನ್ನು ಕೆಂಪಗೆ ಮಾಡಿಕೊಂಡಿದ್ದ ಲಕ್ಷ್ಮಿಪ್ರಿಯ ಅಲಿಯಾಸ್ ಡಿಟಿಪಿ ಒನಕೆ ಓಬವ್ವನಿಗಿಂತ ರುದ್ರವ್ವ ಆಗಿದ್ದಳು ಎಂಬಲ್ಲಿಗೆ ಪದಕಮ್ಮಟದ ಈ ಲೇಖನ ಸಮಾಪ್ತಿಯಾಯಿತು!!!