ಬಾನಿನಲ್ಲಿ ಚಂದಿರ ನಗುತ್ತಿದ್ದ.. ಸಂಕಷ್ಟ ಚೌತಿಯ ದಿನ ತನ್ನ ಸಹೋದರಿಯರು ಕಟ್ಟುಪವಾಸ ಮಾಡಿದರೂ ಸಹೋದರಿಯ ನೆನಪಲ್ಲಿ ಮಾತು ಸಾಗಿತ್ತು.. ಕುಮುದ ಹಾಗೆ ಮಾತಾಡುತ್ತಿದ್ದಳು, ಹೀಗೆ ಅನ್ನುತ್ತಿದ್ದಳು... ಆಯೀಗೆ ಹೀಗೆ ರೇಗಿಸುತ್ತಿದ್ದೆ ಅಂತ ಸೀಮಾ.. ಆಯೀ ಹೀಗೆ ಹೇಳುತ್ತಿದ್ದಳು ಅಂತ ಅಜಿತ..
ಹೀಗೆ ನಮ್ಮ ನಮ್ಮ ನೆನಪುಗಳ ಮೆರೆವಣಿಗೆಯಲ್ಲಿ ಸಾಗುತ್ತಿದ್ದೆವು.. ಬೆಳಗಿನ ಕಾರ್ಯದ ನೆನಪಾಯಿತು!
ಹತ್ತನೇ ದಿನದ ಪುಣ್ಯ ಕಾರ್ಯ ಸಾಗಿತ್ತು.. ಸಾಮಾನ್ಯ ಹತ್ತು ಹನ್ನೊಂದು ಒಂದು ಮುಖ್ಯವಾದ ಹಂತ.. ಸಂಖ್ಯೆ ಹತ್ತಕ್ಕೆ ಮುಟ್ಟಿದೆ ಎಂದರೆ ಒಂದಂಕಿ ದಾಟಿದೆ ಅಂತ.. ಹಾಗೆ ಮನುಷ್ಯನ ಬದುಕಿನಲ್ಲಿ ಮುಖ್ಯ ಘಟ್ಟವೂ ಹೌದು..
ಇಂತಹ ಹತ್ತು.. ಇನ್ನೊಂದು ಮುಖ್ಯ ಘಟ್ಟವನ್ನು ಹೊತ್ತು ಬಂದಿತ್ತು..
ಶ್ರೀ ದತ್ತಾತ್ರೇಯನ ಆವಾಸ ಸ್ಥಾನದ ಕ್ಷೇತ್ರದಲ್ಲಿ ವೇದ ಪಠಣ ಕಾರ್ಯ ನೆಡೆದಿತ್ತು.. ಬಂದಿದ್ದವರು ತಮ್ಮ ತಮ್ಮ ನಮನಗಳನ್ನು ಸಲ್ಲಿಸಿದ್ದರು..
ಹತ್ತನೇ ದಿನ ಬಂದಿದ್ದವರು ತಮ್ಮ ತಮ್ಮ ಪುಣ್ಯವನ್ನು ಧಾರೆಯೆರೆದು ಆ ದೇಹವನ್ನು ತೊರೆದ ಆತ್ಮಕ್ಕೆ ವಿದಾಯ ಹೇಳುವ ಸಮಯ.. ಆ ಆತ್ಮಕ್ಕೆ ಮೊದಲೇ ಸಿದ್ಧವಾಗಿರಬಹುದಾದ ದೇಹವನ್ನು ಸೇರಲು ಈ ಹತ್ತನೇ ದಿನದ ಕಾರ್ಯ ಒಂದು ರೀತಿಯ ರಾಕೆಟ್ ಲಾಂಚ್ ಮಾಡಿ.. ಉಪಗ್ರಹ ಕಡೆಯ ಭಾಗ ಗಗನ ಪಥಕ್ಕೆ ಸೇರುವಾಗ ತನ್ನುಳಿದ ಭಾಗವನ್ನು ಬಿಟ್ಟು ಮುಂದಿನ ಪಯಣಕ್ಕೆ ನಭೋಮಂಡಲಕ್ಕೆ ಹಾರುವ ಕ್ಷಣವದು..
ಈ ಹತ್ತನೇ ದಿನವೂ ಕೊಂಚ ಹಾಗೆ.. ಬಂದಿದ್ದವರ ಪುಣ್ಯದ ರಾಕೆಟ್ ಆ ಆತ್ಮವನ್ನು ಮುಂದಿನ ಪಯಣಕ್ಕೆ ಸಿದ್ಧಗೊಳಿಸಿ ಕಳಿಸುವ ಸಮಯವದು..
ಕಾರ್ಯ ಮುಗಿದು.. ಆ ಆತ್ಮಕ್ಕೆ ಊಟವನ್ನು ಇಟ್ಟಾಗ.. ಅಲ್ಲಿದ್ದ ಪುರೋಹಿತರು ಎಲ್ಲರೂ ನಿಮ್ಮ ನಿಮ್ಮ ಪ್ರಾರ್ಥನೆ ಸಲ್ಲಿಸಿ... ಆ ಆತ್ಮ ಶ್ರೀ ಶನೀಶ್ವರನ ವಾಹನವಾಗಿ ಬಂದು ಸ್ವೀಕರಿಸುತ್ತದೆ.. ಎಂದು ಹೇಳಿದರು..
ಎಲ್ಲರೂ ಪ್ರಾರ್ಥನೆ ಸಲ್ಲಿಸಿದರು..
ಮರು ಪ್ರಾರ್ಥನೆ ಸಲ್ಲಿಸಿದರು..
ಮತ್ತೊಮ್ಮೆ ಪ್ರಾರ್ಥನೆ ಸಲ್ಲಿಸಿದರು..
ಸುಮಾರು ಹೊತ್ತು ಕಳೆಯಿತು..
ಪುರ್ ಅಂತ ಹಾರಿ ಬಂದು.. ಆಹಾರವನ್ನು ಸ್ವೀಕರಿಸಿದ ಕ್ಷಣ ಎಲ್ಲರ ಮನಸ್ಸಿಗೂ ಸಂತಸ ಉಂಟು ಮಾಡಿತು..
ಕಾರ್ಯ ಮುಗಿದು ಮತ್ತೆ ಕೋಣೆಗೆ ಬಂದು.. ವಿಶ್ರಾಮ ತೆಗೆದುಕೊಳ್ಳುತ್ತಿದ್ದಾಗ .. ಕುತೂಹಲ ಅಲ್ಲವೇ.. ಏನು ಪ್ರಾರ್ಥನೆ ಮಾಡಿಕೊಂಡಿರಿ.. ಅಂತ ಒಬ್ಬರಿಗೊಬ್ಬರು ಕೇಳುತ್ತಿದ್ದರು..
ಎಲ್ಲರೂ ಹೇಳಿದ್ದು ಒಂದೇ ಮಾತು
"ಅಜಿತ ಮತ್ತು ಸೀಮಾ ನನ್ನ ಜವಾಬ್ಧಾರಿ"
ಈ ಉತ್ತರದಿಂದ ಸಂತುಷ್ಟವಾಗಿರಲಿಲ್ಲ...
ಅಜಿತ "ಬಾಬಾನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ" ಅಂತ ಒಮ್ಮೆ, ಮತ್ತೊಮ್ಮೆ, ಮಗುದೊಮ್ಮೆ ಪ್ರಾರ್ಥನೆ ಮಾಡಿಕೊಂಡಾಗ.. ಇದು ಸಾರ್ಥಕತೆ ಅಂತ ಅನಿಸಿ ಆಹಾರವನ್ನು ಸ್ವೀಕರಿಸಿದ ಕ್ಷಣ ಒಮ್ಮೆ ಮೈ ಜುಮ್ ಎನಿಸಿತು..
ತಾಯಿ ಹೃದಯ ಎಂದರೆ ಅದೇ ಅಲ್ಲವೇ.. ನಾ ಅಷ್ಟೇ ಅಲ್ಲ.. ನನ್ನ ಪರಿವಾರವೂ ಕೂಡ ಕ್ಷೇಮವಾಗಿರಬೇಕು ಎಂದು ಬಯಸೋದು ಮಾತೃ ಹೃದಯ ದ ವಿಶೇಷತೇ..
ಊಟ ಮಾಡಿ ವಿಶ್ರಾಂತಿಯಾಯಿತು.. ಕಾಫೀ ಬಂತು..
ಚಂದಿರ ಉಗಮವಾಗಲು ಇನ್ನಷ್ಟು ಸಮಯವಿತ್ತು..
ಗರುಡಪುರಾಣದ ಸಂಕ್ಷಿಪ್ತ ಮಾಹಿತಿಯನ್ನು ಕೇಳಿದೆವು.. ಗರುಡಪುರಾಣದ ಮುಖ್ಯ ಸಾರದ ಬಗ್ಗೆಯೂ ಮಾತುಗಳು ಬಂದವು..
ಮುಂದೆ ಅಮ್ಮನ ಮಾತು ಕೇಳಿ
![]() | |
|
ಯಾವಾಗಲೂ ಒಂದಕ್ಕೆ ಹತ್ತು ಮಾತಾಡುವ ಅಮ್ಮ ತಮ್ಮ ಅದೇ ಶೈಲಿಯಲ್ಲಿ ಮಾತಾಡಿದರು..
ಎಲ್ಲರ ಕಣ್ಣಲ್ಲಿ ಕೊಂಚ ನೀರು.. ಆದರೆ ಇದು ಆನಂದಭಾಷ್ಪ..
ಸದಾ ನಗುಮೊಗದ ಅಮ್ಮ.. ಮೆಲ್ಲನೆ ತನ್ನ ಇಷ್ಟದ ಬ್ರಹ್ಮ ಬಾಬಾ ಮತ್ತು ಶಿವ ಬಾಬಾ ಕಳಿಸಿದ ಪುಷ್ಪಕವಿಮಾನವನ್ನು ಏರಿಯೇ ಬಿಟ್ಟರು.. ಮೆಲ್ಲನೆ ಅದು ರೆಕ್ಕೆ ಬಡಿಯುತ್ತ ಬಡಿಯುತ್ತ ದಿಗಂತದೆಡೆ ಹಾರುತಿತ್ತು..
![]() | |
|
ಗಗನದಲ್ಲಿ ಮೇಲೆ ಏರುತ್ತಾ ಏರುತ್ತಾ ಹೋದಾ ಹಾಗೆ ಅವರ ಮುಗುಳುನಗೆ ಇಡೀ ಆಗಸವನ್ನೆಲ್ಲ ತುಂಬಿಕೊಂಡು ಬಿಳಿ ಬಿಳಿಯಾಗುತ್ತಾ ಹೋಯಿತು... ಇಡೀ ಆಗಸ ಸ್ವಚ್ಛ ಬಿಳುಪು.. ಒಂದು ಚೂರು ಕಲೆಯಿಲ್ಲ ಅಮ್ಮನ ಮುಂದಿನ ಜನ್ಮದ ಹಾಗೆ ಕಲೆಯೇ ಇಲ್ಲದ ಸ್ವಚ್ಛ ಜನ್ಮದ ಹಾಗೆ...
ಪುಷ್ಪಕ ವಿಮಾನ ದೂರ ಎತ್ತರಕ್ಕೆ ಹಾರಿದಂತೆಲ್ಲ.. ಆ ಬಿಳುಪಾದ ಆಗಸ ಮತ್ತೆ ನೀಲಿಯಾಗುತ್ತಾ ನೀಲಿಯಾಗುತ್ತ .. ಆ ಬಿಳುಪು ಸಣ್ಣಗೆ ಆಗುತ್ತಾ ಬಂದು.. ಕಡೆಯಲ್ಲಿ ಗೋಳಾಕಾರವಾಯಿತು.. ಗೋಳಾಕಾರವಾಗಿ ಮತ್ತೆ ಪ್ರಕಾಶಮಾನವಾಯಿತು.. ಆ ಗೋಳಾಕಾರವೇ ಚಂದಿರನಾಯಿತು..
![]() |
| ಚಿತ್ರಕೃಪೆ - ಗೂಗಲ್ ಬಾಬಾ |
ಬಾನಿನಲ್ಲಿ ಚಂದಿರ ನಗುತ್ತಿದ್ದ.. ಜೊತೆಯಲ್ಲಿ ಸಂಕಷ್ಟ ಚೌತಿಯ ದಿನ..
![]() | |
|
ಎಲ್ಲರೂ ಚಂದಿರನ ದರ್ಶನ ಮಾಡಿ.. ಗುಡಿಯಲ್ಲಿ ಗಣಪನ ದರ್ಶನ ಮಾಡಿ.. ಆಹಾರ ಸೇವಿಸಬೇಕು ಇದು ಸಾಮಾನ್ಯವಾಗಿ ಪಾಲಿಸುವ ನಿಯಮ..
ತನ್ನ ಸಹೋದರಿಯರು.. ಒರಗಿತ್ತಿಯ ಮಗಳು ಸಂಕಷ್ಟ ಚೌತಿಯ ವ್ರತವನ್ನು ಮಾಡಿ.. ಚಂದಿರನನ್ನು ನೋಡಲು ಬಾನಿನ ಕಡೆ ನೋಡಿದಾಗ.. ಅಲ್ಲಿ ಕಂಡದ್ದು.. ಕುಮುದಿನಿ ಅರ್ಥಾತ್ ತಾವರೆ ಹೂವು.. ಬೆಳದಿಂಗಳ ನಗೆ.. ಅಂದರೆ ಮಂದ"ಸ್ಮಿತ"
ನಾ ಆಗಸವನ್ನೇ ನೋಡುತ್ತಿದ್ದೆ. ಅಮ್ಮನ ಮುಗ್ಧ ನಗು ಕಂಡಿತು. ಜೋರಾಗಿ ನಗುತ್ತಿದ್ದರು.. ನಾನು ಯಾಕೆ ಅಮ್ಮ ಹಾಗೆ ನಗುತ್ತಿದ್ದೀರಿ ಅಂದೇ
"೧. ನೀವು ಹೇಳಿದ ಒಂದು ಸಂಭಾಷಣೆ ಕೇಳಿ ನಗು ಬಂತು.. ಹುಣ್ಣಿಮೆದಿನ ಮರದಿಂದ ಯಾವುದಾದರೂ ಭೂತ ಜಿಗಿದು ನಿಮ್ಮ ಮುಂದೆ ಬಂದು ಹೀ ಹೀ ಅಂತ ಹೆದರಿಸೋಕೆ ಪ್ರಯತ್ನ ಪಟ್ಟರೂ ನೀವು ಹೆದರದೆ.. ಒಂದು ಬೆಲ್ಲದ ತುಂಡನ್ನು ಕಂಡರೆ ಭಯಭೀತರಾಗುತ್ತೀರಿ ಎಂಬ ಮಾತು ನಗು ತರಿಸಿತು..
೨. ಒಂಭತ್ತು ಹದಿನೈದಕ್ಕೆ ಚಂದ್ರೋದಯ.. ಆಮೇಲೆ ಹೋಗೋಣ ಅಂತ ನನ್ನ ಸಹೋದರಿ ಹೇಳಿದಾಗ.. ಅಯ್ಯೋ ಆಕಾಶ ನೋಡೋಕೆ ಯಾಕೆ ನೂಕು ನುಗ್ಗಲು.. ಬೆಲ್ಲ ತಿನ್ನೋಕೆ ಎಂಟು ಮುಕ್ಕಾಲಾದರೇನು.. ಒಂಭತ್ತು ಕಾಲು ಆದರೇನು.. ಬೆಲ್ಲ ಬೆಲ್ಲ ಬೆಲ್ಲಾ ಎಲ್ಲೆಲ್ಲಿ ನೋಡಲಿ ಬೆಲ್ಲವನ್ನೇ ಕಾಣುವೆ.. ಅಂತ ನಿಮ್ಮಿಷ್ಟದ ರಾಜಕುಮಾರನ ಹಾಡು ನೆನಪಿಗೆ ಬಂತು"
ಅದಕ್ಕೆ ನಗು ಬಂತು ಅಂತ ಅಮ್ಮ ಹೇಳಿದರು..
ಅವರ ಬದುಕಿನುದ್ದಕ್ಕೂ ಅನುಸರಿಸಿಕೊಂಡು ಬಂದದ್ದು ಅವರ ನಗು.. ನಮ್ಮ ಬದುಕಿಗೂ ಬೆಳಕಾಗಿ ಮಾರ್ಗದರ್ಶನ ನೀಡುವುದು ಅದೇ ನಗು.. ಆ ನಗು ನಮ್ಮ ಜೊತೆಯಿರುವಾಗ "ನಗು ನಗುತಾ ನಲಿ ನಲಿ ಏನೇ ಆಗಲಿ" ಅಲ್ಲವೇ



