Wednesday, August 31, 2022

ಅಮ್ಮನಿಲ್ಲದ ಗಣಪತಿ ಹಬ್ಬ ... !

 ಅಣ್ಣನಿಲ್ಲದ ಗಣಪನ ಹಬ್ಬ

ಯಾಕೆ ಮಗು....  ಅಣ್ಣನಿಲ್ಲದ ಹಬ್ಬದ ಬಗ್ಗೆ ಬರೆದಿದ್ದೆ... ನಾ ನಿಲ್ಲದ ಹಬ್ಬದ ಬಗ್ಗೆ ಬರೆಯೊಲ್ವೇ.. 

ಅಮ್ಮ ಭಕ್ತ  ಕುಂಬಾರ ಚಿತ್ರದಲ್ಲಿ ಅಹಂ ತುಂಬಿದ್ದ ನಾಮದೇವರು ಗುರುವಿನ ಹುಡುಕಾಟದಲ್ಲಿದ್ದಾಗ ಲಿಂಗದ ಮೇಲೆ ಕಾಲಿಟ್ಟು ಮಲಗಿದ್ದ ವೃದ್ಧರನ್ನು ಕಂಡು ಕುಪಿತಗೊಂಡು.. ಮಾತಾಡಿಸಿದಾಗ... ಶಿವನಿಲ್ಲದ ತಾಣದಲ್ಲಿ ನೀನೆ ಇದಪ್ಪ ಅಂದಾಗ.. ಕಾಲನ್ನು ಇಡುವೆಡೆಯೆಲ್ಲಾ ಶಿವಲಿಂಗವೇ ಕಾಣುತ್ತದೆ.. ಅಜ್ಞಾನದಿಂದ ಕಣ್ಣು ಕುರುಡಾಗಿದ್ದ ನಾಮದೇವರ ಅಹಂ ಇಳಿಯುತ್ತದೆ.. ಶಿವನಿಲ್ಲದ ತಾಣವೆಲ್ಲಿದೆ.. ಅಹಂ ಇಂದ ತುಂಬಿದ್ದ ನನ್ನ ತಲೆಯೇ ಶಿವನಿಲ್ಲದ ತಲೆ ಎಂದು ತನ್ನ ತಲೆಯ ಮೇಲೆ ಆ ಗುರುಗಳ ಕಾಲನ್ನು ಇಟ್ಟುಕೊಳ್ಳುತ್ತಾನೆ.. 

ಆಹಾ ರಾಜಕುಮಾರ್ ಸಿನಿಮಾ ಅಂದರೆ ಸಾಕು.. ಯಾವುದೋ ಒಂದು ದೃಶ್ಯವನ್ನು ಎಳೆದು ಜೋಡಿಸಿಬಿಡುತ್ತೀಯ.. ಹರಿ ಕತೆ ಬೇಡಾ.. ಯಾಕೆ ಬರೆದಿಲ್ಲ ಹೇಳು.. ನನ್ನ ನೆನಪಿಲ್ಲವೇ.. 

ಅಮ್ಮ ಆ ದೃಶ್ಯದಲ್ಲಿ ಬರುವ ಹಾಗೆ ಅಣುಕಣದಲ್ಲಿ, ಸಕಲ ಚರಾಚರ ವಸ್ತುಗಳಲ್ಲಿ ಶಿವನಿರುವ ಹಾಗೆ.. ನಿನ್ನ ನನೆಪು ಅನುದಿನವೂ, ಅನುಕ್ಷಣವೂ ಇದ್ದೆ ಇರುತ್ತದೆ.. ಮರೆತಿದ್ದರೇ ತಾನೇ ನೆನಪು ಮಾಡಿಕೊಳ್ಳುವುದು.. 

ಮಗು ಇದು ಭಾದ್ರಪದ ಮಾಸ ಶ್ರಾವಣಮಾಸವಲ್ಲ ... ಹರಿಕತೆ ಬೇಡಾ.. ಸೀದಾ ವಿಷಯಕ್ಕೆ ಬಾ.. 

ಸರಿ ಅಮ್ಮ.. 

********** 

ಜೇನಿನ ಗೂಡಿನಲ್ಲಿ ಜೇನು ನೊಣಗಳು ಅವಿರತವಾಗಿ ಕೆಲಸ ಮಾಡುತ್ತಾ ತಮ್ಮ ಗೂಡನ್ನು ಭದ್ರ ಮಾಡುತ್ತಲೇ, ಜೀವನಕ್ಕೆ ಒಂದು ಗೂಡು ಕಟ್ಟುವ ಹಾಗೆ ಅಮ್ಮನ ಅವಿರತ ಹೋರಾಟದ ಶ್ರಮ ನಮ್ಮ ಮನೆ ಮನಗಳನ್ನು ಎತ್ತಿ ಹಿಡಿದಿಟ್ಟಿದೆ.. 

ಹಿಂದಿನ ಒಂದೆರಡು ವಾರಗಳ ಮುಂಚೆ ಹತ್ತಿಯನ್ನು ನೆನೆಸಿ.. ಅದಕ್ಕೆ ಬಣ್ಣ ಹಾಕಿ.. ಅಚ್ಚುಕಟ್ಟಾದ ಹತ್ತಿಯ ಎಳೆಗಳನ್ನು  ಮಾಡಿ.. ಅದನ್ನು ಚೆನ್ನಾಗಿ ಒಣಗಿಸಿ .. ಅದಕ್ಕೆ ಒಂದು ರೂಪು ಕೊಟ್ಟಾಗ ಮನಸ್ಸಿಗೆ ಸಂತೋಷ.. 

ಅಷ್ಟೆಲ್ಲಾ ಸಿದ್ಧವಾಗಿದ್ದರೂ.. ಅದಕ್ಕೆ ವರ್ತಿ ತಗಡು ತಂದು.. ಎಲೆಯ ಆಕಾರದಲ್ಲಿ ಕತ್ತರಿಸಿ ಅದರ ಮೇಲೆ ಗೊಂದು ಹಚ್ಚಿ..ನಕ್ಕಿಯನ್ನು ಹಾಕಿ.. ಅದು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವಂತೆ ಸ್ವಲ್ಪ ಓಡಾಡ ಸ್ಥಳದಲ್ಲಿ ಇಟ್ಟರೆ.. ಒಂದು ಹಂತ ಮುಗಿಯುತ್ತಿತ್ತು.. 

ಮಾರನೇ ದಿನ ಬೆಳಿಗ್ಗೆ ಅಪ್ಪನೇ ಅರ್ಥಾತ್ ಅಣ್ಣನೇ ಗೌರಿ ಪೂಜೆ ಮಾಡಿಸಿ.. ಅಮ್ಮ ಕಷ್ಟ ಪಟ್ಟು ಮಾಡಿದ್ದ ಹತ್ತಿಯ ಎಳೆಗಳ ಮೇಲೆ.. ಯಥೇಚ್ಛವಾಗಿ ನೀರು ಚುಮುಕಿಸಿ ಅಮ್ಮನ ಉರಿಗಣ್ಣಿಗೆ ಪಾತ್ರವಾಗುತ್ತಿದ್ದರು.. ಹ ಹ ಹ ಹ 

ಗೌರಿ ಹಬ್ಬದ ಪೂಜೆಗೆ ಬೇಕಾದ ಸಕಲ ಸಿದ್ಧತೆಗಳನ್ನು ಒಬ್ಬರೇ ಆರಾಮಾಗಿ ಮಾಡುತ್ತಾ.. ಗೌರಿ ಬಾಗಿನ ಜೊತೆ ಮಾಡಿ.. ಪೂಜೆ, ನೈವೇದ್ಯ ಎಲ್ಲದ್ದಕ್ಕೂ ಒಬ್ಬರೇ ಸಾಹಸ.. ಆಗಾಗ ಅಕ್ಕ ಅಮ್ಮನಿಗೆ ನೆರವಾಗುತ್ತಿದ್ದರೂ ಅಮ್ಮನದು ಒನ್ ವುಮನ್ ಷೋ ಯಾವಾಗಲೂ.. ಅವರ ತಲೆಯಲ್ಲಿ ಅಡಿಗೆ ಬೇಯುತಿತ್ತು.. ಅದೇ ರೀತಿ ಅಡಿಗೆ ಸಿದ್ಧವಾಗುತ್ತಿತ್ತು.. 

ಮುಂದೆ ಸೊಸೆಯಂದಿರು ಬಂದ ಮೇಲೆ.. ಅಕ್ಕನ ಜೊತೆಯಲ್ಲಿ ಸೊಸೆಯಂದಿರಿಗೂ ಕೆಲಸ ಹಚ್ಚಿದರೂ ಮೇಲ್ವಿಚಾರಣೆ ಅಮ್ಮನದೆ ಇರುತ್ತಿತ್ತು,.. 

ಗೌರಿ ಹಬ್ಬದಲ್ಲಿ ನಾವು ಅಣ್ಣ ತಮ್ಮಂದಿರ ಪಾತ್ರ ಕಡಿಮೆ.. ನಾವೇನಿದ್ದರೂ.. ಚೀರ್ ಬಾಯ್ಸ್.. ಅಣ್ಣ ಅದನ್ನು ಕೊಡು.. ಹೂವು ಕೊಡು.. ಅದು ಇದು ಎಂದಾಗ ನಾವುಗಳು ಕೈ ಹಾಕುತ್ತಿದ್ದೆವು.. ಇಲ್ಲದೆ ಹೋದರೆ.. ಆರಾಮಾಗಿ ಗೌರಿ ಪೂಜೆ ನೋಡುತ್ತಾ... ಎಷ್ಟು ಹೊತ್ತಿಗೆ ತಿಂಡಿ ಸಿಗುತ್ತದೆಯೋ ಅಂತ ಕಾಯುವ ಕಾಯಕ ನಮ್ಮದು... 

ಸಂಜೆ ಆಗುತ್ತಲೇ ನಾವುಗಳು ಅರಳಿದ ಹೂಗಳಾಗುತ್ತಿದ್ದೆವು.. ಅಪ್ಪನಿಲ್ಲದ ಗಣಪತಿ ಹಬ್ಬದ ಬಗ್ಗೆ ಆರಂಭದಲ್ಲಿ ಕೊಂಡಿಯನ್ನು ಕೊಟ್ಟಿದ್ದೇನೆ ಅಲ್ಲವೇ.. ಸಂಜೆ ಗಣಪತಿ ತಂದು... ಅದಕ್ಕೆ ಅಪ್ಪನ ಜೊತೆ ಕೂತು ಮಂಟಪ ಸಿದ್ಧ ಮಾಡಿ.. ಮನಸ್ಸಿಗೆ ತೋಚಿದ ಅಲಂಕಾರ ಮಾಡುವ ಹೊಣೆ ನಮ್ಮದಾಗಿರುತಿತ್ತು.. 

ಜೊತೆಯಲ್ಲಿ ಅಮ್ಮನ ಹತ್ತಿಯ ಎಳೆಗಳಿಗೆ ಫೈನಲ್ ಟಚ್ ಕೊಡುವ ಸಾಹಸಕ್ಕೆ ನಾವುಗಳು ಕೈ ಹಾಕಿ ಮೈ ಕೈಯೆಲ್ಲ ಗೊಂದು ಮಾಡಿಕೊಂಡು ಕೈ ತೊಳೆದುಕೊಳ್ಳೋಕೆ ಹೆಣಗಾಡುತ್ತಿದ್ದೆವು. 

ಅಮ್ಮ ಬೆಳಿಗ್ಗೆ ಪೂಜೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು.. ಮಲಗುವ ಹೊತ್ತಿಗೆ ತಡರಾತ್ರಿಯಾಗಿರುತ್ತಿತ್ತು.. ಕಣ್ಣು ಮುಚ್ಚಿದ ತಕ್ಷಣ ಅದ್ಯಾವ ಮಾಯೆಯಲ್ಲಿ ಬೆಳಗಾಗುತಿತ್ತೋ ಆ ದೇವರಿಗೆ ಗೊತ್ತು.. ಬೆಳಿಗ್ಗೆ ಬೇಗ ಎದ್ದು... ಜಳಕ ಮಾಡಿ.. ಮತ್ತೆ ಅಡಿಗೆ ಮನೆಯ ಸಾಮ್ರಾಜ್ಯಕ್ಕೆ ಲಗ್ಗೆ ಇಡುತ್ತಿದ್ದರು.. ಮೋದಕ, ಕರಿಗಡುಬು, ನಮ್ಮ ನೆಚ್ಚಿನ ಉದ್ದಿನ ಕಡುಬು, ಕೋಸಂಬರಿ, ಪಲ್ಯ, ಅನ್ನ, ಸಾರು, ಹುಳಿ, ಸಾಮಾನ್ಯ ಮಾವಿನಕಾಯಿ ಚಿತ್ರಾನ್ನ, ಮಜ್ಜಿಗೆ, ಖಾರವಾದ ಚಟ್ನಿ.. ಆಹಾ ಈಗ ನೆನೆದರೂ ಬಾಯಲ್ಲಿ ನೀರು ಬರುತ್ತದೆ.. 

ಏಕಾಂಗಿಯಾಗಿ ಎಲ್ಲವನ್ನೂ ಸಿದ್ಧಮಾಡಿ.. ಮಹಾ ಮಂಗಳಾರತಿಯ ಹೊತ್ತಿಗೆ ಸರಿಯಾಗಿ ಕರಿಗಡುಬು ಕರಿಯಲು ಮತ್ತೆ ಉದ್ದಿನ ಕಡುಬಿಗೆ ಹಾಳೆಯನ್ನು ಒತ್ತಿ ಬೇಯಿಸಲು ಸಿದ್ಧಮಾಡುತ್ತಿದ್ದರು.. ಅಣ್ಣ ಜೋರಾಗಿ ಕೂಗೋದು.. ಮಂಗಳಾರತಿ ಬಾ.. ಅದೇನು ಅಡಿಗೆ ಮನೆಯಲ್ಲಿಯೇ ಇರುತ್ತೀಯೋ.. ಬಾ ಬೇಗ ಅಂತಾ ಕೂಗಿದಾಗ.. ಅಡಿಗೆಯನ್ನು ಯಾರು ಮಾಡುತ್ತಾರೆ ಅಂತ ಅಮ್ಮ ಗೊಣಗುತ್ತಲೇ ಬರೋದು.. ನಾವುಗಳು ಅಮ್ಮನನ್ನು ಸಮಾಧಾನ ಪಡಿಸುತ್ತಾ.. ನೈವೇದ್ಯಕ್ಕೆ ಇಟ್ಟಿದ್ದ ಪದಾರ್ಥಗಳನ್ನು ಆಸೆಗಣ್ಣಿನಿಂದ ನೋಡುತ್ತಾ.. ಎಷ್ಟು ಹೊತ್ತಿಗೆ ಹೊಟ್ಟೆಗೆ ಇಳಿಸುತ್ತೇವೆ ಅಂತ ಹೊಂಚು ಹಾಕುತ್ತಾ ಇರೋದು.. 

ಅಮ್ಮನಿಂದ ಮಹಾಮಂಗಳಾರತಿ ಅಣ್ಣನಿಗೆ ಮೊದಲು ನಂತರ ಅಣ್ಣನಿಂದ ಗಣಪನಿಗೆ ಆದ ಮೇಲೆ.. ಬಂದ ಪುರೋಹಿತರಿಗೆ ನಮಸ್ಕರಿಸಿ.. ಅವರು ಇನ್ನೂ ಬಾಗಿಲನ್ನು ದಾಟಿರುತ್ತಾ ಇರಲಿಲ್ಲ.. ಆಗಲೇ ಅಡಿಗೆ ಮನೆಗೆ ಲಗ್ಗೆ.. ಒಂದೆರಡು ಕರಿಗಡುಬು ಹೊಟ್ಟೆಗೆ ಇಳಿಸಿದ್ದೆ ತಡ.. ಜೊತೆಯಲ್ಲಿ ಖಾರವಾದ ಚಟ್ನಿಗೆ  ಬಿಸಿ ಬಿಸಿ ಸುಡುತಿದ್ದ ಉದ್ದಿನ ಕಡುಬನ್ನು ಅದ್ದಿ ತಿಂದಾಗ ಆಹಾ.. 

ಆಮೇಲೆ ಅಮ್ಮ ಎಲ್ಲರಿಗೂ ತಿಂಡಿ ಎಲೆಯಲ್ಲಿ ಹಾಕಿ ಬಿಸಿ ಬಿಸಿ ಕಡುಬು, ಒಂದೆರಡು ಮೋದಕ, ಕರಿಗಡುಬು ಕೊಡುತ್ತಿದ್ದರು.. ಕಡಿಮೆ ತಿನ್ನಿ ಊಟ ಮಾಡಬೇಕು ಎಂದರೂ ಕೇಳದೆ ಗಣಪನ ಹೊಟ್ಟೆಯಷ್ಟೇ ನಮ್ಮ ಹೊಟ್ಟೆಯೂ ಡೊಳ್ಳು ಹೊಟ್ಟೆಯಾಗಬೇಕು ಅಷ್ಟು ಒಳಗೆ ಇಳಿಸಿ.. ಹೊರಗಡೆ ಆಟವಾಡಲು ಹೋಗುತ್ತಿದ್ದೆವು.. 

ಘಮಘಮಿಸೋ ಊಟ ಮಾಡಿ.. ನೆಲಕ್ಕೆ ಹೊಟ್ಟೆ ತಾಗಿಸಿಕೊಂಡು ಮಲಗಿದರೆ ಆಹಾ ಎದ್ವಾ ತದ್ವಾ ನಿದ್ದೆ.. 

ಎಳ್ರೋ.. ಸಂಜೆಯಾಯಿತು.. ದೀಪ ಹಚ್ಚಬೇಕು.. ಅನ್ನುವಾಗಲೇ ಎಚ್ಚರ.. ಕಪ ಕಪ ಮೊಗ ತೊಳೆದು.. ಮನೆಯ ಹತ್ತಿರ ಕೂರಿಸಿದ್ದ  ಗಣಪತಿ ಪೆಂಡಾಲುಗಳಿಗೆ ಹೋಗಿ.. ಅಲ್ಲಿ ಕೊಡುವ ಚರ್ಪುತಿಂದು .. ಮತ್ತೆ ಮನೆಗೆ ಬಂದ ಮೇಲೆ.. ಶ್ಯಮಂತಕೋಪಾಖ್ಯಾನ ಕತೆ ಕೇಳಿ... ಚರ್ಪು ರೂಪದಲ್ಲಿ ಅಮ್ಮ ಮಾಡಿದ ಕಡಲೆ ಹಿಟ್ಟು.. ಇಲ್ಲವೇ ಕಡಲೆ ಕಾಳಿನ ಹುಸ್ಲಿ ಹೊಟ್ಟೆಗೆ ಇಳಿಸಿ.. ಗಣಪತಿಯನ್ನು ಮನೆಯ ಹತ್ತಿರದ ಬಾವಿಯಲ್ಲಿ ವಿಸರ್ಜನೆ ಮಾಡಿ.. ರಾತ್ರಿ ಊಟ ಮಾಡಲು ಆಗದೆ ಇದ್ದರೂ... ತಣ್ಣಗಾಗಿದ್ದರೂ ರುಚಿಸುವ ಕಡುಬು ತಿಂದು  ಮಲಗಿದರೆ ಗಣಪತಿ ಹಬ್ಬ ಸಮಾಪ್ತಿ.. 

ಮುಂದೆ ಅಮ್ಮನ ಕೆಲಸ ಶುರುವಾಗುತ್ತಿತ್ತು... ಅಡಿಗೆ ಮನೆಯ ಪಾತ್ರೆಗಳು.. ಪೂಜಾ ಸಾಮಗ್ರಿ ಎಲ್ಲವನ್ನೂ ಅಚ್ಚುಕಟ್ಟಾಗಿ ಸರಿ ಮಾಡಿ.. ಮತ್ತೆ ಅವರು ಮಲಗುವ ಹೊತ್ತಿಗೆ ತಡ ರಾತಿ  ಮಾರನೇ ದಿನಕ್ಕೆ  ಮತ್ತೆ ಕಾಯುವ ಕಾಯಕ... !

******

ಮಕ್ಕಳ ಮರೆತಿಲ್ಲ ಮರೆಯೋದಿಲ್ಲ.. ನನಗೆ ಗೊತ್ತು ಸುಮ್ಮನೆ ಕಾಲೆಳೆದು ನೋಡಿದೆ ಅಷ್ಟೇ.. ನಾ ನಿಲ್ಲದ ಮೊದಲ ಗಣಪತಿ ಹಬ್ಬಕ್ಕೆ ನೀವೆಲ್ಲರೂ ಕೂಡಿರುವುದು ನೋಡಿ ಖುಷಿಯಾಗಿದೆ.. ನಮ್ಮ ಅನುಗ್ರಹ ಸದನದ ಪುರೋಹಿತ ಶಾಮಣ್ಣ ಇನ್ನೇನು ಬರುತ್ತಿದ್ದಾನೆ.. ಪೂಜೆ ಮಾಡಿ.. ಗಣಪನ ಕೃಪೆಯಿಂದ ನಮ್ಮ ಅನುಗ್ರಹ ಸದನ ಸದಾ ಬೆಳಗುತ್ತಲಿರಲಿ.. ಶುಭವಾಗಲಿ.. !


3 comments:

  1. Very nice dear..Feel like she is with us..Two years back she was with me..Which was first festival with her ..But accidentally became last too..

    ReplyDelete
  2. ಮೊದಲು ಗಣೇಶ ಗೌರಿ ಹಬ್ಬದ ಶುಭಾಶಯಗಳು.
    ತಲೇಂದ್ರೆ ತಲೆ ಕೋರವಂಗಲದ ವಂಶಸ್ಥರು ಬುದ್ಧಿವಂತರು ಎಂಬುದು ಲೇಖನ ಸಾಬೀತು ಪಡಿಸಿದೆ.ಒಂದ ಕ್ಷಣ ತಲೆ ನೀನು ಬರೆದ ಬ್ಲಾಗ್ ರೀವೈಂಡಾಯಿತು.ಅಂದಿನದಿನಗಳಸಂಬ್ರಮದ ಸುದಿನ ಮನಃಪಟಲದಲ್ಲಿ ಚಲನಚಿತ್ರ ದಂತೆ ಮೂಡಿಬಂತು.
    ವಿಶಾಲು-ಭಾವ ಎಂತಹ ಪರಿಸ್ಥಿತಿಗೂ ಲೆಕ್ಕಿಸದೆ ಸಂಸಾರ ಮುನ್ನೆಡೆಸುವ ಚಾಕಚಕ್ಯತೆ ಎಲ್ಲರಿಗೂ ಮಾದರಿ ಎಂಬುದನ್ನು ಎಳೆಎಳೆಯಾಗಿ ಬಿಡಿಸಿರುವೆ.
    ಕಥೆ, ಲೇಖನ, ಅಕ್ಷರ ಜೋಡಣೆ ,ಪದವಿನ್ಯಾಸ,ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗುವ ಎಲ್ಲಾ ಸಾಧ್ಯತೆಗಳು ಇವೆ ಶ್ರೀ.

    ReplyDelete
  3. ಮನ ಮುಟ್ಟುವಂತೆ ಬರೆದಿದ್ದೀರಿ.

    ReplyDelete