Friday, May 31, 2019

ಸಾರ್ಥಕತೆ ಎನ್ನುವುದು ಹೇಗೆ .....!

ಸಾರ್ಥಕತೆ ಎನ್ನುವುದು ಹೇಗೆ ...ಅದರ ವಿಸ್ತಾರವೇನು.. ಅದರ  ಅಗತ್ಯತೆ ಏನು.. ಇದಕ್ಕೆ ಉತ್ತರವನ್ನು ಕಂಡುಹಿಡಿದವರಿಲ್ಲ.. ಒಬ್ಬರದು ಒಂದೊಂದು ವಿವರಣೆ... ಎಲ್ಲವೂ ಕಣ್ಣು ಕಾಣದವರು ಆನೆಯನ್ನು ಮುಟ್ಟಿ ನೋಡಿ ವಿವರಿಸಿದ ಹಾಗೆ.. ಒಂದೇ ಆದರೂ ಅನುಭವ ವಿಭಿನ್ನ ..

ತುಂಬು ಸಂಸಾರವನ್ನು ಎತ್ತಿ ಹಿಡಿದು... ಹತ್ತು ಮಕ್ಕಳಿಗೆ ಭವಿಷ್ಯ ನೀಡಿದ ಒಂದು ಹೆಂಗಸಿನ ಸಾರ್ಥಕ ಬದುಕಿನ ಒಂದು  ಕ್ಷಣಗಳ ಬಗ್ಗೆ ನಾ ಕಣ್ಣಾರೆ ಕಂಡ ಬಗ್ಗೆ ಒಂದು ಪುಟ್ಟ ಲೇಖನ... ಉತ್ಪ್ರೇಕ್ಷೆಯಿಲ್ಲ... ಅತೀಂದ್ರಿಯ ಶಕ್ತಿಯೂ ಅಲ್ಲ.. ಆದರೆ ಅದಕ್ಕಿಂತ ಮೇಲೆ ಇರುವ ಶಕ್ತಿ ನೆಡೆಸಿದ ಒಂದು ಘಟನೆ.. 

ನನ್ನ ಮನದನ್ನೆ ಸವಿತಾಳ ಅಜ್ಜಿ .. ಸಹಸ್ರಚಂದ್ರ ದರ್ಶನದ ಸಂಭ್ರಮ.. ಹತ್ತು ಮಕ್ಕಳು.. ಸೊಸೆಯಂದಿರು.. ಮೊಮ್ಮಕ್ಕಳು .. ಮರಿ ಮೊಮ್ಮಕ್ಕಳು.. ಬಂಧು ಮಿತ್ರರು.. ಊರಿನ ಹಿರಿ ಕಿರಿಯರು ನೆರೆದಿದ್ದ ಸಂಭ್ರಮ.. 

ಈ ಸಹಸ್ರ ಚಂದ್ರ ದರ್ಶನ ಅಂದರೆ ನಾ ಒಂದು ಕಡೆ ಓದಿದ್ದು. ಜೀವತಾವಧಿ... ಎಂಭತ್ತು ವಸಂತಗಳನ್ನು ಕಂಡಿದ್ದರೇ.. ಸಾವಿರ ಚಂದ್ರ ಅಂದರೆ ಸಾವಿರ ಹುಣ್ಣಿಮೆಯನ್ನು ಕಂಡಿದ್ದಾರೆ ಎಂದು ಶಾಸ್ತ್ರ ಹೇಳುತ್ತದೆ... ಆ ಅವಧಿಯಲ್ಲಿ ಮೂರು ತಲೆಮಾರುಗಳಿಗೆ ಬುನಾದಿ ಹಾಕಿರುತ್ತಾರೆ ಎನ್ನುವುದು ನಂಬಿಕೆ.. ಮಕ್ಕಳು.. ಮೊಮ್ಮಕ್ಕಳು.. ಮರಿ ಮೊಮ್ಮಕ್ಕಳು ಹೀಗೆ ..

ನಾ ಈ ರೀತಿಯ ಆಚರಣೆಯನ್ನು  ಮೂರು ಬಾರಿ ಕಂಡಿದ್ದೇನೆ.. ಒಂದು  ಅಮ್ಮನ ಸೋದರತ್ತೆಯ ಜೋಡಿಯದು.. ಎರಡನೆಯದು ನಾ ಸ್ವಾಮೀಜಿ ಎಂದು ಕರೆಯುವ ನನ್ನ ಮಡದಿಯ ಚಿಕ್ಕಪ್ಪನ ಅಪ್ಪ ಅವರ ಸಂಭ್ರಮ.. ಮೂರನೆಯದು ಸವಿತಾಳ ಅಜ್ಜಿ.. 

ಹಿರಿಕಿರಿಯರು ಕಿಕ್ಕಿರಿದು ಸೇರಿದ್ದರು.. ಅವರ ಮುಂದೆ ಈ ರೀತಿಯ ಸಂಭ್ರಮ ಒಂದು ಕಡೆಯಲ್ಲಿ ಸಂಕೋಚದ ಭಾವ ಮೂಡಿಸಿದರೆ..  ಇನ್ನೊಂದು ಬದಿಯಲ್ಲಿ ಸಾರ್ಥಕ ಬದುಕು ನೆಡೆಸುತ್ತಿರುವ ಅಜ್ಜಿಗೆ ತನ್ನ ಕಣ್ಣ ಮುಂದಿನ ಈ ವೈಭವದ ಸಂಭ್ರಮದ ಸಂತಸ.. 

ಎರಡೂ ಭಾವವನ್ನು ಅವರು ವ್ಯಕ್ತಪಡಿಸುತ್ತಿದ್ದ ರೀತಿಯನ್ನು ನನ್ನ ಕಣ್ಣುಗಳು ನನ್ನ ಮೂರನೇ ಕಣ್ಣಿನ ಮೂಲಕ  ಸೆರೆ ಹಿಡಿಯುತ್ತಿದ್ದವು.. ಅದನ್ನು ನೋಡೋದೇ ಒಂದು ಸಂತಸ ನನಗೆ... ಅವರ ಮುಖಭಾವ ಗಮನಿಸುತ್ತಲೇ ಇದ್ದೆ.. ಅವರ ಕೆಲವು ಕ್ಷಣದ ಮುಖ ಭಾವದಲ್ಲಿ ಏನೋ ಒಂದು ರೀತಿಯ ದುಗುಡ ಕಂಡು ಕಾಣದೆ ಇಣುಕುತಿತ್ತಾದರೂ.. ಸಂಭ್ರಮದ ಛಾಯೆ ಈ ದುಗುಡವನ್ನು ದೂರ ದೂರ ಸರಿಸುತ್ತಿತ್ತು.. 

ಮಂತ್ರೋಕ್ತ ಪೂಜೆ ಪುನಸ್ಕಾರಗಳು ಭರ್ಜರಿಯಾಗಿ ನೆಡೆದಿದ್ದವು.. ಮಂತ್ರೋಕ್ತ ಜಲ.. ಕಲಶದಲ್ಲಿ ಕಾಯುತ್ತಿತ್ತು.. ಇತ್ತೀಚೆಗಷ್ಟೇ ಕಾಶಿ ಯಾತ್ರೆ ಮಾಡಿದ್ದರಿಂದ ಗಂಗಸಮಾರಾಧನೆ ಕೂಡ ನೆಡೆದಿತ್ತು.. ಕಳೆದ ಐದು ವರ್ಷಗಳಲ್ಲಿ ಗಂಗಾನದಿಯನ್ನು ಗಂಗೆಯನ್ನಾಗಿ ಮಾಡಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲಬೇಕು.. ಆ ಗಂಗಾಜಾಲವನ್ನು ಮಂತ್ರೋಕ್ತ ಸಹಿತ ಆಹ್ವಾನಿಸಿ ರುದ್ರ ಚಮಕಗಳೆಲ್ಲ ಮುಗಿದಿತ್ತು.. ಮಂತ್ರದಿಂದ ಸಿದ್ಧವಾಗಿದ್ದ ಜಲದಿಂದ ಸಹಸ್ರ ಚಂದ್ರ ದರ್ಶನದ ಹೀರೋಯಿನ್ ಅವರಿಗೆ ಜಲಾಭಿಷೇಕ.. (ಇದಕ್ಕೆ ಪರ್ಯಾಯ ಪದ ತಕ್ಷಣಕ್ಕೆ ಹೊಳೆಯುತ್ತಿಲ್ಲ ಹಾಗಾಗಿ ಜಲಾಭಿಷೇಕ ಎನ್ನುವ ಪದವನ್ನು ಉಪಯೋಗಿಸಿದ್ದೇನೆ)... ನೆಡೆಯುವ ಹೊತ್ತು..


ಮನೆಯ ಮಕ್ಕಳಾದಿಯಾಗಿ ಬಂಧು ವರ್ಗವೆಲ್ಲ ಸರತಿಯಲ್ಲಿ ಬಂದು ತಮ್ಮ ಗೌರವ ಸೂಚಿಸಿದ್ದರು... ಬಂದವರೆಲ್ಲ ಈ ಕಳಸದ ಜಲದಿಂದ ಅಭ್ಯಂಜನ ನೆಡೆದಿತ್ತು... ಆಗ ಅವರ ಮುಖಭಾವವನ್ನೇ ಗಮನಿಸುತ್ತಿದ್ದೆ.. ಸಂತಸ.. ದುಃಖ.. ಅಭಿಮಾನ.. ಉತ್ಸಾಹ.. ಎಲ್ಲವೂ ಕಾಣುತಿತ್ತು.. ಮುಖದ ಮೇಲೆ ಹರಿಯುತ್ತಿದ್ದ ಮಂತ್ರಜಲ ಧಾರೆ.. ಅವರ ಮುಖಭಾವವನ್ನು ಕಾಮನಬಿಲ್ಲಿನ ಕಾಂತಿಯಂತೆ  ಬದಲಿಸುತ್ತಲೇ ಇತ್ತು.. 

ನಂತರ ಹೊಸವಸ್ತ್ರವನ್ನು ಉಟ್ಟು.. ಮುಂದಿನ ಕಾರ್ಯಕ್ರಮಕ್ಕೆ ಅಣಿಯಾಗಿದ್ದರು.. ದೇವರಿಗೆ ಪೂಜೆ..ಮಂಗಳಾರತಿ.. ಹೀಗೆ ಕಾರ್ಯಗಳು ನೆಡೆದಿದ್ದವು.. ಅಜ್ಜಿಯ ಮುಖಭಾವದಲ್ಲಿ ಯಾರನ್ನೋ ನಿರೀಕ್ಷೆ ಮಾಡುತ್ತಿರುವ ನೋಟ.. ಸುತ್ತ ಮುತ್ತಲು ತಿರು ತಿರುಗಿ ನೋಡುತ್ತಲೇ ಇದ್ದರು.. ನನ್ನ ಕ್ಯಾಮೆರಾ ಕೂಡ ಕೇಳಿತು ..

"ಏನು ಶ್ರೀ ಅದು ಅಜ್ಜಿ ಯಾರನ್ನು ನಿರೀಕ್ಷೆ ಮಾಡುತ್ತಿದ್ದಾರೆ?".. 

"ಗೊತ್ತಿಲ್ಲ ನಿಕೋನ್ .. ನೋಡೋಣ ಕಾದು ನೋಡೋಣ" ಎಂದು ಹೇಳಿದೆ.. 


ಕೊಂಚ ಗದ್ದಲ.. ಕೊಂಚ ಗಲಿಬಿಲಿ.. ನೋಡಿದರೆ.. ಅಜ್ಜಿ ಮನೆಯ ಕಾಂಪೌಂಡ್ ಮೇಲೆ ಒಂದು ವಾನರ ಬಂದು ಕೂತಿತ್ತು.. ಅಲ್ಲಿದ್ದವರೊಬ್ಬರು ಮಾವಿನಹಣ್ಣು ಕೊಟ್ಟರು.. ಅಚ್ಚುಕಟ್ಟಾಗಿ ಸಿಪ್ಪೆ ಸುಲಿದು ತಿಂದುಹಾಕಿತು .. ಇನ್ನೊಂದು ಮಾವಿನ ಹಣ್ಣು ಅದಕ್ಕೂ ಅದೇ ಗತಿಯಾಯಿತು.. ಬಾಳೆ ಹಣ್ಣು ಕೊಟ್ಟರು.. ತಿಂದಿತು.. ಹಾಗೆ ಮತ್ತೆ ಅಜ್ಜಿಯ ಕಡೆ ಕ್ಯಾಮೆರಾ ತಿರುಗಿಸಿದೆ.. ಸ್ವಲ್ಪ ಹೊತ್ತಿನಲ್ಲಿಯೇ . ಅದೇ ವಾನರ.. ಹೋಮದ ಕುಂಡದ ಹತ್ತಿರ ಬಂದು ಅಲ್ಲಿದ್ದ ಪದಾರ್ಥವನ್ನು ತಿಂದಿತು.. ನಂತರ ಅಜ್ಜಿಯ ಕಾಲು ಬುಡದಲ್ಲಿ ಕೂತಿತು.. ಪಕ್ಕದಲ್ಲಿಯೇ ಕೂತಿದ್ದ ಅಜ್ಜಿಯ ಹಿರಿಯ ಸೊಸೆ ಮತ್ತು ಮಗ.. ಮೆಲ್ಲಗೆ ಅಲ್ಲಿದ ಹಣ್ಣು ಕೊಟ್ಟರು.. ಪುರೋಹಿತರು ನೈವೆದ್ಯ ಮಾಡಬೇಕು ಎಂದರು.. ಸೊಸೆ ಮತ್ತು ಮಗ ಅದಕ್ಕೆ ಸಿದ್ಧವಾಗಬೇಕೆಂದಿದ್ದಾಗ... ವಾನರ ಒಂದು ಲೋಟದಲ್ಲಿದ್ದ ಕಲೆಸಿದ ಮೊಸರನ್ನವನ್ನು ಅಚ್ಚುಕಟ್ಟಾಗಿ ನಾವು ಊಟ ಮಾಡುವಂತೆ ತಿಂದು ಮುಗಿಸಿತು.. ನಂತರ ಹಾಲು.. ಜೇನು ತುಪ್ಪ.. ಎಲ್ಲವನ್ನು ತಿಂದು ಮುಗಿಸಿತು.. ನಂತರ ಪಂಚ ಪಾತ್ರೆಯಲ್ಲಿದ್ದ ನೀರಿನಲ್ಲಿ ಕೈಯನ್ನು ಅದ್ದಿ.. ಕೊಡವಿಕೊಂಡು.. ಮೆಲ್ಲಗೆ ಜಾಗ ಖಾಲಿ ಮಾಡಿತು.. 






ಊರಿನವರ ಪ್ರಕಾರ .. ಮಂಗಗಳು ಬಂದಿದ್ದೆ ಅಥವಾ ಕಾಣಿಸಿಕೊಂಡಿದ್ದೆ ಬಲು ಅಪರೂಪವಂತೆ.. ಒಂದು ರೀತಿಯಲ್ಲಿ ಪವಾಡ ಎನಿಸಿತು.. ವಾನರ ತಿಂದು ಮುಗಿಸಿದ್ದನ್ನೆಲ್ಲ ಫೋಟೋ ತೆಗೆದೇಬಂದು .. ಸುಮಾರು ಹೊತ್ತಾದ ಮೇಲೆ.. ಯಾಕೋ ಅಜ್ಜಿಯ ಮುಖ ನೋಡಿದೆ ..ತಮ್ಮ ಆಶಯ ಈಡೇರಿದ ಭಾವ.. ಅವರು ಯಾರನ್ನು ನಿರೀಕ್ಷಿಸಿದ್ದರೋ ವಾನರ ರೂಪದಲ್ಲಿ ಬಂದು ದರ್ಶನ ನೀಡಿದರು ಎನ್ನುವ ತೃಪ್ತಿ ಭಾವ.. ಅವರ ಮೊಗದಲ್ಲಿತ್ತು.. 

ಆಗಸವನ್ನೊಮ್ಮೆ ನೋಡಿದೆ.. ಅಣ್ಣಾವ್ರ ನಾದಮಯ ಹಾಡಿನ ಒಂದು ಸಾಲು ಮನದಲ್ಲಿ ಹಾಡತೊಡಗಿತು .. 

"ಸುರರು ಬಂದು, ಹರಿಯ ಕಂಡು ಹರುಷದಿ ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು ನಾದಮಯ ಈ ಲೋಕವೆಲ್ಲಾ ಕೊಳಲಿಂದ ಗೋವಿಂದ ಆನಂದ ತಂದಿರಲು ನಾದಮಯ ಈ ಲೋಕವೆಲ್ಲ ನಾದಮಯ" 

ಅಲ್ಲವೇ.. ತನಗೆ ಬೇಕಾದವರನ್ನು ವಾನರ ರೂಪದಲ್ಲಿ ದರ್ಶನ ಕೊಡಿಸಿದ ಆ ಮಹಾಮಹಿಮನ ಪವಾಡವನ್ನು ಕಂಡು ಅಜ್ಜಿಯು ಸಂತಸ ಪಟ್ಟ ಕ್ಷಣ ಒಂದು ಕಡೆಯಲ್ಲಾದರೆ.. ನಿರ್ಲಿಪ್ತ ಮನಸ್ಸಿನಿಂದ.. ಅಂದುಕೊಂಡ ಕಾರ್ಯ ಆಗಿಯೇ ಆಗುತ್ತದೆ ಎನ್ನುವ ಪವಾಡ ಸಾದೃಶ್ಯ ಕಂಡ ಸಂತಸ ನಮಗೆ 

ಒಂದು ಸಾರ್ಥಕತೆಯನ್ನು ಕಣ್ಣಾರೆ ಕಂಡ ತೃಪ್ತಿ ನಮಗೆ.. 

ಅದರ ಕೆಲವು ಚಿತ್ರಗಳು ನಿಮಗಾಗಿ.. !!!

5 comments:

  1. ಅಚ್ಚರಿ ಹಾಗು ಸಂತೋಷ! ಋಣಾನುಬಂಧ ಎಂದೆನ್ನಬೇಕೇನೋ? ಅಜ್ಜಿಯ ಮುಖದಲ್ಲಿಯ ಸಂತೃಪ್ತಭಾವ ನನಗೂ ತೃಪ್ತಿಯನ್ನು ತಂದಿತು. ನಿಮಗೂ ಧನ್ಯವಾದಗಳು.

    ReplyDelete
    Replies
    1. Thank you Gurugale.. nimma pratikriye sadaa siguva aasheervaada

      Delete
  2. ಅಣ್ಣಾ ಯಾರು ಯಾವಾಗ ಯಾವ ರೀತಿಯಾದರು ಬರಬಹುದು ಅನ್ನುವ ಮಾತು ನಿಜ ಅನಿಸಿತ ನಿಮ್ಮ ಬರಹದಲ್ಲಿ..ನಿಮ್ಮ ಕ್ಯಾಮರಾ ಸೆರೆಹಿಡಿದ ದೃಶ್ಯಗಳು ಅಲ್ಲಿಯ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಮಾಡಿವೆ.. ಸುಂದರ ಬರಹ ಅಜ್ಜಿಯ ನಗುವಿನಂತೆ..

    ReplyDelete
  3. ಶ್ರೀ ನಿನ್ನ ಬರವಣಿಗೆ, ಸನ್ನಿವೇಶದ ವಿವರಣೆ ಸ್ವಾರಸ್ಯಕರವಾಗಿದೆ. ಇದನ್ನೆಲ್ಲಾ ಹೇಗೆ ಕಲಿತೆ ಎಂದು ಕೇಳುವ ಕುತೂಹಲ ನನಗೆ. ಇದು ಪೂರ್ವಜನ್ಮದ ಶೇಷ ಸ್ವಲ್ಪ ನಿನಗೆ ಆವಾಹನೆ ಆಗಿರುವುದು ದೃಢಪಟ್ಟಿದೆ.ಅದ್ಬುತ (ಹನುಮಾನ್ ದರ್ಶನ) ಅಜ್ಜಿಗೆ ಶಾಂತಿ ಸನ್ನಿವೇಶ ಎಲ್ಲಾ ಸೂಪರ್.
    ನಮ್ಮ ಹುಡುಗ ಇನ್ನೂ ಉತ್ತುಂಗಕ್ಕೆ ಏರಬೇಕು ಎಂಬ ಮಹದಾಸೆ.ದೇವರು ಒಳ್ಳೆಯದನ್ನು ಮಾಡಲಿ.
    ನಿನ್ನ ಮಾವ.

    ReplyDelete