Wednesday, February 7, 2018

"ಸವಿ" ನೆನಪುಗಳು ಬೇಕು

"ಅಪರಿಚಿತ" ಇದು ಒಂದು ಅದ್ಭುತ ಕುತೂಹಲಭರಿತ ಚಿತ್ರ.. ನನ್ನ ಪ್ರಕಾರ ಈ ರೀತಿಯ ಚಿತ್ರ ಇದೆ ಮೊದಲು ಮತ್ತು ಇದೆ ಕಡೆ.. ಯಾಕೆಂದರೆ.. ಈ ಚಿತ್ರದಲ್ಲಿ  ತರ್ಕಕ್ಕೂ ಉತ್ತರಿವಿದೆ. ಪ್ರತಿಯೊಂದನ್ನು  ಹತ್ತಿಯ ಎಳೆ ಬಿಡಿಸಿದ ಹಾಗೆ ಬಿಡಿಸಿಟ್ಟಿದ್ದಾರೆ ಮತ್ತು ಚಿತ್ರ ನೋಡಿ ಹೊರಬಂದ ಮೇಲೆ ಅನುಮಾನ ಇರುವುದೇ ಇಲ್ಲ..

ಈ ಚಿತ್ರದ ಒಂದು ಅತ್ಯುತ್ತಮ ಗೀತೆ ಶ್ರೀ ಪಿ ಆರ್ ರಾಮದಾಸು ನಾಯ್ಡು ಅವರ ಸಾಹಿತ್ಯ, ಶ್ರೀ ಎಲ್ ವೈದ್ಯನಾಥನ್ ಅವರ ಸಂಗೀತದಲ್ಲಿ ನನ್ನ ನೆಚ್ಚಿನ ಗಾಯಕಿಯರಲ್ಲಿ ಒಬ್ಬರಾದ ಶ್ರೀಮತಿ ವಾಣಿಜಯರಾಂ ಸುಶ್ರಾವ್ಯವಾಗಿ ಹಾಡಿರುವ ಗೀತೆ..

ಯಾಕೋ ಗೊತ್ತಿಲ್ಲ ಸುಮಾರು ದಿನಗಳಿಂದ ಈ ಹಾಡು ಕಾಡುತ್ತಿತ್ತು.. ಇದಕ್ಕೊಂದು ಸುಂದರ ಸ್ಪರ್ಶ ಕೊಡೋಣ ಅನ್ನಿಸಿತು.. ಇದರ ಫಲಶ್ರುತಿ ಈ ಲೇಖನ..

ಮೂರು ಅದ್ಭುತ ಆತ್ಮಗಳಿಗೆ ನಮನ ಸಲ್ಲಿಸುತ್ತಾ ಈ ಲೇಖನ ನಿಮ್ಮ ಮುಂದೆ..

                                                        ******

ಒಂದು ಮುದ್ದಾದ ಜೋಡಿ ಸಾಗರದ ಅಲೆಗಳನ್ನು ನೋಡುತ್ತಾ ಮಾತಾಡುತ್ತಿತ್ತು.. ಕಡಲಿನ ಅಬ್ಬರ ಅವರುಗಳ ಮಾತುಗಳಿಗೆ ಅಡ್ಡಿ ಬರುತ್ತಿರಲಿಲ್ಲ..

ಶ್ರೀಧರ್ ಹೇಳುತ್ತಿದ್ದ "ಸವಿ ನೆನಪುಗಳು ಬೇಕು ಸವಿಯಲಿ ಬದುಕು..ಅಲ್ವೇನೋ ಕವಿ"
ಅಲ್ಲಿಯ ತನಕ ಕವಿತಾ ಒಬ್ಬಳೇ ಮಾತಾಡುತ್ತಿದ್ದಳು.. ಅಚಾನಕ್ ಅದನ್ನು ತುಂಡರಿಸಿ ಶ್ರೀಧರ್ ಮಾತಾಡಿದ್ದು.. ಅವಳಿಗೆ ಅಚ್ಚರಿಗಿಂತ ಖುಷಿಯಾಯಿತು.. ಎರಡು ಕೈ ಸೇರಿದರೆ ಅಲ್ಲವೇ ಚಪ್ಪಾಳೆ..

"ಹೌದು ಸಿಡ್ .. ಆದರೆ
ಕಹಿ ನೆನಪು ಸಾಕೊಂದು ಮಾತಲಿ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ.. ಏನು ಮಾಡೋದು.. ಜಗತ್ತಿನಲ್ಲಿ ನಮ್ಮ ದಾರಿಯಲ್ಲಿ ಸಿಕ್ಕವನ್ನು ನೋಡುತ್ತಾ ನಲಿಯುತ್ತ ಸಾಗುತ್ತಿರಬೇಕು"

"ನಿಜ ಕವಿ ಸವಿ ನೆನಪುಗಳು ಬೇಕು ಸವಿಯಲಿ ಬದುಕು.. ಆ ನೆನಪುಗಳೇ ನಮ್ಮ ಬದುಕಿಗೆ ಬುನಾದಿ.. ಮತ್ತು ಸ್ಫೂರ್ತಿ.. "

"ನಿನ್ನ ನಾ ಪ್ರೀತಿ ಮಾಡಲು ಶುರುಮಾಡಿದಾಗ ಮನದಲ್ಲಿ ಆಗುತ್ತಿದ್ದ ಭಾವನೆಗಳು ಸೂಪರ್ ಇರುತ್ತಿದ್ದವು.. ಮನದಲ್ಲಿ ಹಾಗೆ ಪದಗಳು ತೇಲಿ ಬರುತ್ತಿದ್ದವು ಪ್ರಿಯತಮನ ಒಲವಿಂದ ಕನಸುಗಳು ಮೂಡಿ..
                                      ಇನಿಯನ ಎದೆಗೊರಗಿ ಆಸರೆಯ ಬೇಡಿ
                                      ಸರಸ ಸವಿಯ ಬಯಸಿದೆನು ನಾನು.. "

"ಹೌದು ಕಣೋ .. ಪ್ರೀತಿಯಲ್ಲಿ ಸರಸವೂ ಇರುತ್ತದೆ.. ವಿರಸವೂ ಇರುತ್ತದೆ.. ನೀ ನನ್ನ ಎದೆಗೊರಗಿ ಮಾತಾಡುತ್ತಿದ್ದಾಗ ಖುಷಿಯಾಗುತ್ತಿತ್ತು.. ನೀ ಹೊರಡುವೆ ಎಂದಾಗ ನನ್ನ ಮನಸ್ಸು ಹೇಳುತ್ತಿತ್ತು ವಿರಹ ವಿಫಲ ಫಲಿಸಿದವು ನನಗೆ

"ನಿನ್ನ ಎದೆಗೊರಗಿದಾಗ ನಿನ್ನ ಹೃದಯದ ಬಡಿತ ಕವಿ ಕವಿ ಎನ್ನುವಾಗ ಮನಸ್ಸಿಗೆ ಉಲ್ಲಾಸ.. ನಾಲಿಗೆಯಲ್ಲಿ ಅದೇ ಗಾನ ಮೂಡುತ್ತಿತ್ತು.. ಒಮ್ಮೆ ಹೇಳಲೇ ಗೆಳೆಯ.. "

"ಖಂಡಿತ ಕಣೋ.. ನಾವಿಬ್ಬರೂ ಮದುವೆಯಾಗಿ ದಶಕ ಕಳೆದಿದೆ .. ಮಗನಿದ್ದಾನೆ.. . ಆದರೂ ನಾವು ಪ್ರೇಮಿಗಳೇ.. ಪ್ರೇಮಕ್ಕೆ ಪ್ರೀತಿಗೆ ವಯಸ್ಸಿಲ್ಲ.. ಮುಪ್ಪಿಲ್ಲ.. "

"ಇನಿಯನ ಎದೆ ಬಡಿತ ಗುಂಡಿನ ಧನಿಗೆರೆದು 
ಮಾಸುತಿದೆ ಕನಸು 
ಸವಿ ನೆನಪುಗಳು ಬೇಕು ಸವಿಯಲೆ ಬದುಕು"

"ವಾಹ್ ಸೂಪರ್ ಕಣೋ.. ಈ ಕಡಲಿನ ಮೊರೆತ.. ಈ ತರಂಗಗಳು ತರುವ ತಂಗಾಳಿ.. ಮನಸ್ಸಿಗೆ ಎಷ್ಟು ಮುದಕೊಡುತ್ತದೆ.. ಈ ತಂಗಾಳಿಗಳು ಹೊತ್ತು ತರುವ ಆ ದಿನಗಳ ನೆನಪು ಸದಾ ಹಸಿರು.. "

"ಕವಿ ನಿನಗೆ ನೆನಪಿದೆಯಾ.. "

"ಸಿಡ್ ನಿನ್ನ ಜೊತೆ ಕಳೆದ ಪ್ರತಿಕ್ಷಣವನ್ನೂ ನೆನಪಿನ ಪುಟಗಳಲ್ಲಿ ಸೆರೆ ಹಿಡಿದು ಇಟ್ಟಿದ್ದೇನೆ.. ಹೇಳು"

"ನಾವಿಬ್ಬರೂ ಪರಿಚಯವಾದ ಮೇಲೆ .. ನೀ ನಮ್ಮ ಮನೆಗೆ ಬಂದಿದ್ದೆ.. ಆಗ ನಾನೊಬ್ಬನೇ ಇದ್ದೆ.. ಅಪ್ಪ ಅಮ್ಮ ಊರಿಗೆ ಹೋಗಿದ್ದರು.. ಹಾಗಾಗಿ ನೀ ಧೈರ್ಯ ಮಾಡಿ ನಮ್ಮ ಮನೆಗೆ ಬಂದಿದ್ದೆ.. ಆಗ ನಾ ನನ್ನ ಇಷ್ಟವಾದ ಅಪರಿಚಿತ ಸಿನಿಮಾ ನೋಡುತ್ತಿದ್ದೆ.. ನಿನಗೂ ಈ ಚಿತ್ರ ಬಲು ಇಷ್ಟ . ನೀ ಹೇಳಿದ ಸಮಯಕ್ಕಿಂತ ತಡವಾಗಿ ಬರುತ್ತೇನೆ ಎಂದು ಮೆಸೇಜ್ ಕಳಿಸಿದ ಮೇಲೆ .. ಇನ್ನೇನು ಮಾಡಲಿ ಎಂದು ಆ ಚಿತ್ರವನ್ನು ನೋಡುತ್ತಿದ್ದೆ.. ನೀ ಬರುವ ಹೊತ್ತಿಗೆ ನಾ ಆಗಲೇ ಅರ್ಧ ಸಿನಿಮಾ ನೋಡಾಗಿತ್ತು ಆದರೂ.. ಮತ್ತೆ ನಿನಗೋಸ್ಕರ ಮೊದಲಿಂದ ನೋಡಲು ಶುರುಮಾಡಿದೆವು.. ನೀ ಚಿತ್ರದ ಪ್ರತಿದೃಶ್ಯವನ್ನು ಅನುಭವಿಸಿ ನೋಡುತ್ತಿದ್ದದು ನನಗೆ ಖುಷಿ ಕೊಡುತ್ತಿತ್ತು.. ಪ್ರತಿಯೊಂದು ವಿಭಾಗದಲ್ಲಿಯೂ ಈ ಚಿತ್ರದ ತಂಡ ಸೊಗಸಾಗಿ ಕೆಲಸ ಮಾಡಿತ್ತು.. "

"ಹೌದು ಕಣೋ.. ಕಾರಣ ಗೊತ್ತಿಲ್ಲ.. ಈ ಚಿತ್ರ ನನಗೂ ತುಂಬಾ ಇಷ್ಟ.. ಒಳ್ಳೆ ಸಸ್ಪೆನ್ಸ್ ಚಿತ್ರ ಇದು.. ಕಾಶೀನಾಥ್  ಅವರ ಅತ್ಯುತ್ತಮ ಚಿತ್ರವಿದು.. "

"ಕವಿ ನನಗೆ ಒಂದಾಸೆ.. ಈ ಚಿತ್ರದ ಒಂದು ಹಾಡನ್ನು ನನಗೋಸ್ಕರ ಹಾಡುತ್ತೀಯ ಪ್ಲೀಸ್.. "

"ಹಾಡೋಕೆ ನನಗೆ ಬರೋಲ್ಲ.. ನೀನೆ ಅದಕ್ಕೆ ಒಂದಷ್ಟು ಪದ ಸೇರಿಸಿ ಕಥೆ ಮಾಡಿಬಿಡು.. ನಾವಿಬ್ಬರೂ ಓದೋಣ.. ನಲಿಯೋಣ.. "

ಇಲ್ಲಿ ಯಾರು ಸೋತರು ಅಂತ ಹೇಳಬೇಕೇ.. ಪ್ರೀತಿಯಲ್ಲಿ ಪ್ರೇಮದಲ್ಲಿ ಸೋಲಿಲ್ಲ.. ಬದಲಿಗೆ ಒಬ್ಬರ ಗೆಲುವು ಇನ್ನೊಬ್ಬರ ಗೆಲುವು.. ಒಬ್ಬರ ಸೋಲು.. ಇಬ್ಬರ ಸೋಲು.. ಹಾಗಾಗಿ ಸಿಡ್ ಹೇಳಿದ..

"ನೋಡು ಕವಿ.. ನಮಗೆ ಗೊತ್ತಿಲ್ಲದೇ ಈ ಹಾಡಿನ ಸಾಹಿತ್ಯವನ್ನು ನಮ್ಮ ಸಂಭಾಷಣೆಯಲ್ಲಿ ಸೇರಿಸಿಬಿಟ್ಟಿದೇವೆ..ಇನ್ನು ಉಳಿದಿರೋದು ನಾಲ್ಕೈದು ಸಾಲುಗಳು ಅಷ್ಟೇ.. ಅದನ್ನೇ ಇಲ್ಲಿ ಹಾಕಿ ಬಿಡುತ್ತೇನೆ.. ಅದನ್ನು  ಇಬ್ಬರೂ ಮತ್ತೆ ಮೊದಲಿಂದ ಓದೋಣ.. ಸರಿ ನಾ.. "

"ಮುದ್ದು ಕಣೋ ನೀನು.. ಸೂಪರ್ ಶುರು ಹಚ್ಚಿಕೋ.. "

"ಕಡಲಿನ ತರಂಗಗಳು ಹೊತ್ತು ತರುತ್ತಿದ್ದ ಗಾಳಿಯನ್ನು ನೋಡಿ.. ಮನಸ್ಸಿನಲ್ಲಿ ಮೂಡಿದ ಮಾತುಗಳು
ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ ನಾ ಬಂಧಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮಸಕಾಗಿದೆ"

"ಯಾಕೋ ಸಿಡ್ ಏನಾಯಿತು... "

"ಏನಿಲ್ಲ ಕಣೋ.. ಈ ಕಡಲಿನ ತರಂಗಗಳು ಹೊತ್ತು ತರುವ ಮಣ್ಣಿನ ಕಣಗಳು.. ಧೂಳು ಕಣ್ಣಿಗೆ ಬೀಳುತ್ತವೆ.. ಕಣ್ಣು ಮಂಜಾಗುತ್ತದೆ.. ಮತ್ತೆ ನೀರಿನಲ್ಲಿ ತೊಳೆದಾಗ ಸ್ಪಷ್ಟವಾಗುತ್ತದೆ.. ನೆನಪುಗಳು ಹಾಗೆ ಅಲ್ಲವೇ.. ನೆನಪುಗಳು ಮಧುರವಾಗಿ ಇರುತ್ತದೆ.. ಹಾಗೆ ಕಣ್ಣಂಚಿನಲ್ಲಿ ನೀರನ್ನು ತುಂಬಿರುತ್ತದೆ.. ಇದೆ ಜೀವನ.. "

ಕಡೆಯ ಸಾಲನ್ನು ನಾ ಹೇಳುತ್ತೇನೆ ಸಿಡ್
ಅರಳುವ ಹೂವೊಂದು
ಕಮರುವ ಭಯದಲಿ
ಸಾಗುತಿದೆ ಬದುಕು

ಶ್ರೀಧರನ ಕಣ್ಣು ಮಂಜಾದವು.. ಅರಳುತ್ತಿದ್ದ ಹೂವು ಒಣಗಿ ಹೋಗುವ ಪರಿಯನ್ನು ನೋಡಲಾಗದೇ ಹಾಗೆ ಕಣ್ಣು ಮುಚ್ಚಿಕೊಂಡ..

ಕೊಂಚ ಹೊತ್ತಾದ ಮೇಲೆ ಪಕ್ಕದಲ್ಲಿ  ನೋಡಿದ ಯಾರೂ ಇರಲಿಲ್ಲ..

ಮಧುರ ನೆನಪಿನ ದೋಣಿಯಲ್ಲಿ ಇಷ್ಟು ಹೊತ್ತು ಸಂಚರಿಸಿ ಬಂದ ಅನುಭವ ಅವನನ್ನು ಇನ್ನಷ್ಟು ಗಟ್ಟಿ ಮಾಡಿತ್ತು..

ಸುಮಾರು ಹೊತ್ತು ಹಾಗೆ ಕಣ್ಣು ಮುಚ್ಚಿಕೊಂಡೆ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ಕೂತಿದ್ದ ..

ತಂದಿದ್ದ  ಚಿಪ್ಸ್, ಕಡಲೇಕಾಯಿ.. ಸೌತೆಕಾಯಿ.. ನೀರಿನ ಬಾಟಲ್ ಎಲ್ಲವೂ ಖಾಲಿಯಾಗಿತ್ತು.. ಸೂರ್ಯ ನಾಳೆ ಮತ್ತೆ ಹೊಸ ಭರವಸೆಗಳನ್ನು ಹೊತ್ತು ತರುವ ಆಶಯದೊಂದಿಗೆ ಕಡಲೊಳಗೆ ಇಳಿಯುತ್ತಿದ್ದ..

ಮನೆಯಿಂದ ಮಗರಾಯ ಕರೆ ಮಾಡಿದ್ದ.. "ಅಪ್ಪ ಎಲ್ಲಿದ್ದೀರಾ.. "

"ಹಾ ಪುಟ್ಟ ಬರ್ತಾ ಇದ್ದೀನಿ.. "

ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಹೊರಟ ಮನೆ ಕಡೆಗೆ.. ಅವನ ಮೊಬೈಲಿನಲ್ಲಿ ವಾಣಿಯಮ್ಮ ಅದ್ಭುತವಾಗಿ ಹಾಡುತ್ತಿದ್ದರು..

"ಸವಿ ನೆನಪುಗಳು ಬೇಕು ಸವಿಯಲಿ ಬದುಕು
ಕಹಿ ನೆನಪು ಸಾಕೊಂದು ಮಾತಲಿ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ
ಸವಿ ನೆನಪುಗಳು ಬೇಕು ಸವಿಯಲಿ ಬದುಕು

ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನ ಎದೆಗೊರಗಿ ಆಸರೆಯ ಬೇಡಿ
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ

ಇನಿಯನ ಎದೆ ಬಡಿತ ಗುಂಡಿನ ಧನಿಗೆರೆದು
ಮಾಸುತಿದೆ ಕನಸು
ಸವಿ ನೆನಪುಗಳು ಬೇಕು ಸವಿಯಲೆ ಬದುಕು

ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ ನಾ ಬಂಧಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮಸಕಾಗಿದೆ

ಅರಳುವ ಹೂವೊಂದು
ಕಮರುವ ಭಯದಲಿ
ಸಾಗುತಿದೆ ಬದುಕು

ಸವಿ ನೆನಪುಗಳು ಬೇಕು ಸವಿಯಲಿ ಬದುಕು
ಕಹಿ ನೆನಪು ಸಾಕೊಂದು ಮಾತಲಿ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ

ಸವಿ ನೆನಪುಗಳು ಬೇಕು ಸವಿಯಲಿ ಬದುಕು"

****

ಲೋ ಗುರುವೇ.. ಲೇಖನದ ಆರಂಭದಲ್ಲಿ ಮೂರು ಆತ್ಮಗಳು ಅಂದೇ..

ಆ ಆ ಆ ಆ ಆ ಆ  ಏನಂದಿರಿ ಮೂರು ಆತ್ಮಗಳೇ .. ಯಾವುದು ಅಂದಿರಾ..

ಮೊದಲು ಈ ಚಿತ್ರದ ನಿರ್ದೇಶಕ ಶ್ರೀ  ಕಾಶಿನಾಥ್ (ಇತ್ತೀಚಿಗಷ್ಟೇ ನಮ್ಮನ್ನಗಲಿದರು..)
ಎರಡನೆಯದು ಈ ಚಿತ್ರದ ಸಂಗೀತ ನಿರ್ದೇಶಕ ಶ್ರೀ ಎಲ್ ವೈದ್ಯನಾಥನ್..
ಮೂರನೆಯದು.. ಬಿಡಿ ಆ ಮಾತೇಕೆ.. 

10 comments:

  1. ವಾಹ್ ಸೂಪರ್ ಬರವಣಿಗೆ ಶ್ರೀ

    ಒಂದು ಕೂದಳೆಲೆ ಸಿಕ್ಕರೆ ಸಾಕು ಶ್ರೀ ಗೆ ಒಂದು ಬರವಣಿಗೆ ಸಿದ್ದ
    ಸುಂದರವಾಗಿದೆ ಈ ಬರವಣಿಗೆ ಕೂಡ
    ಹೀಗೆ ಬರೆಯುತ್ತಾ ಇರು ಎಂದು ಆಶಿಸುವೆ ಶುಭವಾಗಲಿ ಶ್ರೀ

    ReplyDelete
  2. Don't mind aaaa ಮೂರನೇ ಆತ್ಮ ಯಾವುದೆಂದು ಹೇಳಲಿಲ್ಲ ಯಾಕೆ???? ನಾವೆ ಅರ್ಥ ಮಾಡಿಕೊಳ್ಳಬೇಕ ????

    ReplyDelete
  3. ಸವಿ ನೆನಪು ಶಾಂತಿಯನ್ನು ಕೊಡಲಿ.

    ReplyDelete