Sunday, September 28, 2014

ದನಿ.. ಧ್ವನಿ... ಮಾರ್ಧನಿ.. "ಜನದನಿ"

ಒಂದೂರಿನಲ್ಲಿ   ಬಹಳ ವರ್ಷಗಳ ಕಾಲ ಮಳೆ ಬಂದಿರಲಿಲ್ಲ.. ಊರಿನ ಮುಖಂಡರೆಲ್ಲ ಸೇರಿ ಸಭೆ ನಡೆಸಿ.. ಊರಿನ ಕೆಲ ಹಿರಿಯ ಧಾರ್ಮಿಕ ಅನುಯಾಯಿಗಳ ಸಲಹೆಯಂತೆ.. ಬೃಹದಾಕಾರದ ಗ್ರಾಮ ದೇವರಿಗೆ ಕ್ಷೀರಾಭಿಷೇಕ ನೆರೆವೆರಿಸಲು ತೀರ್ಮಾನಿಸಿದರು.

ಅಪಾರವಾದ ಕ್ಷೀರ ಬೇಕಾಗಿದ್ದರಿಂದ.. ಆಗಲೇ ನೀರಿಲ್ಲದೆ ಬಸವಳಿದಿದ್ದ ಗ್ರಾಮಸ್ಥರಿಗೆ ಆ ಮಟ್ಟದ ಹಾಲನ್ನು ಹೊಂದಿಸಲು ಕಷ್ಟ ಎಂದು ಅರಿತ ಮುಖಂಡರು.. ಪ್ರತಿ ಮನೆಯಿಂದ ಒಂದು ಲೋಟ ಹಾಲು ಕೊಡಬೇಕು ಮತ್ತು ಅದನ್ನು ಗ್ರಾಮದ ಮಧ್ಯೆದಲ್ಲಿ ಇಟ್ಟಿರುವ ಒಂದು ದೊಡ್ಡ ಕೊಳಗಕ್ಕೆ ಹಾಕಬೇಕು ಎಂದು ಆದೇಶಿಸಿದರು... 

ಮರುದಿನ ಬೆಳಿಗ್ಗೆಯಿಂದ ಶುರುವಾಯಿತು.. ಸರತಿಯಲ್ಲಿ ಬಂದು ಪ್ರತಿ ಮನೆಯವರು ಆ ಕೊಳಗಕ್ಕೆ ತಂದು ಹಾಕುತ್ತಾ ಬಂದರು.  ಸಂಜೆಯ ಹೊತ್ತಿಗೆ ಆ ಊರಿನ ಕಡೆಯ ಮನೆಯವನು.. ತುಂಬಾ ಹೊತ್ತು ಯೋಚಿಸಿ.. ಇಷ್ಟು ಹೊತ್ತಿಗೆ ಗ್ರಾಮದ ಎಲ್ಲರೂ ಹಾಕಿ ಕೊಳಗವನ್ನು ತುಂಬಿದ್ದಾರೆ.. ನಾನೊಬ್ಬ ಹಾಲು ಹಾಕದಿದ್ದರೆ ಏನು ಆಗುವುದಿಲ್ಲ.. ಆದರೆ ಹಾಕದೆ ಹೋದರೆ ಮುಖಂಡರ ಆಗ್ರಹಕ್ಕೆ  ತುತ್ತಾಗಬೇಕಾಗುತ್ತದೆ ಎಂದು ಹೆದರಿ.. ಒಂದು ಲೋಟ ಹಾಲಿನ ಬದಲಾಗಿ ನೀರನ್ನು ಹಾಕಿ ಹೋದನು.. 

ಪೂಜೆ ಶುರುವಾಯಿತು.. ಅಭಿಷೇಕದ ಸಮಯವಾಯಿತು.. ಆ ಕೊಳಗವನ್ನು ಕಷ್ಟಪಟ್ಟು ದೇವಾಲಯದ ಬಳಿ ತಂದು.. ಅಭಿಷೇಕಕ್ಕೆ ಸಿದ್ಧತೆ ಮಾಡಿಕೊಂಡರು.. ನೋಡಿದರೆ ಇಡಿ ಕೊಳಗದಲ್ಲಿ ಬರಿ ನೀರೆ ನೀರು.. 

ಗಾಬರಿಯಾದ ಮುಖಂಡರು ಎಲ್ಲರಿಗೂ ಜೋರಾದ ದನಿಯಲ್ಲಿ ಕೇಳಿದಾಗ.. ಒಬ್ಬೊಬ್ಬರು ನಾನೊಬ್ಬ ನೀರು ಹಾಕಿದರೆ ಯಾರಿಗೂ ತಿಳಿಯುವುದಿಲ್ಲ ಎಂದು ಯೋಚಿಸಿ ಎಲ್ಲರೂ ನೀರೆ ಹಾಕಿರುತ್ತಾರೆ,.. 

ಹೀಗೆ ನಾನೊಬ್ಬ ಏನು ಮಾಡಲು ಸಾಧ್ಯ ಎಂದು ಸುಮ್ಮನೆ ಕೂತರೆ ಯಾವ ಸಮಸ್ಯೆಯೂ ಬಗೆ ಹರಿಯುವುದಿಲ್ಲ.. ನಾ ಎಂಟನೆ ತರಗತಿಯಲ್ಲಿ ಓದಿದ ಪಾಠ "A Spark Negelected Burnt The House" ನೆನಪಿಗೆ ಬಂತು. 

ಒಂದು ಚಿಕ್ಕ ಆಂಧೋಲನ ಸಣ್ಣ ಕಿಡಿಯಂತೆ ಮಿನುಗಿ ಬೃಹತ್ ಜ್ಯೋತಿಯಾಗಿ ಬೆಳೆಯಬೇಕು.. ಬೆಳೆಯುತ್ತದೆ.. 

ಸಮಾಜದಲ್ಲಿ ನಡೆಯುತ್ತಿರುವ ಶೋಷಣೆ, ಲೈಂಗಿಕ ದೌರ್ಜನ್ಯ.. ತಾತ್ಸಾರದ ಪ್ರತಿಕ್ರಿಯೆ.. ಅಯ್ಯೋ ಹೌದಾ.. ನಮ್ಮ ಮನೆಯಲ್ಲಿ ಹಾಗಾಗುವುದು ಬೇಡಪ್ಪ ಎಂದು ಸುಮ್ಮನೆ ಬೇಡಿಕೊಳ್ಳದೆ.. ಅದನ್ನು ತೊಡೆದು ಹಾಕಲು ಸಾಧ್ಯವಾಗದಿದ್ದರೂ ಆ ವಿಚಾರಗಳ ಬಗ್ಗೆ ಜನಗಳಲ್ಲಿ ಪ್ರಜ್ಞೆ ಮೂಡಿಸಿ.. ಹೌದು ಇದರ ಬಗ್ಗೆ ತಂದೆ ತಾಯಿಗಳು ಗಮನ ಹರಿಸಬೇಕು ಎನ್ನುವ ಮಟ್ಟಕ್ಕೆ ಕರೆತರುವುದು ನಿಜಕ್ಕೂ ಶ್ಲಾಘನೀಯ ಕ್ರಮ. 

ನಮ್ಮ ಸಮಾಜ ಆಮೆಯಂತೆ ನಿಧಾನವಾಗಿ ಪ್ರಗತಿ ಪರ ಹೆಜ್ಜೆ ಹಾಕುತ್ತಿದೆ ನಿಜಾ .. ಚಂದ್ರ ಮಂಡಲಕ್ಕೆ ಕೈ ಚಾಚಿಯಾಯಿತು, ಮಂಗಳ ಗ್ರಹದಲ್ಲೂ ಹೆಜ್ಜೆ ಇಡಲು ಅನುವಾಗುತ್ತಿರುವ ಸಮಯ ಇದು.. 

ವೇಗ ಮುಖ್ಯವಲ್ಲ ಧೃಡತೆ.. ಆಮೆಯ ಚಿಪ್ಪಿನಂತೆ 

ಆದರೂ ಈ ದೌರ್ಜನ್ಯ, ಶೋಷಣೆ,  ಹಿಂಡಿ ಹಿಪ್ಪೆ ಮಾಡಲು ನಿಂತ ಪೆಡಂಭೂತದಂತ ಸಮಸ್ಯೆಗಳು ಅಷ್ಟಪದಿಯ ಹಾಗೆ ಈ ಸಮಾಜವನ್ನು ತನ್ನ ಕಬಂಧ ಬಾಹುಗಳಿಂದ ಹಿಡಿದಿಟ್ಟುಕೊಳ್ಳುತ್ತಿದೆ. 

ಅಷ್ಟಪದಿ ನಗುತ್ತಿದ್ದರೂ ಅದರ ಬಾಹುಗಳ ಒಳಗೆ ಸಿಕ್ಕಾಗ ನರಳುವುದೇ ದಾರಿ 


ಮನೆಯಲ್ಲಿ ಸೊಳ್ಳೆ ಹೆಚ್ಚಾದರೆ.. ಸೊಳ್ಳೆ ಓಡಿಸುವ ಯಂತ್ರವನ್ನು ಹಾಕಿಕೊಳ್ಳುತ್ತೇವೆ.. 

ಸ್ವಚ್ಛ ಸಮಾಜಕ್ಕಾಗಿ ಬೇಕೇ ಬೇಕು ಸೊಳ್ಳೆಗಳನ್ನು ಓಡಿಸುವ ಯಂತ್ರ 

ಹಾಗೆಯೇ ಈ ಸಮಾಜಕ್ಕೆ ಸೊಳ್ಳೆ ಓಡಿಸುವ ಯಂತ್ರ ಬೇಕು.. ಮತ್ತು ಬೇಕೇ ಬೇಕು.. ಇಂಥಹ ಸಮಯದಲ್ಲಿ ಮೂಡಿ ಬಂದಿರುವ ದನಿಯೇ ಈ "ಜನದನಿ"

ಜನದನಿ.. ದನಿಯ ಜೊತೆಯಲ್ಲಿ ಜನಗಳು !!!


ಆಗಲೇ ಚಿಕ್ಕ ಚಿಕ್ಕ ಹೆಜ್ಜೆ ಇಡುತ್ತಾ ಅನೇಕ ತಮ್ಮ ಸೀಮಿತ ಚೌಕಟ್ಟಿನಲ್ಲಿ ಈ ವಿಷಯಗಳ ಬಗ್ಗೆ ನಾಗರೀಕರಲ್ಲಿ ಪ್ರಜ್ಞೆ ಮೂಡಿಸುವ ಕಾರ್ಯ ನಡೆಸುತ್ತಾ ಬಂದಿರುವ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ ಮೇಡಂ ಅವರು ಇದೆ ಮನಸ್ಸು ಹೃದಯ ಹೊಂದಿರುವ ತಮ್ಮ ಗೆಳೆಯ ಗೆಳತಿಯರ ಜೊತೆಗೂಡಿ ನಿಲ್ಲಿಸಿರುವ ಒಂದು ತಾಣ "ಜನದನಿ"  

ಹೀಗೆ ಅನುಸರಿಸಿದರೆ ಚನ್ನಾ 


ಈ ವಿಚಾರವನ್ನು ನಾಗರೀಕರ ಗಮನಕ್ಕೆ ತರುವ ಒಂದು ಸುಂದರ ಯತ್ನವಾಗಿ ಮೂಡಿ ಬರಲು ಇನ್ನೊಂದು ದಿಟ್ಟ ಹೆಜ್ಜೆ ಇಟ್ಟದ್ದು ಶನಿವಾರ ೨೭ನೆ ತಾರೀಕು ೨೦೧೪ ರಂದು.. ತಮ್ಮ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾಗಿ ಸಕ್ರಿಯರಾಗಿರುವ ಶ್ರೀಮತಿ ರೂಪ ಸತೀಶ್ ಅವರ "ಬ್ಲಾಸಂ" ಎಂಬ ನಾಗರಭಾವಿಯ ಶಾಲೆಯಲ್ಲಿ ಏರ್ಪಡಿಸಿದ್ದ ಒಂದು ಸಂವಾದಕ್ಕೆ ನಾನು ಹೋಗಿದ್ದೆ. 

ರೂಪು ರೇಷೆಗಳು ಸಿದ್ಧವಾಗುತ್ತಿದ್ದವು 

ದಿನ ಪತ್ರಿಕೆಗಳು, ದೃಶ್ಯ ಮಾಧ್ಯಮಗಳಲ್ಲಿ ಬರುವ ವೈಭವಿಕೃತ ಸಮೀಕ್ಷೆ, ಸಂವಾದ ಇವಕ್ಕಿಂತ ಈ ಸಂವಾದ ಹೆಚ್ಚು ವಿಚಾರವನ್ನು, ಗಮನಿಸಬೇಕಾದ ಅಂಶಗಳನ್ನು ಹೊರತಂದಿತು. ಸಂಕಟ ಬಂದಾಗ ವೆಂಕರಮಣ ಎನ್ನುವುದಕ್ಕಿಂತ ಸಂಕಟ ಬರಮಾಡಿಕೊಳ್ಳದೆ ವೆಂಕಟರಮಣ ನಮ್ಮ ರಕ್ಷಣೆಗೆ ನಿಲ್ಲಲಿ ಎನ್ನುವ ಆಶಯ ಹೊತ್ತ ಸಂವಾದ ಕಾರ್ಯಕ್ರಮ ಇದಾಗಿತ್ತು ಎಂದು ಹೇಳಲು ಇಷ್ಟ ಪಡುತ್ತೇನೆ. 

ಜೀವನ ಚಕ್ರ ಚಿತ್ರದಲ್ಲಿ ವಿಷ್ಣು ಹೇಳುತ್ತಾರೆ.. ಹುಡುಗಿ ಬೆಂಕಿನ ಕಡ್ಡಿ ಇದ್ದ ಹಾಗೆ.. ಹುಡುಗ ಬೆಂಕಿ ಪೊಟ್ಟಣ ಇದ್ದ ಹಾಗೆ.. ಬೆಂಕಿ ಹತ್ತಿಕೊಂಡಾಗ ಕಡ್ಡಿ ಉರಿಯುತ್ತದೆ.. ಹಾಳಾಗುತ್ತದೆ ಹೊರತು ಬೆಂಕಿ ಪೊಟ್ಟಣ  ಅಲ್ಲಾ.. ಪರುಷ ಪ್ರಧಾನ ಸಮಾಜವಾದರೂ 
ಸ್ತ್ರಿ, ಮಹಿಳೆ, ಬಾಲಿಕೆ, ಹುಡುಗಿ, ಹೆಂಗಸು ಹೀಗೆ ನಾನಾ ಪದಗಳಲ್ಲಿ ಹೊರಹೊಮ್ಮುವ ಸ್ತ್ರೀಲಿಂಗ ಪ್ರಭೇದವನ್ನು ರಕ್ಷಿಸುವ, ಕಾಪಾಡುವ, ಜತನ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರದು, 

"ನ ಸ್ತ್ರೀ ಸ್ವಾತಂತ್ರಂ ಅರ್ಹತಿ" ಎನ್ನುವ ಮನು ಶಾಸ್ತ್ರದಲ್ಲಿ ಹೇಳಿದ್ದರೂ ಅದೇ ಶಾಸ್ತ್ರದಲ್ಲಿ "ಯತ್ರ ನಾರ್ಯಾಸ್ತು ಪೂಜ್ಯತೇ ರಮಂತೇ ತತ್ರ ದೇವತಾಃ " ಎಂದೂ ಇದೆ. 

ಜನ್ಮ ಕೊಡುವ ತಾಯಿ, ಮಮತೆ ತೋರುವ ಅಕ್ಕ ತಂಗಿ, ಪ್ರೀತಿ ತೋರುವ ವಂಶ ಬೆಳೆಸುವ ಮಡದಿ, ಮನೆ ಬೆಳಗುವ ಸೊಸೆ, ಮಗಳು ಎಲ್ಲವೂ ಸ್ತ್ರೀ ರೂಪದ ಅನೇಕ ವಿಧಗಳು.  

ಗಂಡು ಸಂತಾನವನ್ನು ನಾವು ಹೇಗೆ ಜತನ ಮಾಡುತ್ತೇವೆಯೋ ಹಾಗೆಯೇ ಜನುಮ ಕೊಡುವ, ಸಂತಾನ ಮುಂದೆ ಬೆಳೆಸುವ ಹೆಣ್ಣು ಮಗುವಿಗೂ ಅಷ್ಟೇ ರಕ್ಷಣೆ ಬೇಕು.  ಎರಡು ಪ್ರಭೇದಗಳು ನಮ್ಮ ಎರಡು ಕಣ್ಣುಗಳು ಇದ್ದಾ ಹಾಗೆ ಯಾವುದು ಹೆಚ್ಚಲ್ಲ ಯಾವುದು ಕಡಿಮೆಯಲ್ಲ.. ಒಂದು ಕಣ್ಣು ಇಲ್ಲದೆ ಹೋದರೆ ೯೦ ಡಿಗ್ರಿ ನೋಟ ಕಳೆದು ಕೊಳ್ಳುತ್ತೇವೆ.

ಇಬ್ಬರನ್ನೂ ಸಮಾನಾಗಿ ಜತನ ಮಾಡಬೇಕು. ಎರಡೂ ನಮ್ಮ ಜೀವಗಳೇ ಅಲ್ಲವೇ? ಒಂದು ಸರಿಯಿಲ್ಲದಿದ್ದರೆ ಇನ್ನೊಂದಕ್ಕೆ ಪೆಟ್ಟು ಅಥವಾ ಮೂಗು ಒಂದೇ ಆದರೂ ಅದರಲ್ಲಿನ ಒಂದು ಕಡೆ ಕಟ್ಟಿಕೊಂಡು ಬ್ಲಾಕ್ ಆದರೂ ಇನ್ನೊಂದಕ್ಕೆ ಉಸಿರು ಭಾರ, ತೊಂದರೆ...(ಈ ಮಾತುಗಳನ್ನು  ಹೇಳಿ ಲೇಖನಕ್ಕೆ ಒಂದು ಸುಂದರ ರೂಪ ಕೊಟ್ಟ ಜಯಲಕ್ಷ್ಮಿ ಪಾಟೀಲ್ ಮೇಡಂ ಅವರಿಗೆ ಧನ್ಯವಾದಗಳು)  .  

ಕಟ್ಟುಪಾಡುಗಳನ್ನು ಎರಡು ವರ್ಗಕ್ಕೂ ಸಮಾನವಾಗಿ ಹಾಕಬೇಕು. ಅದೇ ಸ್ವಾಸ್ಥ್ಯ ಸಮಾಜಕ್ಕೆ ನಾವೆಲ್ಲರೂ ಕೊಡುವ ಕೊಡುಗೆ

ಒಂದು  ಸುಂದರ ಜನಪರ ಸಂವಾದ 


ಹೌದು ಇಂಥಹ ಒಂದು ಅಪೂರ್ವ ವಿಷಯವನ್ನು ಮನತಾಕುವಂತೆ ವಿವರಿಸಿದ ಶ್ರೀಮತಿ ಜಯಲಕ್ಷ್ಮಿ ಪಾಟೇಲ್, ಅವರಿಗೆ ಸಂವಾದದಲ್ಲಿ ಸಹಕರಿಸಿದ "ಜನದನಿ" (ದನಿ ಇದ್ದವರೆಲ್ಲರೂ ಜನದನಿಯ ತಂಡದವರೇ) ತಂಡದ ಆತ್ರಾಡಿ ಸುರೇಶ ಹೆಗಡೆ, ಸುಪ್ರೀತ್, ಸುಧೀರ್, ನಾಗಾರ್ಜುನ್, ಸಂಯುಕ್ತ , ಮೇಘ, ವಿನಯ್ ಇವರೆಲ್ಲರಿಗೂ ಮನಸಾರೆ ವಂದಿಸುತ್ತೇನೆ ಈ ಬರಹದ ಮೂಲಕ.  ಇದರ ಜೊತೆಯಲ್ಲಿ ಇಡಿ ಕಾರ್ಯಕ್ರಮವನ್ನು ಆಯೋಜಿಸಿ ಸಹಕರಿಸಿದ ರೂಪ ಸತೀಶ್ ಮತ್ತು ಅವರ ತಂಡಕ್ಕೆ ಧನ್ಯವಾದಗಳು. 
ಮೊಳಗಲಿ, ಬೆಳಗಲಿ ಜನದನಿಯ ಧ್ವನಿಯು ಮಾರ್ಧನಿಯಾಗಲಿ.. !!!

ಮೊಳಗಲಿ, ಬೆಳಗಲಿ ಜನದನಿಯ ಧ್ವನಿಯು ಮಾರ್ಧನಿಯಾಗಲಿ.. !!!

8 comments:

  1. Sri,
    very well expressed :) bahala ishtavaaythu

    ReplyDelete
  2. dani moLaguttale irali.. yaavude kaaraNakkoo kheeNavaagadirali..

    ReplyDelete
  3. Kudos to Mrs. Jayalakshmi Patel and all the supporters behind the Janadani to start this great initiative to make people aware about making everybody aware to re-instate the respect towards women. We should urge to spread this to as many in each and every circle to unite and show and if there are any incidents seen should immediately voice against and unite and fight.

    ReplyDelete