Tuesday, April 8, 2014

"ಸವಿ" ನೆನಪುಗಳು ಬೇಕು "ಸವಿ"ಯಲಿ ಬದುಕು

ನನಗೆ ಮತ್ತು ರಾಜನಿಗೆ ತುಂಬಾ ಇಷ್ಟವಾದ ಪುಟ್ಟಣ್ಣ ಅವರ ಸಿನಿಮಾ ನಾಗರಹಾವು.. ಯಾಕೋ ಗೊತ್ತಿಲ್ಲ ಆ ಸಿನಿಮಾದಲ್ಲಿ ಶಿವರಾಂ ಪಾತ್ರ ಪ್ರತಿ ಸಂಭಾಷಣೆಗೂ ಸ್ಪೆಷಾಲಿಟಿ ಅಂತ ಸೇರಿಸ್ತಾ ಇರ್ತಾರೆ..

ಆ ಸಿನಿಮಾ ಎಷ್ಟು ಬಾರಿ ಬಂದರೂ ಕೆಲವು ದೃಶ್ಯಗಳಿಗಾಗಿ ಪದೇ ಪದೇ ನೋಡುತ್ತಿರುತ್ತೇನೆ.. ಒಂದು ರಾಜನ ನೆನಪಲ್ಲಿ.. ಇನ್ನೊಂದು ಪುಟ್ಟಣ್ಣ ಅವರ ಚಿತ್ರಗಳ ಗುಂಗಿನಲ್ಲಿ... 

ಅರೆ ಇದೇನೂ.. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯುತ್ತಿದೆ ಅಂದ್ರಾ.. ಹಾಗೇನು ಇಲ್ಲ 

ನಮ್ಮದು ಒಂಥಾರ ಸ್ಪೆಷಾಲಿಟಿ.. 

ಎಂಟರ ನಂಟು ಬಿಡಿಸಲಾರದ ಗಂಟು ನಂಟು ಅನ್ನುತ್ತಾರೆ.. ನನ್ನ ಜೀವನದಲ್ಲಿ ಎಂಟು ಹೇಗೋ ಬಂದು ಆಟಕಾಯಿಸಿಕೊಳ್ಳುತ್ತದೆ.. 

ಹಿರಿಯರೆಲ್ಲ ಸಮಯ, ದಿನಾಂಕ ಗುರುತು ಮಾಡುತ್ತಿದ್ದರು. ನಾನು ಲೆಕ್ಕ ಪತ್ರದ ವಿಭಾಗದ ಕೆಲಸವಾಗಿದ್ದರಿಂದ ಮಾರ್ಚ್ ದಿನಾಂಕಗಳನ್ನು ಸಾರಾ ಸಗಟು ನಿರಾಕರಿಸಿ ಬಿಟ್ಟೆ.. ಜೂನ್ ಅಂದ್ರು...  ಅಲ್ಲಿ ತನಕ ಕಾಯುವ ತಾಳ್ಮೆ ಇರಲಿಲ್ಲ.. )..

ಏಪ್ರಿಲ್ ಅಂದ್ರೂ ಮನಸ್ಸು ಹಾರಾಡುತ್ತಿತ್ತು.. ದಿನಾಂಕ ಅಂದೇ... ಎಂಟು ಅಂದ್ರು.. ಹಿಡಿದದ್ದೇ ಗಬಕ್ ಅಂತ.. 

ಎಂಟು ಓಕೆ ಓಕೆ.. ಗೊತ್ತು ಮಾಡಿಬಿಡಿ ಅಂದೇ..  :-)

ಹೀಗೆ ನನ್ನ ಜೀವನದಲ್ಲಿನ ಎಂಟು ಅಂಕೆಯ ಬಗ್ಗೆ ಬರೆಯುತ್ತಾ ಹೋದರೆ.. ಬಿಡಿ.. ನಿಮಗೆ ತಲೆ ಬಿಸಿ ಬರುತ್ತದೆ.. ಈಗ ವಿಷಯಕ್ಕೆ ಬರೋಣ.. 

ಏಪ್ರಿಲ್ ಏಳಕ್ಕೆ ಛತ್ರಕ್ಕೆ ಹೋದೆವು.. ಬೇರೆಯವರ ಮದುವೆಗೆ ಓಡಾಡಿ.. ಅಣ್ಣಾವ್ರ "ಅಲ್ಲಿ ಇಲ್ಲಿ ನೋಡುವೆ ಏಕೆ" ಅನ್ನುತ್ತಾ "ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು" ಅಂತ ಬಂದ, ಕಂಡವರನ್ನೆಲ್ಲ ಕಣ್ಣಲ್ಲೇ ನೋಡುತ್ತಾ ಖುಷಿಸುವ ಮನ ನಮ್ಮ ಮದುವೆಯಲ್ಲಿ ಇರೋಲ್ಲ.. ಗೂಬೆಯ ತರಹ ಹಸೆ ಮಣೆಯ ಮೇಲೆ ಕೂತೆ.. ಛತ್ರದಲ್ಲಿದ್ದ ನೂರಾರು ಕಣ್ಣುಗಳು ನನ್ನ ಕ್ಷ ಕಿರಣಗಳಿಂದ ಅಳೆಯುತ್ತಿದವು.. 

ಕೆಲವರು ಅಯ್ಯೋ ಕಪ್ಪು ಬಿಳುಪು ಟಿ ವಿ ಅಂದರೆ.... ಇನ್ನು ಕೆಲವರು ನರಸಿಂಹರಾಜು ಎಲ್ಲಿ ಅಂತ ಕೇಳೋದೇ ಬೇಡ.. ಮಹಾಲಕ್ಷ್ಮಿ ಆಂಜನೇಯನ  ದೇವಸ್ಥಾನಕ್ಕೆ ಹೋಗೋದೇ ಬೇಡ.. ಹೀಗೆ ರಾಕೆಟ್ಗಳು ಹಾರುತ್ತಿದ್ದವು.. ಸ್ವಲ್ಪ ಸ್ವಲ್ಪ ನಮ್ಮ ಕಿವಿಗೂ ಬೀಳುತ್ತಿದ್ದವು.. 

ನನ್ನ ಸಿದ್ದಾಂತ ಒಂದೇ ಜೀವನದಲ್ಲಿ ಪುರುಸೊತ್ತಾಗಿದ್ದಾಗ ಈ ಮದುವೆ ಕಾರ್ಯ ಆಗಿಬಿಡಬೇಕು.... :-)  ಯಾಕೆ ಅಂದ್ರೆ ಮದುವೆ ಎನ್ನುವ ಕೆಲಸ ಮುಂದೆ ಹಾಕಿದಷ್ಟು ಸಮಸ್ಯೆಯನ್ನು ಹಿಂದಕ್ಕೆ ಎಳೆದುಕೊಂಡು ಬರುತ್ತಿರುತ್ತೇವೆ .. ಹೆಂಗೆ ನನ್ನ,,,,,,,, :-)

ಸರಿ ಭಾನುವಾರ ವ(ವಾನ)ರ ಪೂಜೆ ಆಯಿತು.. ಬೆಳಿಗ್ಗೆ ಸೋಮವಾರ ಧಾರೆ.. ತಲೆಗೆ ಬಿಗಿಗಿದ್ದ ಪೇಟ ತಲೆ ನೋವು ಕೊಡುತ್ತಿತ್ತು.. ಬೆಳಿಗ್ಗೆ ಕಾಫಿ ಸರಿಯಾಗಿ ಬಿದ್ದಿರಲಿಲ್ಲ.. ತಿಂಡಿ ಸರಿಯಾಗಿ ತಿಂದಿರಲಿಲ್ಲ (ಹೆಂಗೆ ತಿನ್ನೋಕೆ ಆಗುತ್ತೆ ನೀವೇ ಹೇಳಿ).. 

ಮಧ್ಯಾನ್ಹ ಆದರೂ ಶಾಸ್ತ್ರಗಳು ಮುಕ್ತಾಯ ಹಂತಕ್ಕೂ ಬಂದಿರಲಿಲ್ಲ.. ಭೂಮ ಸಿದ್ಧವಾಯಿತು.. ಆರು ಬಾಲಿನಲ್ಲಿ ಆರು ರನ್ ಬೇಕಾದರೆ ಇಡಿ ಕ್ರೀಡಾಂಗಣದಲ್ಲಿ ಎಲ್ಲರ ಕಣ್ಣುಗಳು ಪಿಚ್ ಮೇಲೆ ಇರುತ್ತದೆ ಅಲ್ಲವೇ.. ಹಾಗೆ ಭೂಮದೂಟದಲ್ಲಿ ನಮ್ಮ ಸುತ್ತಾ ಸುಮಾರು ಐವತ್ತು ಅರವತ್ತು ಮಂದಿ.. ವೀ ವಾಂಟ್ ಫೋರ್ .. ವೀ ವಾಂಟ್ ಸಿಕ್ಸರ್ ಅನ್ನುವ ಹಾಗೆ.. ಅದು ತಿನ್ಸು ಇದು ತಿನ್ಸು ಅಂಥಾ ಬೊಬ್ಬೆಇಡುತ್ತಿದ್ದರು .. 

ನನಗೆ ಬಿಟ್ಟಿದ್ದರೆ ಎಲ್ಲರಿಗೂ ಸರಿಯಾಗಿ ತಿನ್ನಿಸುವ ಕೋಪ ಇತ್ತು.. ಮೊದಲೇ ಹೊಟ್ಟೆ ಹಸಿವು(?).. ಜೊತೆಯಲ್ಲಿ ಬೆಳಿಗ್ಗೆ ಇಂದ.. ನನ್ನ ತಲೆಗಾಗದ ಪೇಟವನ್ನು ಬಲವಂತವಾಗಿ ಹಾಕಿ ತಲೆ ಮೇಲೆ ಬೇರೆ ಒಂದು ಬಿಟ್ಟಿದ್ದರು ಸರಿಯಾಗಿ ಪೇಟ ಕೂರಲೆಂದು.. ಅಸಾಧ್ಯ ತಲೆನೋವು.. ಹೊಟ್ಟೆ ಹಸಿವು.. ಹೋಮದ ಹೊಗೆ.. ನೂರಾರು ಕಣ್ಣುಗಳು ಬಿದ್ದು ದೃಷ್ಟಿಯಾಗಿದ್ದು (ಕಾಗೆಗೆ ದೃಷ್ಟಿಯೇ).. ಬಿಟ್ಟರೆ ಛತ್ರದಿಂದ ಓಡಿ ಹೋಗುವ ಆಸೆ.. 

ಹಾಗೂ ಹೀಗೂ ಭೂಮ ಮುಗಿಯಿತು.. ನಾನು ಮೊದಲು ಹೊಟ್ಟೆ ತುಂಬಾ ಊಟ ಮಾಡಿದ ನಂತರವೇ.. ಅಲ್ಲಿ ನೆರೆದಿದ್ದ ಅಭಿಮಾನಿ ದೇವರುಗಳ ಆಸೆ ಇಡೇರಿಸಿದ್ದು.. 

ಸರಿ ಸಂಜೆ ಆರತಕ್ಷತೆ... ಬೆಳಿಗ್ಗೆಯಿಂದ ಕೂತು ಕೂತು ಕಾಲುಗಳು ಬಾತುಕೊಂಡಿದ್ದರೆ .. ಸಂಜೆ ನಿಂತು ನಿಂತು.. ಕಾಲು ನೋಯುತ್ತಿತ್ತು.. ರಾತ್ರಿ ಹತ್ತೂವರೆ ಹನ್ನೊಂದು ಘಂಟೆಯ ತನಕ ನಡೆದ ಈ ಕಾರ್ಯಕ್ರಮ.. ಕಡೆಯಲ್ಲಿ ಸುಮಾರು ಹನ್ನೊಂದು ಘಂಟೆಗೆ.. ಛಾಯಾಚಿತ್ರಕಾರ.. (ಬಹುಷಃ ಹಿಂದಿನ ಜನ್ಮದಲ್ಲಿ ಅವನನ್ನು ಗೋಳಾಡಿಸಿದ್ದೆ ಅನ್ನಿಸುತ್ತೆ).. ಸರ್ ಸ್ವಲ್ಪ ನಕ್ಕು ಬಿಡಿ.. ಸಾರ್ ಅಷ್ಟೊಂದು ಹಲ್ಲು ಬೇಡ ಒಂದೆರಡು ಹಲ್ಲುಸಾಕು .. ಮೇಡಂ ನೀವು ಸರ್ ಭುಜದ ಮೇಲೆ ಕೈ ಹಾಕಿ.. ಹಾಗೆ .. ಹಾಗೆ ಇರೀ.. ನನಗೆ ಒಳಗೆ ಜ್ವಾಲಮುಖಿ.. ಆದ್ರೆ ಮುಖ ಮಾತ್ರ ಚಂದ್ರ(ಕಾಗೆ)ಮುಖಿ ಮಾಡಿಕೊಂಡು.. ಕೆಟ್ಟ ಕೆಟ್ಟದಾಗಿ ನಗುತ್ತಾ ಚಿತ್ರಗಳ ಮೆರವಣಿಗೆ ಮುಗಿಯಿತು.. 

"ಸಾರ್.. ವಿವಾಹ ಜೀವನ ಆನಂದಮಯವಾಗಿರಲಿ..ನಾನು ಬರುತ್ತೇನೆ ಸರ್"  ಅಂತ ಫೋಟೋಗ್ರಾಫರ್ ಹೇಳಿದಾಗ ನಾನು 

"ಗುರುಗಳೇ.. ನಿನ್ನೆಯಿಂದ ಗೋಳು ಹುಯ್ದು ಕೊಂಡಿದ್ದೀರ.. ಕೊಡಿ ಕ್ಯಾಮೆರ.. ನಾನು ನಿಮ್ಮ ಕೆಲವು ಫೋಟೋ ತೆಗೀತೀನಿ.. ಹಲ್ಲು ಬಿಡಿ.. ಅಷ್ಟೇ ಸಾಕು.. ಎರಡು ಹಲ್ಲು.. ಕೈ ಮೇಲೆ ಎತ್ತಿ  ಅಂತ.. ಪ್ರಾಣ ತಿಂದ್ರಲ್ಲ ಬನ್ನಿ" ಅಂತ ಕೈ ಎಳೆಯಲು ಶುರುಮಾಡಿದೆ.. 

ಗಾಬರಿ ಬಿದ್ದ ಆವಾ.. ಇಲ್ಲಾ ಸರ್.. ಹಾಗೇನು ಇಲ್ಲ.. ಹಿ ಹಿ" ಅಂತ ದೇಶಾವರಿ ನಗೆ ನಕ್ಕ..

ನಾ ಬಿಡಲಿಲ್ಲ.. ಬಲವಂತ ಮಾಡಿದೆ.. ಕಡೆಗೂ ಆ ಛಾಯಚಿತ್ರಕಾರನನ್ನು ಕರೆದು ಅವರ ಜೊತೆಯಲ್ಲಿ ನಿಂತು.. "ಈಗ ನಗ್ರಿ ಸರ್.. ನಾಲ್ಕು ಹಲ್ಲು ಬೇಡ ಕೇವಲ ಅರ್ಧ ಹಲ್ಲು ಸಾಕು.. ಮುರಿದ್ದಿದ್ದರು ಚಿಂತೆಯಿಲ್ಲ.. ಅಂತ ಜೋತು ಬಿದ್ದು ತೆಗೆಸಿಕೊಂಡೆ ಬಿಟ್ಟೆವು ಅವರ ಜೊತೆಗೆ ಚಿತ್ರವನ್ನು.. 

ಫೋಟೋಗ್ರಾಫರ್ ಗೆ ಫೋಟೋ!!! 


ಸರ್ ಇದುವರೆಗೂ ಯಾವುದೇ ಸಮಾರಂಭದಲ್ಲಿ ಹೀಗೆ ಆಗಿರಲಿಲ್ಲ.. ನೀವೇ ಫಸ್ಟ್ ಅಂದ್ರು.. 

ಹೌದು ಗುರುಗಳೇ... ಊರಿಗೆ ದಾರಿ ಆದ್ರೆ ಎಡವಟ್ಟನಿಗೆ ಒಂದು ದಾರಿ.. 

ಇಂತಹ ಒಂದು ಚಿತ್ರ ತೆಗೆಸಿಕೊಂಡು ಇಂದಿಗೆ ಹನ್ನೆರಡು  ವರ್ಷವಾಯಿತು.. 

ಎದೆ ತುಂಬಿ ಹಾಡುತ್ತೇನೆ.. "ಸವಿ" ನೆನಪುಗಳು ಬೇಕು "ಸವಿ"ಯಲಿ ಬದುಕು!!!!
........ ...... 
........ ...... 
........ ...... 
........ ...... 
........ ...... 
........ ...... 
........ ...... 
........ ...... 
........ ...... 
ಅಂದ ಹಾಗೆ ಸವಿತಾ ನಿಕ್ ನೇಮ್ ಅವರ ಅಮ್ಮನ ಮನೆಯ ಕಡೆಯಲ್ಲಿ "ಸವಿ"!!!!!!!
   

25 comments:

  1. ಪ್ರೀತಿಯ ಅಣ್ಣ ಅತ್ತಿಗೆಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು ಮೊದಲಿಗೆ.
    ಬದುಕ ಭಾವಗಳೆಲ್ಲವೂ ಪದವಾಗಿ ಹರಿದಾಗ ..ಹೀಗೊಂದು ಭಾವವಾಗುತ್ತೇನೊ.
    ಭಾವವ ಓದಿ ನಾನೂ ಇದ್ದಿದ್ದೆ ಅವತ್ತು ಇಲ್ಲಿ ಅನ್ನಿಸಿಬಿಡ್ತು ನಂಗೆ...

    ಆದದ್ದು ಬರಿಯ ಐದು ಭೇಟಿ...ಸಿಕ್ಕಿದ್ದು ಬದುಕ ತುಂಬಾ ಆಗೋವಷ್ಟು ಪ್ರೀತಿ ಆತ್ಮೀಯತೆ..ಉಳಿಸಿಕೊಂಡಿದ್ದು ಮನೆ ಮಗಳ ಸ್ಥಾನ.
    ಇಲ್ಲೊಂದಿಷ್ಟು ನಮ್ಮದನ್ನೋ ಖುಷಿಗಳಿವೆ.
    ಖುಷಿಯ ಅಲೆಗಳಾಗಿ ಪಾದ ತೋಯಿಸೋ ಹೋಗೋ ಆತ್ಮೀಕ ಭಾವಗಳಿಗೆ ಪ್ರತಿ ಬಾರಿಯೂ ಕಾರಣವಾಗೋ ಈ ಪ್ರೀತಿಗಳಿಗೆ ನಮಿಸಿ...
    ಇರಲಿರಲಿ ಈ ಪ್ರೀತಿ ಚಿರಕಾಲ ಹೀಗೆ.

    ನೆನಪುಗಳೆಲ್ಲಾ ಸವಿಯಾಗಿ ...ಖುಷಿಗಳಿರಲಿ ಬದುಕ ತುಂಬಾ.
    ಇಷ್ಟವಾಯ್ತು ಬೆಸೆದಿರೋ ಭಾವಬಂಧ :)
    ಪ್ರೀತಿಯಿಂದ.

    ReplyDelete
    Replies
    1. ಎಲ್ಲರೂ ಹೇಳುತ್ತಾರೆ ... ಶ್ರೀ ನಿಮ್ಮ ಮಾತುಗಳು ಕೇಳಿದ ಮೇಲೆ ಮಾತೆ ಹೊರಡೋಲ್ಲ ಅಂಥಾ.. ಇಲ್ಲ ಮಗಳೇ ನಿನ್ನ ಮಾತುಗಳು.. ನಿನ್ನ ಅಭಿಮಾನ ಕಂಡ ಮೇಲೆ ನಾ ಮೂಕನಾಗಿಬಿಟ್ಟಿದ್ದೇನೆ.. ತುಂಬಾ ಸುಂದರ ಮನಸ್ಸು ನಿನ್ನದು.. ಅದಕ್ಕೆ ನನ್ನ ಮನೆ ನನ್ನ ಮನ ಹತ್ತಿರವಾಗಿದೆ. ಮೊದಲ ಭೇಟಿಯಲ್ಲೇ ನಿನ್ನಲ್ಲಿ ನಾ ಶೀತಲ್ ನ ಕಂಡೆ.. ಎರಡನೇ ಮಗಳಾದರೂ ನೀನೆ ನನ್ನ ದೊಡ್ಡ ಮಗಳು..

      ನಿನ್ನ ಪ್ರೀತಿಗೆ ನಾ ಮನಸಾರೆ ವಂದಿಸುವೆ.. ಹಾಗೆಯೇ ನನ್ನ ಮಗಳ ಎಲ್ಲಾ ಆಸೆಗಳು ಕೈಗೂಡುತ್ತವೆ ಎಂದು ಆಶೀರ್ವದಿಸುತ್ತೇನೆ..

      Delete
  2. ಓಹ್...ಓಹ್..ಓಹ್...ಮಿಸ್ ಆಯ್ತು...
    ಈಗ್ಲಾದ್ರೂ ಶುಭ ಕೋರದೇ ಇದ್ರೆ...ಪಾಪಿ ಆಗ್ತೀನಿ..
    ಶ್ರೀಮತಿ ಶ್ರೀ ಶ್ರೀಕಾಂತ್ ಮಂಜುನಾಥ್ ಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.

    ReplyDelete
    Replies
    1. ಅಜಾದ್ ಸರ್ ಜೀವನವನ್ನು ನಗುತ್ತಾ ಹೇಗೆ ಸ್ವೀಕರಿಸಬೇಕು ಎನ್ನುವುದಕ್ಕೆ ನೀವು ಅತ್ಯಂತ ಉತ್ತಮ ಉದಾಹರಣೆ. ನಿಮ್ಮ ಆಶೀರ್ವಾದ ತುಂಬಿದ ಹಾರೈಕೆ ಪಡೆದ ನಾವೇ ಧನ್ಯಾ.. ನಿಮ್ಮನ್ನು ಇಷ್ಟು ವರ್ಷ ಭೇಟಿ ಆಗದಿದ್ದ ನಾ ಪಾಪಿ... :-)

      ಸುಂದರ ಶುಭಾಶಯಗಳಿಗೆ ಮನಸಾರೆ ವಂದಿಪೆನು.. ಧನ್ಯೋಸ್ಮಿ ಸರ್ಜಿ

      Delete
  3. ನಗುವಿನ ನಡುವೆ ನಿಮಗೆ ಹಾಗು ಮೇಡಂ ಸವಿತಾ ಅವರಿಗೆ ವಿವಾಹ ವಾರ್ಷಿಕೋತ್ಸವದ ಹೃದಯ ಪೂರ್ವಕ ಶುಭಾಶಯಗಳು. ನಿಮ್ಮ ನೆನಪಿನ ಬುತ್ತಿ ಓದುತ್ತಾ , ಕಲ್ಪನೆಯಲ್ಲೇ ನಿಮ್ಮ ಮದುವೆಯ ಚಿತ್ರಣ ನೆನಸಿಕೊಂಡೆ , ಈಗ ಇಷ್ಟು ತುಂಟಾಟ ಮಾಡುವ ಶ್ರೀಕಾಂತ್ , ಆಗ ಹೇಗಿದ್ದೀರ ಬಹುದು ಎಂಬ ಅಂದಾಜು ಸಿಕ್ಕಿತು, ಜೋರಾಗಿ ನಗು ಬಂತು, ಹುಡುಗಾಟದ , ತುಂಟ ಶ್ರೀಕಾಂತ್ , ತುಂಟಾಟ ಸೆರೆಹಿಡಿಯುವ ಭಾಗ್ಯ ನಮಗೆ ಸಿಕ್ಕಿದ್ದರೆ ಎಂದು ಅಂದುಕೊಂಡೆ ಪಕ್ಕದಲ್ಲೇ ಇದ್ದ ನನ್ನ ಕ್ಯಾಮರ ಸಿಗುತ್ತಿದ್ದ ರಸಕವಳ ನೆನೆದು ಜೊಲ್ಲು ಸುರಿಸಿತು. ಏನೇ ಆಗ್ಲಿ ಶ್ರೀಕಾಂತ್ ನಿಮ್ಮ ನವಿರು ಹಾಸ್ಯ ಪ್ರಜ್ಞೆ ಬಹಳ ಜಾಗ್ರತೆ ಆಗಿರುತ್ತೆ ಯಾವಾಗಲು, ಬರವಣಿಗೆಯನ್ನು ಓದುವಂತೆ ಪ್ರೇರಣೆ ನೀಡುವ ತಾಕತ್ತು ನಿಮ್ಮ ಬರವಣಿಗೆಗೆ ಇದೆ. ರಂಗನಾಥ ಸ್ವಾಮಿಗೆ ಲ್ಯಾಪ್ಟಾಪ್ ಕೊಟ್ಟು ಎಬ್ಬಿಸುವ ಶ್ರೀಕಾಂತ್ ಗೆ ತನ್ನ ಮದುವೆಯ ಫೋಟೋ ತೆಗೆದ ಫೋಟೋಗ್ರಾಫರ್ ನ ಫೋಟೋ ತೆಗೆದು ಅವನನ್ನು ಬೆಚ್ಚಿ ಬೀಳಿಸುವ ತಾಕತ್ತೂ ಇದೆ . ನೆನಪಿನ ಬುಟ್ಟಿಯಿಂದ ಬೊಂಬಾಟ್ ಭೋಜನ ನೀಡಿದ ನಿಮಗೆ ಮತ್ತೊಮ್ಮೆ ಶುಭಾಶಯಗಳು . ನಿಮ್ಮ ದಾಂಪತ್ಯದ ಸವಿ ಜೀವನ ಸವಿತಾ ಮೇಡಂ ಹಾಗು ಶೀತಲ್ ಜೊತೆಗೆ ಸುಖಮಯವಾಗಿರಲಿ .

    ReplyDelete
    Replies
    1. ಹ ಹ ... ಸೂಪರ್ ಸರ್ಜಿ.. ಮನಸ್ಸಲ್ಲಿ ಹೇಳಿದ್ದು ಬರೆದದ್ದು ಎಲ್ಲವೂ ಸೇರಿಸಿ ಒಮ್ಮೆಲೇ ಹೇಳಿಬಿಟ್ಟಿದ್ದೀರ.. ನಿಮ್ಮ ವಿಸ್ತಾರವಾದ ಪ್ರತಿಕ್ರಿಯೆ ಮನ ತುಂಬಿತು.

      ನಗುತ್ತಿರಬೇಕು.. ನಲಿಯುತ್ತಿರಬೇಕು..ಹೀಗೆ ಸಾಗುತ್ತಿರಬೇಕು ಎನ್ನುವ ಹಂಬಲಕ್ಕೆ ಬೆಂಬಲವಾಗಿ ನಿಂತವರು ನೀವೆಲ್ಲಾ.. ಖುಷಿಯಾಗುತ್ತದೆ ಇಂತಹ ಭಾವ ಪೂರಿತ ಮಾತುಗಳಿಂದ

      ಮನಸಾರೆ ಧನ್ಯವಾದಗಳು ಸರ್ಜಿ

      Delete
  4. Sri, Savi :) Happy Anniversary.....
    One remain humble and grounded when he makes fun of himself :) Sri, you are one such soul. May God Bless You Both With Loads of Happiness & Togetherness Always :)

    ReplyDelete
    Replies
    1. ಡಿ ಎಫ್ ಆರ್.. ತುಂಬು ಹೃದಯದ ನಿಮ್ಮ ವಿಶ್ವಾಸಕ್ಕೆ ಹಾರೈಕೆಗೆ ಚಿರ ಋಣಿ.. ಸರಸ್ವತಿ ಲೋಕದಲ್ಲಿ ಎಲ್ಲರು ಒಂದು ಸುಂದರ ಮನವುಳ್ಳವರು ಎನ್ನುವ ಮಾತು ನಿಮ್ಮನ್ನೆಲ್ಲ ನೋಡಿದ ಮೇಲೆ ತಿಳಿಯುತ್ತದೆ..

      ಸೂಪರ್ ಪ್ರತಿಕ್ರಿಯೆ ಹಾರೈಕೆ ಧನ್ಯವಾದಗಳು

      Delete
  5. "ಮದುವೆಯ ಈ ಬಂಧ......,ಅನುರಾಗದ ಅನುಬಂಧ !!! ಏಳೇಳು ......ಜನುಮದಲೂ ,.....ತೀರದ ಸಂಬಂಧ !!!! ". ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು :-)

    ReplyDelete
    Replies
    1. ಡಾಕ್ಟ್ರೆ ನಿಮ್ಮ ಹಾಡುಗಾರಿಕೆ ಮನಸ್ಸು.. ಮಗುವಿನ ಹೃದಯ.. ಸ್ನೇಹಕ್ಕೆ ಮಿಡಿಯುವ ಅಂತಃಕರಣ ಇವುಗಳಲ್ಲಿ ನಾ ಸಿಕ್ಕಿ ನಲಿಯುತ್ತಿದ್ದೇನೆ. ಸುಂದರ ಮನಸ್ಸುಳ್ಳ ನಿಮ್ಮ ಮಾತುಗಳು ಹಾಡಿನಷ್ಟೇ ಮಧುರ. ನಿಮ್ಮ ಹಾಡಿನ ಹಾರೈಕೆಗೆ ಧನ್ಯವಾದಗಳು

      Delete
  6. ನೂರು ಕಾಲ ನಗು ನಗುತಾ ಬಾಳಿರಿ...
    ವಿವಾಹ ವಾರ್ಷಿಕೋತ್ಸವ ಶುಭಾಷಯಗಳು.
    ಮದುವೆ ಫೋಟೋದಷ್ಟೇ ತಾರುಣ್ಯತೆ ನಿಮ್ಮಿಬ್ಬರಲ್ಲೂ ನೂರಾರು ವರ್ಷ ದ್ವಿಗುಣಿಸುತ್ತಲೇ ಇರಲಿ.

    ReplyDelete
    Replies
    1. ಗೆಳೆತನ ಒಂದು ಗಂಧ ಕೊರಡು ಇದ್ದ ಹಾಗೆ.. ಅದರ ಜೊತೆ ಬೆರೆತಷ್ಟು ಸುವಾಸನೆ ಹೆಚ್ಚು. ಸುಂದರ ಪ್ರತಿಕ್ರಿಯೆ ನಿಮ್ಮದು ಧನ್ಯವಾದಗಳು ಬದರಿ ಸರ್

      Delete
  7. Wishing you happiness and togetherness today and always.

    ReplyDelete
  8. ಫೋಟೋ ಗ್ರಾಫರ್ ಪ್ರಸಂಗಕ್ಕೆ ಬಿದ್ದು ಬಿದ್ದು ನಗುತ್ತಿದ್ದೇನೆ...
    ನಿಮ್ಮ ಹಾಸ್ಯ ಪ್ರಜ್ಞೆಗೆ ನನ್ನದೊಂದು ಸಲಾಂ...

    ಅಣ್ಣಾ ಅತ್ತಿಗೆಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು..
    ವಿವಾಹದ ಬಂಧನದ "ಸವಿ"ಯನ್ನು ಹೀಗೆ ಸವಿಯುತ್ತಿರಿ..

    ReplyDelete
    Replies
    1. ಇವತ್ತಿಗೂ ಮದುವೆ ಸಮಾರಂಭಗಳಲ್ಲಿ ವದು ವರರನ್ನು ಛಾಯ ಚಿತ್ರಕಾರರು ಗೋಳು ತಿಂತಾ ಇರುವುದನ್ನು ನೋಡಿದಾಗೆಲ್ಲ ನನ್ನ ಮದುವೆ ನೆನಪಿಗೆ ಬರುತ್ತದೆ..

      ನಿನ್ನ ಹಾರೈಕೆಗೆ ಧನ್ಯವಾದಗಳು ಪಿ ಎಸ್

      Delete
  9. ಶುಭಾಶಯಗಳು ಶ್ರೀಕಾಂತ್ ಭಾಯ್.

    ReplyDelete
    Replies
    1. ಹೆಸರಲ್ಲೇ ಬಂಗಾರ ಇರುವ ನೀವು.. ನಿಮ್ಮ ಹಾರೈಕೆ ನೀಡಿದಾಗ ಇನ್ನಷ್ಟು ಹೊಳಪು ಮೂಡುತ್ತದೆ ಸಹೋದರಿ. ಧನ್ಯವಾದಗಳು

      Delete
  10. ಖುಷಿಯಾಗಿರಿ ಅಣ್ಣ....

    ಸರಸ ಸಂಗೀತವಾಗಲಿ ಬದುಕಲ್ಲಿ..
    ವಿಧಾತನ ಆಶಿರ್ವಾದ ಸದಾ ಇರಲು...
    ತಾ ಬರಲಿ ಖುಷಿ ಮನೆಮನಗಳಲ್ಲಿ....

    ReplyDelete
    Replies
    1. ಕನ್ನಡಿ ಬಿಂಬ ನೀನು ಎಸ್ ಪಿ.. ಸುಂದರ ಶುಭಾಶಯಗಳಿಗೆ ನನ್ನ ಮನದಾಳದ ಧನ್ಯವಾದಗಳು

      Delete
  11. Srikanth Sir belated Anniversary wishes... Super situation! nimma blog writings thara maduve photo nu different aagide! many many happy returns of the day.

    ReplyDelete
    Replies
    1. ಸುಂದರ ನಗುವಿನ ಸರದಾರ.. ಪ್ರೇಮ ಕವಿತೆಗಳ ಯಜಮಾನ. ಸುಂದರ ಚಿತ್ರಗಳ ಒಡೆಯ. ನಿಮ್ಮಿಂದ ಹರಿದು
      ಶುಭಾಶಯಗಳ ಸಂದೇಶ ಇನ್ನಷ್ಟು ಜೀವನವನ್ನು ಹಸಿರು ಮಾಡಲು ಸಹಕಾರಿ.. ಧನ್ಯವಾದಗಳು ಪ್ರದೀಪ್

      Delete
  12. ಶ್ರೀಕಾ೦ತ್ ರವರೇ ನಿಮಗೂ ನಿಮ್ಮ ಶ್ರೀಮತಿಯವರಿಗೂ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು(ತಡವಾಗಿ). ವಿವಾಹ ಸಮಾರ೦ಭದ ಅ೦ತ್ಯದಲ್ಲಿ ಛಾಯಚಿತ್ರಕಾರರ ಫೋಟೋ ನೇ ತೆಗೆದ ಪ್ರಸ೦ಗವನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದೀರಿ, ಅಭಿನ೦ದನೆಗಳು.

    ReplyDelete
    Replies
    1. ಧನ್ಯವಾದಗಳು ಪ್ರಭಾಮಣಿ ಮೇಡಂ. ನಿಮ್ಮ ಹಾರೈಕೆ ನೂರಾನೆ ಬಲ ಬರುತ್ತದೆ. ನನ್ನ ಲೋಕಕ್ಕೆ ಬಂದು ಹರಸಿದ ನಿಮ್ಮ ಸುಮಧುರ ಪದಗಳಿಗೆ ನನ್ನ ಮತ್ತು ನನ್ನ ಮನೆಯವರ ಧನ್ಯವಾದಗಳು

      Delete
  13. ಭರ್ತಿ ೧೨ ವರ್ಷದ ಪಯಣ... ಮುಂದಿನ ಪಯಣವು ಹೀಗೆ ಸವಿಯುವಂತಾಗಲಿ ಎಂದು ಹಾರೈಸುವೆ..

    ReplyDelete